ADVERTISEMENT

ಮಿಥುನ್‌ ಮಿಂಚು: ರಾಹುಲ್ ಬ್ಯಾಟಿಂಗ್ ಸೊಗಸು

ದೆಹಲಿ ವಿರುದ್ಧದ ಪಂದ್ಯ ಡ್ರಾ: ಕರ್ನಾಟಕ ತಂಡಕ್ಕೆ ಇನಿಂಗ್ಸ್‌ ಮುನ್ನಡೆ

ಜಿ.ಶಿವಕುಮಾರ
Published 12 ನವೆಂಬರ್ 2017, 20:20 IST
Last Updated 12 ನವೆಂಬರ್ 2017, 20:20 IST
ವಿಕೆಟ್ ಪಡೆದ ಅಭಿಮನ್ಯು ಮಿಥುನ್ ಅವರನ್ನು ಸಹ ಆಟಗಾರರು ಅಭಿನಂದಿಸಿದರು ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ್
ವಿಕೆಟ್ ಪಡೆದ ಅಭಿಮನ್ಯು ಮಿಥುನ್ ಅವರನ್ನು ಸಹ ಆಟಗಾರರು ಅಭಿನಂದಿಸಿದರು ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ್   

ಬೆಂಗಳೂರು: ಅಭಿಮನ್ಯು ಮಿಥುನ್‌ (70ಕ್ಕೆ5) ವೇಗದ ದಾಳಿಗೆ ಭಾನುವಾರ ದೆಹಲಿ ಬ್ಯಾಟ್ಸ್‌ಮನ್‌ಗಳು ಕಂಗಾಲಾದರು. ದಿನದ ಮೊದಲ ಅವಧಿಯಲ್ಲಿ ಮಿಥುನ್‌ ಮಾಡಿದ ಮೋಡಿಯಿಂದಾಗಿ ಕರ್ನಾಟಕ ತಂಡ ರಣಜಿ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಪ್ರವಾಸಿ ಪಡೆಯನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿತು.

ಹೀಗಾಗಿ ಉಭಯ ತಂಡಗಳ ನಡುವಣ ಹಣಾಹಣಿ ನಿರೀಕ್ಷೆಯಂತೆಯೇ ಡ್ರಾ ಆಯಿತು. ಮೊದಲ ಇನಿಂಗ್ಸ್‌ ಮುನ್ನಡೆ ಗಳಿಸಿದ್ದರಿಂದ ಆರ್‌. ವಿನಯ್‌ ಕುಮಾರ್ ಬಳಗದ ಖಾತೆಗೆ ಮೂರು ಪಾಯಿಂಟ್ಸ್‌ ಸೇರ್ಪಡೆಗೊಂಡಿತು. 4 ವಿಕೆಟ್‌ಗೆ 277 ರನ್‌ಗಳಿಂದ ಅಂತಿಮ ದಿನದಾಟ ಮುಂದುವರಿಸಿದ ರಿಷಭ್‌ ಪಂತ್‌ ಪಡೆ ಮೊದಲ ಇನಿಂಗ್ಸ್‌ನಲ್ಲಿ 95 ಓವರ್‌ಗಳಲ್ಲಿ 301ರನ್‌ಗಳಿಗೆ ಹೋರಾಟ ಮುಗಿಸಿತು.

348ರನ್‌ಗಳ ಮುನ್ನಡೆ ಗಳಿಸಿದ ಆತಿಥೇಯರು ಎದುರಾಳಿಗಳ ಮೇಲೆ ಫಾಲೋ ಆನ್‌ ಹೇರಲಿಲ್ಲ. ಬ್ಯಾಟಿಂಗ್‌ ಮಾಡಲು ನಿರ್ಧರಿಸಿದರು. ದ್ವಿತೀಯ ಇನಿಂಗ್ಸ್‌ನಲ್ಲಿ ರಾಜ್ಯ ತಂಡ 63 ಓವರ್‌ಗಳಲ್ಲಿ 3 ವಿಕೆಟ್‌ಗೆ 235 ರನ್‌ ಗಳಿಸಿತು. ಈ ಮೂಲಕ ಮುನ್ನಡೆಯನ್ನು 583 ರನ್‌ಗಳಿಗೆ ಹೆಚ್ಚಿಸಿಕೊಂಡಿತು.

ADVERTISEMENT

ಆರ್‌.ಸಮರ್ಥ್‌ (47; 90ಎ, 6ಬೌಂ) ಮತ್ತು ಕೆ.ಎಲ್‌.ರಾಹುಲ್‌ (92; 109ಎ,9ಬೌಂ,2ಸಿ) ಉತ್ತಮ ಆರಂಭ ನೀಡಿದರು. ಮೊದಲ ಇನಿಂಗ್ಸ್‌ನಲ್ಲಿ ವೈಫಲ್ಯ ಕಂಡಿದ್ದ ರಾಹುಲ್‌ ಅಂತಿಮ ದಿನ ಸೊಗಸಾದ ಆಟವಾಡಿದರು. ಆರಂಭದಲ್ಲಿ ಒಂದೊಂದು ರನ್‌ ಗಳಿಸುತ್ತಿದ್ದ ಈ ಜೋಡಿ ಅವಕಾಶ ಸಿಕ್ಕಾಗಲೆಲ್ಲಾ ಚೆಂಡನ್ನು ಬೌಂಡರಿ ಗೆರೆ ದಾಟಿಸಿತು.

ಹೀಗಾಗಿ 12ನೇ ಓವರ್‌ನ ಅಂತ್ಯಕ್ಕೆ ತಂಡದ ಖಾತೆಗೆ 50ರನ್‌ಗಳು ಸೇರ್ಪಡೆಯಾದವು. ಊಟದ ವಿರಾಮಕ್ಕೆ ಆತಿಥೇಯರು 17 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 72ರನ್‌ ಗಳಿಸಿದರು.

ಎರಡನೇ ಅವಧಿಯಲ್ಲೂ ಈ ಜೋಡಿಯ ಮೋಡಿ ಮುಂದುವರಿಯಿತು. ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಗಳಿಸಿರುವ ರಾಹುಲ್‌, ಮಿಲಿಂದ್‌ ಕುಮಾರ್‌ ಬೌಲಿಂಗ್‌ನಲ್ಲಿ ಮಿಡ್‌ವಿಕೆಟ್‌ನತ್ತ ಸಿಕ್ಸರ್‌ ಸಿಡಿಸಿ ಅರ್ಧಶತಕ ಪೂರೈಸಿದರು. ಸಮರ್ಥ್‌ ಕೂಡ ಕವರ್‌ ಡ್ರೈವ್‌ಗಳ ಮೂಲಕ ಮೈದಾನದಲ್ಲಿ ಬೌಂಡರಿಗಳ ಚಿತ್ತಾರ ಬಿಡಿಸಿದರು.

31ನೇ ಓವರ್‌ನಲ್ಲಿ ದೆಹಲಿ ನಾಯಕ ರಿಷಭ್‌, ಮನನ್‌ ಶರ್ಮಾಗೆ ಚೆಂಡು ನೀಡಿದ್ದು ಫಲ ನೀಡಿತು. ಮೊದಲ ಎಸೆತದಲ್ಲಿ ಅವರು ಸಮರ್ಥ್‌ ವಿಕೆಟ್‌ ಉರುಳಿಸಿ ಪ್ರವಾಸಿ ಪಡೆಗೆ ಯಶಸ್ಸು ತಂದುಕೊಟ್ಟರು. ಇದರೊಂದಿಗೆ 121ರನ್‌ಗಳ ಮೊದಲ ವಿಕೆಟ್‌ ಜೊತೆಯಾಟ ಮುರಿಯಿತು.

ಆ ನಂತರ ರಾಹುಲ್‌, ಮಯಂಕ್‌ ಅಗರವಾಲ್‌ (23; 32ಎ, 3ಬೌಂ) ಜೊತೆ ಇನಿಂಗ್ಸ್‌ ಬೆಳೆಸಿದರು. ಅಪೂರ್ವ ಹೊಡೆತಗಳ ಮೂಲಕ ದೆಹಲಿ ಬೌಲರ್‌ಗಳನ್ನು ಕಾಡಿದ ಅವರು ಶತಕದ ಸನಿಹದಲ್ಲಿ ಮುಗ್ಗರಿಸಿದರು. ವಿಕಾಸ್‌ ಟೋಕಸ್‌ ಬೌಲ್ ಮಾಡಿದ 36ನೇ ಓವರ್‌ನ ಕೊನೆಯ ಎಸೆತವನ್ನು ಬ್ಯಾಕ್‌ವರ್ಡ್‌ ಪಾಯಿಂಟ್‌ನತ್ತ ತಳ್ಳಿದ ರಾಹುಲ್‌, ರನ್‌ ಗಳಿಸಲು ಓಡಿದರು.

ಆಗ ನಿತೀಶ್‌ ರಾಣಾ ಚುರುಕಿನ ಫೀಲ್ಡಿಂಗ್‌ ಮಾಡಿ ರಾಹುಲ್‌ ಅವರನ್ನು ರನ್‌ಔಟ್‌ ಮಾಡಿದರು. ಇದರ ಬೆನ್ನಲ್ಲೇ ಮಯಂಕ್‌ ಕೂಡ ಪೆವಿಲಿಯನ್‌ ಸೇರಿಕೊಂಡರು. ಮೊದಲ ಇನಿಂಗ್ಸ್‌ನಲ್ಲಿ ಶತಕ ದಾಖಲಿಸಿ ಮಿಂಚಿದ್ದ ಮಯಂಕ್‌ಗೆ ನವದೀಪ್‌ ಸೈನಿ ರಟ್ಟೆ ಅರಳಿಸಲು ಅವಕಾಶ ನೀಡಲಿಲ್ಲ. ಬಳಿಕ ಒಂದಾದ ಕರುಣ್‌ ನಾಯರ್‌ (ಔಟಾಗದೆ 33; 76ಎ, 2ಬೌಂ) ಮತ್ತು ಮನೀಷ್‌ ಪಾಂಡೆ (ಔಟಾಗದೆ 34; 72ಎ, 2ಬೌಂ) ದೆಹಲಿ ಬೌಲರ್‌ಗಳ ತಾಳ್ಮೆಗೆ ಸವಾಲಾದರು. ಇವರು ಮುರಿಯದ ನಾಲ್ಕನೇ ವಿಕೆಟ್‌ಗೆ 61ರನ್‌ ಸೇರಿಸಿದ್ದ ವೇಳೆ ಉಭಯ ನಾಯಕರು ಡ್ರಾ ಮಾಡಿಕೊಳ್ಳಲು ಸಮ್ಮತಿಸಿದರು.

ಮಿಥುನ್‌ ಕೈ ಚಳಕ: ಇದಕ್ಕು ಮುನ್ನ ಬ್ಯಾಟಿಂಗ್‌ ಆರಂಭಿಸಿದ ದೆಹಲಿ ತಂಡಕ್ಕೆ ದಿನದ ಮೊದಲ ಓವರ್‌ನಲ್ಲೇ ಆಘಾತ ಎದುರಾಯಿತು. ಅಭಿಮನ್ಯು ಮಿಥುನ್‌ ಹಾಕಿದ 85ನೇ ಓವರ್‌ನ ಮೂರನೇ ಎಸೆತದಲ್ಲಿ ಮಿಲಿಂದ್‌ ಕುಮಾರ್‌ (10; 55ಎ, 1ಬೌಂ) ಸಮರ್ಥ್‌ಗೆ ಕ್ಯಾಚ್‌ ನೀಡಿದರು.

ಮರು ಎಸೆತದಲ್ಲಿ ಸಮರ್ಥ್‌, ಮನನ್‌ ಶರ್ಮಾ (0) ಅವರನ್ನು ರನ್‌ಔಟ್‌ ಮಾಡಿದರು. ಇದರ ಬೆನ್ನಲ್ಲೇ ಮಿಥುನ್, ಗೌತಮ್‌ ಗಂಭೀರ್‌ಗೆ (144; 244ಎ, 22ಬೌಂ. ) ಪೆವಿಲಿಯನ್‌ ಹಾದಿ ತೋರಿಸಿ ಆತಿಥೇಯರ ಪಾಳಯದಲ್ಲಿ ಖುಷಿಯ ಅಲೆ ಏಳುವಂತೆ ಮಾಡಿದರು. ಮಿಥುನ್‌ ಹಾಕಿದ 87ನೇ ಓವರ್‌ನ ಮೊದಲ ಎರಡು ಎಸೆತಗಳನ್ನು ಬೌಂಡರಿಗಟ್ಟಿದ ಗಂಭೀರ್‌, ಆರನೇ ಎಸೆತವನ್ನು ಕಟ್‌ ಮಾಡಿದರು.

ಅವರ ಬ್ಯಾಟಿಗೆ ತಾಗಿ ಮೇಲಕ್ಕೆ ಚಿಮ್ಮಿದ ಚೆಂಡನ್ನು ಗಲ್ಲಿಯಲ್ಲಿದ್ದ ಸಮರ್ಥ್‌ ಆಕರ್ಷಕ ರೀತಿಯಲ್ಲಿ ಹಿಡಿತಕ್ಕೆ ಪಡೆದರು. ವಿಕಾಸ್‌ ಟೋಕಸ್‌ (11) ಮತ್ತು ಕುಲವಂತ್‌ ಖೇಜ್ರೋಲಿಯಾ (0) ಅವರನ್ನೂ ಮಿಥುನ್‌ ಔಟ್‌ ಮಾಡಿ ಎದುರಾಳಿಗಳ ಇನಿಂಗ್ಸ್‌ಗೆ ತೆರೆ ಎಳೆದರು.

**

ಈಗ ನನ್ನ ಬೌಲಿಂಗ್‌ನಲ್ಲಿ ಸಾಕಷ್ಟು ಸುಧಾರಣೆ ಕಾಣುತ್ತಿದೆ. ಮುಂದಿನ ಪಂದ್ಯಗಳಲ್ಲೂ ಇದೇ ರೀತಿಯ ಸಾಮರ್ಥ್ಯ ತೋರಿದರೆ ಭಾರತ ತಂಡದಲ್ಲಿ ಸ್ಥಾನ ಸಿಗಬಹುದು.
–ಅಭಿಮನ್ಯು ಮಿಥುನ್‌, ಕರ್ನಾಟಕದ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.