ADVERTISEMENT

ಮುಂದುವರಿದ ಬಿಸಿಸಿಐ, ಐಸಿಸಿ ಜಟಾಪಟಿ

ಹೆಚ್ಚುವರಿ ಹಣಕ್ಕೂ ಒಪ್ಪದ ವಿಶ್ವದ ಶ್ರೀಮಂತ ಕ್ರಿಕೆಟ್‌ ಸಂಸ್ಥೆ

ಪಿಟಿಐ
Published 25 ಏಪ್ರಿಲ್ 2017, 19:30 IST
Last Updated 25 ಏಪ್ರಿಲ್ 2017, 19:30 IST
ಮುಂದುವರಿದ ಬಿಸಿಸಿಐ, ಐಸಿಸಿ ಜಟಾಪಟಿ
ಮುಂದುವರಿದ ಬಿಸಿಸಿಐ, ಐಸಿಸಿ ಜಟಾಪಟಿ   

ನವದೆಹಲಿ:  ಆದಾಯ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಮತ್ತು ಭಾರತ ಕ್ರಿಕೆಟ್‌ ನಿಯಂ ತ್ರಣ ಮಂಡಳಿ (ಬಿಸಿಸಿಐ)  ನಡುವೆ  ನಡೆಯುತ್ತಿರುವ ಜಟಾಪಟಿ ಮುಂದುವರಿದಿದೆ.

ಹಳೆಯ ನಿಯಮದ ಪ್ರಕಾರ ‘ಬಿಗ್ ತ್ರಿ’ ರಾಷ್ಟ್ರಗಳು ಎನಿಸಿದ್ದ ಬಿಸಿಸಿಐ, ಇಂಗ್ಲೆಂಡ್ ಮತ್ತು ಕ್ರಿಕೆಟ್‌ ಆಸ್ಟ್ರೇಲಿಯಾ ಮಂಡಳಿಗಳಿಗೆ ಐಸಿಸಿಯಿಂದ ಹೆಚ್ಚು ಆದಾಯ ಲಭಿಸುತ್ತಿತ್ತು. ಶಶಾಂಕ್‌ ಮನೋಹರ್ ಅವರು ಐಸಿಸಿ ಮುಖ್ಯಸ್ಥ ರಾದ ಬಳಿಕ ಹೊಸ ಆದಾಯ ಹಂಚಿಕೆ ಪದ್ಧತಿ ಜಾರಿಗೆ ತರಲು ಮುಂದಾಗಿದ್ದಾರೆ. ಇದರಿಂದ ಹೊಸ ಕ್ರಿಕೆಟ್‌ ಮಂಡಳಿಗಳಿಗೆ ಅನುಕೂಲವಾಗುತ್ತದೆ. ಸಮಾನ ಆದಾಯ ಹಂಚಿಕೆ ಸಾಧ್ಯವಾಗುತ್ತದೆ ಎಂದು ಅವರು  ಹೇಳುತ್ತಿದ್ದಾರೆ.

ಆದರೆ ಇದಕ್ಕೆ ಬಿಸಿಸಿಐ ಮೊದಲಿ ನಿಂದಲೂ ವಿರೋಧ ವ್ಯಕ್ತಪಡಿಸುತ್ತಿದೆ. ಆದ್ದರಿಂದ ಇದೇ ವರ್ಷದ ಜೂನ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಗೂ ಬಿಸಿಸಿಐ ಭಾರತ ತಂಡವನ್ನು ಆಯ್ಕೆ ಮಾಡಿಲ್ಲ.

ADVERTISEMENT

ಆದಾಯ ಹಂಚಿಕೆ ವಿಷಯದ ಕುರಿತು ಚರ್ಚಿಸಲು ದುಬೈನಲ್ಲಿ ಐಸಿಸಿ ಸಭೆ ನಡೆಯುತ್ತಿದೆ.  ಹೊಸ ಮಾದರಿಯ ಆದಾಯ ಹಂಚಿಕೆ  ಜೊತೆಗೆ ಬಿಸಿಸಿಐಗೆ ಹೆಚ್ಚುವರಿಯಾಗಿ ₹ 644 ಕೋಟಿ (100 ಮಿಲಿಯನ್ ಡಾಲರ್‌) ನೀಡಲು ಐಸಿಸಿ ಒಪ್ಪಿಕೊಂಡಿದೆ. ಆದರೆ ಇದನ್ನು ಬಿಸಿಸಿಐ ನಿರಾಕರಿಸಿದೆ.

‘ಹೊಸ ಆದಾಯ ಹಂಚಿಕೆ ಪದ್ಧತಿ ಜಾರಿಗೆ ಬಂದ ಬಳಿಕ ಹೆಚ್ಚುವರಿಯಾಗಿ ಹಣ ನೀಡಲಾಗುವುದು ಎಂದು ಶಶಾಂಕ್‌ ಮನೋಹರ್ ನಮಗೆ ತಿಳಿಸಿ ದ್ದಾರೆ. ಆದರೆ ಇದನ್ನು ನಾವು ಒಪ್ಪಿ ಕೊಂಡಿಲ್ಲ’ ಎಂದು  ಸಭೆಯಲ್ಲಿ ಪಾಲ್ಗೊಂ ಡಿರುವ ಬಿಸಿಸಿಐ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.

ಐಸಿಸಿ ಹೆಚ್ಚುವರಿ ಹಣ ನೀಡಲು ಒಪ್ಪಿದರೂ ನೀವು ನಿರಾಕರಿಸಿದ್ದು ಏಕೆ ಎನ್ನುವ ಪ್ರಶ್ನೆಗೆ ‘ಹೆಚ್ಚುವರಿ ಹಣ ನೀಡು ವುದಾಗಿ  ಶಶಾಂಕ್‌ ಹೇಳಿದ್ದಾರೆ. ಅವರು ಐಸಿಸಿಯ ಮುಖ್ಯಸ್ಥರು ಎಂಬುದು ನಿಜ. ಆದರೆ  ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೆ ಎಲ್ಲಾ ಕ್ರಿಕೆಟ್ ಮಂಡಳಿಗಳ ಒಪ್ಪಿಗೆ ಬೇಕು. ಆದಾಯ ಹಂಚಿಕೆಯಂಥ ಮಹತ್ವದ ವಿಷಯವನ್ನು ಅವರೊಬ್ಬರೇ ನಿರ್ಧರಿಸುವುದಲ್ಲ. ಆದ್ದ ರಿಂದ ಒಪ್ಪಿಕೊಂಡಿಲ್ಲ’ ಎಂದು ಅವರು ಹೇಳಿದರು.

ಲಾಭ–ನಷ್ಟದ ಲೆಕ್ಕಾಚಾರ: ಆದಾಯ ಹಂಚಿಕೆಯ ಹೊಸ ನಿಯಮ ಜಾರಿಗೆ ಬಂದರೆ ಬಿಸಿಸಿಐ ಕೋಟ್ಯಂತರ ರೂಪಾಯಿ ನಷ್ಟವಾಗುತ್ತದೆ.
ಹಳೆಯ ನಿಯಮದ ಪ್ರಕಾರ  ಬಿಸಿ ಸಿಐಗೆ ₹ 3705 ಕೋಟಿ (579 ಮಿಲಿ ಯನ್ ಡಾಲರ್‌) ಲಭಿಸುತ್ತಿತ್ತು. ಹೊಸ ನಿಯಮ ಜಾರಿಗೆ ಬಂದರೆ ಆದಾಯದ ಮೊತ್ತ ₹ 1856 ಕೋಟಿಗೆ (290 ಮಿಲಿಯನ್‌ ಡಾಲರ್‌)  ಇಳಿಯಲಿದೆ. ಆದ್ದರಿಂದ  ಬಿಸಿಸಿಐ ಆಡಳಿತದ ಉಸ್ತು ವಾರಿ ನೋಡಿಕೊಳ್ಳುತ್ತಿರುವ ಕ್ರಿಕೆಟ್ ಆಡಳಿತ ಸಮಿತಿಯೂ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ.

ಕೆಲ ತಿಂಗಳ ಹಿಂದೆ ದುಬೈನಲ್ಲಿ ನಡೆ ದಿದ್ದ ಐಸಿಸಿ ಸಭೆಯಲ್ಲಿ ಕ್ರಿಕೆಟ್‌ ಆಡಳಿತ ಸಮಿತಿಯ ಸದಸ್ಯ ವಿಕ್ರಮ್‌ ಲಿಮಯೆ  ಪಾಲ್ಗೊಂಡಿದ್ದರು.
ಈಗಿನ ವಿವಾದದ ಬಗ್ಗೆ ಮಾತ ನಾಡಿದ ಅವರು ‘ಬಿಸಿಸಿಐ ಬರಬೇಕಾದ ಆದಾಯವನ್ನು ಬೇರೆ ದೇಶಗಳ ಕ್ರಿಕೆಟ್‌ ಮಂಡಳಿಗಳಿಗೆ ಹಂಚಲು  ಶಶಾಂಕ್‌ ಮನೋಹರ್ ಮುಂದಾಗುತ್ತಿದ್ದಾರೆ. ಇದರಿಂದ ನಮಗೆ ನಷ್ಟವಲ್ಲವೇ’ ಎಂದು ಹೇಳಿದ್ದಾರೆ.

ಚಾಂಪಿಯನ್ಸ್‌ ಟ್ರೋಫಿಗೆ ಭಾರತ ಅನುಮಾನ
ಬೆಂಗಳೂರು: 
ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ  ಎರಡು ಸಲ ಪ್ರಶಸ್ತಿ ಗೆದ್ದಿರುವ ಭಾರತ ತಂಡ ಒಮ್ಮೆಯೂ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅವಕಾಶ ತಪ್ಪಿಸಿಕೊಂಡಿಲ್ಲ. ಆದರೆ ಈ ಬಾರಿ ಆಡುವುದು ಅನುಮಾನವಿದೆ.

ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ ಮೊದಲ ಎಂಟು ಸ್ಥಾನಗಳನ್ನು ಹೊಂದಿರುವ ತಂಡಗಳಿಗೆ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಪಾಲ್ಗೊಳ್ಳಲು ಅರ್ಹತೆ ಲಭಿಸುತ್ತದೆ.

ಇದರ ಪ್ರಕಾರ ಇಂಗ್ಲೆಂಡ್‌, ಆಸ್ಟ್ರೇಲಿಯಾ, ಭಾರತ, ದಕ್ಷಿಣ ಆಫ್ರಿಕಾ,  ನ್ಯೂಜಿಲೆಂಡ್‌,  ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳು ಟೂರ್ನಿಯಲ್ಲಿ ಆಡಬೇಕಿದೆ. ಎಲ್ಲಾ ದೇಶಗಳು ಈಗಾಗಲೇ 15 ಸದಸ್ಯರನ್ನು ಒಳಗೊಂಡ ತಂಡಗಳನ್ನು ಪ್ರಕಟಿಸಿವೆ. ಆದರೆ ಬಿಸಿಸಿಐ ಭಾರತ ತಂಡದ ಆಯ್ಕೆಯ ದಿನಾಂಕವನ್ನೇ ಪ್ರಕಟಿಸಿಲ್ಲ.

1998ರಲ್ಲಿ ಆರಂಭವಾದ ಟೂರ್ನಿ ಮೊದಲು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತಿತ್ತು. 2009ರಿಂದ ನಾಲ್ಕು ವರ್ಷಕ್ಕೆ ಒಂದು ಬಾರಿ ಟೂರ್ನಿ ನಡೆದುಕೊಂಡು ಬಂದಿದೆ.

ಪ್ರಕಟವಾಗದ ಭಾರತ ತಂಡ
‘ಮಿನಿ ವಿಶ್ವಕಪ್‌’ ಎಂದೇ ಹೆಸ ರಾಗಿರುವ ಪ್ರತಿಷ್ಠಿತ ಚಾಂಪಿ ಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಗೆ ತಂಡಗಳನ್ನು ಪ್ರಕಟಿಸಲು ಮಂಗಳವಾರ (ಏಪ್ರಿಲ್‌ 25) ಕೊನೆಯ ದಿನವಾಗಿತ್ತು. ಆದಾಯ ಹಂಚಿಕೆ ಕುರಿತು ಜಟಾಪಟಿ ನಡೆಯುತ್ತಿರುವ ಕಾರಣ ಬಿಸಿಸಿಐ ತಂಡವನ್ನೇ ಪ್ರಕಟಿಸಿಲ್ಲ. ಈ ಮೂಲಕ ಬಿಸಿಸಿಐ ಒತ್ತಡ ತಂತ್ರ ಅನುಸರಿಸುತ್ತಿದೆ.

ಮುಖ್ಯಾಂಶಗಳು

* ಜೂನ್‌ನಲ್ಲಿ ಲಂಡನ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ
* ಐಸಿಸಿ ಮುಖ್ಯಸ್ಥ ಶಶಾಂಕ್‌ ಮನೋಹರ್‌
* ತಂಡ ಪ್ರಕಟಿಸಲು ಮಂಗಳವಾರ ಕೊನೆಯ ದಿನವಾಗಿತ್ತು

ಮಾರ್ಗನ್‌ ನಾಯಕ
ಲಂಡನ್‌ (ಐಎಎನ್‌ಎಸ್‌):  
ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸ ಲಾಗಿದ್ದು ಏಯೊನ್‌ ಮಾರ್ಗನ್ ಅವರು ನಾಯಕರಾಗಿದ್ದಾರೆ.

ವೇಗದ ಬೌಲರ್‌ಗಳಾದ ಮಾರ್ಕ್‌ ವುಡ್‌ ಹಾಗೂ ಡೇವಿಡ್‌ ವಿಲ್ಲಿ ಸೇರಿದಂತೆ ಒಟ್ಟು 15 ಸದಸ್ಯರ ತಂಡವನ್ನು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ಪ್ರಕ ಟಿಸಿದೆ. ಆತಿಥೇಯ ತಂಡ ತನ್ನ ಮೊದಲ ಪಂದ್ಯದಲ್ಲಿ ಜೂನ್‌ 1ರಂದು ಬಾಂಗ್ಲಾದೇಶ ಎದುರು ಪೈಪೋಟಿ ನಡೆಸಲಿದೆ.

ತಂಡ ಇಂತಿದೆ: ಏಯೊನ್‌ ಮಾರ್ಗನ್‌ (ನಾಯಕ), ಮೊಯಿನ್‌ ಅಲಿ, ಜಾನಿ ಬೇಸ್ಟೋವ್‌, ಜಾಕ್‌ ಬೆಲ್‌, ಸ್ಯಾಮ್‌ ಬಿಲ್ಲಿಂಗ್ಸ್‌ (ವಿಕೆಟ್ ಕೀಪರ್), ಜಾಸ್ ಬಟ್ಲರ್‌, ಅಲೆಕ್ಸ್‌ ಹೇಲ್ಸ್‌, ಲಿಯಾಮ್ ಫ್ಲಂಕೆಟ್‌, ಆದಿಲ್‌ ರಶೀದ್, ಜೋ ರೂಟ್‌, ಜೇಸನ್ ರಾಯ್‌, ಬೆನ್‌ ಸ್ಟೋಕ್ಸ್‌, ಡೇವಿಡ್‌ ವಿಲ್ಲಿ, ಕ್ರಿಸ್‌ ವೋಕ್ಸ್‌ ,ಮಾರ್ಕ್‌ ವುಡ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.