ADVERTISEMENT

ಮುದ್ಗಲ್‌ ಸಮಿತಿಯಿಂದ ತನಿಖಾಧಿಕಾರಿಗಳ ಭೇಟಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2014, 19:30 IST
Last Updated 26 ಆಗಸ್ಟ್ 2014, 19:30 IST

ನವದೆಹಲಿ (ಐಎಎನ್‌ಎಸ್‌): ಐಪಿಎಲ್‌ ಆರನೇ ಆವೃತ್ತಿಯಲ್ಲಿ ನಡೆದಿದ್ದ ಕಳ್ಳಾಟ ಮತ್ತು ಬೆಟ್ಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಮುಕುಲ್‌ ಮುದ್ಗಲ್‌ ಸಮಿತಿ ಬುಧವಾರ ಚೆನ್ನೈನಲ್ಲಿ ಪೊಲೀಸ್‌ ಅಧಿಕಾರಿಗಳನ್ನು ಭೇಟಿ ಮಾಡಲಿದೆ.

ಸಮಿತಿಯು ಆಗಸ್ಟ್‌ ಅಂತ್ಯದ ವೇಳೆಗೆ ಪ್ರಕರಣದ ಪೂರ್ಣ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕಿದೆ. ಹೀಗಾಗಿ ಚೆನ್ನೈನಲ್ಲಿ ನಡೆಯಲಿರುವ ಭೇಟಿಯ ವೇಳೆ ದೆಹಲಿ, ಮುಂಬೈ ಮತ್ತು ಚೆನ್ನೈನ ಪೊಲೀಸ್‌ ಅಧಿಕಾರಿಗಳಿಂದ ಇನ್ನಷ್ಟು ಮಾಹಿತಿ ಕಲೆ ಹಾಕಲು ಸಮಿತಿ ನಿರ್ಧರಿಸಿದೆ. ಸಮಿತಿಯ ಸದಸ್ಯರಾಗಿರುವ ಎನ್‌ಸಿಬಿ ಉಪ ನಿರ್ದೇಶಕ ಬಿ.ಬಿ.ಮಿಶ್ರಾ ಅವರ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ.

‘ವರದಿಯನ್ನು ಅಂತಿಮಗೊಳಿಸುವ ಮುನ್ನ ನಾವು ಮುಂಬೈ, ದೆಹಲಿ ಮತ್ತು ಚೆನ್ನೈನ ಪೊಲೀಸ್‌ ಅಧಿಕಾರಿಗಳನ್ನು ಭೇಟಿ ಮಾಡಿ ಮತ್ತಷ್ಟು ಮಾಹಿತಿ ಸಂಗ್ರಹಿಸಲು ನಿರ್ಧರಿಸಿದ್ದೇವೆ. ಬಾಕಿ ಉಳಿದಿರುವ ಕೆಲ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರಿಂದ ಪೂರಕ ಮಾಹಿತಿ ಪಡೆಯುವುದು  ಈ ಭೇಟಿಯ ಉದ್ದೇಶ’ ಎಂದು ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

‘ಪ್ರಕರಣದ ವಿಚಾರಣೆ ನಡೆಸಲು ಇನ್ನಷ್ಟು ಕಾಲಾವಕಾಶ ಕೇಳಬೇಕೊ, ಬೇಡವೋ ಎಂಬುದನ್ನು ಚರ್ಚಿಸುವ ಸಲುವಾಗಿ ಬುಧವಾರ ಮತ್ತೊಮ್ಮೆ ಸಭೆ ಸೇರಲಿದ್ದೇವೆ’ ಎಂದು ಮುದ್ಗಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.