ADVERTISEMENT

ಮೊದಲ ಜಯದ ನಿರೀಕ್ಷೆಯಲ್ಲಿ ಕರ್ನಾಟಕ

ರಣಜಿ: ಇಂದಿನಿಂದ ಉದ್ಯಾನನಗರಿಯಲ್ಲಿ ಪಂದ್ಯ, ಹೊಸ ನಾಯಕನ ಹುಮಸ್ಸಿನಲ್ಲಿ ಬಂಗಾಳ

ಪ್ರಮೋದ ಜಿ.ಕೆ
Published 7 ಅಕ್ಟೋಬರ್ 2015, 19:54 IST
Last Updated 7 ಅಕ್ಟೋಬರ್ 2015, 19:54 IST

ಬೆಂಗಳೂರು: ಕ್ರಿಕೆಟ್‌ ಅಭಿಮಾನಿಗಳ ಈ ವಿಚಿತ್ರ ವರ್ತನೆಗೆ ಏನೆನ್ನಬೇಕೋ? ಸತತವಾಗಿ ಗೆಲ್ಲುತ್ತಾ ಹೋದರೆ ಎಲ್ಲವೂ ಸುಂದರವಾಗಿರುತ್ತದೆ. ಆಟಗಾರರಿಗೆ ಜೈಕಾರ ಹಾಕುತ್ತಾ ಅಭಿಮಾನಿಗಳು ಸಂಭ್ರಮಿಸುತ್ತಾರೆ. ಒಮ್ಮೆ ಕೆಟ್ಟ ಆಟವಾಡಿದರೆ ಸಾಕು ಟೀಕಾ ಪ್ರಹಾರವೇ ಕೇಳಿ ಬರುತ್ತದೆ. ಈಗ ಇಂಥದ್ದೇ ಪರಿಸ್ಥಿತಿ ರಾಜ್ಯ ರಣಜಿ ತಂಡಕ್ಕೆ ಎದುರಾಗಿದೆ.

ಎರಡು ವರ್ಷಗಳಿಂದ ದೇಶಿ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಮೆರೆಯುತ್ತಿರುವ ರಾಜ್ಯ ತಂಡ ಮೊದಲ ಪಂದ್ಯದಲ್ಲಿ ಡ್ರಾಕ್ಕೆ ತೃಪ್ತಿ ಪಟ್ಟಿತು. ಎಂಟು ಸಲ ರಣಜಿ ಟ್ರೋಫಿ ಜಯಿಸಿರುವ ಕರ್ನಾಟಕ ದೇಶಿ ಕ್ರಿಕೆಟ್‌ನ ಶಿಶು ಅಸ್ಸಾಂಗೆ ಇನಿಂಗ್ಸ್‌ ಮುನ್ನಡೆ ಬಿಟ್ಟುಕೊಟ್ಟಿತ್ತು. ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ  ರಾಜ್ಯ ತಂಡ ನೀಡಿದ ಪ್ರದರ್ಶನದ ಬಗ್ಗೆ ಕೆಲ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಆಡಿದ ಅನುಭವ ಹೊಂದಿರುವ ಆಟಗಾರರಿದ್ದರೂ ನೀರಸ ಆಟವಾಡಿದ್ದಕ್ಕೆ ಟೀಕಿಸುತ್ತಿದ್ದಾರೆ.

ಈ ಬಾರಿಯ ರಣಜಿ ಟೂರ್ನಿ ಈಗಷ್ಟೇ ಆರಂಭವಾಗಿದೆ. ಇನ್ನು ಏಳು ಲೀಗ್‌ ಪಂದ್ಯಗಳು ಬಾಕಿಯಿವೆ. ಆದರೂ ಅಭಿಮಾನಿಗಳು ಮಾತ್ರ ಎಲ್ಲವೂ ಮುಗಿದು ಹೋಯಿತು ಎನ್ನುವ ಅರ್ಥದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ನಾಯಕ ವಿನಯ್‌ ಮಾತ್ರ ‘ಮುಂದಿನ ಪಂದ್ಯಗಳಲ್ಲಿ ನಮ್ಮ ತಂಡದ ಪ್ರದರ್ಶನ ಹೇಗಿರುತ್ತದೆ ನೀವೇ ನೋಡಿ’ ಎಂದು ದಿಟ್ಟ ಮಾತುಗಳನ್ನಾಡಿದ್ದಾರೆ.

ಅಂದ ಹಾಗೆ ಹಾಲಿ ಚಾಂಪಿಯನ್‌ ಕರ್ನಾಟಕ ತಂಡ ಈಗ ಇನ್ನೊಂದು ಪೈಪೋಟಿಗೆ ಸಜ್ಜಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾಗಲಿರುವ ನಾಲ್ಕು ದಿನಗಳ ಪಂದ್ಯದಲ್ಲಿ ಬಂಗಾಳದ ಎದುರು ಆಡಲಿದೆ. ಆಟಗಾರರು ಬುಧವಾರ ಸಾಕಷ್ಟು ಹೊತ್ತು ಬೆವರು ಇಳಿಸಿದರು.

ರಾಬಿನ್ ಉತ್ತಪ್ಪ, ಮಯಂಕ್‌ ಅಗರವಾಲ್‌, ಆರ್‌. ಸಮರ್ಥ್‌, ಸಿ.ಎಂ. ಗೌತಮ್‌, ಕರುಣ್‌ ನಾಯರ್‌, ಶಿಶಿರ್‌ ಭವಾನೆ ಅವರನ್ನು ಹೊಂದಿರುವ ತಂಡ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದೆ. ದಕ್ಷಿಣ ಆಫ್ರಿಕಾ ಎದುರಿನ ಟ್ವೆಂಟಿ–20 ಅಭ್ಯಾಸ ಪಂದ್ಯದ ವೇಳೆ ಕೈಗೆ ಗಾಯ ಮಾಡಿಕೊಂಡಿದ್ದ ಮನೀಷ್‌ ಪಾಂಡೆ ಫಿಟ್‌ ಆಗಿದ್ದಾರೆ. ಅಸ್ಸಾಂ ವಿರುದ್ಧದ ಪಂದ್ಯದ ವೇಳೆ  ಗಾಯಗೊಂಡಿದ್ದ ವೇಗಿ ಅಭಿಮನ್ಯು ಮಿಥುನ್‌ ಕೂಡ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಆದರೆ ಅನುಭವಿ ಬ್ಯಾಟ್ಸ್‌ಮನ್‌ ಕೆ.ಎಲ್‌. ರಾಹುಲ್‌ ಫಿಟ್‌ ಆಗಿಲ್ಲ.

ಅಸ್ಸಾಂ ಎದುರಿನ ಪಂದ್ಯದಲ್ಲಿ ಸಮರ್ಥ್‌ ಶತಕ (131) ಮತ್ತು ಶಿಶಿರ್‌ ಅರ್ಧಶತಕ (65) ಬಾರಿಸಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮಯಂಕ್‌ (47), ಗೌತಮ್‌ (44) ಎರಡನೇ ಇನಿಂಗ್ಸ್‌ನಲ್ಲಿ ರಾಜ್ಯ ತಂಡ ಸವಾಲಿನ ಮೊತ್ತ ಗಳಿಸಲು ನೆರವಾಗಿದ್ದರು. ಆದ್ದರಿಂದ ಬಂಗಾಳ ಎದುರಿನ ಪಂದ್ಯದಲ್ಲಿ ಯಾರ ಬದಲು ಮನೀಷ್‌ ಪಾಂಡೆಗೆ ಸ್ಥಾನ ನೀಡಲಾಗುತ್ತದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ವೇಗಿ ಎಚ್‌.ಎಸ್‌. ಶರತ್‌ ಹಿಂದಿನ ಪಂದ್ಯದಲ್ಲಿ 26.5 ಓವರ್‌ ಬೌಲಿಂಗ್‌ ಮಾಡಿ 58 ರನ್‌ ನೀಡಿದ್ದರು. ಪಡೆದದ್ದು ಒಂದು ವಿಕೆಟ್‌ ಮಾತ್ರ. ಎಲ್ಲಕ್ಕಿಂತ ಹೆಚ್ಚಾಗಿ ಪದೇ ಪದೇ ನೋಬಾಲ್‌ ಮಾಡಿದ್ದರು.  ಆದ್ದರಿಂದ ಬಂಗಾಳ ಎದುರು ಪ್ರಸಿದ್ದ ಕೃಷ್ಣ ರಣಜಿ ‘ಕ್ಯಾಪ್‌’ ಧರಿಸುವ ಸಾಧ್ಯತೆಯಿದೆ. ವಿನಯ್‌ ಮತ್ತು ಮಿಥುನ್‌ ವೇಗದ ವಿಭಾಗ ನೋಡಿಕೊಳ್ಳಲಿದ್ದಾರೆ.

ಭರವಸೆಯ ಸ್ಪಿನ್ನರ್‌ಗಳಾದ ಸುಚಿತ್‌ ಮತ್ತು ಶ್ರೇಯಸ್ ಗೋಪಾಲ್‌ ಅವರಿಗೆ ತವರಿನಲ್ಲಿ ತಮ್ಮ ಸಾಮರ್ಥ್ಯ ತೋರಿಸಲು ಉತ್ತಮ ಅವಕಾಶ ಲಭಿಸಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ರಾಜ್ಯ ತಂಡ ಫೀಲ್ಡಿಂಗ್‌ನಲ್ಲಿ ಬಲಿಷ್ಠವಾಗಬೇಕಿದೆ. ಏಕೆಂದರೆ ಬಂಗಾಳ ತಂಡ ಅಸ್ಸಾಂನಷ್ಟು ದುರ್ಬಲವೇನಲ್ಲ. ಅಸ್ಸಾಂ ಎದುರು ರಾಜ್ಯ ತಂಡ ಫೀಲ್ಡಿಂಗ್‌ನಲ್ಲಿ ಅನೇಕ ತಪ್ಪುಗಳನ್ನು ಮಾಡಿತ್ತು.

ಅಪಾಯಕಾರಿ: ರಾಜ್ಯ ತಂಡದ ಎದುರು ಸಮನಾದ ಸೋಲು ಗೆಲುವಿನ ದಾಖಲೆ ಹೊಂದಿರುವ ಬಂಗಾಳ ಬಲಿಷ್ಠ ತಂಡ. ಈ ತಂಡದವರು 13 ಬಾರಿ ರಣಜಿ ಫೈನಲ್‌ ತಲುಪಿ ಎರಡು ಬಾರಿ ಚಾಂಪಿಯನ್‌ ಆಗಿದ್ದಾರೆ. 2011–12ರಲ್ಲಿ ವಿಜಯ್‌ ಹಜಾರೆ ಟೂರ್ನಿಯಲ್ಲಿ ಚಾಂಪಿಯನ್‌ ಆಗಿತ್ತು. 

ಈ ತಂಡಕ್ಕೆ ಮನೋಜ್‌ ತಿವಾರಿ, ಸುದೀಪ್‌ ಚಟರ್ಜಿ , ಶ್ರೀವತ್ಸ ಗೋಸ್ವಾಮಿ ಹಾಗೂ ಲಕ್ಷ್ಮಿರತನ್‌ ಶುಕ್ಲಾ ಮತ್ತು ವೃದ್ಧಿಮಾನ್‌ ಸಹಾ ಅವರ ಬ್ಯಾಟಿಂಗ್‌ ಬಲವಿದೆ. 23 ವರ್ಷದ ಸುದೀಪ್‌ ಹೋದ ವರ್ಷದ ರಣಜಿ ಟೂರ್ನಿಯಲ್ಲಿ ಎಂಟು ಪಂದ್ಯಗಳಿಂದ 584 ರನ್‌ ಗಳಿಸಿದ್ದರು. 13 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿರುವ ಬಲಗೈ ವೇಗಿ ಅಶೋಕ್‌ ದಿಂಡಾ, ಅನುಭವಿ ಸ್ಪಿನ್ನರ್‌ ಪ್ರಗ್ಯಾಜ್‌ ಓಜಾ ಬೌಲಿಂಗ್‌ ವಿಭಾಗದ ಶಕ್ತಿ ಎನಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಬಂಗಾಳ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿ ಇತ್ತೀಚಿಗೆ ಆಯ್ಕೆಯಾಗಿರುವ ಸೌರವ್‌ ಗಂಗೂಲಿ ಆಟಗಾರರಿಗೆ ಸ್ಫೂರ್ತಿ ಎನಿಸಿದ್ದಾರೆ.

ಆದರೆ ಬಂಗಾಳ ತಂಡದಲ್ಲಿ ಈಗ ಒಡೆದ ಮನೆಯಲ್ಲಿರುವಂತ ಬೇಸರವಿದೆ. ಎರಡು ತಿಂಗಳ ಹಿಂದೆ ಈ ತಂಡ ರಣಜಿಗೆ ಸಜ್ಜಾಗಲು ಶ್ರೀಲಂಕಾಕ್ಕೆ ತೆರಳಿತ್ತು. ಹೋದ ವರ್ಷ ಲಕ್ಷ್ಮಿರತನ್ ನಾಯಕರಾಗಿದ್ದಾಗ ಆಟಗಾರರ ನಡುವೆ ಮನಸ್ತಾಪ ಉಂಟಾಗಿತ್ತು. ಆದ್ದರಿಂದ ಲಕ್ಷ್ಮಿರತನ್‌ ಬದಲು ತಿವಾರಿ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದೆ. ಈ ಸಣ್ಣ ಪುಟ್ಟ ಘಟನೆಗಳ ನಡುವೆಯೂ ಬಂಗಾಳ ಚಾಂಪಿಯನ್‌ ತಂಡದ ಎದುರು ಹೇಗೆ ಆಡಲಿದೆ ಎನ್ನುವುದೇ ಈಗಿನ ಕುತೂಹಲ.
*
ತಂಡಗಳು ಇಂತಿವೆ
ಕರ್ನಾಟಕ: ಆರ್‌. ವಿನಯ್‌ ಕುಮಾರ್ (ನಾಯಕ), ಸಿ.ಎಂ. ಗೌತಮ್‌, ರಾಬಿನ್ ಉತ್ತಪ್ಪ, ಮನೀಷ್‌ ಪಾಂಡೆ, ಕರುಣ್‌ ನಾಯರ್‌, ಮಯಂಕ್ ಅಗರವಾಲ್‌, ಆರ್‌. ಸಮರ್ಥ್‌, ಅಭಿಷೇಕ್‌ ರೆಡ್ಡಿ, ಶ್ರೇಯಸ್‌ ಗೋಪಾಲ್‌, ಅಭಿಮನ್ಯು ಮಿಥುನ್, ಎಚ್‌.ಎಸ್. ಶರತ್‌, ಶಿಶಿರ್‌ ಭವಾನೆ, ಪ್ರಸಿದ್ಧ ಎಂ. ಕೃಷ್ಣ ಹಾಗೂ ಉದಿತ್‌ ಪಟೇಲ್‌.

ಬಂಗಾಳ: ಮನೋಜ್‌ ತಿವಾರಿ (ನಾಯಕ), ನಾವಿದ್‌ ಅಹ್ಮದ್‌, ಶ್ರೀವತ್ಸ ಗೋಸ್ವಾಮಿ, ಸುದೀಪ್‌ ಚಟರ್ಜಿ, ವೃದ್ಧಿಮಾನ್‌ ಸಹಾ, ಲಕ್ಷ್ಮಿರತನ್‌ ಶುಕ್ಲಾ, ಪಂಕಜ್ ಶಹಾ, ಅಶೋಕ್‌ ದಿಂಡಾ, ವೀರಪ್ರತಾಪ್‌ ಸಿಂಗ್‌, ಮುಕೇಶ್ ಕುಮಾರ್‌, ಪ್ರಗ್ಯಾಜ್‌ ಓಜಾ, ಸೌರವ್‌ ಸರ್ಕಾರ್‌, ಪಾರ್ಥಸಾರಥಿ ಭಟ್ಟಾಚಾರ್ಯ, ಅಮಿರ್‌ ಗಣಿ ಮತ್ತು ಅಭಿಷೇಕ್‌ ದಾಸ್‌.

ಅಂಪೈರ್‌ಗಳು: ಪಶ್ಚಿಮ್ ಪಾಠಕ್‌ ಹಾಗೂ ನಿತಿನ್ ನರೇಂದ್ರ ಮೆನನ್‌.

ರೆಫರಿ: ನಿತಿನ್‌ ಗೊಯೆಲ್‌. ಮೂರನೇ ಅಂಪೈರ್: ವೀರೇಂದ್ರ ಕುಮಾರ್‌

ಪಂದ್ಯ ಆರಂಭ: ಬೆಳಿಗ್ಗೆ: 9.30. ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.
*
ಅಸ್ಸಾಂ ಎದುರಿನ ಪಂದ್ಯದಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದೇವೆ. ಬಂಗಾಳ ಎದುರು ನೈಜ ಸಾಮರ್ಥ್ಯ ತೋರಿಸುತ್ತೇವೆ
- ವಿನಯ್‌ ಕುಮಾರ್‌, ಕರ್ನಾಟಕ ತಂಡದ ನಾಯಕ
*
ಚಾಂಪಿಯನ್ ಕರ್ನಾಟಕ ಬಲಿಷ್ಠ ತಂಡವೆಂಬುದು ಗೊತ್ತು. ಟ್ರೋಫಿ ಗೆಲ್ಲುವ ಆಸೆ ಹೊಂದಿರುವ ನಮಗೆ ಮೊದಲ ಪಂದ್ಯದಲ್ಲಿ ಜಯ ಪಡೆಯುವ ಗುರಿಯಿದೆ
- ಸೌರಭ್‌ ತಿವಾರಿ,
ಬಂಗಾಳ ತಂಡದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT