ADVERTISEMENT

ಮೋದಿ ಕುರಿತ ಟ್ವೀಟ್: ಪೇಚಿಗೆ ಸಿಲುಕಿದ ಐಸಿಸಿ

ಪಿಟಿಐ
Published 25 ಏಪ್ರಿಲ್ 2018, 19:30 IST
Last Updated 25 ಏಪ್ರಿಲ್ 2018, 19:30 IST

ನವದೆಹಲಿ (ಎಎಫ್‌ಪಿ): ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಛೇಡಿಸಿ ಪೇಚಿಗೆ ಸಿಲುಕಿದ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಕ್ಷಮೆ ಕೋರಿದೆ.

ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಜೊತೆ ನರೇಂದ್ರ ಮೋದಿ ವೇದಿಕೆ ಹಂಚಿಕೊಂಡ ವಿಡಿಯೊ ಒಂದನ್ನು ಟ್ವಿಟರ್‌ ಖಾತೆಗೆ ಅಪ್‌ಲೋಡ್ ಮಾಡಿದ್ದ ಐಸಿಸಿ ಅದರ ಕೆಳಗೆ ‘ನಾರಾಯಣ...ನಾರಾಯಣ..’ ಎಂದು ಬರೆದಿತ್ತು.

2013ರಲ್ಲಿ ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಅಸಾರಾಂಗೆ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದರ ಬೆನ್ನಲ್ಲೇ ಮೋದಿ ಮತ್ತು ಅಸಾರಾಂ ಜೊತೆ ಇರುವ ಚಿತ್ರಗಳು ಎಲ್ಲ ಕಡೆ ಹರಿದಾಡತೊಡಗಿವೆ. ಇದೇ ಸಂದರ್ಭದಲ್ಲಿ ಐಸಿಸಿ ಕೂಡ ವಿವಾದಿತ ಟ್ವೀಟ್ ಮಾಡಿತ್ತು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ನಂತರ ಎಚ್ಚೆತ್ತುಕೊಂಡು ಅದನ್ನು ಅಳಿಸಿ ಹಾಕಿತ್ತು.

ADVERTISEMENT

‘ಕ್ರಿಕೆಟ್‌ಗೆ ಸಂಬಂಧಿಸದ ಟ್ವೀಟ್ ಮಾಡಿ ಪ್ರಮಾದ ಆಗಿದೆ. ಇದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ. ಟ್ವೀಟ್ ಮಾಡಿದ್ದು ಯಾರು ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು’ ಎಂದು ಐಸಿಸಿ ಹೇಳಿದೆ.

‘ಮೋದಿ ಮತ್ತು ಅಸಾರಾಂ ಅವರನ್ನು ಟ್ರೋಲ್ ಮಾಡುವ ಅಗತ್ಯ ಐಸಿಸಿಗೆ ಏನಿತ್ತು’ ಎಂದು ಒಬ್ಬರು, ‘ಈ ಟ್ವೀಟ್ ಮೂಲಕ ಐಸಿಸಿ ಎಲ್ಲರಿಗೆ ಅಚ್ಚರಿ ಮೂಡಿಸಿದೆ’ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.