ADVERTISEMENT

ರಹಮತ್ ಶತಕ: ಆಫ್ಘನ್‌ಗೆ ಸರಣಿ ಜಯ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 19:50 IST
Last Updated 24 ಮಾರ್ಚ್ 2017, 19:50 IST
ರಹಮತ್ ಶಾ ಆಟದ ವೈಖರಿ
ರಹಮತ್ ಶಾ ಆಟದ ವೈಖರಿ   

ಗ್ರೇಟರ್ ನೊಯ್ಡಾ: ರಹಮತ್ ಷಾ (108) ಅವರ ಅಮೋಘ ಶತಕದ ಬಲದಿಂದ ಆಫ್ಘಾನಿಸ್ತಾನ ತಂಡ ಶುಕ್ರವಾರ ಐರ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದುಕೊಂಡಿದೆ.

ಸರಣಿಯ ಮೊದಲ ಎರಡು ಪಂದ್ಯಗಳನ್ನು ಜಯಿಸಿದ್ದ ಆಫ್ಘಾನಿಸ್ತಾನ ಪಡೆ ಐದನೆಯ ಹಾಗೂ ಅಂತಿಮ ಪಂದ್ಯದಲ್ಲೂ ಗೆಲುವು ಒಲಿಸಿಕೊಳ್ಳುವ ಮೂಲಕ  3–2ರಲ್ಲಿ ಸರಣಿ ಕೈವಶ ಮಾಡಿಕೊಂಡಿದೆ. ಶುಕ್ರವಾರ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ಪಡೆ 48.1 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 229 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಆಫ್ಘಾನಿಸ್ತಾನ ತಂಡ 48.4 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಗುರಿ ತಲು ಪಿತು.

ಶತಕದ ಆಟ: ಸರಣಿ ಜಯದ ಕನಸು ಕಂಡಿದ್ದ ಆಫ್ಘನ್‌ ಪಡೆಗೆ ಅಂತಿಮ ಪಂದ್ಯದಲ್ಲಿ ಗೆಲುವು ಅನಿವಾರ್ಯ ವಾಗಿತ್ತು. ಆದರೆ ಈ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳು ನಿರ್ಣಾಯಕ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಕುಸಿತ ಕಂಡರು. ಮೊದಲ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿ ಭರವಸೆ ಮೂಡಿಸಿದ್ದ ಮೊಹಮ್ಮದ್ ಶಹಜಾದ್ 13 ರನ್ ಕಲೆಹಾಕುವಷ್ಟರಲ್ಲಿ ಸ್ಟುವರ್ಟ್‌ ಥಾಮ್ಸನ್‌ಗೆ ಕ್ಯಾಚ್ ನೀಡಿದರು.

ADVERTISEMENT

ಐರ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಮೊದಲ ಬಾರಿಗೆ ಕಣಕ್ಕಿಳಿಯುವ ಅವಕಾಶ ಪಡೆದಿದ್ದ ನಜೀಬ್ ತರಕೈ (5) ಕೂಡ ತಮ್ಮ ಸಾಮರ್ಥ್ಯ ಸಾಬೀತು ಮಾಡುವಲ್ಲಿ ಎಡವಿದರು. ಆದರೆ ನಾಲ್ಕನೇ ವಿಕೆಟ್‌ ಜತೆಯಾಟದಲ್ಲಿ ರಹಮತ್ ಷಾ (108) ಮತ್ತು ಶಮೀವುಲ್ಲಾ ಶೆನ್ವರಿ (62) ಭರವಸೆ ಉಳಿಸಿದರು. ಈ ಜೋಡಿ 133 ರನ್‌ಗಳ ಅತ್ಯುತ್ತಮ ಜತೆಯಾಟ ನೀಡಿತು. ಇದರಿಂದಾಗಿ ಆಫ್ಘನ್ ತಂಡ ಗೆಲುವಿನ ಕದ ತಟ್ಟಿತು.ಷಾ 127 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ಇದರಲ್ಲಿ ಹತ್ತು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದೆ.

ರಶೀದ್ ಮಿಂಚು: ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್‌ಗೆ ಅಮೋಘ ಆರಂಭ ದೊರೆಯಿತು. ಎಡ್ ಜಾಯ್ಸಿ (42) ಹಾಗೂ ಪಾಲ್‌ ಸ್ಟಿರ್ಲಿಂಗ್ (51) ಉತ್ತಮ ಜತೆಯಾಟ ನೀಡಿದರು. ಬಳಿಕ ಬಂದ ಬ್ಯಾಟ್ಸ್‌ಮನ್‌ಗಳು ಆಫ್ಘನ್ ಬೌಲರ್ ರಶೀದ್ ಖಾನ್‌ ದಾಳಿಗೆ ತತ್ತರಿಸಿದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಎರಡಂಕಿಯ ಗಡಿ ದಾಟದೇ ಪೆವಿಲಿಯನ್ ಸೇರಿಕೊಂಡರು.ರಶೀದ್‌ 29 ರನ್‌ಗಳನ್ನು ನೀಡಿ ನಾಲ್ಕು ವಿಕೆಟ್ ಕಬಳಿಸಿ ಮಿಂಚಿದರು.

ಸಂಕ್ಷಿಪ್ತ ಸ್ಕೋರು: ಐರ್ಲೆಂಡ್‌: 48.1 ಓವರ್‌ಗಳಲ್ಲಿ 229 (ಎಡ್‌ ಜಾಯ್ಸಿ 42, ಪಾಲ್ ಸ್ಟಿರ್ಲಿಂಗ್‌ 51, ವಿಲಿಯಮ್‌ ಪೋರ್ಟರ್‌ಫೀಲ್ಡ್‌ 34; ರಶೀದ್ ಖಾನ್ 29ಕ್ಕೆ4, ಫರೀದ್ ಅಹಮ್ಮದ್ 65ಕ್ಕೆ3). ಆಫ್ಘಾನಿಸ್ತಾನ: 48.4 ಓವರ್‌ಗಳಲ್ಲಿ 3 ವಿಕೆಟ್‌ಗೆ 231 (ಮೊಹಮ್ಮದ್ ಶಹಜಾದ್ 13, ರಹಮತ್ ಷಾ 108, ಸಮೀವುಲ್ಲಾ ಶೆನ್ವರಿ 62; ಟಿಮ್ ಮುರ್ತಗ್‌ 36ಕ್ಕೆ1). ಫಲಿತಾಂಶ: ಆಫ್ಘಾನಿಸ್ತಾನ ತಂಡಕ್ಕೆ 7 ವಿಕೆಟ್‌ಗಳ ಜಯ. ಪಂದ್ಯ ಶ್ರೇಷ್ಠ: ರಹಮತ್ ಷಾ. ಸರಣಿ ಶ್ರೇಷ್ಠ: ಪಾಲ್ ಸ್ಟಿರ್ಲಿಂಗ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.