ADVERTISEMENT

ರ್‍ಯಾಂಕಿಂಗ್‌ನಲ್ಲಿ ಯಾಸೀರ್‌ಗೆ ಅಗ್ರಸ್ಥಾನ

​ಪ್ರಜಾವಾಣಿ ವಾರ್ತೆ
Published 18 ಜುಲೈ 2016, 19:30 IST
Last Updated 18 ಜುಲೈ 2016, 19:30 IST

ದುಬೈ (ಪಿಟಿಐ): ಭಾನುವಾರ ಮುಗಿದ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ ಗೆಲ್ಲಲು ಕಾರಣರಾದ ಸ್ಪಿನ್ನರ್‌ ಯಾಸೀರ್ ಶಹಾ ಐಸಿಸಿ ರ್‍ಯಾಂಕಿಂಗ್‌ನ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

ವಿಶ್ವ ಮಟ್ಟದ ರ್‍ಯಾಂಕಿಂಗ್‌ನಲ್ಲಿ ಪಾಕಿಸ್ತಾನದ ಬೌಲರ್‌ವೊಬ್ಬರು ಅಗ್ರಸ್ಥಾನ ಪಡೆದಿದ್ದು 20 ವರ್ಷಗಳ ಅವಧಿಯಲ್ಲಿ ಇದೇ ಮೊದಲು. 1996ರಲ್ಲಿ ಮುಸ್ತಾಕ್‌ ಅಹ್ಮದ್‌ ಈ ಸಾಧನೆ ಮಾಡಿದ್ದರು.

ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಪಾಕ್ ತಂಡ ಆತಿಥೇಯರನ್ನು 75 ರನ್‌ಗಳಿಂದ ಮಣಿಸಿತ್ತು. ಯಾಸೀರ್‌ ಎರಡೂ ಇನಿಂಗ್ಸ್‌ ಸೇರಿ ಒಟ್ಟು ಹತ್ತು ವಿಕೆಟ್‌ಗಳನ್ನು ಕಬಳಿಸಿದ್ದರು.  ಪಂದ್ಯ ಶ್ರೇಷ್ಠ ಗೌರವ ಕೂಡ ಪಡೆದಿದ್ದರು.

ಭಾರತದ ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್ 871 ರೇಟಿಂಗ್ ಪಾಯಿಂಟ್ಸ್‌ನಿಂದ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. 

ಮೊದಲ ಹತ್ತು ಸ್ಥಾನ ಹೊಂದಿರುವ ಬೌಲರ್‌ಗಳು (ಕ್ರಮವಾಗಿ): ಯಾಸೀರ್‌ ಶಹಾ (ಪಾಕಿಸ್ತಾನ), ಆರ್‌. ಅಶ್ವಿನ್‌ (ಭಾರತ), ಜೇಮ್ಸ್‌ ಆ್ಯಂಡರ್ಸನ್‌ (ಇಂಗ್ಲೆಂಡ್‌),  ಸ್ಟುವರ್ಟ್‌ ಬ್ರಾಡ್‌ (ಇಂಗ್ಲೆಂಡ್‌), ಡೇಲ್‌ ಸ್ಟೇಯ್ನ್‌ (ದಕ್ಷಿಣ ಆಫ್ರಿಕಾ), ರವೀಂದ್ರ ಜಡೇಜ (ಭಾರತ), ಟ್ರೆಂಟ್‌ ಬೌಲ್ಟ್‌ (ನ್ಯೂಜಿಲೆಂಡ್‌),  ಜೋಶ್‌ ಹ್ಯಾಜಲ್‌ವುಡ್‌ (ಆಸ್ಟ್ರೇಲಿಯಾ),  ಮಾರ್ನೆ ಮಾರ್ಕಲ್‌ (ದಕ್ಷಿಣ ಆಫ್ರಿಕಾ), ಮತ್ತು ವೆರ್ನಾನ್‌ ಫಿಲ್ಯಾಂಡರ್‌ ದಕ್ಷಿಣ ಆಫ್ರಿಕಾ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.