ADVERTISEMENT

ವಿವಾದಕ್ಕೆ ಕಾರಣವಾದ ಸೀಮಾ ನಡೆ

ವಿಷಯ ತಿಳಿಸಿದ್ದು ನಿಜ, ಆದರೆ ನಾವು ಅನುಮತಿ ಕೊಟ್ಟಿಲ್ಲ: ಫೆಡರೇಷನ್

​ಪ್ರಜಾವಾಣಿ ವಾರ್ತೆ
Published 19 ಜುಲೈ 2016, 19:30 IST
Last Updated 19 ಜುಲೈ 2016, 19:30 IST

ನವದೆಹಲಿ (ಪಿಟಿಐ): ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಡಿಸ್ಕಸ್‌ ಎಸೆತ ಸ್ಪರ್ಧಿ ಸೀಮಾ ಪೂನಿಯಾ ಅಂತಿಮ ಹಂತದ ತರಬೇತಿಗಾಗಿ ರಷ್ಯಾಕ್ಕೆ ತೆರಳಿದ್ದು, ಇದು   ವಿವಾದಕ್ಕೆ ಕಾರಣವಾಗಿದೆ.

ಇಂಚೆನ್‌ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದ 32 ವರ್ಷದ ಪೂನಿಯಾ ರಷ್ಯಾದಲ್ಲಿ ಅಲ್ಲಿನ ಕೋಚ್ ಜೊತೆ ಇರುವ ಪೋಟೊವನ್ನು ಸಾಮಾಜಿಕ ತಾಣದಲ್ಲಿ ಹಾಕಿದ್ದಾರೆ.

‘ರಾಷ್ಟ್ರೀಯ ಉದ್ದೀಪನಾ ಮದ್ದು ತಡೆಘಟಕ, ಭಾರತ ಕ್ರೀಡಾ ಪ್ರಾಧಿಕಾರ ಮತ್ತು ಭಾರತ ಅಥ್ಲೆಟಿಕ್‌ ಫೆಡರೇಷನ್‌ ಮುಖ್ಯಸ್ಥರಿಗೆ ನಾನು ರಷ್ಯಾಕ್ಕೆ ತರಬೇತಿಗೆ ಬಂದಿರುವ ವಿಷಯವನ್ನು ಈ ಮೇಲ್‌ ಮೂಲಕ ತಿಳಿಸಿದ್ದೇನೆ. ರಷ್ಯಾದಲ್ಲಿ ಎಲ್ಲಿ ತರಬೇತಿ ಪಡೆಯುತ್ತಿದ್ದೇನೆ ಎನ್ನುವುದರ ಬಗ್ಗೆ  ಮಾಹಿತಿ ನೀಡಿದ್ದೇನೆ. ರಷ್ಯಾದಲ್ಲಿ ನಾನು ಉಳಿದುಕೊಂಡಿರುವ  ವಿಳಾಸ ಮತ್ತು ಮನೆಯ ಸಂಖ್ಯೆಯನ್ನೆಲ್ಲಾ  ಅಧಿಕಾರಿಗಳಿಗೆ ಕೊಟ್ಟಿದ್ದೇನೆ. ಆಗಸ್ಟ್ ಮೊದಲ ವಾರದ ತನಕ ರಷ್ಯಾದಲ್ಲಿರುತ್ತೇನೆ. ನಂತರ ಬ್ರೆಜಿಲ್‌ಗೆ ತೆರಳುತ್ತೇನೆ’ ಎಂದು ಸುದ್ದಿಸಂಸ್ಥೆಗೆ ನೀಡಿರುವ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.

ಸೀಮಾ ಪೂನಿಯಾ ಈ ಮೇಲ್‌ ಮೂಲಕ ಮಾಹಿತಿ ನೀಡಿರುವುದನ್ನು ಅಥ್ಲೆಟಿಕ್‌ ಫೆಡರೇಷನ್‌ ಕೂಡ ಖಚಿತಪಡಿಸಿದೆ. ಆದರೆ ಫೆಡರೇಷನ್‌ ‘ರಷ್ಯಾಕ್ಕೆ ಹೋಗಲು ಪೂನಿಯಾಗೆ ಅನುಮತಿ ಕೊಟ್ಟಿಲ್ಲ’ ಎಂದು ಹೇಳಿದೆ.

‘ರಷ್ಯಾಕ್ಕೆ ಹೋಗಿ ತರಬೇತಿ ಪಡೆಯಲು ಯೋಜನೆ ರೂಪಿಸಿದ್ದೇನೆ ಎಂದು ಸೀಮಾ ಮಾಹಿತಿ ನೀಡಿದ್ದಾರೆ. ಆದರೆ ನಾವು ಅನುಮತಿ ನೀಡಿಲ್ಲ. ರಷ್ಯಾದಲ್ಲಿ ಉದ್ದೀಪನಾ ಮದ್ದು ಸೇವನೆ ವಿವಾದ ದೊಡ್ಡ ಸ್ವರೂಪದಲ್ಲಿದೆ. ಅಲ್ಲಿಗೆ ಹೋಗಿ ತರಬೇತಿ ಪಡೆಯಬೇಕಿತ್ತೇ’ ಎಂದು ಅಥ್ಲೆಟಿಕ್‌ ಫೆಡರೇಷನ್‌ನ ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸೀಮಾ ‘ಫೆಡರೇಷನ್‌ಗೆ ಮಾಹಿತಿ ನೀಡುವುದಷ್ಟೇ ಮುಖ್ಯ. ಅನುಮತಿ ಪಡೆಯುವ ಅಗತ್ಯವೇನಿಲ್ಲ. ಮನಪ್ರೀತ್ ಕೌರ್‌, ವಿಕಾಸ್ ಗೌಡ ಮತ್ತು ಇಂದರಜಿತ್ ಸಿಂಗ್  ಅವರು ರಾಷ್ಟ್ರೀಯ ತಂಡದ ಶಿಬಿರಕ್ಕೂ ಬಾರದೇ ಅವರಿಗೆ ಇಷ್ಟವಾದಲ್ಲಿ ತರಬೇತಿ ಪಡೆದಿದ್ದಾರಲ್ಲವೇ’ ಎಂದು ತಿರುಗೇಟು ನೀಡಿದ್ದಾರೆ.
‘ಒಲಿಂಪಿಕ್ಸ್‌ಗೆ ಸಜ್ಜಾಗಲು ಸರ್ಕಾರ ಆರಂಭಿಸಿರುವ ಟಾರ್ಗೆಟ್‌ ಒಲಿಂಪಿಕ್‌್ ಪೋಡಿಯಂ ಯೋಜನೆಯಿಂದ ಅಮೆರಿಕದಲ್ಲಿ ತರಬೇತಿ ಪಡೆದು ಬಂದಿದ್ದೇನೆ. ಆದರೆ ರಷ್ಯಾಕ್ಕೆ ನನ್ನ ಸ್ವಂತ ಹಣವನ್ನು ಖರ್ಚು ಮಾಡಿದ್ದೇನೆ’ ಎಂದರು.

ಹರಿಯಾಣದ ಸೋನೆಪತ್‌ನ ಸೀಮಾ 2006, 2010 ಮತ್ತು 2014ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಜಯಿಸಿದ್ದರು.

ಕೋಚ್‌ ಯಾರು ಎನ್ನುವ ವಿವಾದ: ಉದ್ದೀಪನಾ ಮದ್ದು ಸೇವಿಸಿದ ಆರೋಪದಲ್ಲಿ ಸಿಲುಕಿರುವ ರಷ್ಯಾದ ಡಿಸ್ಕಸ್‌ ಎಸೆತ ಸ್ಪರ್ಧಿ ಡಾರೆ ಪಿಸಚಾಲೊಂಕೊವ ಅವರ ತಂದೆ ವಿಟಾಲಿಯಾ ಪಿಸಚಾಲೊಂಕೊವ  ಬಳಿ ಸೀಮಾ ತರಬೇತಿ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ವಿವಾದಕ್ಕೆ ಕಾರಣವಾಗಿದೆ.  ವಿಟಾಲಿಯಾ  ಜೊತೆ ತೆಗೆಸಿಕೊಂಡ ಅವರ ಫೋಟೊ  ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ. ಇದಕ್ಕೂ ಅವರು ಸ್ಪಷ್ಟನೆ ನೀಡಿದ್ದಾರೆ.

‘ವಿಟಾಲಿಯಾ  ನನ್ನ ಕೋಚ್‌ ಅಲ್ಲ. ಅವರ ಬಳಿ ನಾನು ತರಬೇತಿ ಪಡೆಯುತ್ತಿಲ್ಲ. ತರಬೇತಿಗೆ ಬೇಕಾಗುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಅವರ ನೆರವು ಪಡೆದಿದ್ದೇನೆ ಅಷ್ಟೇ. ನನ್ನ ಪತಿ ಅಂಕುಷ್‌ ಪೂನಿಯಾ ಅವರೇ ನನ್ನ ಕೋಚ್‌’ ಎಂದು ಸೀಮಾ ಹೇಳಿದ್ದಾರೆ.

***
ಮನಪ್ರೀತ್, ವಿಕಾಸ್ ಮತ್ತು ಇಂದರಜಿತ್ ಅವರು ರಾಷ್ಟ್ರೀಯ ತಂಡದ ಶಿಬಿರಕ್ಕೂ ಬಾರದೆ ತಮ್ಮದೇ ಯೋಜನೆ ರೂಪಿಸಿ ತರಬೇತಿ ಪಡೆದಿದ್ದಾರಲ್ಲವೇ. ಆದ್ದರಿಂದ ರಷ್ಯಾಕ್ಕೆ ತೆರಳಲು ಫೆಡರೇಷನ್‌  ಅನುಮತಿ ಏಕೆ ಪಡೆಯಬೇಕು.
-ಸೀಮಾ ಪೂನಿಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.