ADVERTISEMENT

ವಿವಿಯನ್ ರಿಚರ್ಡ್ಸ್ ಭೇಟಿ: ಆಟಗಾರರಲ್ಲಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 19 ಜುಲೈ 2016, 19:30 IST
Last Updated 19 ಜುಲೈ 2016, 19:30 IST
ವಿವಿಯನ್ ರಿಚರ್ಡ್ ಮತ್ತು ವಿರಾಟ್ ಕೊಹ್ಲಿ ಸಂಭಾಷಣೆ
ವಿವಿಯನ್ ರಿಚರ್ಡ್ ಮತ್ತು ವಿರಾಟ್ ಕೊಹ್ಲಿ ಸಂಭಾಷಣೆ   

ಆ್ಯಂಟಿಗಾ (ಪಿಟಿಐ): ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ ಅಧ್ಯಕ್ಷರ ಇಲೆವೆನ್‌ ವಿರುದ್ಧದ ಎರಡು ಅಭ್ಯಾಸ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಭಾರತ ತಂಡದ ಆಟಗಾರರ ಸಂಭ್ರಮ ಈಗ ದುಪ್ಪಟ್ಟಾಗಿದೆ.

ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಆಡಲು ಕಾಯುತ್ತಿರುವ ಭಾರತದ ಆಟಗಾರರಿಗೆ ಅಚ್ಚರಿ ಕಾದಿತ್ತು. ಟೆಸ್ಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್ ಧವನ್‌, ಅಜಿಂಕ್ಯ ರಹಾನೆ, ಮುರಳಿ ವಿಜಯ್‌ ಮತ್ತು ಕೆ.ಎಲ್‌. ರಾಹುಲ್ ಅವರಿಗೆ ಸಂಭ್ರಮವೋ ಸಂಭ್ರಮ. ಇದಕ್ಕೆ ಕಾರಣವಾಗಿದ್ದು ವೆಸ್ಟ್ ಇಂಡೀಸ್‌ನ ಬ್ಯಾಟಿಂಗ್ ದಿಗ್ಗಜ ವಿವಿಯನ್‌ ರಿಚರ್ಡ್ಸ್‌.

ಹೌದು, ಏಕೆಂದರೆ ರಿಚರ್ಡ್ಸ್ಅವರು  ಭಾರತದ ಆಟಗಾರರು ಇಲ್ಲಿ ತಂಗಿರುವ ಹೋಟೆಲ್‌ಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದರು. ಭಾರತದ ಆಟಗಾರರು  ರಿಚರ್ಡ್ಸ್ ಅವರ ಜೊತೆ ಫೋಟೊ ತೆಗೆಸಿಕೊಂಡು ಖುಷಿಪಟ್ಟರು.

‘ಇದು ಬದುಕಿನ ಅತ್ಯಂತ ಸ್ಮರಣೀಯ ಸಂದರ್ಭ. ಕ್ರಿಕೆಟ್‌ ದಿಗ್ಗಜನನ್ನು ನೋಡಿ ತುಂಬಾ ಸಂತೋಷವಾಯಿತು’ ಎಂದು ವಿರಾಟ್‌ ಕೊಹ್ಲಿ ಟ್ವಿಟರ್‌ನಲ್ಲಿ ಬರೆದಿದ್ದಾರೆ.
62 ವರ್ಷದ ರಿಚರ್ಡ್ಸ್ ಅವರು ಕೆಲವು ಹೊತ್ತು ಆಟಗಾರರ ಜೊತೆ ಕಳೆದರು.

‘ರಿಚರ್ಡ್ಸ್  ಸರ್‌ ನಮಗೆ ಕೆಲವು ಸಲಹೆಗಳನ್ನು ನೀಡಿದರು. ನಾನು ಅವರ ದೊಡ್ಡ ಅಭಿಮಾನಿ’ ಎಂದು ರಾಹುಲ್‌ ಟ್ವಿಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.