ADVERTISEMENT

ವಿಶ್ವಕಪ್ ಕ್ರಿಕೆಟ್‌ ಸೋಲು: ತನಿಖೆಗೆ ಆಸಕ್ತಿ

ಪಿಟಿಐ
Published 19 ಜುಲೈ 2017, 19:30 IST
Last Updated 19 ಜುಲೈ 2017, 19:30 IST
ವಿಶ್ವಕಪ್ ಕ್ರಿಕೆಟ್‌ ಸೋಲು: ತನಿಖೆಗೆ  ಆಸಕ್ತಿ
ವಿಶ್ವಕಪ್ ಕ್ರಿಕೆಟ್‌ ಸೋಲು: ತನಿಖೆಗೆ ಆಸಕ್ತಿ   

ಕೊಲಂಬೊ: ಆರು ವರ್ಷಗಳ ಹಿಂದೆ ನಡೆದ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ ತಂಡ ಸೋತದ್ದರ ಕುರಿತು ತನಿಖೆಗೆ ಆದೇಶಿಸಲು ಚಿಂತನೆ ನಡೆಸಿರುವುದಾಗಿ ಕ್ರೀಡಾ ಸಚಿವ ದಯಾಸಿರಿ ಜಯಶೇಖರ ತಿಳಿಸಿದ್ದಾರೆ.

2011ರಲ್ಲಿ ನಡೆದ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಲಂಕಾವನ್ನು ಭಾರತ ಆರು ವಿಕೆಟ್‌ಗಳಿಂದ ಮಣಿಸಿತ್ತು. ‘ಅಂದು ಶ್ರೀಲಂಕಾ ಸೋಲಲು ಏನು ಕಾರಣ ಎಂದು ತಿಳಿಯುತ್ತಿಲ್ಲ. ಆದ್ದರಿಂದ ಈ ಬಗ್ಗೆ ತನಿಖೆ ನಡೆಯಬೇಕು’ ಎಂದು ಮಾಜಿ ನಾಯಕ ಅರ್ಜುನ ರಣತುಂಗ ಆಗ್ರಹಿಸಿದ್ದರು.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ದಯಾಸಿರಿ ‘ಯಾರಾದರೂ ಲಿಖಿತ ದೂರು ನೀಡಿದರೆ ತನಿಖೆಗೆ ಸಿದ್ಧ’ ಎಂದಿದ್ದಾರೆ.

ADVERTISEMENT

‘ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಫೈನಲ್‌ ಪಂದ್ಯದ ಸಂದರ್ಭದಲ್ಲಿ ವೀಕ್ಷಕ ವಿವರಣೆಗಾರನಾಗಿ ನಾನೂ ಇದ್ದೆ. ಅಂದು ಶ್ರೀಲಂಕಾ ಆಡಿದ ವಿಧಾನ ಸಂಶಯಕ್ಕೆ ಎಡೆ ಮಾಡಿಕೊಟ್ಟಿತ್ತು’ ಎಂದು ರಣತುಂಗ ಹೇಳಿದ್ದರು. ಪಂದ್ಯ ವೀಕ್ಷಿಸಲು ಮುಂಬೈಗೆ ತೆರಳಿದ್ದ ಅಂದಿನ ಕ್ರೀಡಾ ಸಚಿವ ಮಹಿಂದಾನಂದ ಅಲುತಘಮಗೆ ಅವರು ಕೂಡ ತನಿಖೆಗೆ ಒತ್ತಾಯಿಸಿದ್ದರು.

‘ಅಂದು ಪಂದ್ಯ ನಡೆಯುತ್ತಿದ್ದಾಗ ಡ್ರೆಸಿಂಗ್‌ ಕೊಠಡಿಯಲ್ಲಿ ಹಿರಿಯ ಆಟಗಾರರೊಬ್ಬರು 50ಕ್ಕೂ ಹೆಚ್ಚು ಸಿಗರೇಟ್‌ ಸೇದಿದ್ದರು. ಪಂದ್ಯ ಮುಗಿದ ನಂತರ ನಿರ್ದಿಷ್ಟ ಕಾರಣ ಹೇಳದೆ ಅಂದಿನ ನಾಯಕ ರಾಜೀನಾಮೆಗೆ ಮುಂದಾಗಿದ್ದರು. ಇಂಥ ಅನೇಕ ಸಂಶಯಾಸ್ಪದ ಪ್ರಸಂಗಗಳು ಆ ಪಂದ್ಯದ ಸುತ್ತ ಇವೆ. ಆದ್ದರಿಂದ ಅಂದಿನ ಶ್ರೀಲಂಕಾ ಕ್ರಿಕೆಟ್‌ ಮಂಡಳಿಯ ಆಡಳಿತಾಧಿಕಾರಿಗಳು ತನಿಖೆ ನಡೆಸಬೇಕು’ ಎಂದು ಮಹಿಂದಾನಂದ  ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.