ADVERTISEMENT

‘ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಹೆಚ್ಚಿನ ಸಾಧನೆ ಮಾಡಲಿದ್ದೇವೆ’

ಪಿಟಿಐ
Published 20 ಏಪ್ರಿಲ್ 2018, 19:30 IST
Last Updated 20 ಏಪ್ರಿಲ್ 2018, 19:30 IST
ಜ್ಞಾನಶೇಖರನ್‌ ಸತ್ಯನ್‌
ಜ್ಞಾನಶೇಖರನ್‌ ಸತ್ಯನ್‌   

ಚೆನ್ನೈ: ‘ಭಾರತದ ಕ್ರೀಡಾಪಟುಗಳು ಕಾಮನ್‌ವೆಲ್ತ್‌ನಲ್ಲಿ ಮಾಡಿದ ಸಾಧನೆಗಿಂತಲೂ ಮುಂಬರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಹೆಚ್ಚಿನ ಸಾಮರ್ಥ್ಯ ತೋರಲಿದ್ದಾರೆ’ ಎಂದು ಟೇಬಲ್‌ ಟೆನಿಸ್‌ ಆಟಗಾರ ಜ್ಞಾನಶೇಖರನ್‌ ಸತ್ಯನ್‌ ಹೇಳಿದ್ದಾರೆ.

‘ಕಾಮನ್‌ವೆಲ್ತ್‌ನ ಯಶಸ್ಸಿನಿಂದ ಎಲ್ಲ ಆಟಗಾರರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಆದ್ದರಿಂದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಸಾಧನೆ ಮಾಡಲಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

‘ಆದರೆ, ಗೆಲುವಿನ ಹಾದಿ ಅಷ್ಟು ಸುಲಭದ್ದಲ್ಲ. ಅಲ್ಲಿ ಸ್ಪರ್ಧಿಸುವ ಚೀನಾ, ಜಪಾನ್‌, ಕೊರಿಯಾದಂತಹ ರಾಷ್ಟ್ರಗಳು ಶ್ರೇಷ್ಠ ಆಟಗಾರರನ್ನು ಹೊಂದಿವೆ. ಅವರೆಲ್ಲರ ಸವಾಲು ಎದುರಿಸುವುದೇ ಒಂದು ಸವಾಲು. ಹಾಗಾಗಿ, ದೊಡ್ಡ ಗುರಿಯೊಂದಿಗೆ ಕಣಕ್ಕಿಳಿಯಬೇಕಿದೆ. ಇದಕ್ಕಾಗಿ ಎಲ್ಲ ರೀತಿಯ ಮಾನಸಿಕ ಸಿದ್ಧತೆ ಮಾಡಿಕೊಳ್ಳಬೇಕಿದೆ’ ಎಂದಿದ್ದಾರೆ.

ADVERTISEMENT

‘ನನ್ನ ಮೊದಲ ಕಾಮನ್‌ವೆಲ್ತ್‌ಕ್ರೀಡಾಕೂಟವಾದ್ದರಿಂದ ಅದರ ಅನುಭವ ಅನನ್ಯ. ಅನೇಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿದ ಅನುಭವಕ್ಕಿಂತಲೂ ಅದು ಭಿನ್ನವಾಗಿತ್ತು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಅಂಥ ಕ್ರೀಡಾಕೂಟದಲ್ಲಿಸ್ಪರ್ಧಿಸುವಾಗಲೇ ಹೆಚ್ಚಿನ ಒತ್ತಡ ಇರುತ್ತದೆ. ಆದರೆ ಅದನ್ನು ಮೆಟ್ಟಿ ನಿಂತು ಮೂರು ಪದಕಗಳನ್ನು ಗೆದ್ದಿದ್ದು ನನಗೆ ಸಂತಸ ತಂದಿದೆ’ ಎಂದೂ ಹೇಳಿದ್ದಾರೆ.

‘ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿ ಮಣಿಕಾ ಅವರ ಆಟ ಶ್ರೇಷ್ಠವಾಗಿತ್ತು. ಮಾದರಿ ಆಗುವಂತಹ ಆಟವನ್ನು ಅವರು ಆಡಿದರು. ಇದು ನಿಜಕ್ಕೂ ಚಾರಿತ್ರಿಕ ಸಾಧನೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

‘ಹಾಗೆಯೇ, ಟೇಬಲ್‌ ಟೆನಿಸ್‌ನಲ್ಲಿನ ದೇಶದ ಸಾಧನೆಯಿಂದ ಆ ಕ್ರೀಡೆಗೆ ಹೆಚ್ಚಿನ ಪ್ರಾಮುಖ್ಯತೆ ಸಿಗಲಿದೆ. ಕೆಲವೇ ವರ್ಷಗಳಲ್ಲಿ ಈ ಕ್ರೀಡೆಯಲ್ಲಿ ಭಾರತವು ಬಲಿಷ್ಠ ಶಕ್ತಿಯಾಗಿ ಬೆಳೆಯಲಿದೆ’ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಕಾಮನ್‌ವೆಲ್ತ್‌ನಲ್ಲಿನ ಅಮೋಘ ಸಾಧನೆಯಿಂದ ಅಂತರರಾಷ್ಟ್ರೀಯ ಟೇಬಲ್‌ ಟೆನಿಸ್‌ ಫೆಡರೇಷನ್ (ಐಟಿಟಿಎಫ್‌) ಬಿಡುಗಡೆ ಮಾಡಿರುವ ವಿಶ್ವ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಸತ್ಯನ್‌ ಅವರು 46ನೇ ಸ್ಥಾನಕ್ಕೆ ಏರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.