ADVERTISEMENT

ವಿಶ್ವ ಹಾಕಿ ಸೆಮಿಫೈನಲ್‌ ಲೀಗ್‌: ಭಾರತಕ್ಕೆ ಮಲೇಷ್ಯಾ ಸವಾಲು

ಪಿಟಿಐ
Published 21 ಜೂನ್ 2017, 19:30 IST
Last Updated 21 ಜೂನ್ 2017, 19:30 IST
ಭಾರತ ತಂಡದ ಆಟಗಾರರು
ಭಾರತ ತಂಡದ ಆಟಗಾರರು   

ಲಂಡನ್‌: ವಿಶ್ವ ಹಾಕಿ ಸೆಮಿಫೈನಲ್‌ ಲೀಗ್‌ನ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಗುರುವಾರ ಮಲೇಷ್ಯಾ ವಿರುದ್ಧ ಸೆಣಸಲಿದೆ.

ಗುಂಪು ಹಂತದಲ್ಲಿ ನಿರಂತರ ಮೂರು ಜಯ ಗಳಿಸಿದ ಮನ್‌ಪ್ರೀತ್‌ ಸಿಂಗ್ ಬಳಗ ಮಂಗಳವಾರ ನಡೆದ ಅಂತಿಮ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಸೋಲನುಭವಿಸಿತ್ತು. ಹೀಗಾಗಿ ‘ಬಿ’ ಗುಂಪಿನಲ್ಲಿ ತಂಡ ಎರಡನೇ ಸ್ಥಾನಕ್ಕೆ ಕುಸಿದಿದೆ. ಸ್ವಯಂ  ತಪ್ಪುಗಳು ನೆದರ್ಲೆಂಡ್ಸ್‌ ಎದುರಿನ ಪಂದ್ಯದಲ್ಲಿ ಭಾರತಕ್ಕೆ ಸೋಲುಣಿಸಿತ್ತು. ಸುಲಭವಾಗಿ ಮೂರು ಗೋಲುಗಳನ್ನು ಬಿಟ್ಟುಕೊಟ್ಟ ತಂಡ ಗೋಲು ಗಳಿಸುವ ಅನೇಕ ಅವಕಾಶಗಳನ್ನು ಕೈಚೆಲ್ಲಿತ್ತು. ಹೀಗಾಗಿ 3–1ರಿಂದ ಸೋಲುಂಡಿತ್ತು. ಸ್ಕಾಟ್ಲೆಂಡ್‌, ಕೆನಡಾ ಮತ್ತು ಪಾಕಿಸ್ತಾನ ಎದುರು ಉತ್ತಮ ಆಟವಾಡಿದ್ದ ತಂಡಕ್ಕೆ ಈ ಸೋಲು ಆಘಾತ ನೀಡಿದೆ.

ಈ ಆಘಾತ ಮರೆತು ಕ್ವಾರ್ಟರ್‌ ಫೈನಲ್‌ನಲ್ಲಿ ಸಂಘಟಿತ ಪ್ರಯತ್ನ ಮಾಡಬೇಕಾಗಿದೆ. ಅಚ್ಚರಿಯ ಫಲಿತಾಂಶ ನೀಡುವ ಸಾಮರ್ಥ್ಯ ಇರುವ ಮಲೇಷ್ಯಾವನ್ನು ಮಣಿಸಲು ಸಮರ್ಥ ತಂತ್ರಗಳನ್ನು ಹೆಣೆಯಬೇಕಾಗಿದೆ.

ADVERTISEMENT

ಲೀಗ್‌ನಲ್ಲಿ ಉತ್ತಮವಾಗಿ ಆಡಿರುವ ಆಕಾಶ್‌ ದೀಪ್‌ ಸಿಂಗ್‌ ಕೆಲವು ಅತ್ಯುತ್ತಮ ಗೋಲುಗಳೊಂದಿಗೆ ಹಾಕಿ ಪ್ರಿಯರ ಮನಗೆದ್ದಿದ್ದಾರೆ. ಎಸ್‌.ವಿ.ಸುನಿಲ್‌, ತಲ್ವಿಂದರ್ ಸಿಂಗ್‌ ಮತ್ತು ಮನ್‌ದೀಪ್‌ ಸಿಂಗ್ ಕೂಡ ಮಿಂಚಿದರೆ ಭಾರತಕ್ಕೆ ಜಯ ಗಳಿಸುವುದು ಕಷ್ಟಕರವಾಗದು.

ಭಾರತದ ಮಿಡ್‌ಫೀಲ್ಡ್‌ ಮತ್ತು ರಕ್ಷಣಾ ವಿಭಾಗ ಇನ್ನಷ್ಟು ಬಲ ಪಡೆದುಕೊಳ್ಳಬೇಕಾಗಿದೆ. ಸರ್ದಾರ್‌ ಸಿಂಗ್‌ ಮತ್ತು ನಾಯಕ ಮನ್‌ಪ್ರೀತ್‌ ಸಿಂಗ್‌ ಮಿಡ್‌ಫೀಲ್ಡ್‌ ವಿಭಾಗದಲ್ಲಿ ಹೆಚ್ಚು ಜವಾಬ್ದಾರಿ ಹೊತ್ತುಕೊಳ್ಳಬೇಕಾಗಿದೆ. ರೂಪಿಂದರ್ ಪಾಲ್ ಸಿಂಗ್ ಅವರ ಅನುಪಸ್ಥಿತಿಯಲ್ಲಿ ಪೆನಾಲ್ಟ್ ಕಾರ್ನರ್‌ಗಳನ್ನು ನಿರೀಕ್ಷೆಗೆ ತಕ್ಕಂತೆ ಗೋಲಾಗಿ ಪರಿವರ್ತಿಸಲು ತಂಡಕ್ಕೆ ಸಾಧ್ಯವಾಗುತ್ತಿಲ್ಲ. ಈ ಕೊರತೆಯನ್ನು ನೀಗಿಸುವ ಹೊಣೆ ಯುವ ಆಟಗಾರರಾದ ಹರ್ಮನ್‌ಪ್ರೀತ್‌ ಸಿಂಗ್‌ ಮತ್ತು ಜಸ್‌ಜೀತ್‌ ಸಿಂಗ್ ಕುಲಾರ್‌ ಅವರ ಹೆಗಲ ಮೇಲಿದೆ. ಗಾಯಗೊಂಡು ಟೂರ್ನಿಯಲ್ಲಿ ಆಡದೇ ಇರುವ ಪಿ.ಆರ್.ಶ್ರೀಜೇಶ್‌ ಅವರ ಅನುಪಸ್ಥಿತಿಯಲ್ಲಿ ಕಾಯ್ದಿರಿಸಿದ ಗೋಲ್‌ ಕೀಪರ್‌ಗಳಾದ ವಿಕಾಸ್ ದಹಿಯಾ ಮತ್ತು ಆಕಾಶ್‌ ಚಿಕ್ಟೆ ಉಪಯುಕ್ತ ಆಟ ಆಡಿದ್ದಾರೆ. ಎದುರಾಳಿಗಳ ಗೋಲು ಗಳಿಕೆಗೆ ತಡೆಯೊಡ್ಡಲು ಇವರಿಗೆ ಸಾಧ್ಯವಾದರೆ ತಂಡ ಅಂತಿಮ ನಾಲ್ಕರ ಘಟ್ಟಕ್ಕೆ ಸುಲಭವಾಗಿ ಪ್ರವೇಶಿಸಬಹುದು.

ಲೀಗ್‌ನ ಇತರ ಕ್ವಾರ್ಟರ್‌ ಫೈನಲ್‌ಗಳಲ್ಲಿ ಅರ್ಜೆಂಟೀನಾವನ್ನು ಪಾಕಿಸ್ತಾನ ಎದುರಿಸಲಿದ್ದು ನೆದರ್ಲೆಂಡ್ಸ್ ವಿರುದ್ಧ ಚೀನಾ ಸೆಣಸಲಿದೆ. ಇಂಗ್ಲೆಂಡ್ ಸವಾಲನ್ನು ಕೆನಡಾ ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.