ADVERTISEMENT

ವ್ಯಾಟ್ಸನ್, ನೇಗಿಗೆ ಹೆಚ್ಚು ಬೆಲೆ

ಐಪಿಎಲ್ ಆಟಗಾರರ ಹರಾಜು: ಕಡಿಮೆಯಾದ ಯುವಿ ಮೌಲ್ಯ

ಪ್ರಮೋದ ಜಿ.ಕೆ
Published 6 ಫೆಬ್ರುವರಿ 2016, 19:30 IST
Last Updated 6 ಫೆಬ್ರುವರಿ 2016, 19:30 IST
ವ್ಯಾಟ್ಸನ್, ನೇಗಿಗೆ ಹೆಚ್ಚು ಬೆಲೆ
ವ್ಯಾಟ್ಸನ್, ನೇಗಿಗೆ ಹೆಚ್ಚು ಬೆಲೆ   

ಬೆಂಗಳೂರು: ಇಂಡಿಯನ್‌ ಪ್ರೀಮಿಯರ್ ಲೀಗ್‌ (ಐಪಿಎಲ್‌) ಒಂಬತ್ತನೇ ಆವೃತ್ತಿಗೆ ಶನಿವಾರ ನಡೆದ ಆಟಗಾರರ ಹರಾಜು ಕೆಲ ಅಚ್ಚರಿಗಳಿಗೆ ಕಾರಣವಾಯಿತು. ಚುಟುಕು ಕ್ರಿಕೆಟ್‌ನ ಪರಿಣತ ಬ್ಯಾಟ್ಸ್‌ಮನ್‌ ಯುವರಾಜ್ ಸಿಂಗ್ ಅವರನ್ನು ಹಿಂದಿಕ್ಕಿದ ಯುವ ಆಟಗಾರ ಪವನ್‌ ನೇಗಿ ಈ ಬಾರಿಯ ಹರಾಜಿನಲ್ಲಿ ಹೆಚ್ಚು ಬೆಲೆಗೆ ಮಾರಾಟವಾದ ಭಾರತದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡರು.

ಶೇನ್ ವ್ಯಾಟ್ಸನ್‌ ಒಟ್ಟಾರೆಯಾಗಿ ಹೆಚ್ಚು ಬೆಲೆ ಪಡೆದ ಕೀರ್ತಿಗೆ ಪಾತ್ರರಾದರು. ಆಸ್ಟ್ರೇಲಿಯಾದ  ಈ ಆಟಗಾರನನ್ನು  ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ  ₹ 9.5 ಕೋಟಿಗೆ ಖರೀದಿಸಿತು.

ವ್ಯಾಟ್ಸನ್‌ 2008ರಿಂದಲೂ  ರಾಜಸ್ತಾನ ರಾಯಲ್ಸ್ ತಂಡದಲ್ಲಿದ್ದಾರೆ. ಆದರೆ ರಾಯಲ್ಸ್‌ ಈಗ ಎರಡು ವರ್ಷ ನಿಷೇಧ ಶಿಕ್ಷೆ ಎದುರಿಸುತ್ತಿರುವ ಕಾರಣ ಆ ತಂಡದಲ್ಲಿರುವ ಆಟಗಾರರು ಹರಾಜಿನ ಮೂಲಕ ಬೇರೆ ಬೇರೆ ತಂಡಗಳನ್ನು ಸೇರಿಕೊಂಡರು.

ವ್ಯಾಟ್ಸನ್‌ ಐಪಿಎಲ್‌ನಲ್ಲಿ ಒಟ್ಟು ಹೆಚ್ಚು ರನ್‌ ಮತ್ತು ಹೆಚ್ಚು ವಿಕೆಟ್‌ ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಮೊದಲ ಆವೃತ್ತಿಯಿಂದಲೂ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ಆದ್ದರಿಂದ 34 ವರ್ಷದ ಈ ಆಟಗಾರನಿಗೆ ಉತ್ತಮ ‘ಬೆಲೆ’ ಲಭಿಸುವುದು ನಿರೀಕ್ಷಿತವೇ ಆಗಿತ್ತು.

ಆದರೆ ಅಚ್ಚರಿಗೆ ಕಾರಣವಾಗಿದ್ದು ಯುವರಾಜ್‌ ಸಿಂಗ್ ಹರಾಜು. ಎಡಗೈ ಬ್ಯಾಟ್ಸ್‌ಮನ್‌ ‘ಯುವಿ’ ಅವರಿಗೆ 2014ರ ಹರಾಜಿನಲ್ಲಿ ಆರ್‌ಸಿಬಿ ₹ 14 ಕೋಟಿ ನೀಡಿತ್ತು. ಅವರು ಕಳಪೆ ಪ್ರದರ್ಶನ ನೀಡಿದ್ದ ಕಾರಣ ಒಂದೇ ವರ್ಷದಲ್ಲಿ ಆರ್‌ಸಿಬಿ ಫ್ರಾಂಚೈಸ್‌ ಕೈಬಿಟ್ಟಿತ್ತು. ಆದರೂ ಪಂಜಾಬ್‌ ಆಟಗಾರನ ಮಾರುಕಟ್ಟೆ ಮೌಲ್ಯ ಮಾತ್ರ ಕಡಿಮೆಯಾಗಿರಲಿಲ್ಲ. 2015ರ ಆವೃತ್ತಿಗೆ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ₹ 16 ಕೋಟಿ ನೀಡಿತ್ತು.

ಆದ್ದರಿಂದ ಈ ಬಾರಿಯ ಹರಾಜು ಕುತೂಹಲಕ್ಕೆ ಕಾರಣವಾಗಿತ್ತು. ಇವರನ್ನು ತಮ್ಮ ತಂಡಕ್ಕೆ ಸೆಳೆಯಲು ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಪೈಪೋಟಿ ಏರ್ಪಟ್ಟಿತು.

ಆದರೆ ‘ಯುವಿ’ ಆಡಿದ್ದ ಹಿಂದಿನ ತಂಡಗಳಾದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌, ಡೆಲ್ಲಿ ಡೇರ್‌ಡೆವಿಲ್ಸ್ ಮತ್ತು ಆರ್‌ಸಿಬಿಯವರು ಮಾತ್ರ ಒಂದೂ ಬಿಡ್‌ ಮಾಡಲಿಲ್ಲ. ಹರಾಜು ಆರಂಭವಾಗುವ ಮೊದಲು ಮುಂಬೈ ತಂಡದಲ್ಲಿ ₹ 14.40 ಕೋಟಿಯಷ್ಟೇ ಹಣವಿತ್ತು. ಸನ್‌ರೈಸರ್ಸ್‌ ಖಾತೆಯಲ್ಲಿ ₹ 30.15 ಕೋಟಿ ಇತ್ತು. ಆದ್ದರಿಂದ ಮುಂಬೈ ತಂಡಕ್ಕೆ ಸನ್‌ರೈಸರ್ಸ್ ಬಿಡ್ಡಿಂಗ್‌ಗೆ ಸವಾಲೊಡ್ಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಸನ್‌ರೈಸರ್ಸ್ ಯುವರಾಜ್‌ಗೆ ₹ 7 ಕೋಟಿ ನೀಡಿತು.

ಹರಾಜಿನಲ್ಲಿ ಇನ್ನೊಂದು ಅಚ್ಚರಿ ನಡೆದಿದ್ದು ಪವನ್‌ ನೇಗಿ ಆಯ್ಕೆಯಲ್ಲಿ. ದೆಹಲಿಯ ಈ ಆಟಗಾರ ಮುಂಬರುವ ಏಷ್ಯಾಕಪ್‌ ಮತ್ತು ವಿಶ್ವ ಟ್ವೆಂಟಿ–20 ಟೂರ್ನಿಗೆ ಒಂದು ದಿನದ ಹಿಂದೆಯಷ್ಟೇ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದರು. 

23  ವರ್ಷದ ಪವನ್‌ ಅವರನ್ನು ತಮ್ಮ ತಂಡಕ್ಕೆ ಪಡೆಯಲು ಎಲ್ಲಾ ಫ್ರಾಂಚೈಸ್‌ಗಳ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿತು. ಮುಂಬೈ, ಪುಣೆ ಮತ್ತು ಡೇರ್‌ಡೆವಿಲ್ಸ್‌ ಯುವ ಆಟಗಾರನನ್ನು ಸೆಳೆಯಲು  ಇನ್ನಿಲ್ಲದ ಪ್ರಯತ್ನ ಮಾಡಿದವು. ಡೇರ್‌ಡೆವಿಲ್ಸ್ ತಂಡದ ಬಳಿ ₹ 37.15 ಕೋಟಿ ಹಣವಿತ್ತು. ಆದ್ದರಿಂದ ₹ 8.5 ಕೋಟಿಗೆ ನೇಗಿ ಅವರನ್ನು ಖರೀದಿಸಿತು. ಹಾರ್ದಿಕ್‌ ಪಾಂಡೆ ಸಹೋದರ ಕೃಣಾಲ್‌ ಕೂಡ ₹ 2 ಕೋಟಿಗೆ ಮುಂಬೈ ಇಂಡಿಯನ್ಸ್ ಪಾಲಾದರು. 

ಮಿಂಚು: ಭಾರತದ ಜೂನಿಯರ್ ಆಟಗಾರರೇ ಈ ಬಾರಿಯ ಹರಾಜಿನಲ್ಲಿ ಹೆಚ್ಚು ಗಮನ ಸೆಳೆದದ್ದು ವಿಶೇಷ.

ಪವನ್‌ ನೇಗಿ ಬಗ್ಗೆ
ಎಡಗೈ ಬ್ಯಾಟ್ಸ್‌ಮನ್ ಮತ್ತು ಸ್ಪಿನ್ನರ್ ಆಗಿರುವ ಪವನ್‌ ಐದು ವರ್ಷಗಳ ಹಿಂದೆಯಷ್ಟೇ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆಡಿದ್ದು ಮೂರು ಪಂದ್ಯಗಳನ್ನಷ್ಟೇ. ಒಂದೂ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ.

2011ರಲ್ಲಿ ಮೊದಲ ಬಾರಿಗೆ ಪಂದ್ಯ ಆಡಿದ್ದ ಪವನ್‌ ಕೊನೆಯ ಪಂದ್ಯವಾಡಿದ್ದು ಹೋದ ವರ್ಷ ನವೆಂಬರ್‌ನಲ್ಲಿ. ಆದ್ದರಿಂದ ನೇಗಿಗೆ ಹೆಚ್ಚು ಬೆಲೆ ಲಭಿಸುವ ನಿರೀಕ್ಷೆ ಇರಲಿಲ್ಲ. ಈ ಆಟಗಾರನಿಗೆ ₹ 30 ಲಕ್ಷ ಮೂಲ ಬೆಲೆ ನಿಗದಿ ಮಾಡಲಾಗಿತ್ತು.

ಚುಟುಕು ಕ್ರಿಕೆಟ್‌ನ ಮಾದರಿಯ ದೇಶಿ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 56 ಪಂದ್ಯಗಳಿಂದ ಒಟ್ಟು 479 ರನ್ ಗಳಿಸಿದ್ದಾರೆ. 46 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದು ಫ್ರಾಂಚೈಸ್‌ಗಳ ಗಮನ ಸೆಳೆದಿದೆ.

ಲೋಧಾ ಶಿಫಾರಸು ಅಡ್ಡಿಯಾಗಲ್ಲ: ಶುಕ್ಲಾ
‘ಐಪಿಎಲ್ ಟೂರ್ನಿಯನ್ನು ನಿಗದಿತ ವೇಳಾಪಟ್ಟಿಯಂತೆಯೇ ನಡೆಸಲಾಗುವುದು. ಲೋಧಾ ನೇತೃತ್ವದ ಸಮಿತಿಯ ಶಿಫಾರಸುಗಳು ಟೂರ್ನಿ ಸಂಘಟಿಸಲು ಅಡ್ಡಿಯಾಗುವುದಿಲ್ಲ’ ಎಂದು ಐಪಿಎಲ್‌ ಮುಖ್ಯಸ್ಥ ರಾಜೀವ್‌ ಶುಕ್ಲಾ ಹೇಳಿದರು.

‘ರಾಷ್ಟ್ರೀಯ ತಂಡದ ವೇಳಾಪಟ್ಟಿ ಮತ್ತು ಐಪಿಎಲ್‌ ಆರಂಭಕ್ಕೆ ಕನಿಷ್ಠ ಒಂಬತ್ತು ದಿನಗಳಾದರೂ ಅಂತರ ಇರಬೇಕು ಎನ್ನುವುದು ಶಿಫಾರಸಿನಲ್ಲಿರುವ ಅಂಶ. ಆದರೆ ಲೋಧಾ ಸಮಿತಿ ಶಿಫಾರಸುಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸುವುದಕ್ಕಿಂತ ಮೊದಲೇ ಐಪಿಎಲ್‌ ವೇಳಾಪಟ್ಟಿ ನಿಗದಿಯಾಗಿದೆ. ಆದ್ದರಿಂದ ಏನೂ ಸಮಸ್ಯೆ ಆಗುವುದಿಲ್ಲ’ ಎಂದರು.

ಐಪಿಎಲ್‌ಗೆ ಸವಾಲೊಡ್ಡುವ ಸಲುವಾಗಿ ಮಾಸ್ಟರ್ಸ್‌ ಕ್ರಿಕೆಟ್‌ ಲೀಗ್‌ ನಡೆಸಲಾಗುತ್ತಿದೆಯಲ್ಲವೇ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ‘ಐಪಿಎಲ್   ಬಳಿಕ ಹಲವಾರು ಲೀಗ್‌ಗಳು ಬಂದಿವೆ. ಆದರೆ ನಮ್ಮ ಟೂರ್ನಿಗೆ ಮೊದಲಿದ್ದ ಪ್ರಾಮುಖ್ಯತೆ ಈಗಲೂ ಇದೆ. ಹರಾಜು ನಡೆಯುವ ವೇಳೆ ಪ್ರತಿಯೊಬ್ಬರೂ ಟಿವಿ ಮುಂದೆಯೇ ಕುಳಿತಿರುತ್ತಾರೆ. ಪ್ರತಿ ಆಟಗಾರ  ಒಮ್ಮೆಯಾದರೂ ಐಪಿಎಲ್‌ ಆಡಲೇಬೇಕು ಎನ್ನುವ ಕನಸು ಹೊಂದಿರುತ್ತಾನೆ’ ಎಂದು ಶುಕ್ಲಾ ಹೇಳಿದರು.


ತಟ್ಟಿದ ಹಿತಾಸಕ್ತಿ ಸಂಘರ್ಷದ ಬಿಸಿ
ಬಿಸಿಸಿಐ ಆಡಳಿತದಲ್ಲಿ ಇತ್ತೀಚಿಗೆ ಹಿತಾಸಕ್ತಿ ಸಂಘರ್ಷ ಭಾರಿ ಸುದ್ದಿ ಮಾಡಿದೆ. ಇದರ ಬಿಸಿ ಹರಾಜಿನ ವೇಳೆ ಕೆಲ ಫ್ರಾಂಚೈಸ್‌ಗಳಿಗೆ ತಟ್ಟಿತು.
ಕೆಎಸ್‌ಸಿಎ ಕಾರ್ಯದರ್ಶಿ ಬ್ರಿಜೇಶ್ ಪಟೇಲ್‌ ಅವರು ಆರ್‌ಸಿಬಿ ತಂಡದ ಪ್ರಮುಖರಾಗಿದ್ದರು. ಹೋದ ಬಾರಿ ನಡೆದ ಹರಾಜಿನಲ್ಲಿ ತಂಡದ ಜೊತೆಗಿದ್ದರು.

ಆದರೆ ಅವರು ಈ ಸಲದ ಹರಾಜಿನಲ್ಲಿ ಕಾಣಿಸಿಕೊಳ್ಳಲಿಲ್ಲ. ಮುಂಬೈ ಇಂಡಿಯನ್ಸ್ ತಂಡದ ಸಲಹೆಗಾರರಾಗಿದ್ದ ಅನಿಲ್‌ ಕುಂಬ್ಳೆ ಕೆಲ ತಿಂಗಳ ಹಿಂದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಆದ್ದರಿಂದ ಕುಂಬ್ಳೆ ಹರಾಜಿನ ವೇಳೆ ಬಂದಿರಲಿಲ್ಲ.

ಈ ಬಗ್ಗೆ ಮುಂಬೈ ತಂಡದ ಒಡತಿ ನೀತಾ ಅಂಬಾನಿ ಅವರನ್ನು ಪ್ರಶ್ನಿಸಿದಾಗ ‘ಕುಂಬ್ಳೆ ಅವರು ಯಾವಾಗಲೂ ನಮ್ಮ ಜೊತೆಯೇ ಇರುತ್ತಾರೆ. ಶುಕ್ರವಾರ ರಾತ್ರಿ ಕೂಡ ಯಾವ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸಲಹೆ ನೀಡಿದ್ದರು. ಅವರು ನಮ್ಮ ಕುಟುಂಬದ ಸದಸ್ಯರಿದ್ದಂತೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT