ADVERTISEMENT

ಶರತ್‌ ಮೇಲೆ ಭರವಸೆ

ಅನುಭವಿಗಳಿಗೆ ಸವಾಲಿನ ಕೂಟ

​ಪ್ರಜಾವಾಣಿ ವಾರ್ತೆ
Published 23 ಜುಲೈ 2014, 19:30 IST
Last Updated 23 ಜುಲೈ 2014, 19:30 IST

ಗ್ಲಾಸ್ಗೊ (ಪಿಟಿಐ): ಶರತ್ ಕಮಲ್‌ ಅವರ ನೇತೃತ್ವದ ಭಾರತ ತಂಡದವರು ಕಾಮನ್‌ವೆಲ್ತ್‌ ಕೂಟದ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಗುರುವಾರ ಕಣಕ್ಕಿಳಿಯಲಿದ್ದಾರೆ. ಪುರುಷರ ತಂಡ ವಿಭಾಗದಲ್ಲಿ ಭಾರತ ಮೊದಲ ದಿನ ಎರಡು ಪಂದ್ಯಗಳನ್ನಾಡಲಿದೆ. ಆರಂಭಿಕ ಪಂದ್ಯದಲ್ಲಿ ವನೌಟು ವಿರುದ್ಧ ಪೈಪೋಟಿ ನಡೆಸಲಿರುವ ಭಾರತ ಆ ಬಳಿಕ ಉತ್ತರ ಐರ್ಲೆಂಡ್‌ ತಂಡವನ್ನು ಎದುರಿಸಲಿದೆ.

ಭಾರತ ತಂಡ ಶರತ್‌ ಕಮಲ್‌ ಅವರನ್ನು ನೆಚ್ಚಿಕೊಂಡಿದೆ. ಹರ್ಮೀತ್‌ ದೇಸಾಯಿ ಮತ್ತು ಸೌಮ್ಯಜಿತ್‌ ಘೋಷ್‌ ಅವರೂ ಉತ್ತಮ ಪ್ರದರ್ಶನದ ವಿಶ್ವಾಸ ಹೊಂದಿದ್ದಾರೆ. 2010ರ ನವದೆಹಲಿ ಕಾಮನ್‌ವೆಲ್ತ್‌ ಕೂಟದಲ್ಲಿ ಭಾರತ ಒಂದು ಚಿನ್ನ ಒಳಗೊಂಡಂತೆ ಐದು ಪದಕಗಳನ್ನು ಗೆದ್ದುಕೊಂಡಿತ್ತು. ಪುರುಷರ ತಂಡ ವಿಭಾಗದಲ್ಲಿ ಕಂಚು ದೊರೆತಿತ್ತು. ಈ ಬಾರಿ ಚಿನ್ನ ಅಥವಾ ಬೆಳ್ಳಿ ಗೆಲ್ಲುವ ಗುರಿಯನ್ನು ಶರತ್ ಕಮಲ್‌ ಬಳಗ ಹೊಂದಿದೆ.

ಮಹಿಳೆಯರ ತಂಡ ಪೌಲಮಿ ಘಟಕ್‌, ಮಧುರಿಕಾ ಪಾಟ್ಕರ್‌, ಶಾಮಿನಿ ಕುಮಾರೇಶನ್‌, ಅಂಕಿತಾ ದಾಸ್‌ ಮತ್ತು ಮಣಿಕಾ ಬಾತ್ರ ಅವರನ್ನು ಒಳಗೊಂಡಿದೆ. ಗುರುವಾರ ನಡೆಯುವ ಮೊದಲ ಪಂದ್ಯದಲ್ಲಿ ಭಾರತ ತಂಡ ಬಾರ್ಬಡೀಸ್‌ ವಿರುದ್ಧ ಪೈಪೋಟಿ ನಡೆಸಲಿದ್ದರೆ, ಆ ಬಳಿಕ ಕೀನ್ಯಾ ತಂಡವನ್ನು ಎದುರಿಸಲಿದೆ. ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಸಿಂಗಪುರಕ್ಕೆ ಅಗ್ರಶ್ರೇಯಾಂಕ ದೊರೆತಿದ್ದು, ಚಿನ್ನದ ಪದಕ ಗೆಲ್ಲುವ ತಂಡ ಎನಿಸಿಕೊಂಡಿದೆ.

ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿ ಜೂಡೊ ಸ್ಪರ್ಧಿಗಳು: ಭಾರತದ ಜೂಡೊ ಸ್ಪರ್ಧಿಗಳು ಗುರುವಾರ ಕಣಕ್ಕಿಳಿಯಲಿದ್ದು, ಉತ್ತಮ ಆರಂಭದ ನಿರೀಕ್ಷೆಯಲ್ಲಿದ್ದಾರೆ. ಭಾರತದ ತಲಾ ಏಳು ಪುರುಷ ಮತ್ತು ಮಹಿಳಾ ಸ್ಪರ್ಧಿಗಳು ಈ ಬಾರಿ ಕಣದಲ್ಲಿದ್ದಾರೆ. ಜೂಡೊಗೆ 12 ವರ್ಷಗಳ ಬಿಡುವಿನ ಬಳಿಕ ಕಾಮನ್‌ವೆಲ್ತ್‌ ಕೂಟದಲ್ಲಿ ಸ್ಥಾನ ಲಭಿಸಿದೆ. 

1990ರ ಆಕ್ಲೆಂಡ್‌ ಮತ್ತು 2002ರ ಮ್ಯಾಂಚೆಸ್ಟರ್‌ ಕೂಟದ ಜೂಡೊದಲ್ಲಿ ಭಾರತ ತಲಾ ಎರಡು ಪದಕಗಳನ್ನು ಗೆದ್ದುಕೊಂಡಿತ್ತು.  ಭಾರತ ತಂಡ ಜೂಡೊದಲ್ಲಿ ನಾಲ್ಕರಿಂದ ಐದು ಪದಕಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸವನ್ನು ಮಹಿಳಾ ತಂಡದ ಕೋಚ್‌ ವೀರೇಂದರ್‌ ಸಿಂಗ್‌ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.