ADVERTISEMENT

ಶಹಜಾರ್ ರಿಜ್ವಿಗೆ ಬೆಳ್ಳಿ

ಐಎಸ್‌ಎಸ್‌ಎಫ್‌ ವಿಶ್ವಕಪ್‌ ಮೂರನೇ ದಿನ: ಜಿತುಗೆ ನಿರಾಸೆ

ಪಿಟಿಐ
Published 24 ಏಪ್ರಿಲ್ 2018, 18:41 IST
Last Updated 24 ಏಪ್ರಿಲ್ 2018, 18:41 IST
ಬೆಳ್ಳಿ ಪದಕದೊಂದಿಗೆ ನಗೆ ಚೆಲ್ಲಿದ ಭಾರತದ ಶಹಜಾರ್‌ ರಿಜ್ವಿ
ಬೆಳ್ಳಿ ಪದಕದೊಂದಿಗೆ ನಗೆ ಚೆಲ್ಲಿದ ಭಾರತದ ಶಹಜಾರ್‌ ರಿಜ್ವಿ   

ಚಾಂಗ್ವಾನ್‌, ದಕ್ಷಿಣ ಕೊರಿಯಾ : ಶಹಜಾರ್‌ ರಿಜ್ವಿ ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್‌ನಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಪದಕ ಗಳಿಸಿಕೊಟ್ಟರು. ಅವರು 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಈ ಸಾಧನೆ ಮಾಡಿದರು.

ರಷ್ಯಾದ ಆರ್ಟೆನ್ ಚೆರ್ನೊಸ್ಲೊವ್‌ ಅವರಿಂದ ತೀವ್ರ ಪೈಪೋಟಿ ಎದುರಿಸಿದ ರಿಜ್ವಿ ಕೇವಲ 0.2 ಪಾಯಿಂಟ್‌ಗಳಿಂದ ಚಿನ್ನದ ಪದಕದಿಂದ ವಂಚಿತರಾದರು. ಬಲ್ಗೇರಿಯಾದ ಸಮುಯಿಲ್‌ ಡಂಕೊವ್‌ ಕಂಚು ಗೆದ್ದರು.

24 ಶಾಟ್‌ಗಳ ಅಂತಿಮ ಹಣಾಹಣಿಯ ಕೊನೆಯ ಸುತ್ತು ವರೆಗೂ ಆರ್ಟೆನ್ ಅವರಿಗೆ ರಿಜ್ವಿ ಸಮಬಲದ ಪೈಪೋಟಿ ನೀಡಿದರು. ಕೊನೆಯ ಶಾಟ್‌ ಮುಗಿದಾಗ ಆರ್ಟೆನ್ 240 ಸ್ಕೋರ್ ಸಂಪಾದಿಸಿದರೆ ರಿಜ್ವಿಗೆ 239.8 ಸ್ಕೋರ್ ಗಳಿಸಲು ಮಾತ್ರ ಸಾಧ್ಯವಾಯಿತು.

ADVERTISEMENT

ಅರ್ಹತಾ ಸುತ್ತಿನಲ್ಲಿ ಪ್ರಮುಖ ಶೂಟರ್‌ಗಳು ಕಣದಲ್ಲಿದ್ದರು. ಆದರೆ 600ರ ಪೈಕಿ 582 ಸ್ಕೋರ್ ಗಳಿಸಿದ ಅವರು ಸುಲಭವಾಗಿ ಫೈನಲ್‌ ಪ್ರವೇ ಶಿಸಿದರು. ಆದರೆ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದ ಜಿತು ರಾಯ್‌ ಮತ್ತು ಕಂಚಿನ ಪದಕ ಗಳಿಸಿದ್ದ ಓಂ ಪ್ರಕಾಶ್‌ ಮಿಥರ್ವಾಲ್‌ ಫೈನಲ್ ಪ್ರವೇಶಿಸಲಾಗದೆ ಹೊರಬಿದ್ದರು. ಇವರಿಬ್ಬರು ಕ್ರಮವಾಗಿ 38 ಮತ್ತು 11ನೇ ಸ್ಥಾನ ಗಳಿಸಿದರು. ಇವರು ಸಂಪಾದಿಸಿದ ಸ್ಕೋರ್ ಕ್ರಮವಾಗಿ 575 ಹಾಗೂ 581 ಆಗಿತ್ತು. ಒಲಿಂಪಿಕ್‌ ಚಾಂಪಿಯನ್‌, ವಿಯೆಟ್ನಾಂನ ಜುವಾನ್ ವಿನ್‌ ಹಾಂಗ್ 575 ಸ್ಕೋರುಗಳೊಂದಿಗೆ 37ನೇ ಸ್ಥಾನ ಗಳಿಸಿದರು.

ಮಾನವಜಿತ್‌ಗೆ 24ನೇ ಸ್ಥಾನ: ಪುರುಷರ ಟ್ರ್ಯಾಪ್ ವಿಭಾಗದಲ್ಲಿ ಭಾರತದ ಮಾನವಜಿತ್ ಸಿಂಗ್ ಸಂದು 125ರ ಪೈಕಿ 117 ಸ್ಕೋರ್ ಗಳಿಸಿ 24ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಇದು ಈ ವಿಭಾಗದಲ್ಲಿ ಭಾರತದ ಅತ್ಯುತ್ತಮ ಸಾಧನೆಯಾಗಿದೆ. ಮುಂದಿನ ಐದು ದಿನಗಳಲ್ಲಿ ಒಟ್ಟು ಎಂಟು ಫೈನಲ್‌ ಸ್ಪರ್ಧೆಗಳು ನಡೆಯಲಿವೆ.

ಸಚಿನ್‌ಗೆ ಶುಭ ಕೋರಿದ ರಿಜ್ವಿ
ಸಚಿನ್ ತೆಂಡೂಲ್ಕರ್ ಅವರ ಜನ್ಮದಿನದಂದು ಪದಕ ಗೆದ್ದಿರುವುದು ಸಂಭ್ರಮ ಹೆಚ್ಚಿಸಿದೆ ಎಂದು ರಿಜ್ವಿ ಹೇಳಿದ್ದಾರೆ. ಗೆಲುವು ಸಾಧಿಸಿದ ಕೂಡಲೇ ಟ್ವೀಟ್ ಮಾಡಿರುವ ಅವರು ಸಚಿನ್‌ಗೆ ಶುಭಾಶಯ ಸಲ್ಲಿಸಿ, ‘ಇದು ನನ್ನ ವೃತ್ತಿ ಜೀವನದ ಪ್ರಮುಖ ದಿನ. ನಿಮ್ಮ ಜನ್ಮದಿನದಂದೇ ಪದಕ ಗೆದ್ದಿರುವುದು ಖುಷಿ ತಂದಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.