ADVERTISEMENT

ಶ್ರೀನಿವಾಸನ್‌ ಕೋರಿಕೆ ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 19:30 IST
Last Updated 1 ಸೆಪ್ಟೆಂಬರ್ 2014, 19:30 IST

ನವದೆಹಲಿ (ಪಿಟಿಐ/ಐಎಎನ್‌ಎಸ್‌): ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ನಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕೆಂಬ ಎನ್‌. ಶ್ರೀನಿವಾಸನ್‌ ಅವರ ಕೋರಿಕೆಯನ್ನು ಸುಪ್ರೀಂ ಕೋರ್ಟ್‌ ತಳ್ಳಿಹಾಕಿದೆ.

ಅದೆ ರೀತಿ, ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಪ್ರಕರಣದ ತನಿಖೆಯನ್ನು ಇನ್ನೆರಡು ತಿಂಗಳ ಒಳಗಾಗಿ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್‌ ಮುಕುಲ್‌ ಮುದ್ಗಲ್‌ ಸಮಿತಿಗೆ ಸೂಚಿಸಿದೆ. ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್‌ ಮತ್ತು ಎಫ್‌.ಎಂ. ಇಬ್ರಾಹಿಂ ಕಲೀಫುಲ್ಲಾ ಅವರನ್ನೊಳ ಗೊಂಡ ಪೀಠ ಸೋಮವಾರ ಈ ತೀರ್ಪು ನೀಡಿದೆ. ಮಾತ್ರವಲ್ಲ, ಶ್ರೀನಿವಾಸನ್‌ ಒಳಗೊಂಡಂತೆ ಮಂಡಳಿಯ ಯಾವುದೇ ಅಧಿಕಾರಿಯ ವಿರುದ್ಧ ಮಧ್ಯಾಂತರ ವರದಿ ಸಲ್ಲಿಸುವ ಅಧಿಕಾರವನ್ನು  ಸಮಿತಿಗೆ ನೀಡಿದೆ.

ಬಿಸಿಸಿಐನ ವಾರ್ಷಿಕ ಮಹಾ ಸಭೆ ಈ ತಿಂಗಳ ಕೊನೆಯಲ್ಲಿ ನಡೆಯಲಿದೆ. ಮಂಡಳಿಯ ವಾರ್ಷಿಕ ಲೆಕ್ಕಪತ್ರಕ್ಕೆ ಶ್ರೀನಿವಾಸನ್‌ ಅವರ ಸಹಿಯ ಅಗತ್ಯವಿದೆ. ಆದ್ದರಿಂದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕು’ ಎಂದು ಶ್ರೀನಿವಾಸನ್‌ ಅವರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಕಪಿಲ್‌ ಸಿಬಲ್‌ ಪೀಠವನ್ನು ಕೇಳಿಕೊಂಡರು.

ಮುದ್ಗಲ್‌ ಸಮಿತಿ ಸಲ್ಲಿಸಿರುವ ಮಧ್ಯಾಂತರ ವರದಿಯಲ್ಲಿ ಶ್ರೀನಿವಾಸನ್‌ ವಿರುದ್ಧ ಯಾವುದಾ ದರೂ ಆರೋಪವಿದೆಯೇ ಎಂಬುದನ್ನು ಬಹಿರಂಗ ಪಡಿಸುವಂತೆಯೂ ಸಿಬಲ್‌ ಕೋರಿಕೊಂಡರು.  ಮುದ್ಗಲ್‌ ಸಮಿತಿ ಆಗಸ್ಟ್‌ 29 ರಂದು ತನ್ನ ಮಧ್ಯಾಂತರ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತ್ತು.

‘ವರದಿಯಲ್ಲಿ ಶ್ರೀನಿವಾಸನ್‌ ಬಗ್ಗೆ ಯಾವುದೇ ಉಲ್ಲೇಖ ಇಲ್ಲ. ಆದರೆ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಆದ್ದರಿಂದ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವಂತಿಲ್ಲ’ ಎಂದು ಪೀಠ ಹೇಳಿದೆ. ಇಂಗ್ಲೆಂಡ್‌ ಪ್ರವಾಸದಲ್ಲಿರುವ ಭಾರತ ತಂಡದ ಕೆಲವು ಆಟಗಾರರನ್ನು ವಿಚಾರಣೆಗೆ ಒಳಪಡಿಸುವ ಉದ್ದೇಶದಿಂದ ಮುದ್ಗಲ್‌ ಸಮಿತಿಯು ತನಿಖೆ ಪೂರ್ಣಗೊಳಿಸಲು ಹೆಚ್ಚಿನ ಕಾಲಾವಕಾಶ ಕೋರಿದೆ.

ತನಿಖೆಯ ಪ್ರಗತಿಯ ಬಗ್ಗೆ ಪೀಠ ಅತೃಪ್ತಿ ವ್ಯಕ್ತಪಡಿಸಿತು. ‘ನಾವು ಮಧ್ಯಾಂತರ ವರದಿಯನ್ನು ನೋಡಿದ್ದೇವೆ. ಇನ್ನೆರಡು ತಿಂಗಳಲ್ಲಿ ತನಿಖೆ ಪೂರ್ಣ ಗೊಳಿಸುವುದು ಕಷ್ಟ. ಇಷ್ಟು ನಿಧಾನಗತಿಯಲ್ಲಿ ತನಿಖೆ ನಡೆಸಿದರೆ ಇದು ಪೂರ್ಣಗೊಳ್ಳಲು ಐದು ವರ್ಷ  ಬೇಕಾಗಬಹುದು. ಆದ್ದರಿಂದ ಸಮಿತಿಯ ಮುಂದೆ ಈಗ ಕಠಿಣ ಸವಾಲು ಇದೆ’ ಎಂದು ಪೀಠ ತಿಳಿಸಿತು.

ಸಂತಸವಾಗಿದೆ: ಶ್ರೀನಿವಾಸನ್‌ ಅವರಿಗೆ ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಸುಪ್ರೀಂ ಕೋರ್ಟ್‌ ಅವಕಾಶ ನೀಡದ್ದು ಸಂತಸ ಉಂಟುಮಾಡಿದೆ ಎಂದು ಬಿಹಾರ ಕ್ರಿಕೆಟ್‌ ಸಂಸ್ಥೆ ಕಾರ್ಯದರ್ಶಿ ಆದಿತ್ಯ ವರ್ಮಾ ಹೇಳಿದ್ದಾರೆ.

‘ಸಭೆ ನಡೆಸುವುದು ಕಷ್ಟ’
ಶ್ರೀನಿವಾಸನ್‌ ಅವರಿಗೆ ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಸುಪ್ರೀಂ ಕೋರ್ಟ್‌ ಅನುಮತಿ ನೀಡದೇ ಇರುವುದು ಮಂಡಳಿಗೆ ಹಿನ್ನಡೆ ಉಂಟುಮಾಡಿದೆ. ಈ ತಿಂಗಳ ಕೊನೆಯಲ್ಲಿ ಬಿಸಿಸಿಐ ವಾರ್ಷಿಕ ಮಹಾಸಭೆ ನಡೆಯಲಿದೆ. ಆದರೆ ಇದೀಗ ಸಭೆ ನಡೆಯುವುದೇ ಅನುಮಾನ ಎನಿಸಿದೆ. ‘ವಾರ್ಷಿಕ ಮಹಾಸಭೆ ನಡೆಸುವುದು ಕಷ್ಟ’ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

‘ವಾರ್ಷಿಕ ಸಭೆಗೆ ಮುನ್ನ ಕಾರ್ಯಕಾರಿ ಸಮಿತಿ ಸಭೆ ನಡೆಯಬೇಕು. ಆದರೆ ಕಾರ್ಯಕಾರಿ ಸಮಿತಿ ಸಭೆಯ ನೋಟಿಸ್‌ಅನ್ನು ಇನ್ನೂ ಹೊರಡಿಸಿಲ್ಲ. ಮಂಡಳಿಯ ಮಹಾಸಭೆ ಈ ತಿಂಗಳು ನಡೆಯುವುದು ಅನುಮಾನ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.