ADVERTISEMENT

‘ಶ್ರೀಲಂಕಾದ ಕ್ರೀಡಾ ಅಭಿವೃದ್ಧಿ ಕ್ರಿಕೆಟ್‌ಗೆ ಮಾತ್ರ ಸೀಮಿತ’

ಮಹೇಶ ಕನ್ನೇಶ್ವರ
Published 12 ಡಿಸೆಂಬರ್ 2017, 19:30 IST
Last Updated 12 ಡಿಸೆಂಬರ್ 2017, 19:30 IST
ಡಿ.ಎ.ಯಾಸರೋಹಾನಾ ಡಿಸಿಲ್ವ
ಡಿ.ಎ.ಯಾಸರೋಹಾನಾ ಡಿಸಿಲ್ವ   

ಮಂಗಳೂರು: ‘ಶ್ರೀಲಂಕಾ ಸರ್ಕಾರ ಅಥ್ಲೆಟಿಕ್ಸ್‌ ಮತ್ತು ಅಥ್ಲೀಟ್‌ಗಳ ಬೆನ್ನು ಮುರಿಯುವ ಕೆಲಸ ಮಾಡುತ್ತಿದೆ. ಹೀಗಾಗಿ ಅಲ್ಲಿ ಕ್ರೀಡೆ ಪಾತಾಳಕ್ಕೆ ಕುಸಿಯುತ್ತಿದೆ’ ಎಂದು ಶ್ರೀಲಂಕಾದ ಸಿಲೋನ್‌ ಟ್ರ್ಯಾಕ್‌ ಮತ್ತು ಫೀಲ್ಡ್‌ ಕ್ಲಬ್‌ ಕಾರ್ಯದರ್ಶಿ ಡಿ.ಎ.ಯಾಸರೋಹಾನಾ ಡಿಸಿಲ್ವ ಆರೋಪಿಸಿದರು.

ಇಲ್ಲಿನ ಮಂಗಳಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ದಕ್ಷಿಣ ಕನ್ನಡ, ಉಡು‍ಪಿ ಹಾಗೂ ಶ್ರೀಲಂಕಾ ಕಿರಿಯರ ಕ್ರೀಡಾಕೂಟದ ವೇಳೆ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.

‘65 ಅಥ್ಲೀಟ್‌ಗಳನ್ನು ಸ್ವಂತ ವೆಚ್ಚದಲ್ಲಿ ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ. ಸರ್ಕಾರ ಕ್ರಿಕೆಟ್‌ ಅಭಿವೃದ್ಧಿಗೆ ಮಾತ್ರ ಸೀಮಿತಗೊಂಡಿದೆ’ ಎಂದು ಅವರು ದೂರಿದರು.

ADVERTISEMENT

‘ಶ್ರೀಲಂಕಾದ ಪುಟ್ನಮ್ಮ ಜಿಲ್ಲೆಯ ಮಾದಮಪುರ ಎಂಬ ಹಳ್ಳಿಯಲ್ಲಿ ಕ್ಲಬ್‌ ಕಟ್ಟಿಕೊಂಡು ನೂರಾರು ಸಂಖ್ಯೆಯ ಕ್ರೀಡಾಪಟುಗಳನ್ನು ಸಿದ್ಧ ಮಾಡುತ್ತಿದ್ದೇನೆ. 100, 400, 800 ಮೀಟರ್‌ ಓಟ, ಹೈಜಂಪ್‌, ಲಾಂಗ್‌ಜಂಪ್‌ ಅಥ್ಲೀಟ್‌ಗಳನ್ನು ತಯಾರು ಮಾಡುತ್ತಿದ್ದೇನೆ. 400 ಮೀಟರ್‌ ಓಟ ನಮ್ಮ ಅಚ್ಚುಮೆಚ್ಚಿನ ಆಯ್ಕೆ. ಅದರಲ್ಲಿಯೇ ಹೆಚ್ಚು ಸಾಧನೆ ಆಗುತ್ತಿದೆ. ಜಾವೆಲಿನ್‌ ಥ್ರೋ, ಲಾಂಗ್‌ಜಂಪ್‌ನಲ್ಲೂ ಸಾಧನೆ ಆಗುತ್ತಿದೆ’ ಎಂದು ಅವರು ಹೇಳಿದರು.

ದ.ಕ ಜಿಲ್ಲಾ ತಂಡಕ್ಕೆ ಆಹ್ವಾನ
2018ರಲ್ಲಿ ಶ್ರೀಲಂಕಾದ ಕಲಾಬೋರ್‌ನಲ್ಲಿ ನಡೆಯುವ ಅಥ್ಲೆಟಿಕ್ಸ್‌ ಕೂಟಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ತಂಡಕ್ಕೆ ಆಹ್ವಾನ ನೀಡಲಾಗಿದೆ. ಅವರಿಗೆ ಅದ್ದೂರಿ ಸ್ವಾಗತ ನೀಡಲಾಗುವುದು. ಕರ್ನಾಟಕ ಹಾಗೂ ಈ ಜಿಲ್ಲೆಯ ಜನ ತುಂಬಾ ಒಳ್ಳೆಯವರು, 1979ರಿಂದಲೂ ಇಲ್ಲಿಗೆ ಬರುತ್ತಿದ್ದೇನೆ. ಭಾರತದಲ್ಲಿ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ಸಿಗುತ್ತಿರುವುದು ಪ್ರಶಂಸನೀಯ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.