ADVERTISEMENT

ಸಂಗಕ್ಕಾರ ತಂಡದಲ್ಲಿ ದ್ರಾವಿಡ್‌

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 19:30 IST
Last Updated 29 ಜೂನ್ 2016, 19:30 IST

ನವದೆಹಲಿ (ಪಿಟಿಐ): ಶ್ರೀಲಂಕಾ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕಾರ ಅವರು ಸಾರ್ವಕಾಲಿಕ ಶ್ರೇಷ್ಠ ಇಲೆವೆನ್ ತಂಡವನ್ನು  ಪ್ರಕಟಿಸಿದ್ದು ಇದರಲ್ಲಿ ಭಾರತದಿಂದ ರಾಹುಲ್ ದ್ರಾವಿಡ್‌ ಅವರಿಗೆ ಮಾತ್ರ ಸ್ಥಾನ ಲಭಿಸಿದೆ.

ಈಗ ಭಾರತ ‘ಎ’ ತಂಡದ ಕೋಚ್  ಆಗಿರುವ ದ್ರಾವಿಡ್‌ ಅವರು ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್‌ ಜೊತೆ ಇನಿಂಗ್ಸ್ ಆರಂಭಿಸಲು ಸರಿಯಾದ  ಆಟಗಾರ ಎಂದು ಸಂಗಕ್ಕಾರ ಅಭಿಪ್ರಾಯಪಟ್ಟಿದ್ದಾರೆ.

ಉತ್ತಮ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್‌ನ ಬ್ರಯನ್‌ ಲಾರಾ ಮತ್ತು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಅವರಿಗೆ ಸಂಗಕ್ಕಾರ ಸ್ಥಾನ ಕೊಟ್ಟಿದ್ದಾರೆ. ಶ್ರೇಷ್ಠ ಆಲ್‌ರೌಂಡರ್ ಪಟ್ಟಿಯಲ್ಲಿ ಜಾಕ್‌ ಕಾಲಿಸ್‌, ಆಸ್ಟ್ರೇಲಿಯಾದ ವಿಕೆಟ್‌ ಕೀಪರ್ ಆ್ಯಡಮ್‌ ಗಿಲ್‌ಕ್ರಿಸ್ಟ್‌ ಇದ್ದಾರೆ. ಮುತ್ತಯ್ಯ ಮುರಳೀಧರನ್‌ ಮತ್ತು ಶೇನ್‌ ವಾರ್ನ್‌ ಅವರು ಈ ತಂಡದಲ್ಲಿ ಸ್ಥಾನ ಪಡೆದಿರುವ ಪ್ರಮುಖ ಸ್ಪಿನ್ನರ್‌ಗಳು.

ವೇಗದ ಬೌಲಿಂಗ್‌ನಲ್ಲಿ ಲಂಕಾದ ಚಮಿಂದಾ ವಾಸ್‌ ಮತ್ತು ಪಾಕಿಸ್ತಾನದ ವಾಸೀಮ್‌ ಅಕ್ರಮ್‌ ಸ್ಥಾನ ಹೊಂದಿದ್ದಾರೆ.  ಆದರೆ ಸಂಗಕ್ಕಾರ ಅವರು ಹೆಸರಿಸಿರುವ ತಂಡದಲ್ಲಿ ಸಚಿನ್‌ ತೆಂಡೂಲ್ಕರ್‌ಗೆ ಸ್ಥಾನ ಲಭಿಸಿಲ್ಲ. ಇತ್ತೀಚಿಗೆ ನ್ಯೂಜಿಲೆಂಡ್‌ನ ಬ್ರೆಂಡನ್‌ ಮೆಕ್ಲಮ್‌ ಪ್ರಕಟಿಸಿದ್ದ ವಿಶ್ವ ಶ್ರೇಷ್ಠ ಇಲೆವೆನ್‌ ತಂಡದಲ್ಲಿ ಭಾರತದಿಂದ ಸಚಿನ್‌ಗೆ ಮಾತ್ರ ಸಿಕ್ಕಿತ್ತು.

ಸಂಗಕ್ಕಾರ ಹೆಸರಿಸಿರುವ  ವಿಶ್ವ ಇಲೆವೆನ್‌ ತಂಡ: ಅರವಿಂದ ಡಿಸಿಲ್ವಾ (ನಾಯಕ), ಮ್ಯಾಥ್ಯೂ ಹೇಡನ್‌, ರಾಹುಲ್‌ ದ್ರಾವಿಡ್‌, ಬ್ರಯನ್‌ ಲಾರಾ, ರಿಕಿ ಪಾಂಟಿಂಗ್‌, ಜಾಕ್ ಕಾಲಿಸ್‌, ಆ್ಯಡಮ್‌ ಗಿಲ್‌ಕ್ರಿಸ್ಟ್‌ (ವಿಕೆಟ್‌ ಕೀಪರ್‌), ಶೇನ್ ವಾರ್ನ್‌, ಮುತ್ತಯ್ಯ ಮುರಳೀಧರನ್‌, ವಾಸಿಮ್‌ ಅಕ್ರಮ್‌ ಮತ್ತು ಚಮಿಂದಾ ವಾಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.