ADVERTISEMENT

ಸರಳ ನಡೆನುಡಿಯ ಅದ್ಭುತ ಆಟಗಾರ

ಎಂ.ಪಿ.ಗಣೇಶ್‌
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST
ಸರಳ ನಡೆನುಡಿಯ ಅದ್ಭುತ ಆಟಗಾರ
ಸರಳ ನಡೆನುಡಿಯ ಅದ್ಭುತ ಆಟಗಾರ   

ಮಹಮ್ಮದ್‌ ಶಾಹಿದ್‌ ಇಷ್ಟು ಬೇಗ ಹೊರಟು ಹೋಗುತ್ತಾನೆಂದು ಕೊಂಡಿರಲಿಲ್ಲ. ಏನೋ ಕಳೆದುಕೊಂಡಂತೆ ಅನಿಸಿದೆ. ಆತನನ್ನು ನಾನು ಮೊದಲ ಬಾರಿಗೆ ಕಂಡಿದ್ದೇ ಬೆಂಗಳೂರಿನಲ್ಲಿ. 1980ರ ಮಾಸ್ಕೊ ಒಲಿಂಪಿಕ್ಸ್‌ಗೆ ತೆರಳಲಿದ್ದ ಭಾರತದ ಸಂಭವನೀಯರ ತಂಡಕ್ಕೆ ಇಲ್ಲಿಯೇ ತರಬೇತಿ ನೀಡಿದ್ದು. ಆಗ ನಾನು ಸಹಾಯಕ ಕೋಚ್‌ ಆಗಿ ಕಾರ್ಯ ನಿರ್ವಹಿಸಿದ್ದೆ. ಆ ದಿನಗಳಲ್ಲೇ ಶಾಹಿದ್‌ ಸರಳ ನಡೆನುಡಿ ನನಗೆ ತುಂಬಾ ಇಷ್ಟವಾಗಿತ್ತು.
ಆತ ಭಾರತ ಕಂಡ ಒಬ್ಬ ಅದ್ಭುತ ‘ಡ್ರಿಬ್ಲಿಂಗ್‌ ಮಾಸ್ಟರ್‌’. ಆತನ ಕೈಚಳಕಕ್ಕೆ ನಾನು ಬೆರಗಾಗಿದ್ದೆ. ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಭಾರತ ಚಿನ್ನ ಗೆಲ್ಲುವಲ್ಲಿ ಶಾಹಿದ್‌ ಪಾತ್ರ ಬಲು ದೊಡ್ಡದು.
1985ರಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಒಟ್ಟು 10 ಟೆಸ್ಟ್‌ ಪಂದ್ಯಗಳು ನಡೆದವು. ಅಲ್ಲಿ 5 ಇಲ್ಲಿ 5 ಪಂದ್ಯಗಳು ನಡೆದಿದ್ದವು. ಆ ಸರಣಿ ನಾವು ಗೆದ್ದೆವು. ನಾನು ಭಾರತ ತಂಡಕ್ಕೆ ಹಿರಿಯ ಕೋಚ್‌ ಆಗಿದ್ದೆ. 1988ರ ಸೋಲ್‌ ಒಲಿಂಪಿಕ್ಸ್‌ನಲ್ಲಿ ಭಾರತ 6ನೇ ಸ್ಥಾನ ಗಳಿಸಿತ್ತು. ಪಾಕ್‌ ಎದುರಿನ ಸರಣಿ ಮತ್ತು ಸೋಲ್‌ ಒಲಿಂಪಿಕ್ಸ್‌ ವೇಳೆ ಶಾಹಿದ್‌ ಅವರನ್ನು ನಾನು ಹತ್ತಿರದಿಂದ ಕಂಡಿದ್ದೆ. ಅಲ್ಲಿ ಭಾರತ ಗೆದ್ದ ಬಹುತೇಕ ಪಂದ್ಯಗಳಲ್ಲಿ ನಿರ್ಣಾಯಕ ಗೋಲುಗಳನ್ನು ಶಾಹಿದ್‌ ಹೊಡೆದಿದ್ದರು ಅಥವಾ ಆತನ ಕರಾರುವಾಕ್ಕಾದ ಪಾಸ್‌ ಮೂಲಕ ಇತರರು ಗೋಲು ಗಳಿಸಿದ್ದರು.

ಆತ ಆಡುವ ಶೈಲಿ ಮನಮೋಹಕ. ಆತ ಎದುರಾಳಿ ಆವರಣದೊಳಗೆ ನುಗ್ಗುತ್ತಿದ್ದ ಪರಿ ಎಂತಹವರನ್ನೂ ತಬ್ಬಿಬ್ಬುಗೊಳಿಸುವಂತಿತ್ತು.

ವಾರದ ಹಿಂದೆ ನಾನು ದೆಹಲಿಗೆ ಹೋಗಿದ್ದೆ.  ಶಾಹಿದ್‌ ಆರೋಗ್ಯ ಹದಗೆಟ್ಟಿದ್ದರಿಂದ ಗುಡಗಾಂವ್‌ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆಂಬ ಸುದ್ದಿ ಗೊತ್ತಾಯಿತು. ನಾನು ಮತ್ತು ಜಗ್‌ಬೀರ್‌ ಆಸ್ಪತ್ರೆಗೆ ಹೋಗಿ ಆತನನ್ನು ನೋಡಿಕೊಂಡು ಬಂದಿದ್ದೆವು.

ಆತ ಇನ್ನಿಲ್ಲ ಎಂದು ಕಲ್ಪಿಸಿಕೊಳ್ಳಲು ಆಗುತ್ತಿಲ್ಲ. 35 ವರ್ಷಗಳ ಹಿಂದೆ ಮೈದಾನದಲ್ಲಿ ಪಾದರಸರಂತೆ ಓಡಾಡುತ್ತಿದ್ದ ಶಾಹಿದ್‌ ಚಿತ್ರ ಪದೇ ಪದೇ ನನ್ನ ಕಣ್ಣ ಮುಂದೆ ಬರುತ್ತಿದೆ.
(ಲೇಖಕರು ಭಾರತ ಹಾಕಿ ತಂಡದ ಮಾಜಿ ನಾಯಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.