ADVERTISEMENT

ಸುದಿರ್ಮನ್‌ ಕಪ್‌: ನಾಕೌಟ್ ಹಂತಕ್ಕೇರಿದ ಭಾರತ

ಪಿಟಿಐ
Published 24 ಮೇ 2017, 19:30 IST
Last Updated 24 ಮೇ 2017, 19:30 IST

ಗೋಲ್ಡ್ ಕೋಸ್ಟ್‌, ಆಸ್ಟ್ರೇಲಿಯಾ: ಬ್ಯಾಡ್ಮಿಂಟನ್‌ ಪ್ರಿಯರ ಕಾತರಕ್ಕೆ ತೆರೆ ಬಿತ್ತು. ಭಾರತ ತಂಡ ಸುದಿರ್ಮನ್ ಕಪ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ನಾಕೌಟ್ ಹಂತಕ್ಕೆ ಪ್ರವೇಶ ಪಡೆಯಿತು.

1–ಡಿ ಗುಂಪಿನ ನಿರ್ಣಾಯಕ ಹಂತದಲ್ಲಿ ಬುಧವಾರ ಇಂಡೋನೇಷ್ಯಾ 3–2ರ ಅಂತರದಲ್ಲಿ ಡೆನ್ಮಾರ್ಕ್‌ ವಿರುದ್ಧ ಜಯ ಸಾಧಿಸಿದ ಕಾರಣ ಭಾರತದ ನಾಕೌಟ್‌ ಕನಸು ನನಸಾಯಿತು. ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತ 10 ಬಾರಿಯ ಚಾಂಪಿಯನ್ ಚೀನಾ ವಿರುದ್ಧ ಸೆಣಸಲಿದೆ.

ಸೋಮವಾರ ಡೆನ್ಮಾರ್ಕ್‌ ವಿರುದ್ಧ 1–4 ಅಂತರದಿಂದ ಸೋಲುಂಡಿದ್ದ ಭಾರತ ಮಂಗಳವಾರದ ಪಂದ್ಯದಲ್ಲಿ ಇಂಡೋನೇಷ್ಯಾವನ್ನು 4–1ರಿಂದ ಮಣಿಸಿತ್ತು. ಆದರೂ ನಾಕೌಟ್‌ ಹಂತದ ಚಿತ್ರಣ ಸ್ಪಷ್ಟವಾಗಬೇಕಾದರೆ ಬುಧ ವಾರದ ವರೆಗೆ ಕಾಯಬೇಕಾಗಿತ್ತು. 1–ಡಿ ಗುಂಪಿನ ಮೂರು ತಂಡಗಳ ಪೈಕಿ ಎರಡು ತಂಡಗಳಿಗೆ ಮಾತ್ರ ಕ್ವಾರ್ಟರ್‌ ಫೈನಲ್ ಪ್ರವೇಶದ ಸಾಧ್ಯತೆ ಇತ್ತು.

ADVERTISEMENT

ಲೀಗ್‌ ಹಂತದಲ್ಲಿ ತಂಡಗಳ ಗೆಲುವು ಮತ್ತು ಸೋಲಿನ ಸಂಖ್ಯೆಯ ಆಧಾರದಲ್ಲಿ ಇದನ್ನು ನಿರ್ಧರಿಸಬೇಕಾಗಿತ್ತು. ಬುಧ ವಾರದ ಪಂದ್ಯದಲ್ಲಿ ಸೋಲುಂಡರೂ ಒಟ್ಟು ಆರು ಜಯ ಮತ್ತು ನಾಲ್ಕು ಸೋಲಿ ನೊಂದಿಗೆ ಡೆನ್ಮಾರ್ಕ್‌ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯಿತು. ತಲಾ ಐದು ಜಯ ಮತ್ತು ಸೋಲು ಕಂಡ ಭಾರತ ಎರಡನೇ ಸ್ಥಾನಕ್ಕೇರಿತು. ಕೇವಲ ನಾಲ್ಕು ಜಯ ಗಳಿಸಿದ ಇಂಡೋನೇಷ್ಯಾ ಟೂರ್ನಿಯಿಂದ ಹೊರ ಬಿತ್ತು.

ಇಂಡೋನೇಷ್ಯಾಗೆ ಭರ್ಜರಿ ಜಯ: ಬುಧವಾರ ಡೆನ್ಮಾರ್ಕ್ ವಿರುದ್ಧ ಇಂಡೋ ನೇಷ್ಯಾ 3–2ರ ಅಂತರದ ಜಯ ಸಾಧಿ ಸಿತು. ಮಿಶ್ರ ಡಬಲ್ಸ್‌ನಲ್ಲಿ ವಿಶ್ವದ ಎಂಟನೇ ನಂಬರ್ ಜೋಡಿ ಇಂಡೋ ನೇಷ್ಯಾದ ಪ್ರವೀಣ್‌ ಜೋರ್ಡಾನ್‌ ಮತ್ತು ಡೆಬಿ ಸುಸಾಂಟೊ ಲಂಡನ್ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತರಾದ ಜೋಕಿಮ್‌ ಫಿಷರ್‌ ನೀಲ್ಸನ್‌ ಮತ್ತು ಕ್ರಿಸ್ಟಿಯಾನಾ ಪೆಡೆರ್ಸನ್ ಅವರನ್ನು 21–12, 21–13ರಿಂದ ಮಣಿಸಿದರು.

ಪುರುಷರ ಸಿಂಗಲ್ಸ್‌ನಲ್ಲಿ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ವಿಕ್ಟರ್‌ ಅಕ್ಸೆಲ್ಸನ್‌ ವಿರುದ್ಧ 13–21, 21–17, 21–14ರ ಜಯ ಸಾಧಿಸಿದ ಆ್ಯಂಟನಿ ಸಿನಿಸುಕಾ ಗಿಂಗ್‌ಟಿಂಗ್‌ ಇಂಡೋನೇಷ್ಯಾಗೆ 2–0 ಅಂತರದ ಮುನ್ನಡೆ ತಂದುಕೊಟ್ಟರು. ಮೂರನೇ ಪಂದ್ಯದಲ್ಲಿ ಡೆನ್ಮಾರ್ಕ್‌ ಮರು ಹೋರಾಟ ನಡೆಸಿತು.

ಒಲಿಂಪಿಕ್‌ ಬೆಳ್ಳಿ ಪದಕ ವಿಜೇತ ಜೋಡಿ ಮಥಾಯಸ್ ಬೋ ಮತ್ತು ಕಾಸ್ಟನ್‌ ಮೊಗೆಸನ್‌ 16–21, 24–22, 23–21ರಿಂದ ವಿಶ್ವದ ಒಂದನೇ ನಂಬರ್ ಜೋಡಿ ಮಾರ್ಕಸ್‌್ ಫೆರ್ನಾಲ್ಡಿ ಗಿಡಿಯೋನ್‌ ಮತ್ತು ಕೆವಿನ್ ಸಂಜಯ್‌ ಸುಕಮುಲ್ಜೊ ವಿರುದ್ಧ ಜಯ ಸಾಧಿಸಿ ಹಿನ್ನಡೆಯನ್ನು 1–2ಕ್ಕೆ ಕುಗ್ಗಿಸಿ ದರು.  ಮಹಿಳೆಯರ ಸಿಂಗಲ್ಸ್‌ನಲ್ಲಿ ಫಿಟ್ರಿಯಾನಿ 22–24, 21–15, 21–14ರಿಂದ ಮಿಯಾ ಬ್ಲಿಚ್‌ಫೆಲ್ಟ್‌ ವಿರುದ್ಧ ಗೆದ್ದರು.

ಕೊನೆಯ ಪಂದ್ಯದಲ್ಲೂ ಜಯ ಗಳಿಸಿದರೆ ಇಂಡೋನೇಷ್ಯಾಗೆ ನಾಕೌಟ್‌ ಪ್ರವೇಶದ ಸಾಧ್ಯತೆ ಇತ್ತು. ಆದರೆ  ಕಮಿಲ್ಲಾ ರೈಟರ್‌ ಜೂಲ್‌ ಮತ್ತು ಕ್ರಿಸ್ಟಿನಾ ಪಡೆರ್ಸನ್‌ 21–18, 13–21, 21–13ರಿಂದ ಗ್ರೇಸಿಯಾ ಪೊಲಿ ಮತ್ತು ಅಪ್ರಿಯಾನಿ ರಹಾಯು ವಿರುದ್ಧ ಜಯ ಗಳಿಸಿ ಇಂಡೋನೇಷ್ಯಾದ ಆಸೆಗೆ ತಣ್ಣೀರೆರಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.