ADVERTISEMENT

ಸೆಮಿಫೈನಲ್‌ ಮೇಲೆ ಭಾರತ ಕಣ್ಣು

ಮಹಿಳೆಯರ ವಿಶ್ವಕಪ್‌; ಮಿಥಾಲಿ, ಮಂದಾನ ಭರವಸೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 19:30 IST
Last Updated 7 ಜುಲೈ 2017, 19:30 IST
ಸೆಮಿಫೈನಲ್‌ ಮೇಲೆ ಭಾರತ ಕಣ್ಣು
ಸೆಮಿಫೈನಲ್‌ ಮೇಲೆ ಭಾರತ ಕಣ್ಣು   

ಲೀಸ್ಟರ್‌: ಸತತ ನಾಲ್ಕು ಪಂದ್ಯಗಳನ್ನು ಗೆದ್ದು ವಿಶ್ವಾಸದ ಚಿಲುಮೆಯಾಗಿರುವ ಭಾರತ ವನಿತೆಯರ ತಂಡ ವಿಶ್ವಕಪ್‌ ಪಂದ್ಯದಲ್ಲಿ ಶನಿವಾರ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

ಸತತ ಐದನೇ ಪಂದ್ಯದಲ್ಲಿ ಜಯ ದಾಖಲಿಸಿ ಸೆಮಿಫೈನಲ್‌ ತಲುಪುವ ಕನಸಿನೊಂದಿಗೆ ಭಾರತ ಕಣಕ್ಕಿಳಿಯಲಿದೆ. ಈಗಾಗಲೇ ಇಂಗ್ಲೆಂಡ್‌, ವೆಸ್ಟ್‌ಇಂಡೀಸ್‌, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳನ್ನು ಮಣಿಸಿರುವ ಭಾರತಕ್ಕೆ ದಕ್ಷಿಣ ಆಫ್ರಿಕಾ ತಂಡ ಕಠಿಣ ಸವಾಲು ಎನಿಸದು.
ಪಾಯಿಂಟ್ಸ್ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನ ಗಿಟ್ಟಿಸಿದ್ದರೆ, ದಕ್ಷಿಣ ಆಫ್ರಿಕಾ ತಂಡ ಐದನೇ ಸ್ಥಾನದಲ್ಲಿದೆ.

ಬ್ಯಾಟಿಂಗ್ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲೂ ಭಾರತ ತಂಡ ಸಮಾನ ಲಯದೊಂದಿಗೆ ಆಡಿದೆ. ಮೊದಲ ಎರಡು ಪಂದ್ಯಗಳಲ್ಲಿ ಮಿಂಚಿದ್ದ ಸ್ಮೃತಿ ಮಂದಾನ ಹಿಂದಿನ ಎರಡು ಪಂದ್ಯಗಳಲ್ಲಿ ಆಡಿಲ್ಲ.ನಾಲ್ಕು ಪಂದ್ಯಗಳಿಂದ 178 ರನ್‌ ಕಲೆಹಾಕಿರುವ ಮಿಥಾಲಿ ರಾಜ್ ಸ್ಥಿರ ಸಾಮರ್ಥ್ಯ ತೋರಿದ್ದಾರೆ. ಪೂನಮ್ ರಾವುತ್ ಹಾಗೂ ದೀಪ್ತಿ ಶರ್ಮಾ ಮಿಂಚುವ ಗುಣ ಹೊಂದಿದ್ದಾರೆ.

ADVERTISEMENT

ಏಕ್ತಾ ಬಿಷ್ಠ್‌ ಬೌಲಿಂಗ್‌ನಲ್ಲಿ ಭಾರತದ ಪ್ರಮುಖ ಭರವಸೆ ಎನಿಸಿದ್ದಾರೆ. ದೀಪ್ತಿ ಶರ್ಮಾ, ಪೂನಮ್ ಯಾದವ್ ವಿಕೆಟ್ ಉರುಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಅನುಭವಿ ಜೂಲನ್ ಗೋಸ್ವಾಮಿ ಅವರ ಬೆಂಬಲ ತಂಡಕ್ಕಿದೆ.  ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 29 ರನ್‌ಗಳಿಗೆ ವಿಕೆಟ್ ಒಪ್ಪಿಸಿದ್ದ ಕರ್ನಾಟಕದ ವೇದಾ ಕೃಷ್ಣಮೂರ್ತಿ ಈ ಪಂದ್ಯದಲ್ಲಿಯಾದರೂ ಅವಕಾಶ ಬಳಸಿಕೊಳ್ಳಲಿದ್ದಾರಾ ಕಾದು ನೋಡಬೇಕಿದೆ.

ದಕ್ಷಿಣ ಆಫ್ರಿಕಾ ತಂಡ ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಜಯ ಗಳಿಸಿದೆ. ಒಂದು ಪಂದ್ಯ ಸೋತಿದೆ (ಒಂದು ಪಂದ್ಯ ಫಲಿತಾಂಶ ಇಲ್ಲ).
ಪಾಕಿಸ್ತಾನ, ವೆಸ್ಟ್‌ಇಂಡೀಸ್ ಎದುರು ದಕ್ಷಿಣ ಆಫ್ರಿಕಾ ತಂಡ ಗೆಲುವು ಒಲಿಸಿಕೊಂಡಿದೆ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 207ರನ್‌ಗಳ ಗುರಿಯನ್ನು (49 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು) ಈ ತಂಡ ಪ್ರಯಾಸದಿಂದ ತಲುಪಿತ್ತು.

ಬ್ಯಾಟಿಂಗ್‌ಕ್ಕಿಂತ ಬೌಲಿಂಗ್‌ನಲ್ಲಿ ದಕ್ಷಿಣ ಆಫ್ರಿಕಾ ಪ್ರಬಲವಾಗಿದೆ. ವೆಸ್ಟ್‌ ಇಂಡೀಸ್ ತಂಡವನ್ನು 48ರನ್‌ಗಳಿಗೆ ಆಲೌಟ್‌ ಮಾಡಿದ್ದೇ ಇದಕ್ಕೆ ಸಾಕ್ಷಿ. ಮಧ್ಯಮ ವೇಗಿ ಮರಿಜನ್ನೆ ಕಪ್‌ ಎದುರಾಳಿ ತಂಡದ ರನ್‌ ಹೊಳೆಯನ್ನು ತಡೆಯುವ ಶಕ್ತಿ ಹೊಂದಿದ್ದಾರೆ. ಆದರೆ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಈ ತಂಡ ತದ್ವಿರುದ್ಧವಾಗಿ ಆಡಿದೆ. ಈ ಪಂದ್ಯದಲ್ಲಿ ಬೌಲರ್‌ಗಳು ವಿಫಲರಾದರೂ ಬ್ಯಾಟ್ಸ್‌ವುಮನ್‌ಗಳು 374 ರನ್‌ಗಳ ಬೃಹತ್ ಮೊತ್ತದ ಎದುರು ದಿಟ್ಟ ಬ್ಯಾಟಿಂಗ್ ಮಾಡಿದ್ದರು.

ಜೆಲ್ಲಿ ಲೀ 72 ರನ್‌ ದಾಖಲಿಸಿ ಮಿಂಚಿದ್ದರು. ಪಾಕಿಸ್ತಾನ ವಿರುದ್ಧ ಕೂಡ ಅರ್ಧಶತಕ ದಾಖಲಿಸಿರುವ ಲೀ ಈ ತಂಡದ ಪ್ರಮುಖ ಬ್ಯಾಟಿಂಗ್ ಶಕ್ತಿ. ಲೂರಾ ವೋಲ್ವರ್ದತ್ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ವುಮನ್‌ಗಳಿಂದ ರನ್ ಬರುತ್ತಿಲ್ಲ. ಮೇ ತಿಂಗಳಿನಲ್ಲಿ ನಡೆದ ಚತುಷ್ಕೋನ ಸರಣಿಯ ಫೈನಲ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಮಣಿಸಿತ್ತು. ಈ ತಂಡದ ವಿರುದ್ಧ ಆಡಿರುವ ಹಿಂದಿನ ಎರಡು ಪಂದ್ಯಗಳಲ್ಲೂ ಭಾರತಕ್ಕೆ ಯಶಸ್ಸು ಸಿಕ್ಕಿದೆ.

ಪಂದ್ಯ ಆರಂಭ: ಮಧ್ಯಾಹ್ನ 3
ನೇರಪ್ರಸಾರ: ಸ್ಟಾರ್ ಸ್ಫೊರ್ಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.