ADVERTISEMENT

ಸೆರೆನಾ– ಜೊಕೊವಿಚ್‌ ಆಕರ್ಷಣೆ

ಏಜೆನ್ಸೀಸ್
Published 28 ಆಗಸ್ಟ್ 2016, 20:12 IST
Last Updated 28 ಆಗಸ್ಟ್ 2016, 20:12 IST
ಸೆರೆನಾ ವಿಲಿಯಮ್ಸ್‌
ಸೆರೆನಾ ವಿಲಿಯಮ್ಸ್‌   

ನ್ಯೂಯಾರ್ಕ್‌ (ರಾಯಿಟರ್ಸ್‌): ಈ ಋತುವಿನ ಕೊನೆಯ ಗ್ರ್ಯಾಂಡ್‌ಸ್ಲಾಮ್‌ ಎನಿಸಿರುವ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿ ಸೋಮವಾರ ಆರಂಭವಾಗಲಿದೆ.

ಸರ್ಬಿಯಾದ ಆಟಗಾರ ವಿಶ್ವ ಕ್ರಮಾಂಕಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ  ನೊವಾಕ್‌ ಜೊಕೊವಿಚ್‌ ಮತ್ತು ಅಮೆರಿಕದ ಸೆರೆನಾ ವಿಲಿಯಮ್ಸ್‌ ಅವರು ಟೂರ್ನಿಯಲ್ಲಿ ಪ್ರಮುಖ ಆಕರ್ಷಣೆ ಎನಿಸಿದ್ದಾರೆ.

ಬ್ರಿಟನ್‌ನ ಆಟಗಾರ, ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿರುವ ಆ್ಯಂಡಿ ಮರ್ರೆ ಮತ್ತು ಸ್ಪೇನ್‌ ರಫೆಲ್‌ ನಡಾಲ್‌ ಅವರೂ ಕಣದಲ್ಲಿದ್ದಾರೆ. ಹೀಗಾಗಿ  ಮುಂದಿನ 14 ದಿನಗಳ ಕಾಲ (ಆಗಸ್ಟ್‌ 29ರಿಂದ ಸೆಪ್ಟೆಂಬರ್‌ 11) ಟೆನಿಸ್‌ ಪ್ರಿಯರು ಮನರಂಜನೆಯ ಹೊಳೆಯಲ್ಲಿ ಮಿಂದೇಳುವ ನಿರೀಕ್ಷೆ ಇದೆ.
ಸೋಮವಾರ ನಡೆಯುವ ಹೋರಾಟದಲ್ಲಿ ಪೋಲೆಂಡ್‌ನ ಜೆರ್ಜಿ ಜಾನೊವಿಚ್‌ ವಿರುದ್ಧ ಆಡುವ ಮೂಲಕ ನೊವಾಕ್‌ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದ್ದಾರೆ.

ಹೋದ ವರ್ಷ ನಡೆದ ಟೂರ್ನಿಯ ಫೈನಲ್‌ನಲ್ಲ ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದಿರುವ ನೊವಾಕ್‌ ಈ ಬಾರಿ ಪ್ರಶಸ್ತಿ ಉಳಿಸಿಕೊಳ್ಳುವ ವಿಶ್ವಾಸ ಹೊಂದಿದ್ದಾರೆ.ಬ್ರಿಟನ್‌ನ ಆ್ಯಂಡಿ ಮರ್ರೆ, ಮೊದಲ ಸುತ್ತಿನಲ್ಲಿ ಜೆಕ್‌ ಗಣರಾಜ್ಯದ ಲುಕಾಸ್‌ ರಸೊಲ್‌ ವಿರುದ್ಧ ಆಡುವರು.
ಸ್ಪೇನ್‌ನ ಆಟಗಾರ ವಿಶ್ವ ಕ್ರಮಾಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಹೊಂದಿರುವ ರಫೆಲ್‌ ನಡಾಲ್‌  ಆರಂಭಿಕ ಸುತ್ತಿನಲ್ಲಿ ಉಜ್‌ಬೆಕಿಸ್ತಾನದ ಡೆನಿಸ್‌ ಇಸ್ಟೋಮಿನ್‌ ಅವರ ಸವಾಲು ಎದುರಿಸಲಿದ್ದಾರೆ.

ಜಪಾನ್‌ ಕಿ ನಿಶಿಕೋರಿ, ಸ್ವಿಟ್ಜರ್‌ಲೆಂಡ್‌ನ ಸ್ಟಾನಿಸ್ಲಾಸ್‌ ವಾವ್ರಿಂಕ, ಆರನೇ ಶ್ರೇಯಾಂಕಿತ ಆಟಗಾರ ಮಿಲೊಸ್‌ ರಾವೊನಿಕ್‌, 2014ರ ಚಾಂಪಿಯನ್‌ ಮರಿನ್‌ ಸಿಲಿಕ್‌, 2009ರ ಚಾಂಪಿಯನ್‌ ಜುವಾನ್‌ ಡೆಲ್‌ ಪೊಟ್ರೊ ಅವರೂ ಪ್ರಶಸ್ತಿಯ ಕನಸು ಕಾಣುತ್ತಿದ್ದಾರೆ.

ಸೆರೆನಾ ಸಜ್ಜು: ಮಹಿಳಾ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿ ಎನಿಸಿರುವ ಸೆರೆನಾ ಗೆಲುವಿನ ಮುನ್ನುಡಿ ಬರೆಯಲು ಸಜ್ಜಾಗಿದ್ದಾರೆ. ಸ್ಥಳೀಯ ಅಭಿಮಾನಿಗಳ ಬೆಂಬಲದೊಂದಿಗೆ ಕಣಕ್ಕಿಳಿಯುತ್ತಿರುವ ಅವರು ಮೊದಲ ಸುತ್ತಿನಲ್ಲಿ ರಷ್ಯಾದ ಏಕ್ತರಿನಾ ಮಕರೋವಾ ವಿರುದ್ಧ ಸೆಣಸಲಿದ್ದಾರೆ.
ಭುಜದ ನೋವಿಗೆ ಒಳಗಾಗಿದ್ದ 34 ವರ್ಷದ ಆಟಗಾರ್ತಿ ಹಿಂದಿನ ಕೆಲ ಟೂರ್ನಿಗಳಲ್ಲಿ ಆಡಿರಲಿಲ್ಲ. ಈಗ ಚೇತರಿಸಿಕೊಂಡಿರುವ ಅವರು ತವರಿನ ಅಂಗಳದಲ್ಲಿ ಮಿಂಚು ಹರಿಸಲು ಸಜ್ಜಾಗಿದ್ದಾರೆ. ವಿಂಬಲ್ಡನ್‌ನಲ್ಲಿ ಪ್ರಶಸ್ತಿ ಗೆದ್ದು ಸ್ಟೆಫಿ ಗ್ರಾಫ್‌ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿರು ಸೆರೆನಾ ಈಗ ಆಸ್ಟ್ರೇಲಿಯಾದ ಮಾರ್ಗರೆಟ್‌ ಕೋರ್ಟ್‌ ಅವರ ದಾಖಲೆ ಮೀರಿ ನಿಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.

ಏಂಜಲಿಕ್‌ ಕೆರ್ಬರ್‌, ಸ್ಪೇನ್‌ನ  ಗಾರ್ಬೈನ್‌ ಮುಗುರುಜಾ, ಅಗ್ನಿಸ್ಕಾ ರಾಡ್ವಾಂಸ, ರಾಬರ್ಟ ವಿನ್ಸಿ ಮತ್ತು  ಜೊಹಾನ್ನ ಕೊಂಥಾ ಅವರೂ ಪ್ರಶಸ್ತಿಯ ವಿಶ್ವಾಸ ಹೊಂದಿದ್ದಾರೆ. ಸಾಕೇತ್‌ ಸವಾಲು: ಪುರುಷರ ಸಿಂಗಲ್ಸ್‌ನಲ್ಲಿ ಮುಖ್ಯ ಸುತ್ತಿಗೆ ಅರ್ಹತೆ ಗಳಿಸಿರುವ ಸಾಕೇತ್‌ ಮೈನೇನಿ ಟೂರ್ನಿಯಲ್ಲಿ ಭಾರತದ ಭರವಸೆ ಎನಿಸಿದ್ದಾರೆ.ಸಾನಿಯಾ ಮಿರ್ಜಾ, ಲಿಯಾಂಡರ್‌ ಪೇಸ್‌ ಮತ್ತು ರೋಹನ್‌ ಬೋಪಣ್ಣ ಅವರೂ ಟೂರ್ನಿಯಲ್ಲಿ ಆಡುತ್ತಿದ್ದಾರೆ.

ಅಂಕಿ–ಅಂಶ

01      ವಿಶ್ವ ಕ್ರಮಾಂಕಪಟ್ಟಿಯಲ್ಲಿ ಸೆರೆನಾ ವಿಲಿಯಮ್ಸ್‌ ಹೊಂದಿರುವ ಸ್ಥಾನ
22   ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಗಳಲ್ಲಿ ಸೆರೆನಾ ಚಾಂಪಿಯನ್‌ ಆಗಿದ್ದಾರೆ
23   ಡಬಲ್ಸ್‌ ವಿಭಾಗದಲ್ಲಿ ಸೆರೆನಾ ಗೆದ್ದ ಡಬ್ಲ್ಯುಟಿಎ ಪ್ರಶಸ್ತಿಗಳು
34   ಡಬಲ್ಸ್‌ ವಿಭಾಗದಲ್ಲಿ ಸೆರೆನಾ ಪ್ರಸ್ತುತ ಹೊಂದಿರುವ ರ್‍ಯಾಂಕಿಂಗ್‌
02   ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ಸೆರೆನಾ ಗೆದ್ದ ಪ್ರಶಸ್ತಿ
04   ಒಲಿಂಪಿಕ್ಸ್‌ನಲ್ಲಿ ಸೆರೆನಾ ಜಯಿಸಿರುವ ಚಿನ್ನ

ADVERTISEMENT

ಗಾಯದಿಂದ ಈಗ ಚೇತರಿಸಿ ಕೊಂಡಿದ್ದೇನೆ. ತವರಿನ ನೆಲದಲ್ಲಿ ಪ್ರಶಸ್ತಿ ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಇದಕ್ಕಾಗಿ ಪ್ರತಿ ಪಂದ್ಯದಲ್ಲಿ ಶ್ರೇಷ್ಠ ಆಟ ಆಡುವುದು ನನ್ನ ಗುರಿ
ಸೆರೆನಾ ವಿಲಿಯಮ್ಸ್‌
ಅಮೆರಿಕದ ಆಟಗಾರ್ತಿ

ಬಹುಮಾನ ಮೊತ್ತದ ವಿವರ

ಒಟ್ಟು ₹310 ಕೋಟಿ

ಮಿಶ್ರಡಬಲ್ಸ್‌ ಚಾಂಪಿಯನ್ಸ್‌ ₹1ಕೋಟಿ

ಡಬಲ್ಸ್‌ ಚಾಂಪಿಯನ್‌

₹4ಕೋಟಿ 45 ಲಕ್ಷ

ಸಿಂಗಲ್ಸ್‌ ಚಾಂಪಿಯನ್‌ ₹23ಕೋಟಿ  45 ಲಕ್ಷ

ಅಮೆರಿಕ ಓಪನ್‌ನಲ್ಲಿ ಪ್ರಶಸ್ತಿ ಗೆದ್ದ ಕಿರಿಯ ಆಟಗಾರರು    
ಪುರುಷರ ವಿಭಾಗ    
ಆಟಗಾರ ದೇಶ ವಯಸ್ಸು
ಪೀಟ್‌ ಸಾಂಪ್ರಾಸ್‌ ಅಮೆರಿಕ 19 ವರ್ಷ 1 ತಿಂಗಳು
ಮಹಿಳಾ ವಿಭಾಗ    
ಟ್ರೇಸಿ ಆಸ್ಟಿನ್‌ ಅಮೆರಿಕ 16 ವರ್ಷ8 ತಿಂಗಳು
ಪ್ರಶಸ್ತಿ ಗೆದ್ದ ಹಿರಿಯ ಆಟಗಾರರು    
ವಿಲಿಯಂ ಲಾರ್ನೆಡ್‌ ಅಮೆರಿಕ 38ವರ್ಷ 8 ತಿಂಗಳು
ಮಹಿಳಾ ವಿಭಾಗ    
ಮೊಲ್ಲಾ ಜುರ್ಸ್‌ಟೆಡ್ತ್‌ ಮಲ್ಲೊರಿ ಅಮೆರಿಕ 42 ವರ್ಷ 5 ತಿಂಗಳು

ಅಂಕಿ ಅಂಶಗಳು

1881- ಅಮೆರಿಕ ಓಫನ್‌ ಟೂರ್ನಿ ಆರಂಭವಾದ ವರ್ಷ

2000 -ಟೂರ್ನಿಯ ಸಿಂಗಲ್ಸ್‌, ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆದ್ದವರಿಗೆ ಸಿಗುವ ರ್‍ಯಾಂಕಿಂಗ್‌ ಪಾಯಿಂಟ್ಸ್‌

05 -ಸಿಂಗಲ್ಸ್‌ನಲ್ಲಿ ರೋಜರ್‌ ಫೆಡರರ್‌, ಜಿಮ್ಮಿ ಕಾನ್ನರ್ಸ್‌ ಮತ್ತು ಪೀಟ್‌ ಸಾಂಪ್ರಸ್‌ ಗೆದ್ದ ಪ್ರಶಸ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.