ADVERTISEMENT

ಸೈನಾ ನೆಹ್ವಾಲ್ ಗೆಲುವಿನ ಆರಂಭ

ಹಾಂಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ

ಪಿಟಿಐ
Published 23 ನವೆಂಬರ್ 2016, 19:30 IST
Last Updated 23 ನವೆಂಬರ್ 2016, 19:30 IST
ಸೈನಾ ನೆಹ್ವಾಲ್ ಆಟದ ವೈಖರಿ
ಸೈನಾ ನೆಹ್ವಾಲ್ ಆಟದ ವೈಖರಿ   

ಕೌಲೂನ್‌ (ಪಿಟಿಐ): ಅಪೂರ್ವ ಆಟ ಆಡಿದ ಭಾರತದ ಸೈನಾ ನೆಹ್ವಾಲ್‌ ಅವರು ಇಲ್ಲಿ ನಡೆಯುತ್ತಿರುವ ಹಾಂಕಾಂಗ್‌ ಓಪನ್‌ ಸೂಪರ್‌ ಸರಣಿ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಗೆಲುವಿನ ಆರಂಭ ಕಂಡಿದ್ದಾರೆ.

‍ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಭರವಸೆ ಎನಿಸಿರುವ ಎಚ್‌.ಎಸ್‌. ಪ್ರಣಯ್‌ ಮತ್ತು ಸಮೀರ್‌ ವರ್ಮಾ ಅವರೂ  ಶುಭಾರಂಭ ಮಾಡಿದ್ದಾರೆ.
ಗಾಯದಿಂದ ಚೇತರಿಸಿಕೊಂಡ ಬಳಿಕ ಚೀನಾ ಓಪನ್‌ನಲ್ಲಿ ಆಡಿದ್ದ ಸೈನಾ ಆರಂಭಿಕ ಸುತ್ತಿನಲ್ಲೇ ಆಘಾತ ಅನುಭವಿಸಿ ಹೊರ ಬಿದ್ದಿದ್ದರು. ಆದರೆ ಇಲ್ಲಿ ಅವರು ಹಿಂದಿನ ತಪ್ಪು ಮಾಡದೇ ಶ್ರೇಷ್ಠ ಸಾಮರ್ಥ್ಯ ತೋರಿದರು.

ಮಹಿಳೆಯರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ ಭಾರತದ ಆಟ ಗಾರ್ತಿ 12–21, 21–19, 21–17ರಲ್ಲಿ ಥಾಯ್ಲೆಂಡ್‌ನ ಪೊರ್ನ್‌ಟಿಪ್‌ ಬುರಾನ ಪ್ರಸೆತ್ಸುಕ್‌ ಅವರನ್ನು ಪರಾಭವಗೊಳಿ ಸಿದರು. ಚೀನಾ ಓಪನ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಪೊರ್ನ್‌ಟಿಪ್‌  ವಿರುದ್ಧ ಮುಗ್ಗರಿಸಿದ್ದ ಸೈನಾ ಇಲ್ಲೂ ದಿಟ್ಟ ಆರಂಭ ಪಡೆಯಲು ವಿಫಲರಾದರು.

ಹಿಂದಿನ ಗೆಲುವಿನ ವಿಶ್ವಾಸ ದೊಂದಿಗೆ ಕಣಕ್ಕಿಳಿದಿದ್ದ ಥಾಯ್ಲೆಂಡ್‌ನ ಆಟಗಾರ್ತಿಯ ಚುರುಕಿನ ಸರ್ವ್‌ಗಳನ್ನು ಹಿಂತಿರುಗಿಸಲು ವಿಫಲವಾದ ಭಾರತದ ಆಟಗಾರ್ತಿ ಸುಲಭವಾಗಿ ಗೇಮ್‌ ಕೈಚೆಲ್ಲಿ ಹಿನ್ನಡೆ ಅನುಭವಿಸಿದರು.

ಒಲಿಂಪಿಕ್ಸ್‌ ನಲ್ಲಿ ಕಂಚಿನ ಸಾಧನೆ ಮಾಡಿರುವ ಹೈದರಾ ಬಾದ್‌ನ  ಸೈನಾ ಇದರಿಂದ ಕಿಂಚಿತ್ತೂ  ವಿಶ್ವಾಸ ಕಳೆದುಕೊಳ್ಳಲಿಲ್ಲ. ಎದುರಾಳಿ ಆಟ ಗಾರ್ತಿ ನೆಟ್‌ನಿಂದ ತುಸು ದೂರ ನಿಂತು ಆಡುವುದನ್ನು  ಗಮನಿಸಿದ ಅವರು, ಷಟಲ್‌ ಅನ್ನು ನೆಟ್‌ನ ಸಮೀಪದಲ್ಲಿ ಡ್ರಾಪ್‌ ಮಾಡುವ ತಂತ್ರ ಅನುಸರಿಸಿ ಅದರಲ್ಲಿ ಸಫಲರಾದರು.

ಹೀಗಿದ್ದರೂ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 12ನೇ ಸ್ಥಾನ ಹೊಂದಿರುವ ಪೊರ್ನ್‌ಟಿಪ್‌  ಎದೆಗುಂದಲಿಲ್ಲ. ಗುಣಮಟ್ಟದ ಆಟ ಆಡಿದ ಅವರು ಆಕರ್ಷಕ ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಪಾಯಿಂಟ್ಸ್‌ ಹೆಕ್ಕಿದರು. ಹೀಗಾಗಿ ಗೇಮ್‌ನಲ್ಲಿ 19–19ರ ಸಮಬಲ ಕಂಡು ಬಂತು.

ಈ ಹಂತದಲ್ಲಿ ಕೆಚ್ಚೆದೆಯ ಆಟ ಆಡಿದ ಸೈನಾ ಚುರುಕಾಗಿ ನಿರ್ಣಾಯಕ ಎರಡು ಪಾಯಿಂಟ್ಸ್‌ ಸಂಗ್ರಹಿಸಿ ಗೇಮ್‌ ತಮ್ಮದಾಗಿಸಿಕೊಂಡರು. ಇದರಿಂದ ವಿಶ್ವಾಸ ಹೆಚ್ಚಿಸಿಕೊಂಡ ಭಾರತದ ಆಟಗಾರ್ತಿ ಮೂರನೇ ಮತ್ತು ನಿರ್ಣಾಯಕ ಗೇಮ್‌ನಲ್ಲೂ ಮಿಂಚು ಹರಿಸಿದರು.

ಇಲ್ಲಿ ಐದನೇ ಶ್ರೇಯಾಂಕ ಹೊಂದಿರುವ ಅವರು ಬಲಿಷ್ಠ ಹಿಂಗೈ ಮತ್ತು ಮುಂಗೈ ಹೊಡೆತಗಳ ಮೂಲಕ ಆಟದ ರಂಗು ಹೆಚ್ಚಿಸಿದರು.  ಅಂಗಳದ ಮೂಲೆ ಮೂಲೆಗೂ ಷಟಲ್‌ ಬಾರಿಸಿದ ಸೈನಾ ಎದುರಾಳಿಯನ್ನು ಹೈರಾಣಾಗಿಸಿ ಸುಲಭವಾಗಿ ಜಯದ ತೋರಣ ಕಟ್ಟಿದರು. ಪ್ರಣಯ್‌ಗೆ ಜಯ:  ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಎಚ್‌.ಎಸ್‌. ಪ್ರಣಯ್‌ ಗೆಲುವು ಗಳಿಸಿದರು.

ಮೊದಲ ಸುತ್ತಿನ ಹಣಾಹಣಿಯಲ್ಲಿ ಪ್ರಣಯ್‌ 21–16, 21–18ರ ನೇರ ಗೇಮ್‌ಗಳಿಂದ ಚೀನಾದ ಕ್ವಿಯಾವೊ ಬಿನ್‌ ಅವರನ್ನು ಸೋಲಿಸಿದರು.
ಇನ್ನೊಂದು ಪಂದ್ಯದಲ್ಲಿ ರಾಷ್ಟ್ರೀಯ ಚಾಂಪಿಯನ್‌ ಸಮೀರ್‌ ವರ್ಮಾ 22–20, 21–18ರ ನೇರ ಗೇಮ್‌ಗಳಿಂದ ಜಪಾನ್‌ನ ತಕುಮಾ ಉಯೆದಾ ವಿರುದ್ಧ ಜಯಭೇರಿ ಮೊಳಗಿಸಿದರು.

ಪುರುಷರ ಡಬಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಹೋರಾಟದಲ್ಲಿ ಭಾರತದ ಮನು ಅತ್ರಿ ಮತ್ತು ಬಿ. ಸುಮೀತ್‌ ರೆಡ್ಡಿ 15–21, 8–21ರಲ್ಲಿ ಕೊರಿಯಾದ ಸೊಲ್‌ಗ್ಯೂ ಚೊಯಿ ಮತ್ತು ಕೊ ಸಂಗ್‌್ ಹ್ಯೂನ್‌ ವಿರುದ್ಧ ನಿರಾಸೆ ಕಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.