ADVERTISEMENT

ಸೋತ ಲಯನ್ಸ್‌, ಸೆಮಿಗೆ ಕಿಂಗ್ಸ್

ಚಾಂಪಿಯನ್ಸ್‌ ಲೀಗ್‌: ಅಬ್ಬರಿಸಿದ ಮಾರ್ಷ್‌

ಪ್ರಮೋದ ಜಿ.ಕೆ
Published 30 ಸೆಪ್ಟೆಂಬರ್ 2014, 19:30 IST
Last Updated 30 ಸೆಪ್ಟೆಂಬರ್ 2014, 19:30 IST

ಬೆಂಗಳೂರು: ಬೌಲಿಂಗ್‌ ವಿಭಾಗದಲ್ಲಿ ಆರಂಭದಲ್ಲಿ ಗಳಿಸಿದ್ದ ಮೇಲುಗೈ ಉಳಿಸಿಕೊಳ್ಳಲು ವಿಫಲವಾದ ಪಾಕಿಸ್ತಾನದ ಲಾಹೋರ್‌ ಲಯನ್ಸ್‌ ತಂಡ ಚಾಂಪಿಯನ್ಸ್‌ ಲೀಗ್‌ ಕ್ರಿಕೆಟ್‌ ಟೂರ್ನಿಯಿಂದ ಹೊರಬಿದ್ದಿತು. ಆದರೆ, ಚೆನ್ನೈ ಸೂಪರ್‌ ಕಿಂಗ್ಸ್‌ ಸೆಮಿಫೈನಲ್‌ ಪ್ರವೇಶಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯದ ಪರ್ತ್ ಸ್ಕಾಚರ್ಸ್ ಮೂರು ವಿಕೆಟ್‌ಗಳ ಗೆಲುವು ತನ್ನದಾಗಿಸಿಕೊಂಡಿತು. ಟಾಸ್ ಗೆದ್ದ ಸ್ಕಾಚರ್ಸ್ ಫೀಲ್ಡಿಂಗ್‌ ಮಾಡಲು ಮುಂದಾಯಿತು. ಮಹತ್ವದ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಲಯನ್ಸ್‌ 20 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು ಕಲೆ ಹಾಕಿದ್ದು 124 ರನ್‌ ಮಾತ್ರ. ಎದುರಾಳಿ ತಂಡವನ್ನು 47 ರನ್‌ಗಳ ಅಂತರದಿಂದ ಸೋಲಿಸಿದ್ದರೆ ಮಾತ್ರ ಲಯನ್ಸ್‌ ಸೆಮಿಫೈನಲ್‌ ಪ್ರವೇಶಿಸುತ್ತಿತ್ತು. ಆದರೆ, ಒಟ್ಟು ಹತ್ತು ಪಾಯಿಂಟ್ಸ್‌ ಹೊಂದಿರುವ ಸೂಪರ್‌ ಕಿಂಗ್ಸ್‌ ತಂಡಕ್ಕೆ ಈ ಅವಕಾಶ ಒಲಿಯಿತು. ಸ್ಕಾಚರ್ಸ್‌ 19 ಓವರ್‌ಗಳಲ್ಲಿ ಗುರಿ ಮುಟ್ಟಿತು.

ಆರಂಭಿಕ ವೈಫಲ್ಯ: ಲಯನ್ಸ್ ತಂಡದ ಆರಂಭಿಕ ಜೋಡಿ ನಾಸೀರ್‌ ಜೆಮ್‌ಷೆದ್‌ ಮತ್ತು ಉಮರ್‌ ಸಾದಿಕ್‌ ತಲಾ ಒಂದು ರನ್ ಗಳಿಸಿ ಪೆವಿಲಿಯನ್‌ ಸೇರಿದರು. ಈ ತಂಡದ ಐವರು ಬ್ಯಾಟ್ಸ್‌ಮನ್‌ಗಳು ಎರಡಂಕಿಯ ಗೆರೆ ಮುಟ್ಟದೆ ಔಟಾದರು. ನಾಯಕ ಮಹಮ್ಮದ್‌ ಹಫೀಜ್‌ ಮತ್ತು ವಹಾಬ್‌ ರಿಯಾಜ್ ಸೊನ್ನೆ ಸುತ್ತಿದರು.

ಮೂರಂಕಿಯ ಗುರಿ ಮುಟ್ಟಲು ಪರದಾಡುತ್ತಿದ್ದ ಲಯನ್ಸ್‌ ತಂಡಕ್ಕೆ ಆಸರೆಯಾಗಿದ್ದು ಶಾದ್‌ ನಸೀಮ್‌.
24 ವರ್ಷದ ಬಲಗೈ ಬ್ಯಾಟ್ಸ್‌ಮನ್ ನಸೀಮ್‌ ಔಟಾಗದೆ 69 ರನ್‌ ಗಳಿಸಿದರು. 55 ಎಸೆತಗಳಲ್ಲಿ ಅವರು ಏಳು ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸಿದರು. ಮಹಮ್ಮದ್‌ ಸಯೀದ್ (20) ಮತ್ತು ನಸೀಮ್‌ ಆರನೇ ವಿಕೆಟ್‌ ಜೊತೆಯಾಟದಲ್ಲಿ 48 ರನ್‌ ಕಲೆ ಹಾಕಿ ನೆರವಾದರು.

ಕಾಡಿದ ಮಾರ್ಷ್‌
ಸ್ಕಾಚರ್ಸ್‌ ಬ್ಯಾಟ್ಸ್‌ಮನ್‌ಗಳನ್ನು ಆರಂಭದಲ್ಲಿ ಕಾಡಿದ್ದ ಲಯನ್ಸ್ ಬೌಲರ್‌ಗಳು ಮೊದಲು ಪಂದ್ಯದ ಮೇಲೆ ಬಿಗಿಹಿಡಿತ ಹೊಂದಿದ್ದರು. ಆಸ್ಟ್ರೇಲಿಯದ ಆರು ಬ್ಯಾಟ್ಸ್‌ಮನ್‌ಗಳು ಒಂದಂಕಿಯ ಮೊತ್ತ ದಾಟದಂತೆ ಎಚ್ಚರಿಕೆ ವಹಿಸಿದರು. ಆದರೆ, ಮಿಷೆಲ್‌ ಮರ್ಷ್‌ (ಔಟಾಗದೆ 63, 38 ಎಸೆತ, 7 ಬೌಂಡರಿ, 3 ಸಿಕ್ಸರ್) ಮತ್ತು ಬ್ರಾಡ್‌ ಹಾಗ್‌ (ಔಟಾಗದೆ 28) ಪಂದ್ಯದ ಗತಿಯನ್ನೇ ಬದಲಿಸಿದರು. ಲಯನ್ಸ್ ತಂಡದ ಮಹಮ್ಮದ್‌ ಹಫೀಜ್‌ (4-0-8-2) ಚುರುಕಿನ ದಾಳಿಯ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿದ್ದರು. ಅವರ ಸ್ಪೆಲ್‌ ಮುಗಿದ ನಂತರ ಪಾಕ್‌್ ತಂಡ ರನ್‌ ಬಿಟ್ಟು ಕೊಟ್ಟಿತು. ಆದ್ದರಿಂದ ಚೊಚ್ಚಲ ಚಾಂಪಿಯನ್ಸ್ ಲೀಗ್‌ ಆಡಿದ ಲಯನ್ಸ್ ಲೀಗ್‌ ಹಂತದಿಂದಲೇ ಹೊರಬೀಳಬೇಕಾಯಿತು.

ಸಂಕ್ಷಿಪ್ತ ಸ್ಕೋರು:
ಲಾಹೋರ್‌ ಲಯನ್ಸ್‌ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 124 (ನಾಸೀರ್‌ ಜೆಮ್‌ಷೆದ್‌ 1, ಉಮರ್‌ ಸಾಧಿಕ್‌ 1, ಶಾದ್‌ ನಸೀಮ್‌ ಔಟಾಗದೆ 69, ಉಮರ್‌ ಅಕ್ಮಲ್‌ 26, ಮಹಮ್ಮದ್‌ ಸಯೀದ್‌ 20; ಜೊಯಲ್‌ ಪ್ಯಾರಿಸ್‌ 22ಕ್ಕೆ3, ಮಿಷೆಲ್‌ ಮಾರ್ಷ್‌ 12ಕ್ಕೆ2, ಬ್ರಾಡ್‌ ಹಾಗ್‌ 24ಕ್ಕೆ1).

ಪರ್ತ್ ಸ್ಕಾಚರ್ಸ್‌ 19 ಓವರ್‌ಗಳಲ್ಲಿ 7 ವಿಕೆಟ್‌ಗೆ 130 (ಕ್ಯಾಮರೂನ್ ಬ್ಯಾನ್‌ಕ್ರಾಫ್ಟ್‌22, ಮಿಷೆಲ್‌ ಮಾರ್ಷ್‌ ಔಟಾಗದೆ 63, ಬ್ರಾಡ್‌ ಹಾಗ್‌ ಔಟಾಗದೆ 28; ಮಹಮ್ಮದ್‌ ಹಫೀಜ್‌ 8ಕ್ಕೆ2, ಮಸ್ತಫಾ ಇಕ್ಬಾಲ್‌ 20ಕ್ಕೆ2). ಫಲಿತಾಂಶ: ಪರ್ತ್‌ ಸ್ಕಾಚರ್ಸ್‌ ತಂಡಕ್ಕೆ 7 ವಿಕೆಟ್‌ ಜಯ. ಪಂದ್ಯ ಶ್ರೇಷ್ಠ: ಮಿಷೆಲ್‌ ಮಾರ್ಷ್‌.

ಎರಡನೇ ಪಂದ್ಯಕ್ಕೆ ಮಳೆ ಅಡ್ಡಿ
ಬೆಂಗಳೂರು: ನಾರ್ದರ್ನ್‌ ಡಿಸ್ಟಿಕ್ಟ್ಸ್‌ ಮತ್ತು ಬಾರ್ಬಡೀಸ್‌ ಟ್ರೈಡೆಂಟ್ ತಂಡಗಳ ನಡುವಿನ ಚಾಂಪಿಯನ್ಸ್‌ ಲೀಗ್‌ ಕ್ರಿಕೆಟ್‌ ಟೂರ್ನಿಯ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ವೆಸ್ಟ್‌ ಇಂಡೀಸ್‌ನ ಬಾರ್ಬಡೀಸ್‌ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಇದೇ ಕ್ರೀಡಾಂಗಣದಲ್ಲಿ ನಡೆದಿದ್ದ       ಮೊದಲ ಪಂದ್ಯಕ್ಕೆ ಮಳೆ ಕೊಂಚ ಅಡ್ಡಿಪಡಿಸಿದ್ದ ಕಾರಣ ಎರಡನೇ ಪಂದ್ಯ 30 ನಿಮಿಷ ತಡವಾಗಿ ಆರಂಭವಾಯಿತು.

ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ನ ಡಿಸ್ಟಿಕ್ಟ್ಸ್‌  11.2 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು 68 ರನ್‌ ಕಲೆ ಹಾಕಿದ್ದ ವೇಳೆ ಮಳೆ ಸುರಿಯಿತು.  ರಾತ್ರಿ ಹತ್ತು ಗಂಟೆಯಾದರೂ ಮಳೆ ನಿಂತಿರಲಿಲ್ಲ. ಎರಡೂ ತಂಡಗಳು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಕಾರಣ ಈ ಪಂದ್ಯಕ್ಕೆ ಯಾವ ಮಹತ್ವವೂ ಇರಲಿಲ್ಲ. ಆದ್ದರಿಂದ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಸಂಖ್ಯೆಯೂ ಕಡಿಮೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT