ADVERTISEMENT

ಸೌತ್‌ ಯುನೈಟೆಡ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 19:30 IST
Last Updated 21 ನವೆಂಬರ್ 2017, 19:30 IST
ಆರ್‌ಡಬ್ಲ್ಯುಎಫ್‌ ತಂಡದ ಮಗೇಶ್‌ (ನೀಲಿ ಪೋಷಾಕು) ಮತ್ತು ಸೌತ್‌ ಯುನೈಟೆಡ್‌ ಎಫ್‌ಸಿ ತಂಡದ ನಿಖಿಲ್‌ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪೈಪೋಟಿ ನಡೆಸಿದರು. -ಪ್ರಜಾವಾಣಿ ಚಿತ್ರ
ಆರ್‌ಡಬ್ಲ್ಯುಎಫ್‌ ತಂಡದ ಮಗೇಶ್‌ (ನೀಲಿ ಪೋಷಾಕು) ಮತ್ತು ಸೌತ್‌ ಯುನೈಟೆಡ್‌ ಎಫ್‌ಸಿ ತಂಡದ ನಿಖಿಲ್‌ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪೈಪೋಟಿ ನಡೆಸಿದರು. -ಪ್ರಜಾವಾಣಿ ಚಿತ್ರ   

ಬೆಂಗಳೂರು: ಸುಭಾಷ್‌ ಅವರ ಕಾಲ್ಚಳಕದಲ್ಲಿ ಅರಳಿದ ಎರಡು ಗೋಲುಗಳ ಬಲದಿಂದ ಸೌತ್‌ ಯುನೈಟೆಡ್‌ ಎಫ್‌ಸಿ ತಂಡ ಬಿಡಿಎಫ್‌ಎ ವತಿಯ ಸೂಪರ್ ಡಿವಿಷನ್‌ ಲೀಗ್‌ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದೆ.

ಅಶೋಕ ನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಸೌತ್‌ ಯುನೈಟೆಡ್‌ 3–2 ಗೋಲುಗಳಿಂದ ಆರ್‌ಡಬ್ಲ್ಯುಎಫ್‌ ಎಫ್‌ಸಿ ತಂಡವನ್ನು ಸೋಲಿಸಿತು.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಸೌತ್‌ ಯುನೈಟೆಡ್‌ ತಂಡಕ್ಕೆ 37ನೇ ನಿಮಿಷದಲ್ಲಿ ಮುನ್ನಡೆ ಲಭಿಸಿತು. ಸುಭಾಷ್‌ ಆಕರ್ಷಕ ರೀತಿಯಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. 41ನೇ ನಿಮಿಷದಲ್ಲಿ ಲೋಕೇಶ್‌ ಗೋಲು ಬಾರಿಸಿ ಸಂಭ್ರಮ ಹೆಚ್ಚಿಸಿದರು. ಇದರ ಬೆನ್ನಲ್ಲೇ (43) ಸುಭಾಷ್‌ ಮೋಡಿ ಮಾಡಿದರು. ಹೀಗಾಗಿ ತಂಡ 3–0ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು.

ADVERTISEMENT

ದ್ವಿತೀಯಾರ್ಧದಲ್ಲಿ ಆರ್‌ಡಬ್ಲ್ಯುಎಫ್‌ ತಂಡ ಮಿಂಚಿತು. ಈ ತಂಡದ ರೇಗನ್‌ 47 ಮತ್ತು 56ನೇ ನಿಮಿಷಗಳಲ್ಲಿ ಗೋಲು ಬಾರಿಸಿದ್ದರಿಂದ ಹಿನ್ನಡೆ ತಗ್ಗಿತು. ಆದರೆ ಇತರ ಆಟಗಾರರಿಂದ ಅವರಿಗೆ ಸೂಕ್ತ ಬೆಂಬಲ ಸಿಗಲಿಲ್ಲ.

ಡ್ರಾ ಪಂದ್ಯದಲ್ಲಿ ರಾಯಲ್ಸ್‌: ರಾಯಲ್ಸ್‌ ಎಫ್‌ಸಿ ಮತ್ತು ಯಂಗ್‌ ಚಾಲೆಂಜರ್ಸ್‌ ನಡುವಣ ‘ಎ’ ಡಿವಿಷನ್‌ ಲೀಗ್‌ ಪಂದ್ಯ 1–1 ಗೋಲುಗಳಿಂದ ಡ್ರಾ ಆಯಿತು.ರಾಯಲ್ಸ್‌ ತಂಡದ ರಘು 26ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. 80+3ನೇ ನಿಮಿಷದಲ್ಲಿ ನಿರ್ಮಲ್‌ ಗೋಲು ಬಾರಿಸಿ ಯಂಗ್‌ ಚಾಲೆಂಜರ್ಸ್‌ ತಂಡವನ್ನು ಸೋಲಿನಿಂದ ಪಾರು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.