ADVERTISEMENT

ಸ್ಪರ್ಧೆಯಲ್ಲಿ ಬೌಲ್ಟ್‌–ಸ್ಟಾರ್ಕ್‌

ಅಗ್ರಸ್ಥಾನಕ್ಕೇರಲು ಗುಪ್ಟಿಲ್‌ಗೆ 9ರನ್‌ ಅಗತ್ಯ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2015, 19:30 IST
Last Updated 27 ಮಾರ್ಚ್ 2015, 19:30 IST

ಮೆಲ್ಬರ್ನ್‌ (ಐಎಎನ್‌ಎಸ್‌): ಈ ಬಾರಿಯ ವಿಶ್ವಕಪ್‌ ಕಿರೀಟವನ್ನು ಯಾವ ತಂಡ ಮುಡಿಗೇರಿಸಿಕೊಳ್ಳಲಿದೆ  ಎಂಬ ಬಗ್ಗೆ ಈಗ ಕ್ಷಣಗಣನೆ ಶುರುವಾಗಿದೆ. ಇದರ  ಬೆನ್ನಲ್ಲೇ ಟೂರ್ನಿಯ ಅತ್ಯುತ್ತಮ ಬೌಲರ್‌ ಪಟ್ಟಕ್ಕೆ ನ್ಯೂಜಿಲೆಂಡ್‌ನ ಟ್ರೆಂಟ್‌ ಬೌಲ್ಟ್‌ ಮತ್ತು ಆಸ್ಟ್ರೇಲಿಯಾದ ಮಿಷೆಲ್‌ ಸ್ಟಾರ್ಕ್‌ ನಡುವೆ ತುರುಸಿನ ಪೈಪೋಟಿ ಏರ್ಪಟ್ಟಿದೆ.

ನ್ಯೂಜಿಲೆಂಡ್‌ ತಂಡದ ವೇಗಿ ಬೌಲ್ಟ್‌  ಆಡಿದ ಎಂಟು ಪಂದ್ಯಗಳಿಂದ ಈಗಾಗಲೇ 21 ವಿಕೆಟ್‌ಗಳನ್ನು ಉರುಳಿಸಿದ್ದು ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಇನ್ನೊಂದೆಡೆ ಏಳು ಪಂದ್ಯಗಳಿಂದ 20 ವಿಕೆಟ್‌ ಕಬಳಿಸಿರುವ ಸ್ಟಾರ್ಕ್‌ಗೆ ಕಿವೀಸ್‌ನ ವೇಗಿಯನ್ನು ಹಿಂದಿಕ್ಕಿ ಈ ಗೌರವ ತಮ್ಮದಾಗಿಸಿಕೊಳ್ಳಲು ಇನ್ನು ಎರಡು ವಿಕೆಟ್‌ಗಳ ಅಗತ್ಯವಿದೆ.

ಹೀಗಾಗಿ ಉಭಯ ಆಟಗಾರರ ಮಧ್ಯೆ ಈಗ ಅಗ್ರ ಸ್ಥಾನಕ್ಕಾಗಿ ತೀವ್ರ ಹಣಾಹಣಿ ಏರ್ಪಟ್ಟಿರುವುದಂತೂ ಸುಳ್ಳಲ್ಲ. ಗುಪ್ಟಿಲ್‌ಗೆ ಬೇಕು 9ರನ್‌: ಟೂರ್ನಿಯಲ್ಲಿ  ಗರಿಷ್ಠ ರನ್‌ ಕಲೆಹಾಕಿದ ಆಟಗಾರ ಎನಿಸಿಕೊಳ್ಳಲು ನ್ಯೂಜಿಲೆಂಡ್‌ನ ಮಾರ್ಟಿನ್‌ ಗುಪ್ಟಿಲ್‌ಗೆ ಇನ್ನೂ 9ರನ್‌ಗಳ ಅಗತ್ಯವಿದೆ.

ಸದ್ಯ ಈ ಪಟ್ಟಿಯಲ್ಲಿ ಶ್ರೀಲಂಕಾ ತಂಡದ ಅನುಭವಿ ಆಟಗಾರ ಕುಮಾರ ಸಂಗಕ್ಕಾರ ಅಗ್ರ ಸ್ಥಾನದಲ್ಲಿದ್ದಾರೆ. ಸತತ ನಾಲ್ಕು ಶತಕಗಳನ್ನು ಸಿಡಿಸಿ ಏಕದಿನ ಕ್ರಿಕೆಟ್‌ನಲ್ಲಿ ಹೊಸ ಭಾಷ್ಯ ಬರೆದಿರುವ ಸಂಗಕ್ಕಾರ ಆಡಿದ ಏಳು ಪಂದ್ಯಗಳಿಂದ 108.20ರ ಸರಾಸರಿಯಲ್ಲಿ 541ರನ್‌ ಕಲೆಹಾಕಿದ್ದಾರೆ. ಅವರ ಸ್ಟ್ರೈಕ್‌ ರೇಟ್‌ 105.87.

ವೆಸ್ಟ್‌ ಇಂಡೀಸ್‌ ವಿರುದ್ಧದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಅಜೇಯ 237ರನ್‌ ಬಾರಿಸಿ ವಿಶ್ವಕಪ್‌ನಲ್ಲಿ ವೈಯಕ್ತಿಕ ಗರಿಷ್ಠ ರನ್‌ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಗುಪ್ಟಿಲ್‌ ಎಂಟು ಪಂದ್ಯಗಳಿಂದ 76.00ರ ಸರಾಸರಿಯಲ್ಲಿ 532ರನ್‌ ಗಳಿಸಿದ್ದಾರೆ. ಕಿವೀಸ್‌ ತಂಡದ ಬಲಗೈ ಬ್ಯಾಟ್ಸ್‌ಮನ್‌ನ ಸ್ಟ್ರೈಕ್‌ ರೇಟ್‌ 108.79.

ಭಾನುವಾರ ಮೆಲ್ಬರ್ನ್‌ ಮೈದಾನದಲ್ಲಿ ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಫೈನಲ್‌ ಹೋರಾಟದಲ್ಲಿ ಗುಪ್ಟಿಲ್‌ ಅವರಿಂದ ಈ ಸಾಧನೆ ಮೂಡಿ ಬರುವ ನಿರೀಕ್ಷೆ ಇದೆ.

‘ಹ್ಯಾಟ್ರಿಕ್‌’ ಸಾಧನೆ: ಈ ಬಾರಿಯ ಟೂರ್ನಿಯಲ್ಲಿ ‘ಹ್ಯಾಟ್ರಿಕ್‌’ ವಿಕೆಟ್‌ ಸಾಧನೆ ಮಾಡಿದವರ ಪಟ್ಟಿಯಲ್ಲಿ ಇಂಗ್ಲೆಂಡ್‌ ತಂಡದ ವೇಗಿ ಸ್ಟೀವನ್‌ ಫಿನ್‌ ಮತ್ತು ದಕ್ಷಿಣ ಆಫ್ರಿಕಾದ ಜೆ.ಪಿ. ಡುಮಿನಿ ಸ್ಥಾನ ಪಡೆದಿದ್ದಾರೆ. ಇವರಿಬ್ಬರಿಂದ ತಲಾ ಒಂದು ಬಾರಿ ಈ ಸಾಧನೆ ಮೂಡಿಬಂದಿದೆ.

ಗೇಲ್‌ಗೆ ಅಗ್ರ ಸ್ಥಾನ: ಟೂರ್ನಿಯಲ್ಲಿ ಅತ್ಯಂತ ಹೆಚ್ಚು ಸಿಕ್ಸರ್‌ ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವೆಸ್ಟ್‌ ಇಂಡೀಸ್‌ ತಂಡದ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಅಗ್ರ ಸ್ಥಾನಿಯಾಗಿದ್ದಾರೆ. ಅವರು ಒಟ್ಟು 26 ಸಿಕ್ಸರ್‌ ಸಿಡಿಸಿದ್ದಾರೆ. 21 ಸಿಕ್ಸರ್ ಬಾರಿಸಿರುವ ದಕ್ಷಿಣ ಆಫ್ರಿಕಾ ತಂಡದ ನಾಯಕ ಎಬಿ ಡಿವಿಲಿಯರ್ಸ್‌ ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿದ್ದಾರೆ.

ನ್ಯೂಜಿಲೆಂಡ್‌ ತಂಡದ ನಾಯಕ ಬ್ರೆಂಡನ್‌ ಮೆಕ್ಲಮ್‌ (17)  ಮೂರನೇಯವರಾಗಿದ್ದು ಗೇಲ್‌ ಅವರನ್ನು ಹಿಂದಿಕ್ಕಲು ಅವರು ಇನ್ನೂ 10 ಸಿಕ್ಸರ್‌ ಸಿಡಿಸಬೇಕಿದೆ.

ದೋನಿ ಸಾಧನೆ: ಟೂರ್ನಿಯಲ್ಲಿ ಅತಿ ಹೆಚ್ಚು ಆಟಗಾರರನ್ನು ಔಟ್‌ ಮಾಡಿದ ವಿಕೆಟ್‌ ಕೀಪರ್‌ಗಳ ಪಟ್ಟಿಯಲ್ಲಿ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್‌ ದೋನಿ ಮೊದಲ ಸ್ಥಾನದಲ್ಲಿದ್ದಾರೆ. ದೋನಿ ಒಟ್ಟು 15 ಕ್ಯಾಚ್‌ಗಳನ್ನು ಹಿಡಿದಿದ್ದಾರೆ. ‌ಆಸ್ಟ್ರೇಲಿಯಾದ ಬ್ರಾಡ್‌ ಹಡಿನ್‌ (14) ಮತ್ತು ನ್ಯೂಜಿಲೆಂಡ್‌ ತಂಡದ ಲ್ಯೂಕ್‌ ರೊಂಚಿ (13) ನಂತರದ ಸ್ಥಾನಗಳಲ್ಲಿದ್ದಾರೆ. ದೋನಿ ಅವರನ್ನು ಹಿಂದಿಕ್ಕಲು ಇವರಿಬ್ಬರು ಕ್ರಮವಾಗಿ ಎರಡು ಮತ್ತು ಮೂರು ಆಟಗಾರರನ್ನು ಔಟ್‌ ಮಾಡುವ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.