ADVERTISEMENT

ಹಲೆಪ್‌, ವೀನಸ್‌ಗೆ ಆಘಾತ

ಇಂಡಿಯಾನ ವೇಲ್ಸ್‌ ಟೆನಿಸ್‌: ಫೈನಲ್‌ ಪ್ರವೇಶಿಸಿದ ಒಸಾಕ, ಡೇರಿಯಾ

ಏಜೆನ್ಸೀಸ್
Published 17 ಮಾರ್ಚ್ 2018, 19:30 IST
Last Updated 17 ಮಾರ್ಚ್ 2018, 19:30 IST
ವೀನಸ್‌ ವಿಲಿಯಮ್ಸ್‌ ವಿರುದ್ಧ ಗೆದ್ದ ನಂತರ ಡೇರಿಯಾ ಕಸತ್ಕಿನಾ ಸಂಭ್ರಮಿಸಿದರು
ವೀನಸ್‌ ವಿಲಿಯಮ್ಸ್‌ ವಿರುದ್ಧ ಗೆದ್ದ ನಂತರ ಡೇರಿಯಾ ಕಸತ್ಕಿನಾ ಸಂಭ್ರಮಿಸಿದರು   

ಇಂಡಿಯಾನ ವೇಲ್ಸ್‌, ಅಮೆರಿಕ : ಇಂಡಿಯಾನ ವೇಲ್ಸ್‌ ಟೆನಿಸ್‌ ಟೂರ್ನಿಯಲ್ಲಿ ಶನಿವಾರ ಅಚ್ಚರಿಯ ಫಲಿತಾಂಶಗಳು ಹೊರಹೊಮ್ಮಿದವು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಸಿಮೊನಾ ಹಲೆಪ್‌ ಮತ್ತು ಎಂಟನೇ ಸ್ಥಾನದಲ್ಲಿರುವ ವೀನಸ್‌ ವಿಲಿಯಮ್ಸ್‌ ಅವರು ಸೆಮಿಫೈನಲ್‌ ಪಂದ್ಯಗಳಲ್ಲಿ ತಮಗಿಂತಲೂ ಕಡಿಮೆ ರ‍್ಯಾಂಕಿಂಗ್‌ನ ಆಟಗಾರ್ತಿಯರ ಎದುರು ಆಘಾತ ಆನುಭವಿಸಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 44ನೇ ಸ್ಥಾನ ಹೊಂದಿರುವ ನವೊಮಿ ಒಸಾಕ 6–3, 6–0ಯ ನೇರ ಸೆಟ್‌ಗಳಿಂದ ರುಮೇನಿಯಾದ ಹಲೆಪ್‌ ಅವರನ್ನು ಮಣಿಸಿದರು.

ADVERTISEMENT

ಈ ವರ್ಷ ಆಡಿದ 20 ಪಂದ್ಯಗಳ ಪೈಕಿ 18ರಲ್ಲಿ ಗೆದ್ದಿದ್ದ ಸಿಮೊನಾ, ಇಲ್ಲಿ ಪ್ರಶಸ್ತಿ ಜಯಿಸುವ ನೆಚ್ಚಿನ ಆಟಗಾರ್ತಿಯರಲ್ಲಿ ಒಬ್ಬರೆನಿಸಿದ್ದರು.

ಹೀಗಾಗಿ ತುಂಬು ವಿಶ್ವಾಸದಿಂದಲೇ ಕಣಕ್ಕಿಳಿದಿದ್ದ ಅವರು ಮೊದಲ ಆರು ಗೇಮ್‌ಗಳಲ್ಲಿ ಅಮೋಘ ಆಟ ಆಡಿದರು. ಆದ್ದರಿಂದ 3–3ರಲ್ಲಿ ಸಮಬಲವಾಯಿತು. ನಂತರ ಜಪಾನ್‌ನ ಒಸಾಕ ಮೋಡಿ ಮಾಡಿದರು. ಕ್ರಾಸ್‌ಕೋರ್ಟ್‌ ಮತ್ತು ಬೇಸ್‌ಲೈನ್‌ ಹೊಡೆತಗಳ ಮೂಲಕ ಸಿಮೊನಾ ಅವರನ್ನು ಕಂಗೆಡಿಸಿದರು. ಸತತ ಮೂರು ಗೇಮ್‌ ಗೆದ್ದು ಸೆಟ್‌ ಕೈವಶ ಮಾಡಿಕೊಂಡರು.

ಎರಡನೇ ಸೆಟ್‌ನಲ್ಲಿ ಸಿಮೊನಾ ತಿರುಗೇಟು ನೀಡುತ್ತಾರೆ ಎಂಬ ನಿರೀಕ್ಷೆಯೂ ಸುಳ್ಳಾಯಿತು. ಆರಂಭಿಕ ನಿರಾಸೆಯಿಂದ ಒತ್ತಡಕ್ಕೆ ಒಳಗಾದಂತೆ ಕಂಡ ಅವರು ಮೂರು ‘ಡಬಲ್‌ ಫಾಲ್ಟ್‌’ಗಳನ್ನು ಮಾಡಿದರು. ಇದರ ಪೂರ್ಣ ಲಾಭ ಪಡೆದ ಒಸಾಕ ಎದುರಾಳಿಯ ಮೂರೂ ಸರ್ವ್‌ಗಳನ್ನು ಮುರಿದರು. ಜೊತೆಗೆ ತಾವು ಮಾಡಿದ ಸರ್ವ್‌ಗಳನ್ನೂ ಉಳಿಸಿಕೊಂಡು ಗೆದ್ದರು.

ಭಾನುವಾರ ನಡೆಯುವ ಫೈನಲ್‌ನಲ್ಲಿ ಒಸಾಕ, ರಷ್ಯಾದ ಡೇರಿಯಾ ಕಸತ್ಕಿನಾ ವಿರುದ್ಧ ಆಡಲಿದ್ದಾರೆ.

ದಿನದ ಇನ್ನೊಂದು ಸೆಮಿಫೈನಲ್‌ನಲ್ಲಿ 20ನೇ ಶ್ರೇಯಾಂಕಿತೆ ಡೇರಿಯಾ 4–6, 6–4, 7–5ರಲ್ಲಿ ಅಮೆರಿಕದ ವೀನಸ್‌ ವಿರುದ್ಧ ಗೆದ್ದರು.

ಗ್ರ್ಯಾನ್‌ಸ್ಲಾಮ್‌ನಲ್ಲಿ ಏಳು ಪ್ರಶಸ್ತಿಗಳನ್ನು ಗೆದ್ದ ಹಿರಿಮೆ ಹೊಂದಿದ್ದ ವೀನಸ್‌, ಮೊದಲ ಸೆಟ್‌ನಲ್ಲಿ ನಿರಾಯಾಸವಾಗಿ ಎದುರಾಳಿಯ ಸವಾಲು ಮೀರಿದರು.

ಆದರೆ ನಂತರದ ಎರಡೂ ಸೆಟ್‌ಗಳಲ್ಲಿ ಪರಾಕ್ರಮ ಮೆರೆದ 20ರ ಹರೆಯದ ಡೇರಿಯಾ ಖುಷಿಯ ಕಡಲಲ್ಲಿ ತೇಲಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.