ADVERTISEMENT

ಹಾಕಿ: ಹರಿಯಾಣ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 19:30 IST
Last Updated 19 ಏಪ್ರಿಲ್ 2015, 19:30 IST
ರಾಷ್ಟ್ರೀಯ ಜೂನಿಯರ್‌ ಹಾಕಿ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಉತ್ತರ ಪ್ರದೇಶದ ಇ.ಖಾನ್‌ ಅವರಿಂದ ಚೆಂಡನ್ನು ಕಸಿದುಕೊಳ್ಳಲು ತಮಿಳುನಾಡು ತಂಡದ ಎನ್‌.ನಾಗಾರ್ಜುನ್‌ (ಎಡಬದಿ) ಕಸರತ್ತು ನಡೆಸಿದ ಪರಿ   –ಪ್ರಜಾವಾಣಿ ಚಿತ್ರ
ರಾಷ್ಟ್ರೀಯ ಜೂನಿಯರ್‌ ಹಾಕಿ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಉತ್ತರ ಪ್ರದೇಶದ ಇ.ಖಾನ್‌ ಅವರಿಂದ ಚೆಂಡನ್ನು ಕಸಿದುಕೊಳ್ಳಲು ತಮಿಳುನಾಡು ತಂಡದ ಎನ್‌.ನಾಗಾರ್ಜುನ್‌ (ಎಡಬದಿ) ಕಸರತ್ತು ನಡೆಸಿದ ಪರಿ –ಪ್ರಜಾವಾಣಿ ಚಿತ್ರ   

ಮೈಸೂರು: ಪಂದ್ಯ ಮುಗಿಯಲು ಐದು ನಿಮಿಷಗಳಿದ್ದಾಗ ರಜಂತ್‌ ಗಳಿಸಿದ ಅದ್ಭುತ ಗೋಲು ಪಂದ್ಯದ ಹಣೆಬರಹವನ್ನೇ ಬದಲಾಯಿಸಿತು. ಈ ಪರಿಣಾಮ ಹರಿಯಾಣ ತಂಡದವರು ‘ಹಾಕಿ ಕರ್ನಾಟಕ’ ಆಶ್ರಯದ ರಾಷ್ಟ್ರೀಯ ಜೂನಿಯರ್‌ ‘ಎ’ ಡಿವಿಷನ್‌ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟರು.

ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಭಾನುವಾರ ರೋಚಕ ಹೋರಾಟಕ್ಕೆ ಕಾರಣವಾದ ಪಂದ್ಯದಲ್ಲಿ ಹರಿಯಾಣ ತಂಡದವರು 4–3 ಗೋಲುಗಳಿಂದ ಸ್ಟೀಲ್‌ ಪ್ಲಾಂಟ್‌ ಸ್ಪೋರ್ಟ್ಸ್‌ ಬೋರ್ಡ್‌ (ಎಸ್‌ಪಿಎಸ್‌ಬಿ) ತಂಡವನ್ನು ಮಣಿಸಿದರು.

ಉಭಯ ತಂಡಗಳು ‘ಸಿ’ ಗುಂಪಿನಲ್ಲಿ ತಲಾ ಎರಡು ಗೆಲುವು ಸಾಧಿಸಿದ್ದರಿಂದ ಈ ಹೋರಾಟದಲ್ಲಿ ಗೆಲುವು ಅನಿವಾರ್ಯವಾಗಿತ್ತು. ಹಾಗಾಗಿ ಆರಂಭದಿಂದಲೇ ವೇಗಕ್ಕೆ ಒತ್ತು ನೀಡಿ ಆಡಿದವು.

ಪಂದ್ಯ ಶುರುವಾಗಿ 25 ನಿಮಿಷಗಳವರೆಗೆ ಯಾವುದೇ ಗೋಲು ಬರಲಿಲ್ಲ. ಈ ಹಂತದಲ್ಲಿ ಚುರುಕಿನ ಆಟವಾಡಿದ ಹರಿಯಾಣದ ರಜಂತ್‌ (26ನೇ, 27ನೇ ನಿ.) ಎದುರಾಳಿಗೆ ದೊಡ್ಡ ಆಘಾತ ನೀಡಿದರು. ಎರಡು ನಿಮಿಷಗಳ ಅಂತರದಲ್ಲಿ ಎರಡು ಗೋಲು ಗಳಿಸಿ 2–0 ಮುನ್ನಡೆಗೆ ಕಾರಣರಾದರು.

34ನೇ ನಿಮಿಷದಲ್ಲಿ ಎಸ್‌ಪಿಎಸ್‌ಬಿ ತಂಡದ ಜನ್ಮ ಮಾಹಿ ಚೆಂಡನ್ನು ಗುರಿ ಸೇರಿಸಿದರು. ವಿರಾಮದ ವೇಳೆಗೆ ವಿಜಯಿ ತಂಡ 2–1 ಗೋಲುಗಳಿಂದ ಮುಂದಿತ್ತು.

45ನೇ ನಿಮಿಷದಲ್ಲಿ ಹರಿಯಾಣ ತಂಡದ ಸಂತಾಸಿಂಗ್‌ ಗೋಲು ಗಳಿಸಿ ಮುನ್ನಡೆಯನ್ನು 3–1ಕ್ಕೆ ಹೆಚ್ಚಿಸಿದರು. ಈ ಹಂತದಲ್ಲಿ ಸುಧಾರಿತ ಆಟವಾಡಿದ ಎಸ್‌ಪಿಎಸ್‌ಬಿ ಬಳಗಕ್ಕೆ ಸಂತೋಷ್‌ (50ನೇ ನಿ.) ಗಳಿಸಿದ ಗೋಲು ಸಾಂತ್ವನ ನೀಡಿತು.  ಅಷ್ಟೇ ಅಲ್ಲ, 56ನೇ ನಿಮಿಷದಲ್ಲಿ ಆನಂದ್‌ ಕುಮಾರ್‌ ಚೆಂಡನ್ನು ಗುರಿ ಸೇರಿಸಿ 3–3 ಸಮಬಲಕ್ಕೆ ಕಾರಣರಾದರು.

ಆಸರೆಯಾದ ರಜಂತ್‌: ಆಗ ಪಂದ್ಯ ಮತ್ತಷ್ಟು ಕುತೂಹಲ ಮೂಡಿಸಿತು. ಪಂದ್ಯ ವೀಕ್ಷಿಸಲು ಬಂದಿದ್ದ ಪ್ರೇಕ್ಷಕರು ಜೋರಾಗಿ ಚಪ್ಪಾಳೆ ತಟ್ಟುತ್ತಾ ಉಭಯ ತಂಡಗಳನ್ನು ಪ್ರೋತ್ಸಾಹಿಸಿದರು.  ಈ ಹಂತದಲ್ಲಿ ಹೀರೊ ಆಗಿ ಮೆರೆದಿದ್ದು ಹರಿಯಾಣದ ರಜಂತ್‌. 65ನೇ ನಿಮಿಷದಲ್ಲಿ ಅವರು ತಂದಿತ್ತ ಗೋಲು 4–3 ಗೆಲುವಿಗೆ ಕಾರಣವಾಯಿತು.

ನಾಲ್ಕರ ಘಟ್ಟಕ್ಕೆ ಹಿಮಾಚಲ: ಮತ್ತೊಂದು ರೋಚಕ ಹಣಾಹಣಿಯಲ್ಲಿ ಗೆದ್ದು ನಾಲ್ಕರ ಘಟ್ಟ ತಲುಪಿದ್ದು ಹಿಮಾಚಲ ಪ್ರದೇಶ. ‘ಡಿ’ ಗುಂಪಿನ ಪಂದ್ಯದಲ್ಲಿ ಈ ತಂಡದವರು 1–0 ಗೋಲಿನಿಂದ ಜಾರ್ಖಂಡ್‌ ತಂಡವನ್ನು ಮಣಿಸಿದರು. 59ನೇ ನಿಮಿಷದಲ್ಲಿ ಲಭಿಸಿದ ಅವಕಾಶದಲ್ಲಿ ವಿಜಯಿ ತಂಡದ ಜುಗರಾಜ್‌ ಸಿಂಗ್‌ ಗೋಲು ಗಳಿಸಿದರು.

‘ಸಿ’ ಗುಂಪಿನ ಪಂದ್ಯದಲ್ಲಿ ಉತ್ತರ ಪ್ರದೇಶ 4–0 ಗೋಲುಗಳಿಂದ ತಮಿಳುನಾಡು ಎದುರು, ‘ಡಿ’ ಗುಂಪಿನ ಪಂದ್ಯದಲ್ಲಿ ಭಾರತ ಕ್ರೀಡಾ ಪ್ರಾಧಿಕಾರ 6–2 ಗೋಲುಗಳಿಂದ ಛತ್ತೀಸಗಡ ವಿರುದ್ಧ ಗೆಲುವು ಸಾಧಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.