ADVERTISEMENT

‘ನಿಷೇಧ ತೆರವಿಗೆ ಬಿಸಿಸಿಐ ಕೋರುವೆ’

​ಪ್ರಜಾವಾಣಿ ವಾರ್ತೆ
Published 28 ಜುಲೈ 2015, 12:53 IST
Last Updated 28 ಜುಲೈ 2015, 12:53 IST

ಕೊಚ್ಚಿ, ಕೇರಳ (ಪಿಟಿಐ): ಕಳೆದ ವಾರ ಫಿಕ್ಸಿಂಗ್ ಆರೋಪದಿಂದ ಮುಕ್ತರಾಗಿರುವ ಕೇರಳ ಎಕ್ಸ್‌ಪ್ರೆಸ್‌, ವೇಗಿ ಎಸ್‌.ಶ್ರೀಶಾಂತ್ ಅವರು ತಮ್ಮ ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ ಬಿಸಿಸಿಐ ಮೊರೆ ಹೋಗಲು ನಿರ್ಧರಿಸಿದ್ದಾರೆ.

2013ರಲ್ಲಿ ನಡೆದ ಐಪಿಎಲ್‌ ಆರನೇ ಆವೃತ್ತಿಯಲ್ಲಿ ಕೇಳಿ ಬಂದ ಸ್ಫಾಟ್‌ ಫಿಕ್ಸಿಂಗ್ ಪ್ರಕರಣದಿಂದ ಶ್ರೀಶಾಂತ್ ಅವರನ್ನು ದೆಹಲಿ ಕೋರ್ಟ್‌ವೊಂದು ಮುಕ್ತಗೊಳಿಸಿತ್ತು.

‘ಬಿಸಿಸಿಐ ಕಾರ್ಯದರ್ಶಿ ಅನುರಾಗ್‌ ಠಾಕೂರ್‌ ಅವರು ನನ್ನ ಮೇಲಿನ ನಿಷೇಧ ತೆರವುಗೊಳಿಸುವಂತೆ ಅರ್ಜಿ ಸಲ್ಲಿಸಬಹುದು ಎಂದು ಟಿ.ವಿ ವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದರು. ಅವರ ಭೇಟಿಗೆ ಸಮಯ ಕೋರಿದ್ದೇನೆ. ನನ್ನ ಮನವಿಯನ್ನು ಬಿಸಿಸಿಐ ಪರಿಗಣಿಸುವ ಸುಳಿವು ದೊರೆತಿದೆ. ಆದ್ದರಿಂದ ನಾನು ಅರ್ಜಿ ಸಲ್ಲಿಸಲು ಬಯಸಿರುವೆ. ಠಾಕೂರ್ ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ. ಬಿಸಿಸಿಐನ ಮುಂದಿನ ಸಭೆಯಲ್ಲಿ ಸೂಕ್ತ ನಿರ್ಧಾರ ಹೊರ ಬೀಳುವ ವಿಶ್ವಾಸವಿದೆ’ ಎಂದು ಶ್ರೀಶಾಂತ್ ನುಡಿದಿದ್ದಾರೆ.

ADVERTISEMENT

ಅಲ್ಲದೇ, ‘ಆರಂಭದಲ್ಲಿ ನಾನು ಆತ್ಮಹತ್ಯೆ ಬಗ್ಗೆ ಯೋಚಿಸಿದ್ದೆ. ಆದರೆ, ಎತ್ತುಮನೂರ್ ಮಹಾದೇವನ ಮೊರೆ ಹೋಗಿದ್ದರಿಂದ ಹಾಗೂ ನನ್ನ ಕುಟುಂಬದಿಂದ ದೊರೆತ ಬೆಂಬಲದಿಂದಾಗಿ ನಾನು ಅದರಿಂದ ಪಾರಾದೆ’ ಎಂದೂ ಅವರು ತಿಳಿಸಿದ್ದಾರೆ.

ಒಂದು ವೇಳೆ, ನಿಷೇಧ ತೆರವಿಗೆ ಬಿಸಿಸಿಐ ನಿರಾಕರಿಸಿದರೆ ನ್ಯಾಯಾಲಯದ ಮೊರೆ ಹೋಗುವಿರಾ? ಎಂಬ ಪ್ರಶ್ನೆಗೆ ಅವರು, ‘ನಾನು ಕಾಯುತ್ತೇನೆ. ನಾನು ಯಾರನ್ನೂ ಎದುರು ಹಾಕಿಕೊಳ್ಳಲು ಬಯಸುವುದಿಲ್ಲ. ನಾನು ಕ್ರಿಕೆಟ್ ಆಡಲು ಬಯಸುವೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.