ADVERTISEMENT

‘ಸಮರ್ಥ’ ಆಟಕ್ಕೆ ಬಳಲಿದ ಅಸ್ಸಾಂ

ರಣಜಿ: ಬೌಲರ್‌ಗಳ ಕೈಯಲ್ಲಿ ಕರ್ನಾಟಕದ ಗೆಲುವು, ಅಸ್ಸಾಂಗೆ 388 ರನ್‌ ಗುರಿ

ಪ್ರಮೋದ ಜಿ.ಕೆ
Published 3 ಅಕ್ಟೋಬರ್ 2015, 19:30 IST
Last Updated 3 ಅಕ್ಟೋಬರ್ 2015, 19:30 IST

ಗುವಾಹಟಿ: ಭರವಸೆಯ ಬ್ಯಾಟ್ಸ್‌ಮನ್‌  ಆರ್‌. ಸಮರ್ಥ್‌ ಶತಕದ ಬಲದಿಂದ ಎರಡನೇ ಇನಿಂಗ್ಸ್‌ನಲ್ಲಿ ವೇಗವಾಗಿ ರನ್‌ ಗಳಿಸಿರುವ ಕರ್ನಾಟಕ ಗೆಲುವಿನ ಮುನ್ನುಡಿ ಬರೆಯಲು ಕಾಯುತ್ತಿದೆ. ಈ ಆಸೆ ಈಡೇರಬೇಕಾದರೆ ಕೊನೆಯ ದಿನ ದಾಟದಲ್ಲಿ ಅಸ್ಸಾಂ ತಂಡದ ಒಂಬತ್ತು ವಿಕೆಟ್‌ಗಳನ್ನು ಉರುಳಿಸಬೇಕಿದೆ.

ಆದ್ದರಿಂದ ಭಾನುವಾರದ ದಿನ ದಾಟ ಕುತೂಹಲಕ್ಕೆ ಕಾರಣವಾಗಿದೆ. ದೇಶಿ ಕ್ರಿಕೆಟ್‌ನಲ್ಲಿ ನಿಧಾನವಾಗಿ  ಹೆಜ್ಜೆ ಗುರುತು ಮೂಡಿಸುತ್ತಿರುವ ಅಸ್ಸಾಂ ಬಲಿಷ್ಠ ತಂಡವೇನಲ್ಲ. ಈ ತಂಡಕ್ಕೆ ನಾಲ್ಕನೇ ಇನಿಂಗ್ಸ್‌ನಲ್ಲಿ 388 ರನ್‌ ಗುರಿ ಮುಟ್ಟುವುದು ಸುಲಭವಲ್ಲ. ಅಸ್ಸಾಂ ತಂಡದ ಕೋಚ್‌ ಕನ್ನಡಿಗ ಸನತ್‌ ಕುಮಾರ್‌ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಏಕೆಂದರೆ ಕೊನೆಯ ದಿನದಾಟದಲ್ಲಿ ಪಿಚ್‌ ಬೌಲರ್‌ಗಳಿಗೆ ನೆರವಾಗುವ ಸಾಧ್ಯತೆಯಿದೆ. ರಾಜ್ಯ ತಂಡದ ಬೌಲಿಂಗ್ ಕೂಡ ಬಲಿಷ್ಠವಾಗಿದೆ. ನಾಲ್ವರನ್ನು ಹೊರತುಪಡಿಸಿದರೆ ಅಸ್ಸಾಂ ತಂಡದಲ್ಲಿ ಸಮರ್ಥ ಬ್ಯಾಟ್ಸ್‌ಮನ್‌ಗಳಿಲ್ಲ. ಆದ್ದ ರಿಂದ ಚಾಂಪಿಯನ್‌ ತಂಡಕ್ಕೆ ಗೆಲುವು  ಕಷ್ಟವೇನಲ್ಲ.

ಶುಕ್ರವಾರದ ದಿನದಾಟದ ಅಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ 77 ರನ್‌ ಗಳಿಸಿದ್ದ ಕರ್ನಾಟಕ ಶನಿವಾರ ವೇಗವಾಗಿ  ರನ್‌ ಕಲೆ ಹಾಕಿತು. ಭೋಜನ ವಿರಾ ಮದ ವೇಳೆಗೆ ಒಟ್ಟು 56 ಓವರ್‌ಗಳಲ್ಲಿ  226 ರನ್‌ ಗಳಿಸಿದ್ದು ಇದಕ್ಕೆ ಸಾಕ್ಷಿ.

ಬೆಟ್ಟದಂತ ಸವಾಲು ಬೆನ್ನು ಹತ್ತಿ ರುವ ಅಸ್ಸಾಂ ಮೂರನೇ ದಿನದಾಟ ಮುಗಿದಾಗ 11.1 ಓವರ್‌ಗಳಲ್ಲಿ ಒಂದು ವಿಕೆಟ್‌ ಕಳೆದುಕೊಂಡು 30 ರನ್ ಗಳಿಸಿದೆ. ಇನಿಂಗ್ಸ್‌ ಮುನ್ನಡೆ ಪಡೆದಿರುವ ಈ ತಂಡ ಸೋಲು ತಪ್ಪಿಸಿಕೊಳ್ಳ ಬೇಕಾದರೆ ಕೊನೆಯ ದಿನ 90 ಓವರ್‌ ಗಳನ್ನು ಆಡಬೇಕಿದೆ. ಒಂದು ವೇಳೆ ಪಂದ್ಯ ಡ್ರಾ ಆದರೆ ಅಸ್ಸಾಂಗೆ ಮೂರು ಪಾಯಿಂಟ್ಸ್‌ ಲಭಿಸಲಿವೆ.

ಶತಕದ ಸೊಗಸು: ಮೊದಲ ಇನಿಂಗ್ಸ್‌ನಲ್ಲಿ ರನ್‌ ಬರ ಮತ್ತು ಇಲ್ಲಿನ ಬಿರು ಬಿಸಿಲಿಗೆ ಬಳಲಿದ್ದ ರಾಜ್ಯ ತಂಡಕ್ಕೆ ಸಮರ್ಥ್‌ ರನ್‌ ಮಳೆ ಸುರಿಸಿ ತಂಪೆರೆದರು. ರಣಜಿಯಲ್ಲಿ ಮೂರನೇ ಶತಕ ದಾಖಲಿಸಿ ಅಸ್ಸಾಂ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು.

ಬಲಗೈ ಬ್ಯಾಟ್ಸ್‌ಮನ್‌ ಸಮರ್ಥ್‌ 199 ಎಸೆತಗಳನ್ನು ಎದುರಿಸಿ 12 ಬೌಂಡರಿ ಸೇರಿದಂತೆ 131 ರನ್‌ ಬಾರಿಸಿದರು. ಇವರ ಆಟಕ್ಕೆ ಕೆಲ ಹೊತ್ತು ಮಯಂಕ್‌ ಅಗರವಾಲ್‌ (47, 120 ನಿಮಿಷ, 76ಎಸೆತ, 5 ಬೌಂಡರಿ) ನೆರವಾದರು. ಆದರೆ ಸ್ನಾಯುಸೆಳೆತದ ನೋವಿನಿಂದ ಬಳಲಿದ ಮಯಂಕ್‌ ಬ್ಯಾಟ್‌ ಮಾಡಲು ಅಲ್ಪ ಪರದಾಡಿದರು. ಫಿಸಿಯೊ ಬಂದು ಅವರಿಗೆ ಚಿಕಿತ್ಸೆ ನೀಡಿದರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಈ ಆರಂಭಿಕ ಜೋಡಿ ಮೊದಲ ವಿಕೆಟ್‌ಗೆ 99 ರನ್‌ ಗಳಿಸಿ ಗಟ್ಟಿ ಬುನಾದಿ ನಿರ್ಮಿಸಿದ್ದರಿಂದ ನಂತರದ ಬ್ಯಾಟ್ಸ್‌ಮನ್‌ಗಳಿಗೆ ರನ್ ಸೌಧ ಕಟ್ಟುವುದು ಸುಲಭವಾಯಿತು.

ನಂತರ ಸಮರ್ಥ್‌ ಜೊತೆ ಶಿಶಿರ್‌ ಭವಾನೆ ಸೊಗಸಾದ ಆಟವಾಡಿದರು. ಭೋಜನ ವಿರಾಮಕ್ಕೆ ಕೆಲ ಹೊತ್ತಿನ ಮೊದಲು ಸಮರ್ಥ್‌ ಮೂರಂಕಿಯ ಗಡಿ ದಾಟಿದ್ದರು.

ಕಿರಿಯ ಆಟಗಾರನಾದರೂ ಸಮರ್ಥ್‌ ಕಟ್ಟಿದ ತಾಳ್ಮೆಯ ಇನಿಂಗ್ಸ್‌ ಅನುಭವಿಗಳಲ್ಲೂ ಬೆರಗು ಮೂಡಿಸು ವಂತಿತ್ತು. ಕೊಂಚ ಸ್ಪಿನ್ನರ್‌ಗಳಿಗೆ ನೆರವು ನೀಡುತ್ತಿದ್ದ ಪಿಚ್‌ನಲ್ಲಿ ಅತ್ಯಂತ ಸುಂದರ ಹೊಡೆತಗಳನ್ನು ಬಾರಿಸಿದರು. ಇವರ ಜೊತೆಗೆ ಆಡಿದ ನಾಲ್ವರು ಬ್ಯಾಟ್ಸ್‌ಮನ್‌ ಗಳು ಔಟಾದರು. ಆದರೆ ಸಮರ್ಥ್‌ ಮಾತ್ರ ಎಲ್ಲಾ ಬೌಲರ್‌ಗಳಿಗೆ ದಿಟ್ಟ ಉತ್ತರ ನೀಡಿದರು. ಐದು ಗಂಟೆ 19 ನಿಮಿಷ ಕ್ರೀಸ್‌ನಲ್ಲಿದ್ದು ತಮ್ಮ ಸಾಮರ್ಥ್ಯ ತೋರಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ್ದ ಶಿಶಿರ್‌ (40, 88 ನಿಮಿಷ, 75ಎಸೆತ, 6 ಬೌಂಡರಿ) ಸಮರ್ಥ್‌ಗೆ ನೆರವಾದರು.

‘ಶನಿವಾರ ಎಷ್ಟು ರನ್‌ ಗಳಿಸುತ್ತೇವೆ ಎನ್ನುವುದಕ್ಕಿಂತ ಎಷ್ಟು ವೇಗವಾಗಿ ರನ್ ಬಾರಿಸುತ್ತೇವೆ’ ಎಂಬುದು ಮುಖ್ಯ ಎಂದು ಕರುಣ್ ನಾಯರ್‌ ಶುಕ್ರವಾರ ಹೇಳಿದ್ದರು. ಇದೇ ಮಾತಿಗೆ ಬದ್ಧವಾಗಿ ರಾಜ್ಯ ತಂಡ ರನ್‌ ಪೇರಿಸಿತು. ಕರುಣ್‌ (34), ಉಪನಾಯಕ ಸಿ.ಎಂ. ಗೌತಮ್‌ (44, 101 ನಿಮಿಷ, 65 ಎಸೆತ, 4 ಬೌಂಡರಿ) ಮತ್ತು ಆಲ್‌ರೌಂಡರ್ ಶ್ರೇಯಸ್‌ (41, 64 ನಿಮಿಷ, 56 ನಿಮಿಷ, 6 ಬೌಂಡರಿ) ಗಳಿಸಿದ ರನ್‌ಗಳೇ ಇದಕ್ಕೆ ಸಾಕ್ಷಿ.

ಮಧ್ಯಾಹ್ನದ ಚಹಾ ವಿರಾಮದ ವೇಳೆಗೆ ಐದು ವಿಕೆಟ್‌ ನಷ್ಟಕ್ಕೆ ಒಟ್ಟು 327 ರನ್‌ ಗಳಿಸಿದ್ದ ಕರ್ನಾಟಕ ನಂತರ ರನ್ ವೇಗ ಹೆಚ್ಚಿಸಲು ಮುಂದಾಗಿ ಮೂರು ವಿಕೆಟ್‌ ಕಳೆದುಕೊಂಡಿತು. ಕೆಪಿಎಲ್‌ನಲ್ಲಿ ಅಪೂರ್ವ ಪ್ರದರ್ಶನ ನೀಡಿರುವ ಸುಚಿತ್‌ ಕೇವಲ 13 ಎಸೆತಗಳಲ್ಲಿ 24 ರನ್‌ ಸಿಡಿಸಿದರು. ಮಿಡ್‌ವಿಕೆಟ್ ಮತ್ತು ಲಾಂಗ್‌ ಆನ್‌ನಲ್ಲಿ ಸೊಗಸಾದ ಎರಡು ಸಿಕ್ಸರ್‌ ಸಿಡಿಸಿದರು. ದಿನದಾಟ ಮುಗಿಯಲು ಒಂದು ಗಂಟೆ ಆಟ ಬಾಕಿಯಿದ್ದಾಗ ರಾಜ್ಯ ತಂಡ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು.

ಫಲ ನೀಡದ ಯೋಜನೆ: ಶನಿವಾರದ ಅಂತ್ಯಕ್ಕೆ ಅಸ್ಸಾಂ ತಂಡದ ಮೂರು ವಿಕೆಟ್‌ ಉರುಳಿಸಿ ಆ ತಂಡವನ್ನು ಒತ್ತಡಕ್ಕೆ ಸಿಲುಕಿಸಲು ರಾಜ್ಯದ ಬೌಲರ್‌ಗಳನ್ನು ದಿನದ ಕೊನೆಯಲ್ಲಿ ಸಾಕಷ್ಟು ಪ್ರಯತ್ನ ಮಾಡಿದರು.

ಅಸ್ಸಾಂ ಎರಡನೇ ಇನಿಂಗ್ಸ್‌ನಲ್ಲಿ 11.1 ಓವರ್‌ಗಳನ್ನು ಆಡಿತು. ಇಷ್ಟರಲ್ಲಿ ಐವರು ಬೌಲರ್‌ಗಳು ಕಣಕ್ಕಿಳಿದರೂ ವಿಕೆಟ್‌ ಲಭಿಸಿದ್ದು ಸುಚಿತ್‌ಗೆ ಮಾತ್ರ. ದಿನದ ಕೊನೆಯ ಓವರ್‌ನ ಮೊದಲ ಎಸೆತದಲ್ಲಿ ಶಿವಶಂಕರ್ ರಾಯ್‌ ಔಟಾದರು. ಆದ್ದರಿಂದ ಓವರ್‌ ಪೂರ್ಣಗೊಳ್ಳುವ ಮೊದಲೇ ದಿನದಾಟಕ್ಕೆ ತೆರೆ ಬಿದ್ದಿತು. ಇದಕ್ಕೂ ಮೊದಲು ವೇಗಿ ಶರತ್‌ ಎಸೆದ ಚೆಂಡು ಶಿವಶಂಕರ್‌ ತಲೆಗೆ ಬಲವಾಗಿ ಬಡಿದಿತ್ತು. ಆದ್ದರಿಂದ ಒಂದು ಓವರ್‌ ಕಡಿತವಾಯಿತು.

ಸಮರ್ಥ್‌ ಮೂರನೇ ಶತಕ
ರಣಜಿ ಟೂರ್ನಿಯಲ್ಲಿ ಸಮರ್ಥ್‌ ಗಳಿಸಿದ ಮೂರನೇ ಶತಕ ಇದಾಗಿದೆ. ಹೋದ ವರ್ಷ ಮುಂಬೈ ಎದುರಿನ ಪಂದ್ಯದಲ್ಲಿ ಚೊಚ್ಚಲ ಶತಕ ಹೊಡೆದಿದ್ದರು. ಇದೇ ವರ್ಷ ಇಂದೋರ್‌ನಲ್ಲಿ ಕರ್ನಾಟಕ ಮತ್ತು ಅಸ್ಸಾಂ ನಡುವೆ ಕ್ವಾರ್ಟರ್‌ ಫೈನಲ್‌ ನಡೆದಿತ್ತು. ಆ ಪಂದ್ಯದಲ್ಲೂ ಸಮರ್ಥ್‌ ಶತಕ ಗಳಿಸಿದ್ದರು. ಅಸ್ಸಾಂ ಎದುರು ಮೂರಂಕಿ ಗಳಿಸಿದ ರಾಜ್ಯದ ಐದನೇ ಬ್ಯಾಟ್ಸ್‌ಮನ್ ಎನಿಸಿದರು.

ಕೆ. ಜಸ್ವಂತ್‌ (1993–94), ರೋಲಂಡ್‌ ಬ್ಯಾರಿಂಗ್ಟನ್‌ ಹಾಗೂ ಸುನಿಲ್ ಜೋಶಿ (ಇಬ್ಬರೂ 2003–04ರಲ್ಲಿ) ಮತ್ತು ರಾಬಿನ್‌ ಉತ್ತಪ್ಪ (2014–15) ಹಿಂದೆ ಅಸ್ಸಾಂ ವಿರುದ್ಧ ಶತಕ ಬಾರಿಸಿದ್ದರು.

ಸ್ಕೋರ್‌ಕಾರ್ಡ್‌

* ಕರ್ನಾಟಕ ಮೊದಲ ಇನಿಂಗ್ಸ್‌ 187  (75.2 ಓವರ್‌ಗಳಲ್ಲಿ)
*ಅಸ್ಸಾಂ ಮೊದಲ ಇನಿಂಗ್ಸ್‌ 194  (78.5 ಓವರ್‌ಗಳಲ್ಲಿ)

ADVERTISEMENT

ಕರ್ನಾಟಕ ಎರಡನೇ ಇನಿಂಗ್ಸ್‌   394 ಕ್ಕೆ8 ಡಿಕ್ಲೇರ್ಡ್  (94 ಓ.)
(ಶುಕ್ರವಾರದ ಅಂತ್ಯಕ್ಕೆ 21 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 77)
ಆರ್‌. ಸಮರ್ಥ್‌ ಸಿ ತರ್ಜಿಂದರ್‌ ಸಿಂಗ್‌ ಬಿ ಸ್ವರೂಪಮ್‌ ಪುರ್ಕಾಯಸ್ತ  131
ಮಯಂಕ್ ಅಗರವಾಲ್‌ ಸಿ ಅಮಿತ್ (ಬದಲಿ ಆಟಗಾರ) ಬಿ ಸೈಯದ್   47
ರಾಬಿನ್‌ ಉತ್ತಪ್ಪ ಸಿ ಪಲ್ಲವಕುಮಾರ್‌ ದಾಸ್‌ ಬಿ ಸ್ವರೂಪಮ್‌ ಪುರ್ಕಾಯಸ್ತ 18
ಶಿಶಿರ್‌ ಭವಾನೆ ಎಲ್‌ಬಿಡಬ್ಲ್ಯು ಬಿ ಸ್ವರೂಪಮ್‌ ಪುರ್ಕಾಯಸ್ತ  40
ಕರುಣ್‌ ನಾಯರ್‌ ಸಿ ತರ್ಜಿಂದರ್ ಸಿಂಗ್‌ ಬಿ ಅಮಿತ್‌ ವರ್ಮಾ  34
ಸಿ.ಎಂ. ಗೌತಮ್‌ ಸಿ ಬಿಕಾಸ್‌ ಚೆಟ್ರಿ ಬಿ ಸೈಯದ್‌ ಮಹಮ್ಮದ್‌  44
ಶ್ರೇಯಸ್ ಗೋಪಾಲ್‌ ರನ್‌ಔಟ್‌ (ಶಿವಶಂಕರ್‌ ರಾಯ್‌)  41
ಆರ್‌. ವಿನಯ್‌ ಕುಮಾರ್‌ ಬಿ ಅರೂಪ್ ದಾಸ್‌  01
ಜೆ. ಸುಚಿತ್‌ ಔಟಾಗದೆ  24
ಅಭಿಮನ್ಯು ಮಿಥುನ್‌ ಔಟಾಗದೆ  02

ಇತರೆ: (ಬೈ–7, ಲೆಗ್‌ ಬೈ–5) 12
ವಿಕೆಟ್‌ ಪತನ: 1–99 (ಮಯಂಕ್‌; 26.1), 2–145 (ಉತ್ತಪ್ಪ; 33.5), 3–226 (ಶಿಶಿರ್‌; 56.1), 4–277 (ಕರುಣ್‌; 69.2), 5–290 (ಸಮರ್ಥ್‌; 73.1), 6–358 (ಶ್ರೇಯಸ್‌; 88.4), 7–363 (ವಿನಯ್‌; 90.3), 8–369 (ಗೌತಮ್‌; 91.6).

ಬೌಲಿಂಗ್‌: ಅರೂಪ್‌ ದಾಸ್‌ 10–0–48–1, ಕೃಷ್ಣದಾಸ್‌ 12–2–64–0, ಸೈಯದ್‌ ಮಹಮ್ಮದ್‌ 29–4–91–2, ಅಬುನೇಚಿಮ್ ಅಹ್ಮದ್‌ 10–0–39–0, ಅಮಿತ್‌ ವರ್ಮಾ 12–0–54–1, ಸ್ವರೂಪಮ್‌ ಪುರ್ಕಾಯಸ್ತ 17–1–78–3, ಗೋಕುಲ್‌ ಶರ್ಮಾ 4–0–8–0.

ಅಸ್ಸಾಂ ಎರಡನೇ ಇನಿಂಗ್ಸ್‌  1 ಕ್ಕೆ 30 (11.1 ಓ.)
ಪಲ್ಲವಕುಮಾರ್‌ ದಾಸ್‌ ಬ್ಯಾಟಿಂಗ್  21
ಶಿವಶಂಕರ್‌ ರಾಯ್‌ ಎಲ್‌ಬಿಡಬ್ಲ್ಯು ಬಿ ಜೆ. ಸುಚಿತ್‌  08

ಇತರೆ: (ಲೆಗ್‌ ಬೈ–1)  01
ವಿಕೆಟ್‌ ಪತನ: 1–30 (ಶಿವಶಂಕರ್‌; 11.1)
ಬೌಲಿಂಗ್‌: ಆರ್‌. ವಿನಯ್‌ ಕುಮಾರ್‌ 4–2–6–0, ಅಭಿಮನ್ಯು ಮಿಥುನ್‌ 2–0–9–0, ಜೆ. ಸುಚಿತ್‌ 1.1–0–3–1, ಕರುಣ್‌ ನಾಯರ್‌ 2–0–7–0, ಎಚ್‌.ಎಸ್‌. ಶರತ್‌ 2–1–4–0.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.