ADVERTISEMENT

‘ಸಲಹೆ ಪಡೆದು ಮುಂದಿನ ಕ್ರಮ’

ಐಒಸಿ ಅಧಿಕಾರಿಗಳನ್ನು ಭೇಟಿ ಮಾಡಲಿರುವ ಐಎಎಎಫ್‌

​ಪ್ರಜಾವಾಣಿ ವಾರ್ತೆ
Published 28 ಜುಲೈ 2015, 19:30 IST
Last Updated 28 ಜುಲೈ 2015, 19:30 IST

ನವದೆಹಲಿ (ಪಿಟಿಐ/ಐಎಎನ್‌ಎಸ್‌): ದೇಹದಲ್ಲಿ ಪುರುಷ ಹಾರ್ಮೋನ್‌ ಹೆಚ್ಚು ಇದೆ ಎಂಬ ವಿವಾದಕ್ಕೊಳಗಾಗಿದ್ದ ಭಾರತದ ಅಥ್ಲೀಟ್‌ ದ್ಯುತಿ ಚಾಂದ್‌ ಮೇಲಿನ ನಿಷೇಧ ತೆರವುಗೊಳಿಸಿರುವ  ನ್ಯಾಯಾಲಯದ ತೀರ್ಪಿನ ಕುರಿತು ತಜ್ಞರು ಹಾಗೂ ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿಯ (ಐಒಸಿ)  ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳುವು ದಾಗಿ ಐಎಎಎಫ್‌ ತಿಳಿಸಿದೆ.

ತಮ್ಮ ಮೇಲಿನ ನಿಷೇಧ ಹಿಂದಕ್ಕೆ ಪಡೆದು ಸ್ಪರ್ಧೆಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುವಂತೆ ಒಡಿಶಾದ 19 ವರ್ಷದ ಅಥ್ಲೀಟ್‌ ದ್ಯುತಿ ನ್ಯಾಯಾಲಯಕ್ಕೆ ಮನವಿ ಸಲ್ಲಿದ್ದರು. ಸೋಮವಾರ ಈ ಅರ್ಜಿಯ ವಿಚಾರಣೆ ನಡೆಸಿದ ಮೂವರು ಸದಸ್ಯರ ಪೀಠವು ದ್ಯುತಿ ಅವರ ಮನವಿಯನ್ನು ಮಾನ್ಯ ಮಾಡಿತ್ತು. ಅಲ್ಲದೆ ಐಎಎಎಫ್‌ ಈ ಪ್ರಕರಣ ಸಾಬೀತುಮಾಡಲು ಬೇಕಿರುವ ದಾಖಲೆ ನೀಡಿದರೆ ವಿಚಾರಣೆ ಮುಂದು ವರಿಸುವುದಾಗಿಯೂ  ಹೇಳಿತ್ತು.

‘ದ್ಯುತಿ ಚಾಂದ್‌ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿರುವ ಮಧ್ಯಂತರ ತೀರ್ಪಿನ ಪ್ರತಿ ನಮಗೆ ಲಭ್ಯವಾಗಿದೆ. ನಾವು ಶೀಘ್ರವೇ ಐಒಸಿ ಅಧಿಕಾರಿಗಳು ಹಾಗೂ ತಜ್ಞರನ್ನು ಭೇಟಿ ಮಾಡಿ ಈ ಸಂಬಂಧ ಚರ್ಚಿಸು ತ್ತೇವೆ. ಅಲ್ಲಿಯವರೆಗೂ ಈ ಕುರಿತು ಏನೂ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಐಎಎಎಫ್‌  ಪ್ರಕಟಣೆಯಲ್ಲಿ ತಿಳಿಸಿದೆ.

ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದಿದ್ದ ಅಥ್ಲೀಟ್‌ ದ್ಯುತಿ ಚಾಂದ್‌ ಅವರಲ್ಲಿ ಪುರುಷರ ಹಾರ್ಮೋನ್‌ಗಳು ಹೆಚ್ಚು ಇರುವುದು ಪತ್ತೆಯಾಗಿತ್ತು. ಹೀಗಾಗಿ ಅವರಿಗೆ ಕಾಮನ್‌ವೆಲ್ತ್‌ ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳಲು ಐಎಎಎಫ್‌ ಅವಕಾಶ ನೀಡಿರಲಿಲ್ಲ. 

ಸ್ವಾಗತ: ದ್ಯುತಿ ಅವರಿಗೆ ಸ್ಫರ್ಧೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಲಭಿಸಿದ್ದಕ್ಕೆ ಭಾರತ ಅಥ್ಲೆಟಿಕ್‌ ಫೆಡರೇಷನ್‌  ಸಂತಸ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.