ADVERTISEMENT

16ರ ಘಟ್ಟಕ್ಕೆ ಮರ್ರೆ, ಫೆಡರರ್‌

ಟೂರ್ನಿಯಿಂದ ಹೊರಬಿದ್ದ ಬೆರ್ಡಿಕ್‌

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 19:57 IST
Last Updated 20 ಜನವರಿ 2017, 19:57 IST
ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಪ್ರೀ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ ರೋಜರ್‌ ಫೆಡರರ್‌ ಆಟದ ವೈಖರಿ -ಎಎಫ್‌ಪಿ ಚಿತ್ರ
ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಪ್ರೀ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ ರೋಜರ್‌ ಫೆಡರರ್‌ ಆಟದ ವೈಖರಿ -ಎಎಫ್‌ಪಿ ಚಿತ್ರ   

ಮೆಲ್ಬರ್ನ್‌ (ಎಎಫ್‌ಪಿ/ರಾಯಿಟರ್ಸ್‌/ ಪಿಟಿಐ): ಪ್ರಶಸ್ತಿ ಜಯಿಸುವ ನೆಚ್ಚಿನ ಸ್ಪರ್ಧಿಗಳೆನಿಸಿರುವ ಬ್ರಿಟನ್‌ನ ಆ್ಯಂಡಿ ಮರ್ರೆ ಮತ್ತು ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಅವರು ಆಸ್ಟ್ರೇಲಿಯಾ ಓಪನ್‌  ಗ್ರ್ಯಾಂಡ್‌ ಸ್ಲಾಮ್‌ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ ವಿಭಾಗದಲ್ಲಿ 16ರ ಘಟ್ಟ ತಲುಪಿದ್ದಾರೆ.

ಶುಕ್ರವಾರ ನಡೆದ ಪುರುಷರ ವಿಭಾಗದ ಮೂರನೇ ಸುತ್ತಿನ ಪಂದ್ಯ ದಲ್ಲಿ ಫೆಡರರ್‌ 6–2, 6–4, 6–4ರಲ್ಲಿ ಹತ್ತನೇ ಶ್ರೇಯಾಂಕ ಹೊಂದಿರುವ ಜೆಕ್‌ ಗಣರಾಜ್ಯದ ಥಾಮಸ್‌ ಬೆರ್ಡಿಕ್‌ ಎದುರು ಗೆಲುವು ಪಡೆದರು.

17 ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿಗಳ ಒಡೆಯ ಫೆಡರರ್ ಅವರು ಇಲ್ಲಿನ ಟೂರ್ನಿಯಲ್ಲಿ ಆರು ವರ್ಷಗಳಿಂದ ಪ್ರಶಸ್ತಿಯ ಬರ ಎದುರಿಸುತ್ತಿದ್ದಾರೆ.

ವಿಶ್ವ ರ್‍ಯಾಂಕ್‌ನಲ್ಲಿ ಎರಡನೇ ಸ್ಥಾನ ದಲ್ಲಿರುವ ಹಾಲಿ ಚಾಂಪಿಯನ್‌ ಸರ್ಬಿ ಯಾದ ನೊವಾಕ್‌ ಜೊಕೊವಿಚ್‌ ಎರ ಡನೇ ಸುತ್ತಿನಲ್ಲಿಯೇ ಸೋಲು ಕಂಡಿ ರುವ ಕಾರಣ ಫೆಡರರ್‌ ಅವರಿಗೆ ಪ್ರಶಸ್ತಿ ಗೆಲ್ಲಲು ಈ ಬಾರಿ ಉತ್ತಮ ಅವಕಾಶ ವಿದೆ. ಪ್ರಸ್ತುತ ವಿಶ್ವರ್‍ಯಾಂಕ್‌ನಲ್ಲಿ 17ನೇ ಸ್ಥಾನದಲ್ಲಿರುವ ಫೆಡರರ್‌ 2012ರಲ್ಲಿ ವಿಂಬಲ್ಡನ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿ ಸಿದ್ದರು. ಇದೇ ಅವರ ಕೊನೆಯ ಗ್ರ್ಯಾಂಡ್ ಸ್ಲಾಮ್‌ ಪ್ರಶಸ್ತಿಯಾಗಿದೆ.

ಮರ್ರೆ ಗೆಲುವಿನ ಓಟ: ವಿಶ್ವ ರ್‍ಯಾಂಕ್‌ನಲ್ಲಿ ಅಗ್ರಸ್ಥಾನ ಹೊಂದಿರುವ ಆ್ಯಂಡಿ ಮರ್ರೆ ಮೂರನೇ ಸುತ್ತಿನ ಹೋರಾಟದಲ್ಲಿ 6–4, 6–2, 6–4ರಲ್ಲಿ ಅಮೆರಿಕದ ಸ್ಯಾಮ್‌ ಕ್ವಾರಿ ವಿರುದ್ಧ   ಗೆಲುವು ಸಂಪಾದಿಸಿದರು.

ಮರ್ರೆ ಇಲ್ಲಿ ಐದು ಬಾರಿ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದರೂ ಒಂದೂ ಸಲ ಟ್ರೋಫಿ ಎತ್ತಿ ಹಿಡಿಯುವ ಆಸೆ ಈಡೇ ರಿಲ್ಲ. ಅವರು ನಿರಾಸೆ ಕಂಡ ಅಂಗಳ ದಲ್ಲಿಯೇ ಗೆಲುವಿನ ಕೇಕೆ ಹಾಕುವ  ಗುರಿ ಹೊಂದಿದ್ದಾರೆ. ಮರ್ರೆ ವಿಂಬಲ್ಡನ್‌ ಟೂರ್ನಿಯಲ್ಲಿ ಎರಡು ಸಲ ಮತ್ತು ಅಮೆರಿಕ ಓಪನ್‌ ನಲ್ಲಿ ಒಂದು ಸಲ ಚಾಂಪಿಯನ್‌ ಆಗಿದ್ದರು. 

ಪುರುಷರ ವಿಭಾಗದ ಸಿಂಗಲ್ಸ್‌ನ ಇನ್ನಷ್ಟು ಪ್ರಮುಖ ಪಂದ್ಯಗಳಲ್ಲಿ ಸ್ಲೋವಾಕಿಯಾದ ಸ್ಟಾನಿಸ್ಲಾಸ್‌ ವಾವ್ರಿಂಕ 3–6, 6–2, 6–2, 7–6ರಲ್ಲಿ ಸರ್ಬಿ ಯಾದ ವಿಕ್ಟರ್‌ ಟ್ರೊಯಿಕಿ ಮೇಲೂ, ಫ್ರಾನ್ಸ್‌ನ ವಿಲ್‌ಫ್ರಡ್‌ ಸೊಂಗಾ 7–6, 7–5, 6–7, 6–3ರಲ್ಲಿ ಅಮೆರಿಕದ ಜಾಕ್‌ ಸಾಕ್‌ ವಿರುದ್ಧವೂ, ಜಪಾನ್‌ನ ಕೀ ನಿಷಿಕೋರಿ 6–4, 6–4, 6–4ರಲ್ಲಿ ಸ್ಲೋವಾಕಿಯಾದ ಲೂಕಸ್‌ ಲಾಕೊ ಮೇಲೂ ಗೆಲುವು ಪಡೆದು 16ರ ಘಟ್ಟ ಪ್ರವೇಶಿಸಿದರು.

ಕೆರ್ಬರ್‌ಗೆ ಗೆಲುವು: ಟೂರ್ನಿಯ ಹಾಲಿ ಚಾಂಪಿಯನ್‌ ಅಗ್ರ ಶ್ರೇಯಾಂಕದ  ಜರ್ಮನಿಯ ಆ್ಯಂಜಲಿಕ್‌ ಕೆರ್ಬರ್‌ 6–0, 6–4ರಲ್ಲಿ ಜೆಕ್ ಗಣರಾಜ್ಯದ ಕ್ರಿಸ್ಟನಾ ಪ್ಲಿಸ್ಕೋವಾ ಎದುರು ಸುಲಭ ಜಯ ಸಾಧಿಸಿದರು. ಇನ್ನೊಂದು ಪಂದ್ಯದಲ್ಲಿ ವೀನಸ್‌ ವಿಲಿಯಮ್ಸ್‌ 6–1, 6–0ರಲ್ಲಿ ಚೀನಾದ ಯಿಂಗ್ ಯಿಂಗ್‌ ಡುವಾನ್‌ ಅವರನ್ನು ಮಣಿಸಿದರು.
*
ಸಾನಿಯಾಗೆ ಜಯ, ಬೋಪಣ್ಣಗೆ ಸೋಲು
ಟೂರ್ನಿಯ ಐದನೇ ದಿನವಾದ ಶುಕ್ರವಾರ ಭಾರತಕ್ಕೆ ಮಿಶ್ರಫಲ ಲಭಿಸಿತು. ಮಹಿಳಾ ವಿಭಾಗದ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಮತ್ತು ಜೆಕ್‌ ಗಣರಾಜ್ಯದ ಬಾರ್ಬರಾ ಸ್ಟ್ರೈಕೋವಾ 6–1, 6–4ರಲ್ಲಿ ಆಸ್ಟ್ರೇಲಿಯಾದ ಸಮಂತಾ ಸ್ಟಾಸರ್‌ ಮತ್ತು ಚೀನಾದ ಶಾಯುಯಿ ಜಾಂಗ್‌ ಎದುರು ಗೆಲುವು ಪಡೆದರು.

ಪುರುಷರ ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ ಹಾಗೂ ಉರುಗ್ವೆಯ ಪಬ್ಲೊ  ಕಾವಸ್‌ 6–2, 6–7, 4–6ರಲ್ಲಿ ಶ್ರೇಯಾಂಕ ರಹಿತ ಆಟಗಾರರಾದ ಆಸ್ಟ್ರೇಲಿಯಾದ ಅಲೆಕ್ಸ್‌ ಬೋಲ್ಟ್‌–ಬ್ರೆಡ್ಲಿ  ಮೌಸ್ಲಿ ಎದುರು ಸೋತರು. ಇದರೊಂದಿಗೆ ಪುರುಷರ ಡಬಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯ ಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT