ADVERTISEMENT

ಅಂಗವಿಕಲರ ಹೊಸ ಹೆಜ್ಜೆಗಳು...

ಜಿ.ಶಿವಕುಮಾರ
Published 4 ಅಕ್ಟೋಬರ್ 2015, 19:30 IST
Last Updated 4 ಅಕ್ಟೋಬರ್ 2015, 19:30 IST

‘ಈ ಕೂಟದಲ್ಲಿ ಪದಕದ ಸಾಧನೆ ಮೂಡಿ ಬಂದಿರುವುದು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಮುಂಬರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಶ್ರೇಷ್ಠ ಸಾಮರ್ಥ್ಯ ನೀಡಲು ಇದು ಸ್ಫೂರ್ತಿಯಾಗಲಿದೆ’...

ರಷ್ಯಾದ ಸೋಚಿಯಲ್ಲಿ ಹೋದ ವಾರ ನಡೆದ ಇಂಟರ್‌ನ್ಯಾಶನಲ್‌ ವೀಲ್‌ಚೇರ್‌ ಮತ್ತು ಆ್ಯಂಪ್ಯುಟಿ ಸ್ಪೋರ್ಟ್ಸ್‌ ಫೆಡರೇಷನ್‌ ವತಿಯ (ಐವಾಸ್‌) ವಿಶ್ವ ಕ್ರೀಡಾಕೂಟದ ಸೀನಿಯರ್‌ ವಿಭಾಗದಲ್ಲಿ ಬೆಳ್ಳಿ  ಜಯಿಸಿದ ಬಳಿಕ ಕರ್ನಾಟಕದ ಪ್ಯಾರಾ ಅಥ್ಲೀಟ್‌ ಎಚ್‌.ಎನ್‌. ಗಿರೀಶ್‌ ಹೀಗೆ ಹರ್ಷ ವ್ಯಕ್ತಪಡಿಸಿದ್ದರು.

ವಿಶ್ವದ ಬಲಿಷ್ಠ ಸ್ಪರ್ಧಿಗಳ ಸವಾಲನ್ನು ಮೆಟ್ಟಿನಿಂತು ಪದಕ ಗೆದ್ದಿದ್ದು ಅವರ ಖುಷಿಗೆ ಕಾರಣ ವಾಗಿತ್ತು. ಏಷ್ಯನ್‌, ಕಾಮನ್‌ವೆಲ್ತ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ನ ಹಾಗೆ ಐವಾಸ್‌ ಕ್ರೀಡಾಕೂಟ ವೂ ತನ್ನದೇ ಆದ ಮಹತ್ವ ಹೊಂದಿದೆ. ಕೆಲ ಪ್ರಮುಖ ಪ್ಯಾರಾ ಅಥ್ಲೀಟ್‌ಗಳಿಗೆ ಇಲ್ಲಿ ಪದಕ ಗಗನ ಕುಸುಮ ವಾಗಿದೆ. ಅಷ್ಟರ ಮಟ್ಟಿಗೆ ಸ್ಪರ್ಧೆ ಕಠಿಣವಾಗಿರುತ್ತದೆ.

‘ಐವಾಸ್‌ ಕೂಟದಲ್ಲಿ ವಿಶ್ವದ ನಾನಾ ರಾಷ್ಟ್ರಗಳ ಸ್ಪರ್ಧಿಗಳು ಪಾಲ್ಗೊಳ್ಳುತ್ತಾರೆ. ಹೀಗಾಗಿ ಶ್ರೇಷ್ಠ ಸಾಮರ್ಥ್ಯ ನೀಡದ ಹೊರತು ಪದಕ ಮರೀಚಿಕೆಯೇ ಸರಿ’ ಎಂದು ರಾಜ್ಯದ ಪ್ಯಾರಾ ಈಜುಪಟು ನಿರಂಜನ್‌ ಮುಕುಂದನ್‌ ಹೇಳಿದ ಮಾತು ಇದಕ್ಕೆ ಪುಷ್ಠಿ ನೀಡುವಂತಿದೆ.

ಏನಿದು ಐವಾಸ್‌ ಕ್ರೀಡಾಕೂಟ...
ಇಂಗ್ಲೆಂಡ್‌ನ ಪ್ರಸಿದ್ಧ ನರ ವಿಜ್ಞಾನಿ  ಸರ್‌ ಲುಡ್ವಿಂಗ್‌ ಗುಟ್‌ಮಾನ್‌ ಈ ಕ್ರೀಡಾಕೂಟದ ಜನಕ. ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ ಅನೇಕ ಮಂದಿ ಬೆನ್ನು ಹುರಿಗಳನ್ನು ಮುರಿದುಕೊಂಡು ಅಂಗವಿಕಲರಾಗಿದ್ದರು. ಸ್ಟೋಕ್‌ ಮ್ಯಾಂಡ್‌ವಿಲ್‌ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಿದ್ದ ಲುಡ್ವಿಂಗ್‌ ಅವರ ಬಾಳಿನಲ್ಲಿ ಹೊಸ ಬೆಳಕು ಮೂಡಿಸಿದರು.

ಯುದ್ಧದ ಭೀಕರತೆಯಿಂದ ತತ್ತರಿಸಿದ್ದ ಅವರಲ್ಲಿ ಲುಡ್ವಿಂಗ್‌ ಆತ್ಮಸ್ಥೈರ್ಯ ಮತ್ತು ನವ ಚೈತನ್ಯ ತುಂಬುವ ಕಾರ್ಯಕ್ಕೆ ಕೈ ಹಾಕಿದರು. ಇದರ ಫಲವಾಗಿ ಜುಲೈ 28, 1948ರಲ್ಲಿ  ಸ್ಟೋಕ್‌ ಮ್ಯಾಂಡ್‌ವಿಲ್‌ ಕ್ರೀಡಾಕೂಟ ಹುಟ್ಟು ಪಡೆಯಿತು. ಆ ವರ್ಷ ಆಯೋಜಿಸಿದ್ದ ಆರ್ಚರಿ ಕ್ರೀಡೆಯಲ್ಲಿ 14 ಪುರುಷರು ಮತ್ತು ಇಬ್ಬರು ಮಹಿಳಾ ಸ್ಪರ್ಧಿಗಳು ಭಾಗವಹಿಸಿದ್ದರು. ಆ ನಂತರ ಪ್ರತಿ ವರ್ಷವೂ ಈ ಕೂಟ ನಡೆದುಕೊಂಡು ಬಂದಿದೆ.

ಹೆಚ್ಚಿದ ಖ್ಯಾತಿ...
1960ರಲ್ಲಿ  ಇಟಲಿಯ ರೋಮ್‌ನಲ್ಲಿ 9ನೇ ಆವೃತ್ತಿಯ ಕ್ರೀಡಾಕೂಟ ಯಶಸ್ವಿಯಾಗಿ ನೆರವೇರಿದ ಬಳಿಕ  ಈ ಕೂಟದ ಖ್ಯಾತಿಯೂ ಹೆಚ್ಚಿತು. ಇದು ಮೊದಲ ಪ್ಯಾರಾಲಿಂಪಿಕ್‌ ಕ್ರೀಡಾಕೂಟ ಎಂದೇ ಪ್ರಸಿದ್ಧಿಯಾಯಿತು.

2004ರಲ್ಲಿ ಐಎಸ್‌ಎಂಡಬ್ಲ್ಯು ಎಸ್‌ಎಫ್‌ ಮತ್ತು ಐಎಸ್‌ಒಡಿ ಸಂಸ್ಥೆಗಳು ಒಂದುಗೂಡಿ  ಇಂಟರ್‌ನ್ಯಾಶ ನಲ್‌ ವೀಲ್‌ಚೇರ್‌ ಮತ್ತು ಆ್ಯಂಪ್ಯುಟಿ ಸ್ಪೋರ್ಟ್ಸ್‌ ಫೆಡರೇಷನ್‌ (ಐಡಬ್ಲ್ಯುಎಎಸ್‌) ಅಸ್ತಿತ್ವಕ್ಕೆ ತಂದವು. ಈ ಸಂಸ್ಥೆ ಹುಟ್ಟಿಕೊಂಡ ಮರು ವರ್ಷ (2005) ಕೂಟ ಹೊಸ ಸ್ವರೂಪ ಪಡೆದುಕೊಂಡಿತು.

ಅದೇ ವರ್ಷ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದ ಕೂಟಕ್ಕೆ ವಿಶ್ವ ವೀಲ್‌ಚೇರ್‌ ಮತ್ತು ಆ್ಯಂಪ್ಯುಟಿ ಕ್ರೀಡಾಕೂಟ ಎಂದು ನಾಮಕರಣ ಮಾಡಲಾಯಿತು. ಇದರಲ್ಲಿ 44 ರಾಷ್ಟ್ರಗಳ 700 ಅಥ್ಲೀಟ್‌ಗಳು ಪಾಲ್ಗೊಂಡಿದ್ದು ವಿಶೇಷ. 2006ರಲ್ಲಿ ಉದ್ಯಾನ ನಗರಿ ಬೆಂಗಳೂರು ಈ ಕೂಟದ ಆತಿಥ್ಯ ವಹಿಸಿತ್ತು.  2009ರಲ್ಲೂ ಬೆಂಗಳೂರಿನಲ್ಲಿ ಕೂಟ ಆಯೋಜನೆಯಾಗಿತ್ತು.

ಕ್ರೀಡಾಕೂಟದ ವಿಂಗಡಣೆ..
ಇಂಟರ್‌ನ್ಯಾಶನಲ್‌ ವೀಲ್‌ಚೇರ್‌ ಮತ್ತು ಆ್ಯಂಪ್ಯುಟಿ ಸ್ಪೋರ್ಟ್ಸ್‌ ಫೆಡರೇಷನ್‌ (ಐಡಬ್ಲ್ಯುಎಎಸ್‌)  ಕೂಟ ವನ್ನು  ಕ್ರಮೇಣ ಜೂನಿಯರ್‌ ಮತ್ತು ಸೀನಿಯರ್‌ ವಿಭಾಗಗಳನ್ನಾಗಿ ವಿಂಗಡಿಸಿದೆ. 23 ವರ್ಷದೊಳಗಿ ನವರು ಜೂನಿಯರ್‌ ವಿಭಾಗದಲ್ಲಿ ಸ್ಪರ್ಧಿಸಲಿದ್ದರೆ, 23 ವರ್ಷ ಮೇಲ್ಪಟ್ಟವರು ಸೀನಿಯರ್‌ ವಿಭಾಗದಲ್ಲಿ ಪೈಪೋಟಿ ನಡೆಸುವರು.

ಭಾರತದ ಜಾಡು...
ಜೂನಿಯರ್‌ ಮತ್ತು ಸೀನಿಯರ್‌ ವಿಭಾಗದ ಕ್ರೀಡಾಕೂಟಗಳಲ್ಲಿ ಭಾರತವು ತನ್ನ ಹೆಜ್ಜೆ ಗುರುತು ಗಳನ್ನು ಮೂಡಿಸಿದೆ. 2009ರಲ್ಲಿ ಬೆಂಗಳೂರಿನಲ್ಲಿ ನಡೆದ ಕೂಟದ ಈಜು ಸ್ಪರ್ಧೆಯಲ್ಲಿ  ಪ್ರಶಾಂತ್‌ ಕರ್ಮಾಕರ್‌ ನಾಲ್ಕು ಚಿನ್ನ, ಎರಡು ಬೆಳ್ಳಿ ಮತ್ತು ಒಂದು ಕಂಚು ಗೆದ್ದಿದ್ದರು.

ರಾಜ್ಯದ ಎಚ್‌.ಎನ್‌. ಗಿರೀಶ್‌  ಎತ್ತರ ಜಿಗಿತ ಸ್ಪರ್ಧೆಯ ಎಫ್‌–42 ವಿಭಾಗದಲ್ಲಿ ಈ ಬಾರಿ ಬೆಳ್ಳಿ ಜಯಿಸಿದ್ದು, 2007 ಮತ್ತು 2009ರಲ್ಲಿ ಕಂಚು ಗೆದ್ದಿದ್ದರು. ಚಿತ್ರದುರ್ಗ ಜಿಲ್ಲೆಯ  ಪ್ರಸನ್ನಕುಮಾರ್‌ ರೊಕ್ಕದಾರ್‌ ತಿಪ್ಪೇಸ್ವಾಮಿ ಜಾವಲಿನ್‌ ಎಸೆತ ಸ್ಪರ್ಧೆಯ ಎಫ್‌ 42/44 ವಿಭಾಗದಲ್ಲಿ ಈ ಬಾರಿ ಚಿನ್ನದ ಸಾಧನೆ ಮಾಡಿದ್ದಾರೆ. ಕರ್ನಾಟಕದ ಇನ್ನೊಬ್ಬ ಅಥ್ಲೀಟ್‌ ಸುರ್ಜಿತ್‌ ಅವರು ಶಾಟ್‌ಪಟ್‌ನಲ್ಲಿ ರಜತ ಪದಕ ಗೆದ್ದಿದ್ದಾರೆ.

ರಾಜ್ಯದ ಪ್ಯಾರಾ ಈಜುಪಟು ನಿರಂಜನ್‌ ಮುಕುಂದನ್‌ ಈ ವರ್ಷದ ಆರಂಭದಲ್ಲಿ ನೆದರ್‌ ಲೆಂಡ್ಸ್‌ನಲ್ಲಿ ನಡೆದಿದ್ದ  ಜೂನಿಯರ್‌ ಕ್ರೀಡಾಕೂಟ ದಲ್ಲಿ  10 ಪದಕಗಳನ್ನು ಗೆದ್ದು ‘ಜೂನಿಯರ್‌ ವಿಶ್ವ ಚಾಂಪಿಯನ್‌’ ಪಟ್ಟ ಪಡೆದಿದ್ದರು. ಅವರು ಏಳು ಚಿನ್ನ ಮತ್ತು ಮೂರು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು.

ಬೆಂಗಳೂರಿನ ಮತ್ತೊಬ್ಬ ಈಜುಪಟು ಡಿ. ಆಶ್ರಯ್‌ ಇದೇ ಕೂಟದಲ್ಲಿ ಮೂರು ಬೆಳ್ಳಿ ಗೆದ್ದಿದ್ದರೆ, ಬಾಲಕಿಯರ ಈಜು ವಿಭಾಗದಲ್ಲಿ ದಾವಣಗೆರೆಯ ರೇವತಿ ನಾಯಕ್‌ ತಲಾ ಒಂದು ಬೆಳ್ಳಿ ಮತ್ತು ಕಂಚು ಜಯಿಸಿದ್ದರು. 2011ರಲ್ಲಿ ಶಾರ್ಜಾದಲ್ಲಿ ನಡೆದ ಕೂಟದಲ್ಲಿ ಭಾರತ 21 ಪದಕಗಳನ್ನು ಗೆದ್ದು ಗಮನ ಸೆಳೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT