ADVERTISEMENT

ಅವಳಿ ಸಹೋದರಿಯರ ಹಾಕಿ ಪ್ರೀತಿ

ಕೆ.ಓಂಕಾರ ಮೂರ್ತಿ
Published 16 ಏಪ್ರಿಲ್ 2017, 19:30 IST
Last Updated 16 ಏಪ್ರಿಲ್ 2017, 19:30 IST
ಅಭಿನಾಶ್ರೀ, ಅವಿನಾಶ್ರೀ
ಅಭಿನಾಶ್ರೀ, ಅವಿನಾಶ್ರೀ   

ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದ ಅವಳಿ ಸಹೋದರಿಯರು ವಿದ್ಯಾಭ್ಯಾಸ ತೊರೆಯಲು ಮುಂದಾಗಿದ್ದರು. ತೀರಾ ಬಡ ಕುಟುಂಬದ ಇವರು ಅಷ್ಟರಲ್ಲಾಗಲೇ ರಾಷ್ಟ್ರೀಯ ಪಿಯು ಹಾಕಿ ಟೂರ್ನಿಯಲ್ಲಿ ಆಡಿ ಗಮನ ಸೆಳೆದಿದ್ದರು. ಈ ಹಂತದಲ್ಲಿ ಕ್ರೀಡಾ ಹಾಸ್ಟೆಲ್‌ಗೆ ಆಯ್ಕೆಯಾಗಿದ್ದು ಈ ಆಟಗಾರ್ತಿಯರ ಬದುಕಿಗೆ ಪುಟ್ಟ ತಿರುವು ನೀಡಿತು. ಆಟ ಹಾಗೂ ವಿದ್ಯಾಭ್ಯಾಸ ಮುಂದುವರಿಸಲು ಅವಕಾಶ ಲಭಿಸಿತು.

ಈ ಅವಳಿ ಸಹೋದರಿಯರ ಹೆಸರು ಎಸ್‌.ಆರ್‌.ಅವಿನಾಶ್ರೀ ಹಾಗೂ ಎಸ್‌.ಆರ್‌.ಅಭಿನಾಶ್ರೀ. ಮೈಸೂರಿನ ಸರಸ್ವತಿಪುರಂನ ಸಹೋದರಿಯರು ರಾಜ್ಯ ಹಾಕಿಯ ಪ್ರತಿಭಾವಂತ ಆಟಗಾರ್ತಿಯರು ಕೂಡ.

ಅಭಿನಾಶ್ರೀ ಹಾಗೂ ಅವಿನಾಶ್ರೀ ಮುಂಬರುವ ರಾಷ್ಟ್ರೀಯ ಜೂನಿಯರ್‌ ಹಾಕಿ ಚಾಂಪಿಯನ್‌ಷಿಪ್‌ಗೆ ‘ಹಾಕಿ ಕರ್ನಾಟಕ’ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಶಾಲಾ ಮಟ್ಟದ ಹಾಕಿ ಟೂರ್ನಿಗಳಲ್ಲಿ ಗಮನ ಸೆಳೆದಿದ್ದ ಆಟಗಾರ್ತಿಯರನ್ನು ಮೂರು ವರ್ಷಗಳ ಹಿಂದೆ ಸ್ಥಳೀಯ ಕೋಚ್‌ಗಳು ಇಲ್ಲಿನ ಕ್ರೀಡಾ ಇಲಾಖೆಯ ವಸತಿ ನಿಲಯಕ್ಕೆ ಸೇರಿಸಿದ್ದರು. ಮೈಸೂರು ವಿಶ್ವವಿದ್ಯಾನಿಲಯದ ಸಹಾಯಕ ನಿರ್ದೇಶಕರೂ ಆಗಿರುವ ಪುಲಿಕೇಶಿ ವೈ.ಶೆಟ್ಟಪ್ಪನವರ ಈ ಆಟಗಾರ್ತಿಯರ ಕೋಚ್‌.

‌‘ಅಭಿನಾಶ್ರೀ ಹಾಗೂ ಅವಿನಾಶ್ರೀ ಕಡು ಬಡತನದ ಕುಟುಂಬದಿಂದ ಬಂದಿದ್ದಾರೆ. ಇವರಿಬ್ಬರೂ ಶಾಲಾಮಟ್ಟದಲ್ಲಿ ಆಟವಾಡುತ್ತಿದ್ದ ದಿನಗಳಲ್ಲಿ ತೀರಾ ಬಡಕಲಾಗಿದ್ದರು. ಅಪೌಷ್ಟಿಕಾಂಶದಿಂದ ಬಳಲುತ್ತಿದ್ದರು. ಆದರೆ, ಹಾಕಿ ಆಟದ ಉತ್ತಮ ಕೌಶಲ ಇವರಲ್ಲಿ ಇತ್ತು. ಕೈಗಳ ಚಲನೆ ಚೆನ್ನಾಗಿತ್ತು. ಈಗ ಅವರ ಆಟದಲ್ಲಿ ಮತ್ತಷ್ಟು ಸುಧಾರಣೆ ಆಗಿದೆ’ ಎನ್ನುತ್ತಾರೆ ಪುಲಿಕೇಶಿ ವೈ.ಶೆಟ್ಟಪ್ಪನವರ.

18 ವರ್ಷ ವಯಸ್ಸಿನ ಈ ಆಟಗಾರ್ತಿಯರು ಟೆರೇಷಿಯನ್‌ ಕಾಲೇಜಿನಲ್ಲಿ ಮೊದಲ ವರ್ಷದ ಬಿ.ಕಾಂನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಓದಿನಲ್ಲೂ ಮುಂದಿದ್ದಾರೆ.

‘ತಂದೆ ತೀರಿ ಹೋಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿರುವ ತಾಯಿ ಭಾನು ಶೇಖರ್‌ ನಮಗೆ ಆಧಾರಸ್ತಂಭ. ಅವರಿಗೆ ಕ್ರೀಡೆಯಲ್ಲಿ ತುಂಬಾ ಆಸಕ್ತಿ. ಯಾವುದಾದರೂ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸುತ್ತಿದ್ದರು. ಹೀಗಾಗಿ, ನಾವು ಹಾಕಿ ಕ್ರೀಡೆ ಆಯ್ಕೆ ಮಾಡಿಕೊಂಡೆವು’ ಎಂದು ಅವಳಿ ಸಹೋದರಿಯರು ನುಡಿಯುತ್ತಾರೆ.

ಇವರು ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಸಬ್‌ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. ಕಳೆದ ವರ್ಷ ರಾಷ್ಟ್ರೀಯ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಮೂರನೇ ಸ್ಥಾನ ಪಡೆದಿದ್ದರು.

‘ಕೋಚ್‌ಗಳೇ ನಮಗೆ ಸಹಾಯ ಮಾಡಿದ್ದಾರೆ. ಷೂ, ಕ್ರೀಡಾ ಪೋಷಾಕು ನೀಡಿ ಆಟದತ್ತ ಗಮನ ಹರಿಸಲು ಸಹಕರಿಸುತ್ತಿದ್ದಾರೆ. ಆ ಪ್ರೋತ್ಸಾಹ ನಮ್ಮ ಹುಮ್ಮಸ್ಸನ್ನು ಮತ್ತಷ್ಟು ಹೆಚ್ಚಿಸಿದೆ ’ ಎಂದು ಹೇಳುತ್ತಾರೆ.

ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ 15 ದಿನಗಳಿಂದ  ರಾಷ್ಟ್ರೀಯ ಜೂನಿಯರ್‌ ಹಾಕಿ ಚಾಂಪಿಯನ್‌ಷಿಪ್‌ಗಾಗಿ ನಡೆಯುತ್ತಿರುವ ತರಬೇತಿ ಶಿಬಿರದಲ್ಲಿ ಈ ಆಟಗಾರ್ತಿಯರು ತಾಲೀಮು ನಡೆಸುತ್ತಿದ್ದಾರೆ. ಜೂನಿಯರ್‌ ಚಾಂಪಿಯನ್‌ಷಿಪ್‌ ಮೇ 4ರಿಂದ ಭೋಪಾಲ್‌ನಲ್ಲಿ ನಡೆಯಲಿದೆ.

ಅಭಿನಾಶ್ರೀ, ಅವಿನಾಶ್ರೀ ಸೇರಿದಂತೆ 18 ಆಟಗಾರ್ತಿಯರು ಶಿಬಿರದಲ್ಲಿದ್ದಾರೆ. ಇವರಲ್ಲಿ 12 ಮಂದಿ ಮೈಸೂರಿನ ಕ್ರೀಡಾ ಹಾಸ್ಟೆಲ್‌ನವರು. ಇನ್ನುಳಿದ 6 ಮಂದಿ ಮಡಿಕೇರಿಯ ಭಾರತ ಕ್ರೀಡಾ ಪ್ರಾಧಿಕಾರದ (ಎಸ್‌ಎಐ) ಆಟಗಾರ್ತಿಯರು.

‘ಕ್ರೀಡಾ ಹಾಸ್ಟೆಲ್‌ನಲ್ಲಿ ಮೂರು ವರ್ಷಗಳಿಂದ ತರಬೇತಿ ಪಡೆಯುತ್ತಿದ್ದೇವೆ. ರಾಷ್ಟ್ರೀಯ ಸೀನಿಯರ್‌ ತಂಡದಲ್ಲಿ ಸ್ಥಾನ ಪಡೆಯಬೇಕು ಎಂಬುದು ನಮ್ಮ ಗುರಿ’ ಎಂದು ತಮ್ಮ ಕನಸು ಬಿಚ್ಚಿಡುತ್ತಾರೆ ಅಭಿನಾಶ್ರೀ ಹಾಗೂ ಅವಿನಾಶ್ರೀ.

ಡಿವೈಇಎಸ್‌ ಕೋಚ್‌ ವಿಜಯಕೃಷ್ಣ ಅವರ ಮಾರ್ಗದರ್ಶನದಲ್ಲಿ ತರಬೇತಿ ಶಿಬಿರ ನಡೆಯುತ್ತಿದೆ. ರಾಷ್ಟ್ರೀಯ ಸೀನಿಯರ್‌ ಚಾಂಪಿಯನ್‌ಷಿಪ್‌ಗೂ ಇಲ್ಲಿಯೇ ತಾಲೀಮು ನಡೆಯುತ್ತಿದ್ದು 18 ಆಟಗಾರ್ತಿಯರು ಪಾಲ್ಗೊಂಡಿದ್ದಾರೆ. ಈ ಚಾಂಪಿಯನ್‌ಷಿಪ್‌ ಭೋಪಾಲ್‌ನಲ್ಲಿ ಇದೇ ತಿಂಗಳು 20ಕ್ಕೆ ಆರಂಭವಾಗಲಿದೆ.

‘ಈ ಬಾರಿಯ ಚಾಂಪಿಯನ್‌ಷಿಪ್‌ನಲ್ಲಿ ಗೆಲ್ಲಲು ಉತ್ತಮ ಅವಕಾಶವಿದೆ. ರೈಲ್ವೆ ತಂಡದ ಸವಾಲನ್ನು ಸಮರ್ಥವಾಗಿ ಎದುರಿಸಿದರೆ ಟ್ರೋಫಿ ಗೆಲ್ಲಬಹುದು. ರೈಲ್ವೆ ತಂಡದಲ್ಲಿ ಭಾರತ ತಂಡದ ಆಟಗಾರ್ತಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ, ತುಸು ಕಠಿಣ’ ಎಂದು ವಿಜಯಕೃಷ್ಣ ನುಡಿಯುತ್ತಾರೆ. 

*
ಬಹುತೇಕ ಆಟಗಾರ್ತಿಯರು ಬಡ ಕುಟುಂಬದಿಂದ ಬಂದವರು. ಆದರೆ, ಅವರಲ್ಲಿ ಪ್ರತಿಭೆ ಇದೆ. ಅದೇ ಅವರ ಬಂಡವಾಳ. ಕ್ರೀಡಾ ಹಾಸ್ಟೆಲ್‌ ಅವರಿಗೆ ಆಸರೆಯಾಗಿದೆ.
–ವಿಜಯಕೃಷ್ಣ ತರಬೇತುದಾರ, ಡಿವೈಇಎಸ್‌, ಮೈಸೂರು

*
ಶಾಲಾ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅವಿನಾಶ್ರೀ, ಅಭಿನಾಶ್ರೀಗೆ ಮತ್ತಷ್ಟು ತರಬೇತಿ ನೀಡಿದರೆ ಹಾಕಿ ಕೌಶಲ ಬೆಳೆಸಬಹುದು ಅನಿಸಿತು. ಕ್ರೀಡಾ ಹಾಸ್ಟೆಲ್‌ಗೆ ಸೇರಿದ ಮೇಲೆ ಮತ್ತಷ್ಟು ಸುಧಾರಿಸಿದ್ದಾರೆ.
–ಪುಲಿಕೇಶಿ ವೈ.ಶೆಟ್ಟಪ್ಪನವರಹಾಕಿ ಕೋಚ್‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.