ADVERTISEMENT

ಆಟದ ಆರಂಭ ಎಂದು ?

ಕ್ರೀಡಾಸಕ್ತರು ಇದ್ದಾರೆ, ಕ್ರೀಡಾ ಸಲಕರಣೆಗಳೂ ಇವೆ...

ಸಿದ್ದೇಶ
Published 27 ನವೆಂಬರ್ 2016, 19:30 IST
Last Updated 27 ನವೆಂಬರ್ 2016, 19:30 IST
ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಂಗ್ರಹಿಸಿಡಲಾಗಿರುವ ಕ್ರೀಡಾ ಸಾಮಗ್ರಿಗಳು   - ಪ್ರಜಾವಾಣಿ ಚಿತ್ರ/ರವೀಂದ್ರ ಕುಲಕರ್ಣಿ
ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಂಗ್ರಹಿಸಿಡಲಾಗಿರುವ ಕ್ರೀಡಾ ಸಾಮಗ್ರಿಗಳು - ಪ್ರಜಾವಾಣಿ ಚಿತ್ರ/ರವೀಂದ್ರ ಕುಲಕರ್ಣಿ   

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇವತ್ತು 100 ಮಕ್ಕಳು ಆ ಕ್ರೀಡಾ ವಸತಿ ಶಾಲೆಯಲ್ಲಿ ತುಂಬಿರಬೇಕಿತ್ತು. ಆದರೆ, ಕ್ರೀಡೆಯ ಬಗ್ಗೆ  ಅಧಿಕಾರಿಗಳ  ತಾತ್ಸಾರ, ರಾಜಕೀಯ ಇಚ್ಛಾಶಕ್ತಿಯ ಕೊರತೆ, ಆಡಳಿತಗಾರರ ಬೇಜವಾಬ್ದಾರಿಯಿಂದ ಕ್ರೀಡಾಚಟುವಟಿಕೆಗಳು ಯಾದಗಿರಿ ಜಿಲ್ಲೆಯಲ್ಲಿ ನಿಂತ ನೀರಾಗಿವೆ. ಕ್ರೀಡಾಪಟುಗಳಾಗಬೇಕೆಂದು ನೂರಾರು ಮಕ್ಕಳ ಕನಸು ಛಿದ್ರಗೊಂಡಿದೆ.

ಜಿಲ್ಲೆಯಲ್ಲಿ 50 ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಕ್ರೀಡಾ ವಸತಿ ನಿಲಯ ಆರಂಭಿಸಲು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ 2015ರ ಮೇ ತಿಂಗಳಲ್ಲೇ ಒಪ್ಪಿಗೆ ನೀಡಿದೆ. ಬಾಡಿಗೆ ಕಟ್ಟಡ ಪಡೆದಾದರೂ ಕ್ರೀಡಾ ವಸತಿ ನಿಲಯ ಆರಂಭಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದರೆ ಸಮರ್ಪಕ ಕಟ್ಟಡ ಇಲ್ಲ, ಕೋಚ್‌ ಬಂದಿಲ್ಲ, ಸಿಬ್ಬಂದಿ ಕೊರತೆ ಇತ್ಯಾದಿ ನೆಪವೊಡ್ಡಿ ಇದುವರೆಗೂ ಕ್ರೀಡಾ ವಸತಿ ನಿಲಯ ದ ಆರಂಭವನ್ನು ಮುಂದೂಡುತ್ತಲೇ ಬರಲಾಗಿದೆ. ಇದನ್ನು ಪ್ರಶ್ನಿಸಿದರೆ ‘ಉತ್ತಮ ಕಟ್ಟಡ ಸಿಗುತ್ತಿಲ್ಲ.

ನೀವೆ ಹುಡುಕಿಕೊಟ್ಟರೆ ನಾನು ಕ್ರೀಡಾ ವಸತಿ ನಿಲಯ ಆರಂಭಿಸುತ್ತೇವೆ’ ಎಂದು ಉತ್ತರಿಸುತ್ತಾರೆ ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಅಮೃತರಾವ್‌ ಅಷ್ಟಗಿ.

‘ಕ್ರೀಡಾಂಗಣದಲ್ಲೇ ₹2 ಕೋಟಿ ವೆಚ್ಚದಲ್ಲಿ ಕ್ರೀಡಾ ವಸತಿ ನಿಲಯ ಕಟ್ಟಡ ನಿರ್ಮಾಣ ಮಾಡಲು ಇಲಾಖೆ ಒಪ್ಪಿಗೆ ಸೂಚಿಸಿದೆ. ಮುಂದಿನ ವರ್ಷ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. 2018ರ ನಂತರ ಕ್ರೀಡಾ ವಸತಿ ನಿಲಯ ಆರಂಭಿಸುವ ಚಿಂತನೆಯಿದೆ’ ಎನ್ನುವ ಅಷ್ಟಗಿ, ‘ಕ್ರೀಡಾಂಗಣದೊಳಗೆ ಒಂದು ಕಟ್ಟಡವಿದೆ. ಅದನ್ನೇ ಸರಿಪಡಿಸಿ ಮುಂದಿನ ವರ್ಷ ಅಲ್ಲಿಯೇ ವಸತಿ ನಿಲಯ ಆರಂಭಿಸಲು ಉದ್ದೇಶಿಸಿದ್ದೇವೆ’ ಎನ್ನುವ ಮೂಲಕ ದ್ವಂದ್ವ ನಿಲುವು ಪ್ರದರ್ಶಿಸುತ್ತಾರೆ.

ಅಥ್ಲೆಟಿಕ್ಸ್‌ ಮತ್ತು ವಾಲಿಬಾಲ್‌ ಕ್ರೀಡೆಗೆ ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಲು ಅನುಮತಿ ನೀಡಲಾಗಿದ್ದು, ಕಳೆದ ವರ್ಷ ಜಿಲ್ಲೆಯ ಮೂರೂ ತಾಲ್ಲೂಕುಗಳಿಂದ 5ರಿಂದ 7ನೇ ತರಗತಿಯಲ್ಲಿ ಕಲಿತಿರುವ 30 ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ಆದರೆ, ವಸತಿ ನಿಲಯ ಆರಂಭವಾಗದೇ ಇರುವುದರಿಂದ ಆ ಪಟ್ಟಿಯೂ ಕಡತಗಳಲ್ಲಿ ದೂಳು ತಿನ್ನುತ್ತಿದೆ.

ಬಳಕೆಯಾಗದ ಕ್ರೀಡಾ ಸಾಮಗ್ರಿ: ಕ್ರೀಡಾಂಗಣದ್ದು ಒಂದು ಕಥೆಯಾದರೆ ಮಕ್ಕಳು ಮತ್ತು ಸಾರ್ವಜನಿಕರ ಬಳಕೆಗಾಗಿ ಕ್ರೀಡಾ ಇಲಾಖೆಯು ವಾಲಿಬಾಲ್‌, ಫುಟ್‌ಬಾಲ್‌, ಷಟಲ್‌ ಕಾಕ್‌, ದುಬಾರಿ ಮೊತ್ತದ ಮಸಾಜ್‌ ಚೇರ್‌ಗಳನ್ನು ನೀಡಿದೆ. ಇನ್ನೂ 2015ರಲ್ಲಿ ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ₹5 ಲಕ್ಷ ವೆಚ್ಚದಲ್ಲಿ ಜಿಮ್‌ ಪರಿಕರಗಳನ್ನು ಪೂರೈಸಿದೆ. ಇವೆಲ್ಲವನ್ನೂ ಕೊಠಡಿಯೊಂದರಲ್ಲಿ ತುಂಬಿ ಬೀಗ ಜಡಿಯಲಾಗಿದೆ. ‘ಕ್ರೀಡಾಂಗಣ ಹಾಗೂ ಜಿಮ್ ಪರಿಕರಗಳನ್ನು ಅಳವಡಿಸಿಲು ಕೋಣೆ ಇಲ್ಲದಿರುವುದರಿಂದ ಒಂದೆಡೆ ಸಂಗ್ರಹಿಸಿಡಲಾಗಿದೆ’ ಎನ್ನುವುದು ಅಷ್ಟಗಿ ಅವರ ವಿವರಣೆ.

ಸಿಬ್ಬಂದಿ, ಕೋಚ್‌ಗಳದ್ದೇ ಚಿಂತೆ: ‘ಡಿ’ ದರ್ಜೆಯ ನೌಕರರೊಬ್ಬರನ್ನು ಬಿಟ್ಟು, ಇಲಾಖೆಯಲ್ಲಿ ಮೇಲ್ವಿಚಾರಕ ಹಾಗೂ ವಸತಿ ನಿಲಯದ ಅಧೀಕ್ಷಕ, ಒಬ್ಬ ದ್ವಿತೀಯ ದರ್ಜೆ ಸಹಾಯಕ, ‘ಬಿ’ ಗ್ರೇಡ್‌ ಅಧಿಕಾರಿ ಹುದ್ದೆಗಳು ಖಾಲಿಯಿವೆ. ಇದರ ಜೊತೆಗೆ ಕನಿಷ್ಠ ಇಬ್ಬರು ಕೋಚ್‌ಗಳ ಅಗತ್ಯವಿದ್ದು, ಒಬ್ಬರು ಗುತ್ತಿಗೆ ಆಧಾರದಲ್ಲಿ ಗುರುಮಠಕಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲವನ್ನೂ ನಾನೊಬ್ಬನೇ ಮಾಡಬೇಕು.

ಪರಿಸ್ಥಿತಿ ಹೀಗಿರುವಾಗ ಕ್ರೀಡಾಪಟುಗಳನ್ನು ರೂಪಿಸುವುದು ಹೇಗೆ? ಎನ್ನುವುದು ಅಷ್ಟಗಿ ಅವರ ಅಳಲು.ಕ್ರೀಡೆಯಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದಾಗ ಅದರಲ್ಲಿ ಪಾಲ್ಗೊಂಡಿದ್ದವರ ಫೋಟೊಗಳ ಮೆರವಣಿಗೆಗಷ್ಟೆ ನಮ್ಮವರು ಸೀಮಿತವಾಗಿದ್ದಾರೆ ಎಂಬ ಕ್ರೀಡಾಪಟುವೊಬ್ಬರ ವಿಷಾದದ ನುಡಿ ಜಿಲ್ಲೆಯ ಕ್ರೀಡಾಲೋಕದ ಚಿತ್ರಣವನ್ನು ಅನಾವರಣಗೊಳಿಸುವಂತಿದೆ.

ಖರ್ಚಾಗದ  ₹14  ಲಕ್ಷ!
2010ರಲ್ಲಿ ಯಾದಗಿರಿ ರಾಜ್ಯದ 30ನೇ ಜಿಲ್ಲೆಯಾದಾಗಿನಿಂದ ಜಿಲ್ಲಾ ಪಂಚಾಯಿತಿಯು ಪ್ರತಿವರ್ಷ ಕ್ರೀಡಾಚಟುವಟಿಕೆಗಳಿಗೆ ₹1 ಲಕ್ಷ ಅನುದಾನ ನೀಡುತ್ತಿದೆ. ಮಕ್ಕಳಿಗೆ ಆಟದ ಸಾಮಗ್ರಿ ಖರೀದಿಗೆ ಅದನ್ನು ಬಳಸಲಾಗಿದೆ ಎಂಬ ಸಿದ್ಧ ಉತ್ತರ ಇಲಾಖೆಯಿಂದ ಸಿಗುತ್ತದೆ. ವಾಸ್ತವದಲ್ಲಿ ಮಕ್ಕಳ ಹೆಸರಿನಲ್ಲಿ ಅದನ್ನು ಲೂಟಿ ಮಾಡಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ತುಕ್ಕು ಹಿಡಿಯುತ್ತಿರುವ ಸಾಮಗ್ರಿಗಳು ಸಾಕ್ಷ್ಯ ಒದಗಿಸುತ್ತವೆ. ಜಿಲ್ಲಾ ಪಂಚಾಯಿತಿಯಿಂದ ಇದೇ ಮೊದಲ ಬಾರಿಗೆ ₹14 ಲಕ್ಷ ಅನುದಾನ ಬಿಡುಗಡೆಯಾಗಿದೆ. ಆದರೆ, ಅದರಲ್ಲಿ ಇದುವರೆಗೂ ಒಂದು ನಯಾಪೈಸೆಯೂ ಖರ್ಚಾಗಿಲ್ಲ. ಈಗ ಈ ಹಣ ಸರ್ಕಾರಕ್ಕೆ ವಾಪಸ್‌ ಹೋಗುವ ಸಾಧ್ಯತೆ ನಿಚ್ಚಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.