ADVERTISEMENT

ಎತ್ತರದಿಂದ ಎತ್ತರಕ್ಕೆ...

ಇಂಡಿಯಾ ಓಪನ್‌ ಸೂಪರ್ ಸರಣಿ ಸಂಭ್ರಮ

ಮಾನಸ ಬಿ.ಆರ್‌
Published 2 ಏಪ್ರಿಲ್ 2017, 19:30 IST
Last Updated 2 ಏಪ್ರಿಲ್ 2017, 19:30 IST
ಎತ್ತರದಿಂದ ಎತ್ತರಕ್ಕೆ...
ಎತ್ತರದಿಂದ ಎತ್ತರಕ್ಕೆ...   
ಇಂಡಿಯಾ ಓಪನ್ ಸೂಪರ್ ಸರಣಿ ಟೂರ್ನಿ ಬ್ಯಾಡ್ಮಿಂಟನ್‌ ಭಾರತದ ಸ್ಪರ್ಧಿಗಳ ಪಾಲಿಗೆ ಅನನ್ಯ. ಒಂಬತ್ತು ವರ್ಷಗಳಿಂದ ನಡೆಯುತ್ತಿರುವ ಈ ಟೂರ್ನಿ ವರ್ಷದಿಂದ ವರ್ಷಕ್ಕೆ ಜಾಗತಿಕ ಮಹತ್ವ ಪಡೆಯುತ್ತಲೇ ಸಾಗುತ್ತಿದೆ.
 
2008ರಲ್ಲಿ ಈ ಟೂರ್ನಿ ಯೋನೆಕ್ಸ್‌ ಸನ್‌ರೈಸ್ ಇಂಡಿಯಾ ಓಪನ್ ಹೆಸರಿನಲ್ಲಿ ಪ್ರಾರಂಭವಾಯಿತು. ಉದ್ಘಾಟನಾ ಆವೃತ್ತಿ ಹೈದರಾಬಾದ್‌ನಲ್ಲಿ 2007ರಲ್ಲಿಯೇ ಆಯೋಜನೆಗೊಂಡಿತ್ತು. ಆದರೆ  2007ರಲ್ಲಿ  ಆಗಸ್ಟ್‌ 25ರಂದು ನಡೆದ ಹೈದರಾಬಾದ್‌ ಬಾಂಬ್‌ ದಾಳಿಯಿಂದಾಗಿ ಈ ಟೂರ್ನಿಯನ್ನು ಮುಂದೂಡಲಾಗಿತ್ತು.
 
2008ರಿಂದ ಮೂರು ವರ್ಷ ಸತತವಾಗಿ ಹೈದರಾಬಾದ್‌ನಲ್ಲಿಯೇ ಇಂಡಿಯಾ ಓಪನ್ ಗ್ರ್ಯಾನ್‌ ಪ್ರಿ ಗೋಲ್ಡ್ ಟೂರ್ನಿಯಾಗಿ ಆಯೋಜನೆಗೊಂಡಿತ್ತು. 2011ರಲ್ಲಿ ಈ ಟೂರ್ನಿಗೆ ವಿಶ್ವ ಬ್ಯಾಡ್ಮಿಂಟನ್ ಸಂಸ್ಥೆಯ ‘ಸೂಪರ್ ಸರಣಿ‘ ಮಾನ್ಯತೆ ಸಿಕ್ಕಿತು. ಬಳಿಕ ಇಲ್ಲಿಯವರೆಗೂ ಪ್ರತೀ ವರ್ಷ ನವದೆಹಲಿಯ ಸಿರಿ ಫೋರ್ಟ್‌ ಸ್ಪೋಟ್ಸ್ ಕಾಂಪ್ಲೆಕ್ಸ್‌ನಲ್ಲಿ ಟೂರ್ನಿ ನಡೆಯುತ್ತಿದೆ.
 
ಏನಿದು ಸೂಪರ್ ಸರಣಿ ಮಾನ್ಯತೆ
1934ರಲ್ಲಿ ಹುಟ್ಟು ಪಡೆದ ವಿಶ್ವ ಬ್ಯಾಡ್ಮಿಂಟನ್ ಸಂಸ್ಥೆ ಜಗತ್ತಿನಾದ್ಯಂತ ನಡೆಯುವ ಟೂರ್ನಿಗಳಲ್ಲಿ ರ್‍ಯಾಂಕಿಂಗ್ ಹಾಗೂ ಬಹುಮಾನ ಮೊತ್ತವನ್ನು ಆಧರಿಸಿ ತನ್ನದೇ ಆದ ಚೌಕಟ್ಟಿನೊಳಗೆ ಏಳು ವಿಭಾಗಗಳಲ್ಲಿ ಟೂರ್ನಿಗಳಿಗೆ ಮಾನ್ಯತೆ ನೀಡುತ್ತಿದೆ.
 
ಇದರಲ್ಲಿ ಮೊದಲ ಹಾಗೂ ಅಗ್ರಗಣ್ಯ ಸ್ಥಾನದ ಟೂರ್ನಿ ಎಂದರೆ ಸೂಪರ್ ಸೀರಿಸ್ ಪ್ರೀಮಿಯರ್ ಆಫ್‌ ಪ್ರೀಮಿಯರ್‌, ನಂತರದ ಸ್ಥಾನಗಳಲ್ಲಿ ಸೂಪರ್ ಸೀರಿಸ್ ಪ್ರೀಮಿಯರ್‌, ಸೂಪರ್ ಸೀರಿಸ್‌, ಗ್ರ್ಯಾನ್‌ ಪ್ರಿ ಗೋಲ್ಡ್‌, ಗ್ರ್ಯಾನ್‌ ಪ್ರಿ, ಇಂಟರ್‌ನ್ಯಾಷನಲ್‌ ಚಾಲೆಂಜ್‌, ಇಂಟರ್‌ನ್ಯಾಷನಲ್ ಸೀರಿಸ್ ಹಾಗೂ ಫ್ಯೂಚರ್‌ ಸೀರಿಸ್‌ ಟೂರ್ನಿಗಳಾಗಿ ಹೆಸರು ಪಡೆದುಕೊಂಡಿವೆ.
 
ಈ ವಿಭಾಗದ ಎಲ್ಲಾ ಟೂರ್ನಿಗಳಿಗೆ ಬಿಡಬ್ಲ್ಯುಎಫ್ ಕನಿಷ್ಠ ಬಹುಮಾನ ಮೊತ್ತವನ್ನು ನಿಗದಿಪಡಿಸಿದೆ. 2014ರಲ್ಲಿ ಬಹುಮಾನ ಮೊತ್ತವನ್ನು ಪರಿಷ್ಕೃತಗೊಳಿಸಲಾಯಿತು. ಇದರ ಪ್ರಕಾರ ಮಹಿಳಾ ಹಾಗೂ ಪುರುಷ ಸ್ಪರ್ಧಿಗಳಿಗೆ ಆಯಾ ವಿಭಾಗದಲ್ಲಿ ಏಕರೂಪದ ಬಹುಮಾನ ಮೊತ್ತ ಸಿಗಲಿದೆ.
 
ಇಂಡಿಯಾ ಓಪನ್‌ನಲ್ಲಿ ಭಾರತದ ಹೆಜ್ಜೆ: 2 ಕೋಟಿ ಬಹುಮಾನ ಮೊತ್ತದಿಂದಾಗಿ ಜಗತ್ತಿನ ಆಟಗಾರರನ್ನು ಸೆಳೆದಿರುವ ‘ಇಂಡಿಯಾ ಓಪನ್’ ಭಾರತದಲ್ಲಿ ಆಯೋಜನೆಗೊಳ್ಳುವ ಮಹತ್ವದ ಟೂರ್ನಿಗಳಲ್ಲಿ ಒಂದು. ಭಾರತದ ಆಟಗಾರರು ಇಲ್ಲಿ ತಮ್ಮದೇ ಆದ ಹೆಜ್ಜೆಗುರುತನ್ನು ಮೂಡಿಸಿದ್ದಾರೆ.
 
ಭಾರತದಲ್ಲಿ ನಡೆಯುವ  ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲು ಇಲ್ಲಿನ ಸ್ಪರ್ಧಿಗಳು 2010ರವರೆಗೆ ಕಾಯಬೇಕಾಯಿತು. ಸೈನಾ ನೆಹ್ವಾಲ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಮೊದಲ ಬಾರಿಗೆ ಇಲ್ಲಿ ಚಾಂಪಿಯನ್‌ ಪಟ್ಟವನ್ನು ಮುಡಿಗೇರಿಸಿಕೊಂಡರು.

ಇದೇ ವರ್ಷ ಮಿಶ್ರ ಡಬಲ್ಸ್‌ನಲ್ಲಿ ವಲ್ಯವೀಟಿಲ್ ದಿಜು ಹಾಗೂ ಜ್ವಾಲಾ ಗುಟ್ಟಾ ಪ್ರಶಸ್ತಿ ಎತ್ತಿಹಿಡಿದರು. 2015ರಲ್ಲಿ ಸಿಂಗಲ್ಸ್‌ನಲ್ಲಿ ಭಾರತಕ್ಕೆ ‘ಡಬಲ್‌’ ಸಂಭ್ರಮದ ವರ್ಷ. ಈ ವರ್ಷ ಇಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್ ಹಾಗೂ ಮಹಿಳೆಯರ ಸಿಂಗಲ್ಸ್‌ನಲ್ಲಿ ಸೈನಾ ಪ್ರಶಸ್ತಿ ಗೆದ್ದು ಬೀಗಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.