ADVERTISEMENT

ಏರಿಳಿತಗಳ ಹಾದಿಯಲ್ಲಿ...

ಪ್ರಮೋದ ಜಿ.ಕೆ
Published 29 ಅಕ್ಟೋಬರ್ 2017, 19:30 IST
Last Updated 29 ಅಕ್ಟೋಬರ್ 2017, 19:30 IST
ಏರಿಳಿತಗಳ ಹಾದಿಯಲ್ಲಿ...
ಏರಿಳಿತಗಳ ಹಾದಿಯಲ್ಲಿ...   

ಎರಡು ವರ್ಷ, ಆರು ಟ್ರೋಫಿಗಳು!

ಅಬ್ಬಾ ಎಷ್ಟು ದೊಡ್ಡ ಸಾಧನೆಯಲ್ಲವೇ? ಒಂದು ರಣಜಿ ಟ್ರೋಫಿ ಗೆಲ್ಲುವ ಸಲುವಾಗಿ 14 ವರ್ಷ ಕಾಯಬೇಕಾಯಿತು. ಪ್ರಶಸ್ತಿ ಜಯಿಸಿದ ಅದೃಷ್ಟವೋ ಏನು, ನಂತರ ಕರ್ನಾಟಕ ತಂಡ ಮುಟ್ಟಿದ್ದೆಲ್ಲಾ ಚಿನ್ನವೇ ಆಗಿ ಹೋಗಿತ್ತು.

2013–14ರ ದೇಶಿ ಋತುವಿನಲ್ಲಿ ರಣಜಿ ಟ್ರೋಫಿ ಗೆದ್ದ ಬಳಿಕ ಇರಾನಿ ಕಪ್‌ ಹಾಗೂ ವಿಜಯ ಹಜಾರೆ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟ ಹೀಗೆ ಒಂದಾದ ಮೇಲೊಂದು ಸಾಧನೆಗಳು ರಾಜ್ಯ ತಂಡದ ಪಾಲಾದವು. ಸತತ ಎರಡು ವರ್ಷ ಕರ್ನಾಟಕದ ಆಟಗಾರರು ಹೀರೊಗಳಾದರು.

ADVERTISEMENT

ರಾಜ್ಯ ತಂಡದ ಸುವರ್ಣ ದಿನಗಳ ಸಾಧನೆಯ ಹಿಂದೆ ಕರುಣ್‌ ನಾಯರ್‌, ಕೆ.ಎಲ್‌. ರಾಹುಲ್‌, ಶ್ರೇಯಸ್ ಗೋಪಾಲ್‌, ಮಯಂಕ ಅಗರವಾಲ್‌, ಆರ್‌. ಸಮರ್ಥ್‌ ಹೀಗೆ ಹಲವಾರು ಆಟಗಾರರ ಕಠಿಣ ಶ್ರಮ ಅಡಗಿದೆ. ಜೊತೆಗೆ ತಂಡದಲ್ಲಿದ್ದ ಹಿರಿಯ ಆಟಗಾರರ ಪಾಲು ದೊಡ್ಡದಿದೆ.

ರಾಜ್ಯ ತಂಡ 1998–99ರ ರಣಜಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ನಂತರ ಅನೇಕ ಆಟಗಾರರು ಬಂದು ಹೋದರು. ಆದರೆ ಪ್ರಶಸ್ತಿ ಜಯಿಸುವ ಆಸೆ ಮಾತ್ರ ಈಡೇರಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ತಂಡ ದೇಶಿ ಟೂರ್ನಿಯಲ್ಲಿ ಮತ್ತೆ ಬಲಿಷ್ಠ ತಂಡವಾಗಿ ಹೊರಹೊಮ್ಮುತ್ತಿದೆ. ಹೋದ ವಾರ 19 ವರ್ಷದ ಒಳಗಿನವರ ವಿನು ಮಂಕಡ್‌ ಟೂರ್ನಿಯಲ್ಲಿ ರಾಜ್ಯ ತಂಡ ದಕ್ಷಿಣ ವಲಯದ ಚಾಂಪಿಯನ್‌ ಆಗಿದೆ. 23 ವರ್ಷದ ಒಳಗಿನವರ ಸಿ.ಕೆ. ನಾಯ್ಡು ಟೂರ್ನಿಯಲ್ಲಿ ಹಿಂದಿನ ಐದು ವರ್ಷಗಳಲ್ಲಿ ಮೂರು ಬಾರಿ ಸೆಮಿಫೈನಲ್‌ ತಲುಪಿತ್ತು.

ಮತ್ತೆ ಶುರುವಾಗಿದೆ ಹೊಸ ಹೋರಾಟ
ಸಿ.ಕೆ. ನಾಯ್ಡು ಟೂರ್ನಿಯಲ್ಲಿ ರಾಜ್ಯ ತಂಡದವರ ಹೋರಾಟ ಮತ್ತೆ ಶುರುವಾಗಿದೆ. ಹೋದ ವರ್ಷ ಪ್ಲೇಟ್‌ ವಿಭಾಗದಲ್ಲಿ ಆಡಿದ್ದ ತಂಡ ಈ ವರ್ಷ ಎಲೀಟ್‌ಗೆ ಬಡ್ತಿ ಪಡೆದಿದೆ. ಈ ಬಾರಿಯ ಟೂರ್ನಿಯ ಪ್ಲೇಟ್‌ ವಿಭಾಗದಲ್ಲಿ 12 ಮತ್ತು ಎಲೀಟ್‌ ವಿಭಾಗದಲ್ಲಿ 15 ತಂಡಗಳು ಇವೆ. ಕರ್ನಾಟಕ ಎಲೀಟ್‌ನ ‘ಸಿ’ ಗುಂಪಿನಲ್ಲಿ ಸ್ಥಾನ ಹೊಂದಿದ್ದು, ಬರೋಡ, ಆಂಧ್ರ, ರೈಲ್ವೇಸ್‌ ಮತ್ತು ಬಂಗಾಳ ತಂಡಗಳೂ ಇದೇ ಗುಂಪಿನಲ್ಲಿವೆ.

ಹುಬ್ಬಳ್ಳಿಯಲ್ಲಿ ಮೊದಲ ಪಂದ್ಯ ಆಡಿದ ಕರ್ನಾಟಕ ತಂಡ ಆಂಧ್ರ ಎದುರು ಸೋತಿತ್ತು. ಉಳಿದ ಪಂದ್ಯಗಳನ್ನು ಬೆಂಗಳೂರು, ಶಿವಮೊಗ್ಗ ಮತ್ತು ಬೆಳಗಾವಿಯಲ್ಲಿ ಆಡಲಿದೆ. ಈಗಿನ ರಣಜಿ ತಂಡದಲ್ಲಿರುವ ಬಹುತೇಕ  ಆಟಗಾರರು 23 ವರ್ಷದ ಒಳಗಿನವರ ಟೂರ್ನಿಯಲ್ಲಿ ಮಿಂಚಿದವರೇ. ಈ ಟೂರ್ನಿ ಮೊದಲು 22 ವರ್ಷದ ಒಳಗಿನವರಿಗೆ ನಂತರ 25 ವರ್ಷದ ಒಳಗಿನವರಿಗೆ ಆಯೋಜಿಸಲಾಗುತ್ತಿತ್ತು. ಈಗ 23 ವರ್ಷದವರಿಗಾಗಿ ನಡೆಯುತ್ತಿದೆ.

ಕರ್ನಾಟಕ ತಂಡ ಎಲೀಟ್‌ ವಿಭಾಗದಲ್ಲಿದ್ದಾಗ ಮೂರು ಬಾರಿ ನಾಲ್ಕರ ಘಟ್ಟ ತಲುಪಿತ್ತು. ಆಗ ಕರುಣ್‌, ಸಮರ್ಥ್‌, ರಾಹುಲ್‌ ತಂಡದಲ್ಲಿದ್ದರು. ಈ ಆಟಗಾರರು ರಣಜಿ ತಂಡಕ್ಕೆ ಮರಳಿದ್ದರಿಂದ ಸಿ.ಕೆ. ನಾಯ್ಡು ಟೂರ್ನಿಯಲ್ಲಿ ಪ್ರಶಸ್ತಿಯ ಆಸೆ ಈಡೇರಿರಲಿಲ್ಲ. ಅಷ್ಟೇ ಅಲ್ಲ, ಇರುವ ಸ್ಥಾನ ಕೂಡ ಉಳಿಸಿಕೊಳ್ಳಲು ಆಗಲಿಲ್ಲ. ಆದರೆ ಸಿ.ಕೆ. ನಾಯ್ಡು ಟೂರ್ನಿಯಿಂದ ಅನೇಕ ಪ್ರತಿಭೆಗಳು ಹೊರಬಂದರು. ಇದರಿಂದ ರಾಜ್ಯ ತಂಡಕ್ಕೆ ದೇಶಿ ಕ್ರಿಕೆಟ್‌ನಲ್ಲಿ ಟ್ರೋಫಿಗಳ ಮಹಲ್‌ ನಿರ್ಮಿಸಲು ಸಾಧ್ಯವಾಯಿತು. ರಾಜ್ಯದ ‘ಬೆಂಚ್‌ ಶಕ್ತಿ’ ಬಲಗೊಳಿಸಲು ಈ ಟೂರ್ನಿ ವೇದಿಕೆಯಾಗಿದೆ.

ಪುಟಿದೇಳುವ ಸವಾಲು‌
ಎಲೀಟ್‌ನಲ್ಲಿ ನಾಕೌಟ್‌ ಹಂತದವರೆಗೆ ತಲುಪಿದ್ದ ಕರ್ನಾಟಕ ತಂಡ ಎರಡು ವರ್ಷಗಳ ಹಿಂದೆ ಪ್ಲೇಟ್‌ ಡಿವಿಷನ್‌ಗೆ ಹಿಂಬಡ್ತಿ ಪಡೆದಿತ್ತು. ಆಗ ಹೊಸ ಆಟಗಾರರೇ ಸಿ.ಕೆ. ನಾಯ್ಡು ಟೂರ್ನಿಯಲ್ಲಿ ಆಡಿದ್ದರು.

ಈಗ ರಣಜಿ ಮತ್ತು ಸಿ.ಕೆ. ನಾಯ್ಡು ಎರಡೂ ಟೂರ್ನಿಗಳು ಒಟ್ಟಿಗೆ ನಡೆಯುತ್ತಿವೆ. ಸೀನಿಯರ್ ತಂಡದಲ್ಲಿ ಆಡಿರುವ ಅಭಿಷೇಕ್ ರೆಡ್ಡಿ, ಡಿ. ನಿಶ್ಚಲ್ 23 ವರ್ಷದ ಒಳಗಿನವರ ತಂಡಕ್ಕೆ ಮರಳಿದ್ದಾರೆ. ಆದ್ದರಿಂದ ಈ ಬಾರಿ ಜೂನಿಯರ್ ತಂಡದ ಮೇಲೆ ಸಾಕಷ್ಟು ನಿರೀಕ್ಷೆಯಿದೆ.

ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಭಿನವ್‌ ಮನೋಹರ, ಮಿಲಿಂದ ರಮೇಶ, ಕೆ.ಎಲ್‌. ಶ್ರೀಜಿತ್, ಅಧೋಕ್ಷ, ವೈಶಾಖ ವಿಜಯ ಕುಮಾರ್‌, ಆದಿತ್ಯ ಸೋಮಣ್ಣ, ಪ್ರತೀಕ್ ಜೈನ್‌, ಕೆಪಿಎಲ್‌ನಿಂದ ಬೆಳಕಿಗೆ ಬಂದ ಆನಂದ ದೊಡ್ಡಮನಿ ಹೀಗೆ ಅನೇಕ ಆಟಗಾರರು ತಂಡದಲ್ಲಿದ್ದರು.

ತಂಡದ ನೇತೃತ್ವ ವಹಿಸಿಕೊಂಡಿರುವ ನಿಶ್ಚಲ್‌ ‘ಯಾವ ವಯೋಮಾನದವರ ಟೂರ್ನಿ ಆದರೂ ಚಿಂತೆಯಲ್ಲ. ಕರ್ನಾಟಕ ತಂಡಕ್ಕಾಗಿ ಆಡಬೇಕು ಎನ್ನುವ ಆಸೆ ನನ್ನದು. ಇಲ್ಲಿ ಉತ್ತಮ ಪ್ರದರ್ಶನ ನೀಡಿದರೆ ರಣಜಿ ತಂಡದಲ್ಲಿ ಸ್ಥಾನ ಲಭಿಸುತ್ತದೆ. ಕ್ರಿಕೆಟ್‌ ಬದುಕು ಗಟ್ಟಿಯಾಗಿ ರೂಪುಗೊಳ್ಳಲು ಸಿ.ಕೆ. ನಾಯ್ಡು ಟೂರ್ನಿ ವೇದಿಕೆಯಾಗಿದೆ’ ಎಂದರು.

ಮೊದಲು 16 ವರ್ಷದ ಒಳಗಿನವರ ತಂಡಕ್ಕೆ ಕೋಚ್‌ ಆಗಿದ್ದ ಸುಧೀಂದ್ರ ಶಿಂಧೆ ಮತ್ತು ಎಸ್‌.ಎನ್‌. ಅಮಿತ್ ಸಿ.ಕೆ. ನಾಯ್ಡು ಟೂರ್ನಿಗೆ ರಾಜ್ಯ ತಂಡದ ಕೋಚ್‌ ಆಗಿದ್ದಾರೆ. ಹೊಸ ಕೋಚ್‌ಗಳ ಮಾರ್ಗದರ್ಶನದಲ್ಲಿ ತರಬೇತುಗೊಂಡಿರುವ ತಂಡ ಹೊಸ ಸಾಧನೆಯ ನಿರೀಕ್ಷೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.