ADVERTISEMENT

ಐಎಸ್‌ಎಲ್‌ ಸಂಚಲನ...

ಜಿ.ಶಿವಕುಮಾರ
Published 16 ಅಕ್ಟೋಬರ್ 2016, 19:30 IST
Last Updated 16 ಅಕ್ಟೋಬರ್ 2016, 19:30 IST
ಹೋದ  ವಾರ ಚೆನ್ನೈನ ಜವಾಹರಲಾಲ್‌ ನೆಹರೂ ಅಥ್ಲೆಟಿಕ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಐಎಸ್‌ಎಲ್‌ ಪಂದ್ಯದಲ್ಲಿ ಎಫ್‌ಸಿ ಗೋವಾ ಮತ್ತು ಚೆನ್ನೈಯಿನ್‌ ಎಫ್‌ಸಿ ಆಟಗಾರರು ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪೈಪೋಟಿ ನಡೆಸಿದ್ದ ಕ್ಷಣ
ಹೋದ ವಾರ ಚೆನ್ನೈನ ಜವಾಹರಲಾಲ್‌ ನೆಹರೂ ಅಥ್ಲೆಟಿಕ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಐಎಸ್‌ಎಲ್‌ ಪಂದ್ಯದಲ್ಲಿ ಎಫ್‌ಸಿ ಗೋವಾ ಮತ್ತು ಚೆನ್ನೈಯಿನ್‌ ಎಫ್‌ಸಿ ಆಟಗಾರರು ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪೈಪೋಟಿ ನಡೆಸಿದ್ದ ಕ್ಷಣ   

ಐಪಿಎಲ್‌ ಯಶಸ್ಸಿನ ಬಳಿಕ ಭಾರತದಲ್ಲಿ ಲೀಗ್‌ಗಳ ಪರ್ವವೇ ಶುರುವಾಗಿದೆ. ಕಬಡ್ಡಿ, ಕುಸ್ತಿ, ಬ್ಯಾಡ್ಮಿಂಟನ್‌, ಟೆನಿಸ್‌ ಹೀಗೆ ಹತ್ತು ಹಲವು ಲೀಗ್‌ಗಳು ಈಗಾಗಲೇ ಜನರ ಮನ ಮುಟ್ಟಿವೆ.

ಭಾರತದ ಫುಟ್‌ಬಾಲ್‌ ಲೋಕದಲ್ಲಿ ಹೊಸ ಸಂಚಲನ ಹುಟ್ಟುಹಾಕಿರುವ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಕೂಡ ಇವುಗಳಿಗೆ ಹೊರತಾಗಿಲ್ಲ. ದೇಶದ ಮೂಲೆ ಮೂಲೆಗೂ ಫುಟ್‌ಬಾಲ್‌ ಕ್ರೀಡೆಯ ಬೇರುಗಳನ್ನು ವಿಸ್ತರಿಸುವ ಗುರಿ ಯೊಂದಿಗೆ 2013ರ ಅಕ್ಟೋಬರ್‌ನಲ್ಲಿ ಹುಟ್ಟುಪಡೆದ ಲೀಗ್‌  ಫುಟ್‌ಬಾಲ್‌ ರಂಗದಲ್ಲಿ ಹೊಸ ಅಲೆಗೆ ಮುನ್ನುಡಿ ಬರೆದಿದೆ.

ಪ್ರತಿ ಪಂದ್ಯ ನಡೆದಾಗಲೂ ಕಾಲ್ಚೆಂಡಿನಾಟದ ಸೊಬಗನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಜನ ಕ್ರೀಡಾಂಗಣ ಗಳತ್ತ ಮುಖ ಮಾಡಿರುವುದು ಲೀಗ್‌ನ ಯಶಸ್ಸಿಗೆ ನಿದರ್ಶನವಾಗಿದೆ. ಪ್ರತಿ ವರ್ಷ ಮೂರು ತಿಂಗಳ ಕಾಲ (ಅಕ್ಟೋಬರ್‌ನಿಂದ ಡಿಸೆಂಬರ್‌) ನಡೆಯುವ ಲೀಗ್‌ ಅಭಿಮಾನಿಗಳನ್ನು ಮನ ರಂಜನೆಯ ಹೊಳೆಯಲ್ಲಿ ಮಿಂದೇಳುವಂತೆ ಮಾಡುತ್ತಿದೆ. 

ದೇಶ, ವಿದೇಶಗಳ ಪ್ರತಿಭಾನ್ವಿತ ಆಟಗಾರರು ತಮ್ಮ ಕಾಲ್ಚಳಕದ ಮೂಲಕ ಫುಟ್‌ಬಾಲ್‌ ಪ್ರಿಯರನ್ನು  ರಂಜಿಸುತ್ತಿದ್ದಾರೆ. ಐಎಸ್‌ಎಲ್‌, ಜಾಗತಿಕ ಮಟ್ಟದಲ್ಲೂ  ತನ್ನ ಛಾಪು ಒತ್ತಿದ್ದು ವೀಕ್ಷಕರ ಸಂಖ್ಯೆಯ ಸರಾಸರಿಯಲ್ಲಿ ಇಟಲಿಯ ಸೀರಿಸ್‌ ‘ಎ’ ಟೂರ್ನಿಯನ್ನು ಹಿಂದಿಕ್ಕಿದೆ. ಈ ಮೂಲಕ ಜರ್ಮನಿಯ ಬಂಡೆಸ್‌ಲಿಗಾ, ಬಾರ್ಕಾ ಪ್ರೀಮಿಯರ್‌ ಲೀಗ್‌ ಮತ್ತು ಸ್ಪೇನ್‌ನ ಲಾ ಲಿಗಾ  ನಂತರ ಹೆಚ್ಚು ಪ್ರೇಕ್ಷಕರನ್ನು ಸೆಳೆದ ವಿಶ್ವದ ಪ್ರತಿಷ್ಠಿತ ಲೀಗ್‌ ಎಂಬ ಶ್ರೇಯ ತನ್ನದಾಗಿಸಿಕೊಂಡಿದೆ.

ದಿಗ್ಗಜರ ಪ್ರತಿಷ್ಠೆಯ ಕಣ
ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಛಾಪು ಒತ್ತಿರುವ ಹಲವು ದಿಗ್ಗಜರ ಪೈಪೋಟಿಗೆ ಐಎಸ್‌ಎಲ್‌ ವೇದಿಕೆ ಕಲ್ಪಿಸಿದೆ. ಇಟಲಿಯ ಮಾರ್ಕೊ ಮಟೆರಾಜಿ,  ಜಿಯಾನ್‌ಲುಕಾ ಜಂಬ್ರೊಟಾ, ಪೋರ್ಚುಗಲ್‌ನ ನೆಲೊ ವಿಂಗಾಡ, ಸ್ಪೇನ್‌ನ ಜೋಸ್‌ ಫ್ರಾನ್ಸಿಸ್ಕೊ ಮೊಲಿನಾ, ಬ್ರೆಜಿಲ್‌ನ ಜಿಕೊ, ಅಲೆಕ್ಸಾಂಡ್ರೆ ಹೆನ್ರಿಕ್‌ ಗುಯಿಮರೆಸ್‌, ಸ್ಪೇನ್‌ನ ಆ್ಯಂಟೊನಿಯೊ ಲೊಪೆಜ್‌ ಹಬಾಸ್‌, ಇಂಗ್ಲೆಂಡ್‌ನ ಸ್ಟೀಫನ್‌ ಜೇಮ್ಸ್‌ ಕೊಪ್ಪೆಲ್‌ ಅವರಂತಹ ಘಟಾನುಘಟಿಗಳು ಲೀಗ್‌ನಲ್ಲಿ ಆಡುತ್ತಿರುವ ವಿವಿಧ ತಂಡಗಳ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನಿಕೊಲಸ್ಕ್‌ ಅನೆಲ್ಕಾ, ಡಿಯಾಗೊ ಫ್ಲೋರನ್‌, ಸೋನಿ ನೋರ್ಡೆ, ಲಿಯೊ ಕೋಸ್ಟಾ, ಹನ್ಸ್‌ ಮುಲ್ಡರ್‌, ಬರ್ನಾರ್ಡ್‌ ಮೆಂಡಿ, ಜಾನ್‌ ಆರ್ನೆ ರೀಸೆ, ಮ್ಯಾನುಯೆಲ್‌ ಬ್ಲಾಸಿ, ರೀನಾಲ್ಡೊ ಹೀಗೆ ನಾನಾ ದೇಶಗಳ ಪ್ರತಿಭಾನ್ವಿತ ಆಟಗಾರರು ಭಾರತದ  ನೆಲದಲ್ಲಿ ಮಿಂಚು ಹರಿಸುತ್ತಿದ್ದಾರೆ. ಸುನಿಲ್‌ ಚೆಟ್ರಿ, ರಾಬಿನ್‌ ಸಿಂಗ್‌, ಅಮರಿಂದರ್‌, ಸೆನಾ ರಾಲ್ಟೆ ಸೇರಿದಂತೆ ಹಲವರು ತವರಿನ ಅಭಿಮಾನಿಗಳ ಮುಂದೆ ಮೋಡಿ ಮಾಡುತ್ತಿದ್ದಾರೆ.


ತಾರಾ ಮೆರುಗು
ಜನಪ್ರಿಯ ಕ್ರಿಕೆಟಿಗರು, ಬಾಲಿವುಡ್‌ ನಟರು ಹಾಗೂ ಪ್ರಸಿದ್ಧ ಉದ್ಯಮಿಗಳು ವಿವಿಧ ತಂಡಗಳ ಮಾಲೀಕತ್ವ ಹೊಂದಿದ್ದಾರೆ. ಹೀಗಾಗಿ ಲೀಗ್‌ ತಾರಾ ಮೆರುಗು ಪಡೆದುಕೊಂಡಿದೆ.

ಬಾಲಿವುಡ್‌ ನಟರಾದ ರಣಬೀರ್‌ ಕಪೂರ್‌ (ಮುಂಬೈ), ಹೃತಿಕ್‌ ರೋಷನ್‌ (ಪುಣೆ), ಜಾನ್‌ ಅಬ್ರಾಹಂ (ನಾರ್ತ್‌ ಈಸ್ಟ್‌), ಅಭಿಷೇಕ್‌ ಬಚ್ಚನ್‌ (ಚೆನ್ನೈಯಿನ್‌), ತೆಲುಗು ನಟ ಚಿರಂಜೀವಿ (ಕೇರಳ), ಕ್ರಿಕೆಟಿಗರಾದ ಸೌರವ್‌ ಗಂಗೂಲಿ (ಅಟ್ಲೆಟಿಕೊ), ಮಹೇಂದ್ರ ಸಿಂಗ್‌ ದೋನಿ (ಚೆನ್ನೈಯಿನ್‌), ವಿರಾಟ್‌ ಕೊಹ್ಲಿ (ಎಫ್‌ಸಿ ಗೋವಾ) ಮತ್ತು  ಸಚಿನ್‌ ತೆಂಡೂಲ್ಕರ್‌ (ಕೇರಳ) ಅವರು ಪಂದ್ಯದ ವೇಳೆ ಮೈದಾನಕ್ಕೆ ಬಂದು ಅಭಿಮಾನಿಗಳ ಸಂಭ್ರಮಕ್ಕೆ ಕಿಚ್ಚು ಹೊತ್ತಿಸುತ್ತಿದ್ದಾರೆ.


ಹೆಚ್ಚುತ್ತಿರುವ ಜನಪ್ರಿಯತೆ
ಐಎಸ್‌ಎಲ್‌ ಟೂರ್ನಿ  ಕನ್ನಡ, ಇಂಗ್ಲಿಷ್‌, ಹಿಂದಿ, ಬಂಗಾಳಿ, ಮಲೆಯಾಳಂ ಭಾಷೆಯ ಎಂಟು ವಾಹಿನಿಗಳಲ್ಲಿ ಪ್ರಸಾರವಾಗು ತ್ತಿದೆ. ಈ ಮೂಲಕ ಅಪಾರ ಸಂಖ್ಯೆಯ ಟಿ.ವಿ. ವೀಕ್ಷಕರನ್ನೂ ಸೆಳೆದಿದೆ. ಚೊಚ್ಚಲ ಆವೃತ್ತಿಯ (2014) ಪಂದ್ಯಗಳನ್ನು 42 ಕೋಟಿ 90 ಲಕ್ಷ  ಮಂದಿ ಕಿರು ಪರದೆಯಲ್ಲಿ ವೀಕ್ಷಿಸಿರುವುದು ಭಾರತದ ಮಟ್ಟಿಗೆ ದಾಖಲೆ.

ಮೊದಲ ದಿನ 7 ಕೋಟಿ 40 ಲಕ್ಷ ಮಂದಿ ನೋಡಿದ್ದರೆ, ಮೊದಲ ವಾರ ಟಿ.ವಿಯಲ್ಲಿ ಪಂದ್ಯಗಳನ್ನು ವೀಕ್ಷಿಸಿದವರ ಸಂಖ್ಯೆ 17 ಕೋಟಿ. ಇದು ಮತ್ತೊಂದು ಮೈಲಿಗಲ್ಲು. ಏಕೆಂದರೆ ಭಾರತದಲ್ಲಿ  ಫಿಫಾ ವಿಶ್ವಕಪ್‌ ಮತ್ತು ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಅನ್ನೂ ಅದುವರೆಗೂ ಅಷ್ಟು ಸಂಖ್ಯೆಯಲ್ಲಿ ಜನ ನೋಡಿರಲಿಲ್ಲ. ಎರಡನೇ ಆವೃತ್ತಿಯಲ್ಲೂ ಟಿ. ವಿ ವೀಕ್ಷಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಈ ಬಾರಿಯೂ ಲೀಗ್‌ಗೆ ಹೆಚ್ಚಿನ ಜನಮನ್ನಣೆ ಸಿಗುತ್ತಿದೆ. ಹೀಗಾಗಿ ಪ್ರಾಯೋಜಕರ ಸಂಖ್ಯೆಯೂ ಏರಿದೆ.

ಕರ್ನಾಟಕದಲ್ಲಿ ಸಿಗದ ಮನ್ನಣೆ
ಕರ್ನಾಟಕದಲ್ಲಿ ಫುಟ್‌ಬಾಲ್‌ ಅನ್ನು ಪ್ರೀತಿಸುವವರು ಸಾಕಷ್ಟು ಮಂದಿ ಇದ್ದಾರೆ. ಬೆಂಗಳೂರು ಎಫ್‌ಸಿ ತಂಡ ಐ ಲೀಗ್‌, ಫೆಡರೇಷನ್‌ ಕಪ್‌ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿದೆ. ಜೊತೆಗೆ ಎಎಫ್‌ಸಿ ಕಪ್‌ನಲ್ಲೂ ಸೆಮಿಫೈನಲ್‌ ಪ್ರವೇಶಿಸಿದ ಸಾಧನೆಯನ್ನೂ ಮಾಡಿದೆ. ಹೀಗಿದ್ದರೂ  ಐಎಸ್‌ಎಲ್‌ನಲ್ಲಿ ಬೆಂಗಳೂರಿನ ತಂಡಕ್ಕೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಲೀಗ್‌ಗೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮಾಧ್ಯಮಗಳಲ್ಲೂ ಹೆಚ್ಚಿನ ಪ್ರಚಾರ ಸಿಗುತ್ತಿಲ್ಲ ಎಂಬುದು ಗಮನಿಸಬೇಕಾದ ಅಂಶ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.