ADVERTISEMENT

ಒಲಿಂಪಿಕ್ಸ್‌ ಕನಸಿನಲ್ಲಿ ದ್ಯುತಿ

ಜಿ.ಶಿವಕುಮಾರ
Published 22 ಮೇ 2016, 19:30 IST
Last Updated 22 ಮೇ 2016, 19:30 IST
ಒಲಿಂಪಿಕ್ಸ್‌ ಕನಸಿನಲ್ಲಿ ದ್ಯುತಿ
ಒಲಿಂಪಿಕ್ಸ್‌ ಕನಸಿನಲ್ಲಿ ದ್ಯುತಿ   

‘ನನ್ನ ಮೇಲೆ ಐಎಎಎಫ್‌ ನಿಷೇಧ ಹೇರಿದ್ದಾಗ  ಎಲ್ಲೇ ಹೋದರೂ ಜನ  ಅನುಮಾನದಿಂದ ನೋಡುತ್ತಿದ್ದರು. ತರಬೇತಿ ಕೇಂದ್ರಗಳಲ್ಲಿ  ಮಹಿಳಾ ಅಥ್ಲೀಟ್‌ಗಳು ನನ್ನೊಂದಿಗೆ  ತಂಗಲು ಹಿಂದೇಟು ಹಾಕುತ್ತಿದ್ದರು. ಆಗ  ಏಕಾಂಗಿಯಾಗಿದ್ದೆ.  ಹೀಗಿದ್ದರೂ  ಛಲ ಕಳೆದುಕೊಳ್ಳಲಿಲ್ಲ.  ವಿವಾದದಿಂದ  ಹೊರ ಬಂದು ಮತ್ತೆ ಟ್ರ್ಯಾಕ್‌ನಲ್ಲಿ ಮಿಂಚಬೇಕು ಎಂದು ದೃಢವಾದ ನಿರ್ಧಾರ ಕೈಗೊಂಡೆ’...

ಕ್ರೀಡಾ ನ್ಯಾಯಾಲಯ  ಹೋದ ವರ್ಷ ತಮ್ಮ ಮೇಲಿನ ನಿಷೇಧ ತೆರವು ಗೊಳಿಸಿದ ಬಳಿಕ  ಅಥ್ಲೀಟ್‌ ದ್ಯುತಿ ಚಾಂದ್‌ ಹೇಳಿದ್ದ ಮಾತುಗಳಿವು. ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದಿದ್ದ ಒಡಿಶಾದ ಅಥ್ಲೀಟ್‌ ದ್ಯುತಿ  ಅವರ ದೇಹದಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದ ಪುರುಷರ ಹಾರ್ಮೋನ್‌ಗಳು  ಪತ್ತೆಯಾಗಿದ್ದವು. ಹೀಗಾಗಿ ಐಎಎಎಫ್‌ ದ್ಯುತಿಗೆ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಕ್ರೀಡಾ ನ್ಯಾಯಾಲಯದ ಮೆಟ್ಟಿಲೇರಿದ್ದ ದ್ಯುತಿ ಆರೋಪಮುಕ್ತರಾಗಿದ್ದರು.

ಬದುಕಿನ ಬಹುದೊಡ್ಡ ಪರೀಕ್ಷೆಯನ್ನು  ಗೆದ್ದ  ಬಳಿಕ ದ್ಯುತಿ ಕೈ ಕಟ್ಟಿ ಕೂರಲಿಲ್ಲ. ಹೋದ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ 100 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ  ಚಿನ್ನ ಗೆದ್ದು ಮತ್ತೆ ಅಥ್ಲೆಟಿಕ್‌ ಲೋಕದ ಗಮನ ಸೆಳೆದರು. 

ಈ ವರ್ಷದ ಫೆಬ್ರುವರಿಯಲ್ಲಿ ದೋಹಾದಲ್ಲಿ ನಡೆದಿದ್ದ ಏಳನೇ ಏಷ್ಯನ್‌ ಒಳಾಂಗಣ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲೂ ದ್ಯುತಿ  ಮಿಂಚು ಹರಿಸಿ ದರು. 60 ಮೀಟರ್ಸ್‌ ಡ್ಯಾಶ್‌ ಹೀಟ್ಸ್‌ನಲ್ಲಿ ಭಾಗವಹಿ ಸಿದ್ದ  ಭಾರತದ ಓಟಗಾರ್ತಿ 7.28 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ದಾಖಲೆಯೊಂದಿಗೆ ಫೈನಲ್‌ಗೆ ಅರ್ಹತೆ ಗಳಿಸಿದ್ದರಲ್ಲದೆ ಕಂಚು ಗೆದ್ದು  ಟೀಕಾಕಾರರ ಬಾಯಿ ಮುಚ್ಚಿಸಿದ್ದರು.

ರಿಯೊ ಕನಸಿನಲ್ಲಿ...
ಏಷ್ಯನ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ ಬಳಿಕ  ದ್ಯುತಿ ತಮ್ಮ ಪ್ರದರ್ಶನ ಮಟ್ಟವನ್ನು ಇನ್ನಷ್ಟು ಉತ್ತಮ ಪಡಿಸಿಕೊಂಡರು. ಕಠಿಣ ಪರಿಶ್ರಮ ಮತ್ತು ಕ್ರೀಡೆಯ ಬಗೆಗೆ ಹೊಂದಿರುವ ಅಪಾರ ಬದ್ಧತೆ ಅವರನ್ನು ಇನ್ನಷ್ಟು ಎತ್ತರಕ್ಕೆ ತಂದು ನಿಲ್ಲಿಸಿತು. 

ಈ ವರ್ಷದ ಏಪ್ರಿಲ್‌ನಲ್ಲಿ ನವದೆಹಲಿಯಲ್ಲಿ ನಡೆದಿದ್ದ ರಾಷ್ಟ್ರೀಯ ಫೆಡರೇಷನ್‌ ಕಪ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ದ್ಯುತಿ ದಾಖಲೆಯೊಂದಿಗೆ  ಚಿನ್ನ ಗೆದ್ದಿದ್ದು ಇದಕ್ಕೆ ಸಾಕ್ಷಿ.
ಚಾಂಪಿಯನ್‌ಷಿಪ್‌ನ ಮೊದಲ ದಿನ ನಡೆದ 100 ಮೀಟರ್ಸ್‌ ಓಟದಲ್ಲಿ ಒಡಿಶಾದ ಅಥ್ಲೀಟ್‌ ಚಿನ್ನ ಗೆಲ್ಲಬಹುದೆಂದು ಅಂದಾಜಿಸಲಾಗಿತ್ತು. ಈ ನಿರೀಕ್ಷೆಯನ್ನು ಅವರು ಹುಸಿ ಮಾಡಲಿಲ್ಲ.

11.33 ಸೆಕೆಂಡುಗಳಲ್ಲಿ ಗೆಲುವಿನ ರೇಖೆ ಮುಟ್ಟಿದ್ದ ದ್ಯುತಿ, ರಚಿತಾ ಮಿಸ್ತ್ರಿ ಅವರ ಹೆಸರಿನಲ್ಲಿದ್ದ 16 ವರ್ಷದ ದಾಖಲೆಯನ್ನು ಅಳಿಸಿ ಹಾಕಿದ್ದರು. ಹೀಗಿದ್ದರೂ ದ್ಯುತಿ ಅವರ ರಿಯೊ ಒಲಿಂಪಿಕ್ಸ್‌ ಅರ್ಹತೆಯ ಕನಸು ನನಸಾಗಲಿಲ್ಲ. ಅವರು ಗುರಿ ಮುಟ್ಟಲು ಒಲಿಂಪಿಕ್ಸ್‌ ಅರ್ಹತೆಗೆ ನಿಗದಿ ಮಾಡಿದ್ದ (11.32ಸೆ.) ಸಮಯಕ್ಕಿಂತಲೂ ಹೆಚ್ಚಿನ ಅವಧಿ ತೆಗೆದುಕೊಂಡಿದ್ದರು.

‘ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಬೇಕೆಂಬ ಕನಸಿತ್ತು. ಆದರೆ ಅದು ಕೈಗೂಡಲಿಲ್ಲ. ಆದರೆ ರಾಷ್ಟ್ರೀಯ ದಾಖಲೆ ನಿರ್ಮಿಸಿರುವುದಕ್ಕೆ ಹೆಮ್ಮೆಯಾ ಗಿದೆ. ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಇನ್ನೂ ಮೂರು ತಿಂಗಳ ಸಮಯವಿದೆ. ಈ ಅವಧಿಯಲ್ಲಿ ನಡೆಯುವ ಕೂಟಗಳಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿ ನನ್ನ ಜೀವನದ ಗುರಿಯನ್ನು ಈಡೇರಿಸಿಕೊಳ್ಳುತ್ತೇನೆ’ ಎಂದು ದ್ಯುತಿ ಆ ಕೂಟದ ಬಳಿಕ ವಿಶ್ವಾಸ ವ್ಯಕ್ತಪಡಿಸಿದ್ದರು.

ಮೇ ತಿಂಗಳ ಮೊದಲ ವಾರದಲ್ಲಿ ಪಟಿಯಾಲದಲ್ಲಿ ನಡೆದಿದ್ದ  ಇಂಡಿಯನ್‌ ಗ್ರ್ಯಾನ್‌ ಪ್ರಿ ಅಥ್ಲೆಟಿಕ್‌ ಕೂಟದ 100 ಮೀಟರ್ಸ್‌ ಸ್ಪರ್ಧೆಯಲ್ಲೂ  ಚಿನ್ನಕ್ಕೆ ಮುತ್ತಿಕ್ಕಿದ್ದ ದ್ಯುತಿ ಹೋದ ವಾರ ತೈವಾನ್‌ನಲ್ಲಿ ನಡೆದಿದ್ದ  ತೈವಾನ್‌ ಓಪನ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ 100 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಚಿನ್ನದ ಸಾಧನೆ ಮಾಡಿದ್ದರು.

ಹೀಗೆ ಕೂಟದಿಂದ ಕೂಟಕ್ಕೆ  ಸಾಮರ್ಥ್ಯ ವೃದ್ಧಿಸಿಕೊಂಡು ಪದಕದ ಬೇಟೆ ಮುಂದುವರಿಸಿಕೊಂಡು ಸಾಗುತ್ತಿರುವ  ದ್ಯುತಿ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ಮಹದಾಸೆ ಹೊತ್ತಿದ್ದು ಆ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದಾರೆ.

ದ್ಯುತಿ ಕುರಿತು...
1996ರ ಫೆಬ್ರುವರಿ 3 ರಂದು ಒಡಿಶಾದ ಜಾಜ್‌ಪುರ ಜಿಲ್ಲೆಯ ಗೋಪಾಲಪುರದಲ್ಲಿ ಜನಿಸಿದ ದ್ಯುತಿ, ಎಳವೆಯಿಂದಲೇ ಅಥ್ಲೆಟಿಕ್ಸ್‌ ಬಗೆಗೆ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದರು.
2012ರಲ್ಲಿ  18 ವರ್ಷದೊಳಗಿನವರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ 100 ಮೀಟರ್ಸ್‌ ಓಟದ ಸ್‍ಪರ್ಧೆಯಲ್ಲಿ ಭಾಗವಹಿಸಿ ಚಿನ್ನ ಗೆದ್ದ ಅವರು ಪುಣೆಯಲ್ಲಿ ನಡೆದಿದ್ದ  ಏಷ್ಯನ್‌ ಚಾಂಪಿಯನ್‌ಷಿಪ್‌ನ 200 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಕಂಚು ಜಯಿಸಿ ಗಮನ ಸೆಳೆದರು.

2013ರ  ವಿಶ್ವ ಯೂತ್‌ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದ ದ್ಯುತಿ ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್‌ ಎಂಬ ಶ್ರೇಯ ತಮ್ಮದಾಗಿಸಿಕೊಂಡಿದ್ದರು. ಅದೇ ವರ್ಷ ರಾಂಚಿಯಲ್ಲಿ ನಡೆದಿದ್ದ ರಾಷ್ಟ್ರೀಯ ಸೀನಿಯರ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ 100 ಮತ್ತು 200 ಮೀಟರ್ಸ್‌ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದು  ಮಿಂಚಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.