ADVERTISEMENT

ಕಾಳಿ ಕಣಿವೆಗೆ ಅಡಿಯಿಟ್ಟ ಕಯಾಕಿಂಗ್‌

ಪಿ.ಕೆ.ರವಿಕುಮಾರ
Published 11 ಜೂನ್ 2017, 19:30 IST
Last Updated 11 ಜೂನ್ 2017, 19:30 IST
ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನ ಅವೆಡಾ ಗ್ರಾಮದಲ್ಲಿ ಇತ್ತೀಚೆಗೆ ನಡೆದ ‘ಕಾಳಿ ಕಯಾಕಿಂಗ್‌’ ಉತ್ಸವದ ದೃಶ್ಯ                                          ಪ್ರಜಾವಾಣಿ ಚಿತ್ರಗಳು/ ತಾಜುದ್ದೀನ್‌ ಆಜಾದ್‌
ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನ ಅವೆಡಾ ಗ್ರಾಮದಲ್ಲಿ ಇತ್ತೀಚೆಗೆ ನಡೆದ ‘ಕಾಳಿ ಕಯಾಕಿಂಗ್‌’ ಉತ್ಸವದ ದೃಶ್ಯ ಪ್ರಜಾವಾಣಿ ಚಿತ್ರಗಳು/ ತಾಜುದ್ದೀನ್‌ ಆಜಾದ್‌   

ರಭಸದಿಂದ ಹರಿಯುವ ನದಿಯಲ್ಲಿ ಪುಟ್ಟ ದೋಣಿಯಾಕಾರದ ‘ಕಯಾಕ್’ಗಳಲ್ಲಿ ಕುಳಿತು ಹುಟ್ಟು ಹಾಕುತ್ತಾ ಸಾಗುವ ಕ್ರೀಡೆ ವಿದೇಶಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಇದೀಗ ರಾಜ್ಯದ ಕಾಳಿ ಕಣಿವೆಗೂ ಕಾಲಿಟ್ಟಿರುವುದು ಸಾಹಸ ಪ್ರಿಯರ ಸಂತಸವನ್ನು ಇಮ್ಮಡಿಗೊಳಿಸಿದೆ.

ಕೇರಳದ ಚೆಲಿಯಾರ್‌ ನದಿ, ಉತ್ತರ ಭಾರತದ  ಗಂಗಾ ನದಿಯಲ್ಲಿ ಕೆಲ ವರ್ಷಗಳಿಂದ ಕಯಾಕಿಂಗ್‌ ಉತ್ಸವ ನಡೆಯುತ್ತಿವೆ. ನ್ಯೂಜಿಲೆಂಡ್‌, ಇಂಗ್ಲೆಂಡ್‌ನ ವೃತ್ತಿಪರ ಕಯಾಕಿಂಗ್‌ ಸಾಹಸಿಗಳು ಇದರಲ್ಲಿ ಭಾಗಿಯಾಗಿ ತಮ್ಮ ಸಾಹಸ ಮತ್ತು ಕೌಶಲವನ್ನು ಪ್ರದರ್ಶಿಸುತ್ತಿದ್ದಾರೆ.

ಈ ಕ್ರೀಡೆಯನ್ನು ಕರ್ನಾಟಕ ರಾಜ್ಯಕ್ಕೂ ಪರಿಚಯಿಸುವ ಉದ್ದೇಶದಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಅಕಾಡೆಮಿಯು (ಜೆತ್ನಾ) ಪ್ರವಾಸೋದ್ಯಮ ಇಲಾಖೆ ಸಹಕಾರದಲ್ಲಿ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನ ಅವೆಡಾ ಗ್ರಾಮದ ಸಮೀಪ ಹರಿಯುವ ಕಾಳಿ ನದಿಯಲ್ಲಿ ಇತ್ತೀಚೆಗೆ ಮೂರು ದಿನಗಳ ‘ಕಾಳಿ ಕಯಾಕಿಂಗ್‌’ ಉತ್ಸವವನ್ನು ನಡೆಸಿತು. ಬೆಂಗಳೂರಿನ ಗುಡ್‌ವೇವ್‌ ಅಡ್ವೆಂಚರ್‌ ಸಂಸ್ಥೆಯ ತಾಂತ್ರಿಕ ನೆರವನ್ನು ಪಡೆಯಲಾಗಿತ್ತು.

ADVERTISEMENT

ಸ್ಲಲೊಮ್‌, ಬೋಟರ್‌ ಕ್ರಾಸ್‌, ರಿಲೇ ಹಾಗೂ ಮ್ಯಾರಥಾನ್‌ ಸ್ಪರ್ಧೆಗಳು ನೋಡುಗರನ್ನು ನಿಬ್ಬೆರಗುಗೊಳಿಸಿದವು. ಮ್ಯಾರಥಾನ್‌ ಹೊರತುಪಡಿಸಿ ಉಳಿದ ಸ್ಪರ್ಧೆಗಳು ಅಮೆಚೂರ್‌, ಇಂಟರ್‌ ಮೀಡಿಯಟ್‌ ಹಾಗೂ ವೃತ್ತಿಪರರಿಗೆ ಪ್ರತ್ಯೇಕವಾಗಿ ನಡೆಯಿತು.

ಕಾಳಿ ನದಿಯ ದಂಡೆ ಬಳಿ ನಿರ್ಮಿಸಿದ ಸುಮಾರು 10 ಅಡಿ ಎತ್ತರದ ಇಳಿಜಾರಿನಂತಿದ್ದ ರ‍್ಯಾಂಪ್‌ನಿಂದ ಸ್ಪರ್ಧಿಗಳು ಕಯಾಕ್‌ ಮೇಲೆ ಕುಳಿತು ನೀರಿಗೆ ಜಿಗಿದರು. ಬೋರ್ಗರೆಯುತ್ತಿದ್ದ ನೀರಿನಲ್ಲಿ ಹುಟ್ಟು ಹಾಕುತ್ತಾ ನಿಗದಿತ ಗುರಿಯನ್ನು ತಲುಪಿದರು. ರ‍್ಯಾಪಿಡ್‌ ದಾಟುವ ಸಂದರ್ಭದಲ್ಲಿ ಕಯಾಕ್‌ ಮಗುಚದಂತೆ ನಿಯಂತ್ರಿಸುತ್ತಿದ್ದ ಅವರ ಕಸರತ್ತು ನೆರೆದಿದ್ದವರ ಗುಂಡಿಗೆಯನ್ನು ಝಲ್ಲೆನಿಸಿತು.

ಅಡಿಡಾಸ್‌ ಸಿಕ್‌ಲೈನ್‌ ಎಕ್ಸ್‌ಟ್ರೀಮ್‌ ಕಯಾಕ್‌ ವರ್ಲ್ಡ್‌ ಚಾಂಪಿಯನ್‌ಶಿಪ್‌ನಲ್ಲಿ 2010ರಿಂದ ಸತತವಾಗಿ ಮೂರು ಬಾರಿ ಪ್ರಶಸ್ತಿ ಗೆದ್ದಿದ್ದ ನ್ಯೂಜಿಲೆಂಡ್‌ನ ಸ್ಯಾಮ್‌ ಸಟ್ಟನ್‌ ಕಾಳಿ ಕಯಾಕಿಂಗ್‌ ಸ್ಪರ್ಧೆಯಲ್ಲಿ ತಮ್ಮ ಚಾಕಚಕ್ಯತೆ ಪ್ರದರ್ಶಿಸಿ ಸ್ಲಲೊಮ್‌ ವಿಭಾಗದಲ್ಲಿ ಮೊದಲ ಸ್ಥಾನಗಳಿಸಿದರು. ಭಾರತದ ದಿನೇಶ್‌ ಪ್ರಸಾದ್‌ 4ನೇ ಸ್ಥಾನ ಹಾಗೂ ಅಮಿತ್‌ ಥಾಪಾ 10ನೇ ಸ್ಥಾನ ಪಡೆದರು.

ಕಾಳಿ ನದಿ ಪ್ರಶಸ್ತ ಸ್ಥಳ

ವೇಗವಾಗಿ ಹರಿಯುವ ನದಿಯ ನೀರಿನ ಮೇಲೆ ಕಯಾಕಿಂಗ್‌ ಸ್ಪರ್ಧೆಗಳು ನಡೆಯುತ್ತವೆ. ಸಣ್ಣ  ಸಣ್ಣ  ಬಂಡೆಗಲ್ಲುಗಳ ನಡುವೆ ರಭಸವಾಗಿ ಹರಿಯುವಾಗ ಬಿಳಿ ನೊರೆ ಮೇಲೇಳುತ್ತಿರುತ್ತದೆ. ಸ್ಪರ್ಧೆಯಲ್ಲಿ ಇಂಥ ಭಾಗವನ್ನು ರ‍್ಯಾಪಿಡ್‌ ಎಂದು ಕರೆಯಲಾಗುತ್ತದೆ. ಅವೆಡಾ ಗ್ರಾಮದ ಬೈಸನ್‌ ರೆಸಾರ್ಟ್‌ನಿಂದ ಮೌಳಂಗಿವರೆಗಿನ 10 ಕಿ.ಮೀ. ಉದ್ದದ ನದಿ ಭಾಗದಲ್ಲಿ ಇಂಥ ನಾಲ್ಕು ರ‍್ಯಾಪಿಡ್‌ಗಳಿದ್ದು,  ಸ್ಪರ್ಧಿಗಳಿಗೆ ದೊಡ್ಡ ಸವಾಲು ಒಡ್ಡಿತು.

ರಾಜ್ಯದಲ್ಲಿ ಹಲವು ನದಿಗಳು ಹರಿಯುತ್ತಿದ್ದರೂ ಕಯಾಕಿಂಗ್‌ ಚಟುವಟಿಕೆಗೆ ಕಾಳಿ ನದಿ ಮಾತ್ರ ಪ್ರಶಸ್ತವಾಗಿದೆ. ಪಶ್ಚಿಮಘಟ್ಟದಲ್ಲಿ  ಹರಿಯುವ ಈ ನದಿ ಪಾತ್ರದಲ್ಲಿ ತಿರುವುಗಳು ಸಿಕ್ಕಾಗ ಅದರ ವೇಗ ಹೆಚ್ಚುತ್ತದೆ. ಅಲ್ಲದೇ ಇದರ ಹರಿವಿನ ಮೇಲೆ ಸೂಪಾ ಅಣೆಕಟ್ಟು ನಿಯಂತ್ರಣ ಹೊಂದಿದೆ. ಯಾವಾಗ ಬೇಕಾದರೂ ನೀರಿನ ವೇಗವನ್ನು ಹೆಚ್ಚಿಸಬಹುದು ಹಾಗೂ ಇಳಿಸಬಹುದು. ಹೀಗಾಗಿ ಸರ್ವಋತುವಿನಲ್ಲೂ ಇಲ್ಲಿ ಕಯಾಕಿಂಗ್‌ ಚಟುವಟಿಕೆ ನಡೆಸಬಹುದು.

‘ನದಿಯಲ್ಲಿನ ರ‍್ಯಾಪಿಡ್‌ ಪ್ರದೇಶವನ್ನು ನೀರಿನ ವೇಗದ ಆಧಾರದಲ್ಲಿ 6 ಶ್ರೇಣಿಗಳನ್ನಾಗಿ ವಿಂಗಡಿಸಲಾಗಿದೆ. ಒಂದನೇ ಶ್ರೇಣಿಯಲ್ಲಿ ನೀರು ನಿಧಾನವಾಗಿ ಹರಿದರೆ, 6ನೇ ಶ್ರೇಣಿಯಲ್ಲಿ ಅತಿ ವೇಗವಾಗಿ ಹರಿಯುತ್ತದೆ. ವಿಶ್ವ ದರ್ಜೆಯ ಕೆಲವೇ ಸ್ಪರ್ಧಿಗಳು ಮಾತ್ರ ಈ ನೀರಿನಲ್ಲಿ ಕಯಾಕಿಂಗ್‌ ನಡೆಸುತ್ತಾರೆ. ಕಾಳಿ ನದಿಯ ರ‍್ಯಾಪಿಡ್ 4ನೇ ಶ್ರೇಣಿಯದ್ದಾಗಿದೆ’ ಎನ್ನುತ್ತಾರೆ ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಅಕಾಡೆಮಿಯ ಸಲಹೆಗಾರ ಕೀರ್ತಿ ಪಯಾಸ್‌.

ಪ್ರವಾಸೋದ್ಯಮಕ್ಕೆ ಪೂರಕ..
‘ರಾಜ್ಯದ ಪಶ್ಚಿಮಘಟ್ಟ ತಪ್ಪಲಿನಲ್ಲಿ ನದಿ ತೊರೆಗಳು, ಜಲಪಾತಗಳು ಮುಂತಾದ ಅಪರೂಪದ ತಾಣಗಳು ಇವೆ. ಇವೆಲ್ಲವೂ ಸಾಹಸ ಕ್ರೀಡೆಗಳಿಗೆ ವಿಪುಲ ಅವಕಾಶವನ್ನು ಒದಗಿಸಿಕೊಟ್ಟಿವೆ. ಅದರಂತೆ ಕಾಳಿ ನದಿಯ ಹರಿವಿನ ಕೆಲವು ಸ್ಥಳಗಳು ಕಯಾಕಿಂಗ್‌ಗೆ ಪ್ರಶಸ್ತವಾಗಿದೆ. ಪ್ರತಿವರ್ಷ ಇಲ್ಲಿ ಅಂತರರಾಷ್ಟ್ರೀಯ ಮಟ್ಟದ ಕಯಾಕ್‌ ಉತ್ಸವ ಆಯೋಜಿಸುವ ಗುರಿ ಇವೆ. ಈ ಚಟುವಟಿಕೆಯು ದೇಶ, ವಿದೇಶಿಗರನ್ನು ಹೆಚ್ಚು ಸೆಳೆಯುವುದರಿಂದ ಇದು ಪ್ರವಾಸೋದ್ಯಮಕ್ಕೂ ಪೂರಕವಾಗಿದೆ’ ಎನ್ನುತ್ತಾರೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಅನುಪಮ್‌ ಅಗರವಾಲ್‌.

‘ಕಯಾಕಿಂಗ್‌ ಚಟುವಟಿಕೆ ಕರ್ನಾಟಕ ರಾಜ್ಯದಲ್ಲಿ ಇನ್ನೂ ಅಂಬೆಗಾಲಿಡುತ್ತಿದೆ. ಈ ಕ್ರೀಡೆಯ ಬಗ್ಗೆ ರಾಜ್ಯದ ಜನರಿಗೆ ಹೆಚ್ಚಿನ ಅರಿವಿಲ್ಲ. ನ್ಯೂಜಿಲೆಂಡ್‌, ಇಂಗ್ಲೆಂಡ್‌, ನೇಪಾಳ ಸ್ಪರ್ಧಿಗಳಲ್ಲದೇ ಭಾರತದ ವಿವಿಧ ರಾಜ್ಯಗಳಿಂದ ಒಟ್ಟು 150 ಮಂದಿ ಈ ಉತ್ಸವದಲ್ಲಿ ಭಾಗಿಯಾಗಿದ್ದರು’ ಎನ್ನುತ್ತಾರೆ ಕ್ರೀಡಾ ಇಲಾಖೆಯ ಉಪನಿರ್ದೇಶಕ ಎಂ.ಸಿ.ರಮೇಶ್‌.

ಕಾಳಿ ನದಿಯ ಪರಿಸರವಿಭಿನ್ನ
‘ಕೇರಳದ ಮಲಬಾರ್‌ ಕಯಾಕಿಂಗ್‌ ಉತ್ಸವದಲ್ಲಿ ಕಳೆದ ಮೂರು ವರ್ಷಗಳಿಂದ ಪಾಲ್ಗೊಳ್ಳುತ್ತಿದ್ದು, ಕರ್ನಾಟಕಕ್ಕೆ ಇದೇ ಮೊದಲ ಬಾರಿಗೆ ಬಂದಿದ್ದೇನೆ. ಕಾಳಿ ನದಿಯ ಪರಿಸರ ಚೆನ್ನಾಗಿದ್ದು, ಕೇರಳಕ್ಕಿಂತ ಉತ್ತಮ ಅನುಭವ ನೀಡಿದೆ. ಅಲ್ಲಿಗಿಂತ ಇಲ್ಲಿ ದಟ್ಟ ಅರಣ್ಯವಿದೆ. ಕಯಾಕಿಂಗ್‌ನಲ್ಲಿ ತೊಡಗಿರುವವರ ಸಮುದಾಯ ಚಿಕ್ಕದಿದೆ’ ಎಂದು ಇಂಗ್ಲೆಂಡ್‌ನಿಂದ ಬಂದಿದ್ದ  ಕಾಲಮ್‌ ಸ್ಟ್ರಾಂಗ್‌ ಹೇಳಿದರು.

ಮೋಗ್ಲಿಯನ್ನು ನೆನಪಿಸಿತು..
‘ಕಾಳಿ ನದಿಯಲ್ಲಿ ಮ್ಯಾರಥಾನ್‌ ಮಾಡಿದ್ದು, ಜಂಗಲ್‌ ಬುಕ್‌ ಕತೆಗಳಲ್ಲಿ ಬರುವ ಮೋಗ್ಲಿಯನ್ನು ನೆನಪಿಸಿತು. ಎಲ್ಲ ಕಾಲಮಾನದಲ್ಲೂ ಇಲ್ಲಿ ನೀರು ಹರಿಯುವುದರಿಂದ ಕಯಾಕಿಂಗ್‌ ಚಟುವಟಿಕೆಗೆ ಯೋಗ್ಯವಾದ ತಾಣವಾಗಿದೆ. ಬಹುಮಾನದ ಮೊತ್ತಕ್ಕಿಂತ ಈ ಜಲ ಸಾಹಸ ಕ್ರೀಡೆಯಲ್ಲಿ ಭಾಗವಹಿಸುವುದೇ ಒಂದು ಅನನ್ಯ ಅನುಭವ’ ಎನ್ನುತ್ತಾರೆ ನ್ಯೂಜಿಲೆಂಡ್‌ನ ಸ್ಯಾಮ್‌ ಸಟ್ಟನ್‌.

ಏನಿದು ಕಯಾಕಿಂಗ್‌?

ಬೋರ್ಗರೆಯುವ ನದಿ ನೀರಿನಲ್ಲಿ ಸಣ್ಣ ದೋಣಿಯಾಕಾರದ ‘ಕಯಾಕ್‌’ ಮೇಲೆ ಹುಟ್ಟು ಹಾಕುತ್ತಾ ಸಾಗುವುದೇ ಕಯಾಕಿಂಗ್‌. ಈ ದೋಣಿಯಲ್ಲಿ ಒಬ್ಬರೇ ಕೂರಲು ಸಾಧ್ಯ. ಎರಡೂ ಕಡೆ ಹುಟ್ಟು (ಪ್ಯಾಡಲ್‌) ಹಾಕುತ್ತ ನೀರಿನ ಸೆಳವಿಗೆ ದೋಣಿ ಮಗುಚದಂತೆ ರಕ್ಷಿಸಿಕೊಳ್ಳುತ್ತಾ ಮುಂದೆ ಸಾಗಬೇಕು. ನದಿ ಮಾತ್ರವಲ್ಲದೇ ಸಮುದ್ರದ ಮೇಲೂ ಕಯಾಕಿಂಗ್‌ ಚಟುವಟಿಕೆ ನಡೆಯುತ್ತದೆ. ಆದರೆ ಎರಡೂ ಕಡೆಗಳಲ್ಲೂ ಬಳಸುವ ‘ಕಯಾಕ್‌’ ಸ್ವಲ್ಪ ಭಿನ್ನವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.