ADVERTISEMENT

ಕ್ರಿಕೆಟ್‌ ‘ಟ್ರ್ಯಾಕ್‌’ನಲ್ಲಿ ರೈಲ್ವೆ ಮಹಿಳೆಯರು

ವಿಕ್ರಂ ಕಾಂತಿಕೆರೆ
Published 8 ಜನವರಿ 2017, 19:30 IST
Last Updated 8 ಜನವರಿ 2017, 19:30 IST
ಭಾರತ ತಂಡದ ನಾಯಕಿ ಮಿಥಾಲಿ ರಾಜ್‌ ಚೆಂಡನ್ನು ಬಡಿದಟ್ಟಲು ಮುಂದಾದ ಕ್ಷಣ
ಭಾರತ ತಂಡದ ನಾಯಕಿ ಮಿಥಾಲಿ ರಾಜ್‌ ಚೆಂಡನ್ನು ಬಡಿದಟ್ಟಲು ಮುಂದಾದ ಕ್ಷಣ   

ಮುನ್ನೂರು ರನ್‌ಗಳ ಅಂತರದ ಜಯ...ಒಂಬತ್ತು ವಿಕೆಟ್‌ಗಳಿಂದ ಎದುರಾಳಿಗೆ ಸೋಲು...139 ರನ್‌ಗಳ ಜಯ...ಆರಂಭಿಕ ಆಟಗಾರರಿಬ್ಬರ ಶತಕ, ಒಂದು ರನ್‌ಗೆ ಮೂರು ವಿಕೆಟ್‌ ಕಬಳಿಸಿದ ಬೌಲರ್‌...

ಭಾರತದ ಕ್ರಿಕೆಟ್ ಅಂಗಳದಲ್ಲಿ ಆಗುವ ಇಂಥ ‘ಸುದ್ದಿ‘ಗಳು ಮೈದಾನದ ಹೊರಗೆ ಹೆಚ್ಚಿನವರ ಕಿವಿಗೆ ಬೀಳುವುದೇ ಇಲ್ಲ. ಕ್ರಿಕೆಟ್‌ಗೆ ಸಂಬಂಧಪಟ್ಟ ವೆಬ್‌ಸೈಟ್ ಸೇರಿದಂತೆ ಕೇವಲ ಅಂತರ್ಜಾಲದಲ್ಲಿ ಮಾತ್ರ ಈ ದಾಖಲೆಗಳು ಹುದುಗಿಕೊಂಡಿವೆ.

ಇಂಥ ಅಮೋಘ ಸಾಧನೆ ಮಾಡುತ್ತ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಮಿಂಚುತ್ತಿರುವುದು ಭಾರತೀಯ ರೈಲ್ವೆ ಮಹಿಳಾ ಕ್ರಿಕೆಟ್‌ ತಂಡ. ಮೇಲೆ ನೀಡಿದ ಮಾಹಿತಿ ಈ ತಂಡದ ಯಶೋಗಾಥೆಯ ಹಕ್ಕಿನೋಟ ಮಾತ್ರ. 1989ರಿಂದ ಏಕದಿನ ಕ್ರಿಕೆಟ್‌ನಲ್ಲಿ ಮತ್ತು 2009ರಿಂದ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಸೆಣಸುತ್ತಿರುವ ರೈಲ್ವೆ ಮಹಿಳಾ ತಂಡ ನಿರಂತರವಾಗಿ ಗೆಲುವಿನ ಓಟ ಮುಂದುವರಿಸಿದೆ.

ಲೀಗ್ ಮತ್ತು ಸೂಪರ್‌ ಲೀಗ್‌ ಮಾದರಿಯಲ್ಲಿ ನಡೆಯುವ ಟೂರ್ನಿಗಳಲ್ಲಿ ಇಲ್ಲಿಯ ವರೆಗೆ ಈ ತಂಡವನ್ನು ಹಿಮ್ಮೆಟ್ಟಿಸಿ ಕಪ್‌ ಗೆಲ್ಲಲು ಯಾವ ತಂಡಕ್ಕೂ ಸಾಧ್ಯವಾಗಲಿಲ್ಲ.ಏಕದಿನ ಕ್ರಿಕೆಟ್‌ನ ಲೀಗ್‌ ಹಂತದಲ್ಲಿ ಕೇವಲ ಮೂರು ಬಾರಿ ಮಾತ್ರ ಸೋಲು ಕಂಡಿರುವ ತಂಡ ಎರಡು ಪಂದ್ಯಗಳಲ್ಲಿ ‘ಟೈ’ ಸಾಧಿಸಿದೆ. ಟ್ವೆಂಟಿ–20ಯಲ್ಲಿ ಸೋಲು ಅಪರೂಪಕ್ಕೆ ಈ ತಂಡದ ಸನಿಹ ಸುಳಿದಿದೆ.

ಈ ಬಾರಿಯ ಏಕದಿನ ಲೀಗ್ ಹಂತವನ್ನು ಮುಗಿಸಿರುವ ತಂಡ ಈಗ ಕಾನ್ಪುರದಲ್ಲಿ ನಡೆಯಲಿರುವ ಸೂಪರ್ ಲೀಗ್ ಹಂತಕ್ಕೆ ಸಿದ್ಧತೆ ನಡೆಸುತ್ತಿದೆ. ಕಳೆದ ವಾರ ಬೆಂಗಳೂರಿನ ಆಲೂರು ಕೆ.ಎಸ್.ಸಿ.ಎ ಮೈದಾನದಲ್ಲಿ ನಡೆದ ಟ್ವೆಂಟಿ–20 ಲೀಗ್ ಪಂದ್ಯಗಳಲ್ಲಿ ಮಹಾರಾಷ್ಟ್ರ, ಮುಂಬೈ ಮತ್ತು ಬಂಗಾಳ ತಂಡಗಳನ್ನು ಮಣಿಸಿ ಸೂಪರ್ ಲೀಗ್ ಹಂತದ ಸೆಣಸಾಟಕ್ಕೆ ಸಜ್ಜಾಗಿದೆ.

ಮಿನಿ ಭಾರತ ತಂಡ: ಭಾರತೀಯ ರೈಲ್ವೆ ಮಹಿಳಾ ತಂಡ ಎಂದರೆ ಮಿನಿ ಭಾರತ ತಂಡ ಇದ್ದಂತೆ. ಈ ತಂಡದ ನಾಯಕಿಯರೇ ಸಹಜವಾಗಿ ಭಾರತ ಮಹಿಳಾ ಕ್ರಿಕೆಟ್‌ನ ನಾಯಕಿಯರೂ ಆಗಿರುತ್ತಾರೆ. ರೈಲ್ವೆ ತಂಡದ ಮೊದಲ ನಾಯಕಿ ಡಯನಾ ಎಡಲ್ಜಿ ಈ ಹಿಂದೆ ಭಾರತ ತಂಡದ ನಾಯಕಿಯೂ ಆಗಿದ್ದರು. ನಂತರ ಒಂದು ದಶಕಕ್ಕೂ ಹೆಚ್ಚು ಕಾಲ ಭಾರತ ರೈಲ್ವೆ ತಂಡವನ್ನು ಮುನ್ನಡೆಸಿದ ಮಿಥಾಲಿ ರಾಜ್ ಕೂಡ ಭಾರತ ತಂಡದ ನಾಯಕತ್ವವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಈ ವರ್ಷ ರೈಲ್ವೆ ತಂಡಕ್ಕೆ ಹೊಸ ನಾಯಕಿಯನ್ನು ಆಯ್ಕೆ ಮಾಡಲಾಗಿದೆ. ಈ ಜವಾಬ್ದಾರಿ ವೇದಾ ಕೃಷ್ಣಮೂರ್ತಿ ಹೆಗಲಿಗೆ ಏರಿದೆ.

ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಮಿಂಚಿದ್ದ ಪೂನಮ್‌ ಯಾದವ್‌, ಆಲ್‌ರೌಂಡರ್ ನಿರಂಜನ ನಾಗಾರ್ಜುನ, ಏಕ್ತಾ ಬಿಶ್ಟ್‌, ಹರ್ಮನ್ ಪ್ರೀತ್ ಕೌರ್‌, ಪೂನಮ್ ರಾವುತ್‌ ಅವರೊಂದಿಗೆ ಕರ್ನಾಟಕದ ಎಡಗೈ ಸ್ಪಿನ್ನರ್‌ ರಾಜೇಶ್ವರಿ ಗಾಯಕವಾಡ ಮುಂತಾದವರು ಭಾರತ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ.

ಭಾರತದಲ್ಲಿ ಮಹಿಳೆಯರ ದೇಶಿ ಕ್ರಿಕೆಟ್‌ಗೆ ಸಂಬಂಧಿಸಿ ಮೂರು ಪ್ರಮುಖ ಟೂರ್ನಿಗಳಿವೆ. 50 ಓವರ್‌ಗಳ ಲೀಗ್ ಮತ್ತು ಸೂಪರ್‌ ಲೀಗ್‌, ಟ್ವೆಂಟಿ–20 ಲೀಗ್ ಮತ್ತು ಸೂಪರ್ ಲೀಗ್‌ ಹಾಗೂ ಸೀನಿಯರ್ ರಾಷ್ಟ್ರೀಯ ಕ್ರಿಕೆಟ್ ಚಾಂಪಿಯನ್‌ಷಿಪ್‌. ಈ ಮೂರೂ ಟೂರ್ನಿಗಳಲ್ಲಿ ಇಲ್ಲಿಯ ವರೆಗೆ ರೈಲ್ವೆ ತಂಡದ್ದೇ ಪಾರಮ್ಯ ಮೆರೆದಿದೆ.  

ಕೋಚ್‌, ನಾಯಕಿಯರ ಬಲ
ರೈಲ್ವೆ ಮಹಿಳಾ ಕ್ರಿಕೆಟ್ ತಂಡದ ಯಶೋಗಾಥೆಯಲ್ಲಿ ತಂಡದ ಕೋಚ್‌ ಮತ್ತು ನಾಯಕಿಯ ಪಾತ್ರ ಮಹತ್ವದ್ದು. ಅನೇಕ ವರ್ಷಗಳ ಕಾಲ ಕೋಚ್ ಆಗಿದ್ದ ವಿನೋದ್ ಶರ್ಮಾ, ಆರಂಭದಿಂದ ತಂಡವನ್ನು ಮುನ್ನಡೆಸಿದ್ದ ಡಯಾನಾ ಎಡಲ್ಜಿ, ಈಗಿನ ಕೋಚ್‌ ದೇವೇಂದ್ರ ಸಿಂಗ್ ಮತ್ತು ಡಯಾನಾ ನಂತರ ತಂಡದ ಬೆನ್ನೆಲುಬು ಆಗಿದ್ದ ಮಿಥಾಲಿ ರಾಜ್‌ ರೈಲ್ವೆ ಕ್ರಿಕೆಟ್‌ನ ಗೌರವ ಹೆಚ್ಚಿಸಿದ್ದಾರೆ. ಭಾರತೀಯ ಮಹಿಳಾ ಕ್ರಿಕೆಟ್‌ಗೂ ರೈಲ್ವೆಯ ಕೊಡುಗೆ ಅಪಾರ ಎಂದು ಹೇಳುತ್ತಾರೆ ತಂಡದ ವ್ಯವಸ್ಥಾಪಕಿ ಕಲ್ಪನಾ.

ಒಬ್ಬರೇ ಕನ್ನಡತಿ
ಭಾರತ ರೈಲ್ವೆ ತಂಡದಲ್ಲಿ ಈಗ ಆಡುತ್ತಿರುವ ಕರ್ನಾಟಕದ ಏಕೈಕ ಆಟಗಾರ್ತಿ ವಿಜಯಪುರದ ರಾಜೇಶ್ವರಿ ಗಾಯಕವಾಡ. 25 ವರ್ಷದ ಈ ಆಟಗಾರ್ತಿ ಎಡಗೈ ಸ್ಪಿನ್ನರ್‌. ಭಾರತ ಮಹಿಳೆಯರ ಪರವಾಗಿಯೂ ಆಡಿರುವ ಇವರು ಒಂದು ಟೆಸ್ಟ್‌, 21 ಏಕದಿನ ಮತ್ತು 13 ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ ಇನಿಂಗ್ಸ್ ಒಂದರಲ್ಲೇ ನಾಲ್ಕು ವಿಕೆಟ್ ಕಬಳಿಸಿರುವ ಅವರು ಒಟ್ಟು ಐದು ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ. ಏಕದಿನ ಪಂದ್ಯಗಳಲ್ಲಿ 35 ಮತ್ತು ಟ್ವೆಂಟಿ–20ಯಲ್ಲಿ 15 ವಿಕೆಟ್‌ಗಳನ್ನು ಪಡೆದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT