ADVERTISEMENT

ಗಣಿ ವಿಜ್ಞಾನ, ಅವಕಾಶದ ಖನಿ

ಸಿದ್ದೇಶ
Published 26 ಏಪ್ರಿಲ್ 2015, 19:30 IST
Last Updated 26 ಏಪ್ರಿಲ್ 2015, 19:30 IST

ಕೈಗಾರೀಕರಣದ ವೇಗ ಹೆಚ್ಚಾಗಿದೆ. ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕಡಿಮೆಯಾಗಿದೆ. ಹಿಂದಿನ ಕಾಲದಲ್ಲಿ ₹40ಕ್ಕೆ ಸಿಗುತ್ತಿದ್ದ ಅಲುಮಿನಿಯಂ ಇಂದು ಸಾಕಷ್ಟು ಪಟ್ಟು ಹೆಚ್ಚಾಗಿದೆ. ಸ್ಟೀಲ್‌, ತಾಮ್ರ, ಕಬ್ಬಿಣ, ಹಿತ್ತಾಳೆ, ಚಿನ್ನ, ಬೆಳ್ಳಿ ಹೀಗೆ ಎಲ್ಲ ಲೋಹಗಳ ಬೆಲೆ ಏರಿಕೆಯಾಗಿದೆ. ಕಾರಣವಿಷ್ಟೆ, ಹಿಂದಿನ ಕಾಲದಲ್ಲಿದ್ದಷ್ಟು ಅದಿರು ಈಗ ಇಲ್ಲ. ಮೊದಲೆಲ್ಲಾ ಅವೈಜ್ಞಾನಿಕವಾಗಿ ಅದಿರನ್ನು ತೆಗೆಯಲಾಗುತಿತ್ತು. ಈಗ ಸ್ಯಾಟಲೈಟ್‌ ಸಹಾಯದಿಂದ ಅದಿರು ಪತ್ತೆ ಹಚ್ಚಲಾಗುತ್ತಿದೆ.

ಮುಂದುವರಿದ ರಾಷ್ಟ್ರಗಳಲ್ಲಿ ಗಣಿ ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ ನಡೆಯುತ್ತಿದೆ. ನಮ್ಮ ರಾಷ್ಟ್ರದ ವಿದ್ಯಾರ್ಥಿಗಳು ಗಣಿ ವಿಜ್ಞಾನ (ಮೈನಿಂಗ್‌ ಎಂಜಿನಿಯರಿಂಗ್‌) ಕೋರ್ಸ್‌ ಕಲಿಯಲು ಬೇರೆ ದೇಶಗಳತ್ತ ಮುಖ ಮಾಡುತ್ತಿದ್ದರು. ಇಂದು ಅದಿರಿನ ಆಗರವಾದ ಜಾರ್ಖಂಡ್‌ ಸೇರಿದಂತೆ 10ಕ್ಕೂ ಹೆಚ್ಚು ಕಡೆ ಗಣಿ ವಿಜ್ಞಾನ ಕೋರ್ಸ್‌ಗಳನ್ನು ತೆರೆಯಲಾಗಿದೆ. ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ಕಲಿತವರು ಈ ಕೋರ್ಸ್‌ಗೆ ನೋಂದಾಯಿಸಿಕೊಳ್ಳಬಹುದು. ಇತರ ಎಂಜಿನಿಯರಿಂಗ್‌ ವಿಭಾಗಗಳ ರೀತಿಯಲ್ಲಿಯೇ ಸಿಇಟಿ ಮತ್ತು ಕಾಮೆಡ್‌–ಕೆ ಪರೀಕ್ಷೆಯ ಮೂಲಕ ಸೀಟು ಹಂಚಿಕೆ ಮಾಡಲಾಗುತ್ತದೆ.

ಸದ್ಯ ರಾಜ್ಯದಲ್ಲಿ ಕೋಲಾರ ಮತ್ತು ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿರುವ ಆಚಾರ್ಯ ಇನ್ಸ್ಟಿಟ್ಯೂಟ್‌ನಲ್ಲಿ ಗಣಿ ವಿಜ್ಞಾನದಲ್ಲಿ ಡಿಪ್ಲೊಮಾ ಮತ್ತು ಎಂಜಿನಿಯರಿಂಗ್‌ ಕೋರ್ಸ್‌ ಕಲಿಯಲು ಅವಕಾಶವಿದೆ.  ಹಿಂದುಳಿದ ರಾಷ್ಟ್ರಗಳಲ್ಲಿ ಅದಿರನ್ನು ಅಷ್ಟಾಗಿ ಹೊರ ತೆಗೆಯದೇ ಇರುವುದರಿಂದ ಮುಂದುವರಿದ ರಾಷ್ಟ್ರಗಳು ಅತ್ತ ಚಿತ್ತಹರಿಸುತ್ತಿವೆ. ಈ ನಿಟ್ಟಿನಲ್ಲಿ ವಿದೇಶಗಳಲ್ಲಿಯೂ ಅವಕಾಶ ಹೆಚ್ಚಿದೆ.
‘ಸೂರತ್ಕಲ್‌ನ ಎನ್‌ಐಟಿ ಸೇರಿದಂತೆ ದೇಶದ ವಿವಿಧೆಡೆ ಸ್ನಾತಕೋತ್ತರ ಪದವಿಗೆ ಅವಕಾಶವಿದೆ.

ಗಣಿ ಮಹತ್ವ ಅರಿತಿರುವ ಸರ್ಕಾರವೂ ಗಣಿ ವಿಜ್ಞಾನದ ಕೋರ್ಸ್‌ ಪರಿಚಯಿಸುವ ಚಿಂತನೆಯಲ್ಲಿದೆ. ಸ್ಕಾಲರ್‌ಶಿಪ್‌, ಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ಸಹಾಯ ನೀಡುವ ಮೂಲಕ ಈ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವ ಚಿಂತನೆಯಲ್ಲಿ ಸರ್ಕಾರವಿದೆ’ ಎನ್ನುತ್ತಾರೆ ಆಚಾರ್ಯ ಇನ್ಸ್ಟಿಟ್ಯೂಟ್‌ನ ಗಣಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಎನ್‌. ಬಾಲಸುಬ್ರಹ್ಮಣ್ಯ.

ಕಡಿಮೆ ವೆಚ್ಚದಲ್ಲಿ ಅದಿರು ತೆಗೆಯುವುದು, ಪತ್ತೆ ಹಚ್ಚುವುದು, ಯೋಜನೆ ಸಿದ್ಧಪಡಿಸುವುದು, ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಎಲ್ಲವೂ ಎಂಜಿನಿಯರ್‌ ಉಸ್ತುವಾರಿ ಯಲ್ಲಿಯೇ ನಡೆಯುತ್ತದೆ. ಮೇಲ್ವಿಚಾರಣೆ ಮತ್ತು ನಿರ್ವಹಣೆ ಜವಾಬ್ದಾರಿಯೂ ಗಣಿ ಎಂಜಿನಿಯರ್‌ ಮೇಲಿರುತ್ತದೆ. ಪರಿಸರ, ಆರೋಗ್ಯ ಮತ್ತು ಭದ್ರತಾ ವ್ಯವಸ್ಥಾಪಕನಾಗಿಯೂ ಆತ ಕೆಲಸ ನಿರ್ವಹಿಸಬೇಕಾಗುತ್ತದೆ.
ಸುತ್ತಲಿನ ಪರಿಸರ, ಭೂಮಿ, ಖನಿಜ ಸಂಪನ್ಮೂಲದ ಸ್ಥಳ, ಖನಿಜದ ಗುಣಮಟ್ಟ, ಅದನ್ನು  ತೆಗೆಯುವ ರೀತಿ ಎಲ್ಲದರ ಮೇಲೂ ಗಣಿಗಾರಿಕೆ ನಿರ್ಧಾರವಾಗುತ್ತದೆ. ಯಾವ ರೀತಿಯಲ್ಲಿ ಗಣಿಗಾರಿಕೆ ಮಾಡಬೇಕು ಎಂಬುದು ಖನಿಜ ತೆಗೆಯುವ ರೀತಿಯನ್ನು ಅವಲಂಬಿಸಿರುತ್ತದೆ ಎನ್ನುತ್ತಾರೆ ಅವರು.

ಲೋಹಕ್ಕೆ ಬೆಲೆಯಿದೆ
ಗಣಿ ವಿಜ್ಞಾನದ ಬಗ್ಗೆ ಮೊದಲಿಗೆ ವಿದ್ಯಾರ್ಥಿಗಳಿಗೆ ಅಷ್ಟಾಗಿ ಮಾಹಿತಿ ಇರಲಿಲ್ಲ. ಈ ಕಾಲ ಬದಲಾಗಿದ್ದೂ, ಸಾಕಷ್ಟು ಮಂದಿ ಇತ್ತ ಮುಖ ಮಾಡುತ್ತಿದ್ದಾರೆ. ಈ ಕ್ಷೇತ್ರದ ಮಹತ್ವ ಅವರಿಗೆ ಅರಿವಾಗಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಗಣಿ ಮಾದರಿಗಳನ್ನು ಸಿದ್ಧಪಡಿಸಿ ವಿದ್ಯಾರ್ಥಿಗಳಿ ಪಾಠ ಮಾಡಲಾಗುತ್ತದೆ.

ಇದರಲ್ಲಿ ಭೂ ವಿಜ್ಞಾನ ಪ್ರಯೋಗಾಲಯ, ಅದಿರು ಸ್ಯಾಂಪಲ್‌ಗಳನ್ನು (ಕಲ್ಲಿದ್ದಲು, ಬೆಳ್ಳಿ, ಬಂಗಾರ, ತಾಮ್ರ, ಕಬ್ಬಿಣ) ಸಂಗ್ರಹಿಸಿಡಬೇಕಾಗುತ್ತದೆ. ಸರ್ಕಾರಿ ಉದ್ಯೋಗಾವಕಾಶಗಳಿದ್ದು, ಉದ್ಯಮವನ್ನೂ ಆರಂಭಿಸಬಹುದು. ಮನುಷ್ಯನಿಗೆ ಕಬ್ಬಿಣ, ಬಂಗಾರ, ಬೆಳ್ಳಿ ಹೀಗೆ ಎಲ್ಲಿಯ ತನಕ ಲೋಹಗಳ ಅವಶ್ಯಕತೆ ಇದೆಯೋ ಅಲ್ಲಿಯವರೆಗೂ ಈ ಕ್ಷೇತ್ರಕ್ಕೆ ಬೇಡಿಕೆ ಇರುತ್ತದೆ.

ಭಾರತೀಯರಿಗೆ ಬಂಗಾರದ ಮೇಲೆ ವ್ಯಾಮೋಹ ಕಡಿಮೆಯಾಗದು, ಎಷ್ಟೇ ಬೆಲೆಯಾದರೂ ಚಿನ್ನ ಖರೀದಿಸುವುದನ್ನು ನಿಲ್ಲಿಸುವುದಿಲ್ಲ. ಇಂಥ ಪರಿಸ್ಥಿತಿ ಇರಬೇಕಾದರೆ ಗಣಿ ವಿಜ್ಞಾನಕ್ಕೆ ಬೇಡಿಕೆ ಕಡಿಮೆಯಾಗಲು ಸಾಧ್ಯವಿದೆಯೇ? ಹಾಗೆ ನೋಡಿದರೆ ಈ ಕ್ಷೇತ್ರದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ಬೇಡಿಕೆ ದ್ವಿಗುಣವಾಗುತ್ತದೆ ಎನ್ನುತ್ತಾರೆ ಡಾ. ಬಾಲಸುಬ್ರಹ್ಮಣ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT