ADVERTISEMENT

ಘಟಪ್ರಭೆಯ ತಡಿಯಲ್ಲಿ ಗರಿ ಬಿಚ್ಚಿದ ಅಥ್ಲೆಟಿಕ್ಸ್‌ ಕನಸು...

ವೆಂಕಟೇಶ್ ಜಿ.ಎಚ್
Published 4 ಡಿಸೆಂಬರ್ 2016, 19:30 IST
Last Updated 4 ಡಿಸೆಂಬರ್ 2016, 19:30 IST
ಬಾಗಲಕೋಟೆಯಲ್ಲಿರುವ ಕ್ರೀಡಾಂಗಣದ ಒಂದು ನೋಟ       ಪ್ರಜಾವಾಣಿ ಚಿತ್ರ / ಸಂಗಮೇಶ ಬಡಿಗೇರ
ಬಾಗಲಕೋಟೆಯಲ್ಲಿರುವ ಕ್ರೀಡಾಂಗಣದ ಒಂದು ನೋಟ ಪ್ರಜಾವಾಣಿ ಚಿತ್ರ / ಸಂಗಮೇಶ ಬಡಿಗೇರ   

ಘಟಪ್ರಭೆಯ ತಟದಲ್ಲೀಗ ಆಟೋಟಗಳ ಸಂಭ್ರಮ. ಕೇವಲ ಒಂದು ತಿಂಗಳ ಅಂತರದಲ್ಲಿ ರಾಜ್ಯ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ ಮತ್ತು ಪ್ರಾಥಮಿಕ ಶಾಲಾ ಅಥ್ಲೆಟಿಕ್ಸ್‌ಗೆ ಆತಿಥ್ಯ ವಹಿಸಿದ್ದ  ಬಾಗಲಕೋಟೆಯಲ್ಲಿ ಈಗ  ಆಟೋಟಗಳದ್ದೇ ಮಾತು.

ಊರಿನ ಅಂಗಳದಲ್ಲಿ ರಾಷ್ಟ್ರೀಯ ಮಟ್ಟದ ಅಥ್ಲಿಟ್‌ಗಳಾದ ಎಚ್.ಎಂ.ಜ್ಯೋತಿ, ಶಂಕರಸಿಂಗ್ ಬಿಸ್ತಾ, ಜಿ.ಕೆ.ವಿಜಯಕುಮಾರಿ, ಸಿ.ಎಚ್.ವಿಶ್ವಾ,  ವೈಶಾಲಿ ಅಶೋಕ್ ಪ್ರದರ್ಶನ ಕಂಡು ಇಲ್ಲಿನ ಮಕ್ಕಳು ಉತ್ತೇಜಿತರಾಗಿದ್ದಾರೆ. ಎರಡೂ ಕೂಟಗಳಿಂದಾಗಿ ಅವಿಭಜಿತ ವಿಜಯಪುರ ಜಿಲ್ಲೆಯ ಮಕ್ಕಳಲ್ಲಿ ಸೈಕ್ಲಿಂಗ್, ಮಲ್ಲಕಂಬ, ಕುಸ್ತಿಯ ಜೊತೆಗೆ ಅಥ್ಲೆಟಿಕ್ಸ್‌ನತ್ತ ಒಲವು ಮೂಡಿಸಲು ಸಾಧ್ಯವಾಗಿದೆ. ಬಹುತೇಕ ಸ್ತಬ್ಧಗೊಂಡಂತಿರುವ ಅಥ್ಲೆಟಿಕ್ಸ್ ಚಟುವಟಿಕೆಗಳಿಗೆ ಮತ್ತೆ ಜೀವ ಬರಲಿದೆಯೇ ಎಂಬುದು ಸ್ಥಳೀಯ ಕ್ರೀಡಾಪ್ರೇಮಿಗಳ ನಿರೀಕ್ಷೆ.

‘ಎರಡೂ ಕೂಟಗಳಲ್ಲಿ ದಕ್ಷಿಣ ಕನ್ನಡ ಹಾಗೂ ಬೆಂಗಳೂರಿನ ಕ್ರೀಡಾಪಟುಗಳೇ ಪಾರಮ್ಯ ಮೆರೆದು ಪ್ರಶಸ್ತಿ ಮುಡಿಗೇರಿಸಿಕೊಂಡರು. ಅತ್ಯುತ್ತಮ ತರಬೇತಿ ಪಡೆದಿದ್ದ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್), ವಿದ್ಯಾನಗರ ಕ್ರೀಡಾ ಶಾಲೆ ಹಾಗೂ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಕ್ಕಳು ಪದಕಗಳ ಸೂರೆ ಮಾಡಿದರು.

ಬಾಗಲಕೋಟೆ ಮತ್ತು ಸುತ್ತಮುತ್ತಲ ಜಿಲ್ಲೆಗಳ ಮಕ್ಕಳು ಅವರಿಗೆ ಸೂಕ್ತ ಪೈಪೋಟಿ ನೀಡದಿದ್ದರೂ, ಇಲ್ಲಿ ಪ್ರತಿಭೆಗಳಿಗೇನೂ ಕೊರತೆ ಇಲ್ಲ. ವಿಜಯಪುರ ಜಿಲ್ಲೆ ಮನಗೂಳಿಯ ವಿನೋದಕುಮಾರ ಭಾವಿಮನಿ ಶಾಲಾ ಅಥ್ಲೆಟಿಕ್ಸ್ ಕೂಟದಲ್ಲಿ ವೈಯಕ್ತಿಕ ಚಾಂಪಿಯನ್ ಶ್ರೇಯ ಪಡೆದದ್ದೇ ಇದಕ್ಕೆ ಸಾಕ್ಷಿ’ ಎನ್ನುತ್ತಾರೆ ತುಳಸಿಗೇರಿಯ ಕ್ರೀಡಾ ತರಬೇತುದಾರ ಸಿ.ಕೆ.ಚನ್ನಾಳ.

‘ಸೈಕ್ಲಿಂಗ್ ಪಟುಗಳು ಸಾಮಾನ್ಯವಾಗಿ ಉತ್ತಮ ಅಥ್ಲಿಟ್ ಕೂಡ ಆಗಿರುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲೂ ದೈಹಿಕವಾಗಿ ಗಟ್ಟಿಮುಟ್ಟಾಗಿರುವ ಹಾಗೂ ಆಟೋಟಗಳಲ್ಲಿ ಉತ್ತಮ ಸಾಧನೆ ತೋರುವ ಮಕ್ಕಳು ಇದ್ದಾರೆ. ಆದರೆ ಅವರನ್ನು ಆರಂಭದಲ್ಲಿಯೇ ಗುರುತಿಸಿ ತರಬೇತಿ ನೀಡುವ ಕೆಲಸ ಆಗುತ್ತಿಲ್ಲ. ಜೊತೆಗೆ ಆರ್ಥಿಕ ತೊಂದರೆ ಅವರಿಗೆ ಕ್ರೀಡೆಯಲ್ಲಿ ಮುಂದುವರಿಯಲು ಅಡಚಣೆಯಾಗುತ್ತಿದೆ’ ಎಂದು ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ಕಾರ್ಯದರ್ಶಿ ಲಕ್ಷ್ಮಣ ಯಲಗಣ್ಣವರ ಅಭಿಪ್ರಾಯಪಡುತ್ತಾರೆ. 

‘ಬಾಗಲಕೋಟೆ ಜಿಲ್ಲೆಯಲ್ಲಿ ಅಥ್ಲೆಟಿಕ್ಸ್‌ ತರಬೇತಿಗೆ ಕ್ರೀಡಾ ಇಲಾಖೆಯಿಂದ ಕೋಚ್‌ ನೇಮಕವಾಗಿಲ್ಲ. ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ ಸುಸಜ್ಜಿತ ಕ್ರೀಡಾಂಗಣಗಳು ಇದ್ದರೂ ಪ್ರತ್ಯೇಕ ಸಿಂಥೆಟಿಕ್ ಟ್ರ್ಯಾಕ್ ಪಡೆಯುವ ಕನಸು ಇಲ್ಲಿಯವರೆಗೂ ನನಸಾಗಿಲ್ಲ ಎಂದು ಬೇಸರ ವ್ಯಕ್ತಪಡಿಸುವ ಅವರು, ಪ್ರತ್ಯೇಕ ಜಿಲ್ಲೆಯಾದ ನಂತರ ಬಾಗಲಕೋಟೆಗೆ ಇದೇ ಮೊದಲ ಬಾರಿಗೆ ಎರಡು ಮಹತ್ವದ ಕ್ರೀಡಾಕೂಟಗಳಿಗೆ ಆತಿಥ್ಯ ವಹಿಸಲು ಅವಕಾಶ ಸಿಕ್ಕಿತು.

ಜೊತೆಗೆ ಯಶಸ್ವಿಯಾಗಿ ಸಂಘಟಿಸಲಾಯಿತು. ಆದರೆ ಈ ಭಾಗದಲ್ಲಿ ಅಥ್ಲೆಟಿಕ್ಸ್‌ ಚಟುವಟಿಕೆಗಳನ್ನು ಜೀವಂತವಾಗಿಡಲು ವರ್ಷಕ್ಕೊಮ್ಮೆ ಇಂತಹ ಕ್ರೀಡಾಕೂಟ ಆಯೋಜಿಸಬೇಕಿದೆ. ಜೊತೆಗೆ ಶಾಲಾ ಮಟ್ಟದಲ್ಲಿಯೇ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಜಿಲ್ಲಾ ಕೇಂದ್ರದಲ್ಲಿ ವರ್ಷವಿಡೀ ಅವರಿಗೆ ತರಬೇತಿ ನೀಡುವ ವ್ಯವಸ್ಥೆ ಮಾಡಬೇಕಿದೆ’ ಎಂದು ಹೇಳುತ್ತಾರೆ.

ಇಚ್ಛಾಶಕ್ತಿ ಬೇಕಿದೆ
ವಿಜಯಪುರ–ಬಾಗಲಕೋಟೆ ಜಿಲ್ಲೆಗಳಲ್ಲಿ 15ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳು, ಸಿಮೆಂಟ್‌, ಗ್ರಾನೈಟ್ ಉದ್ಯಮ, ಸಹಕಾರಿ ಬ್ಯಾಂಕ್‌ಗಳು, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಇವೆ. ಕ್ರೀಡಾ ಚಟುವಟಿಕೆಗಳ ಸಂಘಟನೆಗೆ ಹಣ ನೀಡಲು ಇಲ್ಲವೇ ಸವಲತ್ತುಗಳನ್ನು ಕಲ್ಪಿಸಲು ದಾನಿಗಳಿಗೇನೂ ಕೊರತೆ ಇಲ್ಲ. ಆದರೆ ಅದನ್ನು ಬಳಕೆ ಮಾಡಿಕೊಳ್ಳಲು ಕ್ರೀಡಾ ಇಲಾಖೆ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ ಎಂದು ಹೇಳುವ ಯಲಗ ಣ್ಣವರ, ‘ಅಗತ್ಯಬಿದ್ದರೆ ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆಯೇ ಈ ಭಾಗದಲ್ಲಿ ಆಟೋಟಗಳ ಪುನರುಜ್ಜೀವನದ ಹೊಣೆ ಹೊರಲು ಸಿದ್ಧವಿದೆ’ ಎಂದು ಹೇಳುತ್ತಾರೆ.            

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.