ADVERTISEMENT

‘ಚಿನ್ನದ ಪ್ರಶಸ್ತಿಗಳ’ ಮೆಲುಕು

ವರುಣ ನಾಯ್ಕರ
Published 17 ಜೂನ್ 2018, 13:06 IST
Last Updated 17 ಜೂನ್ 2018, 13:06 IST
ಮ್ಯಾನುಯಲ್‌ ನುಯರ್‌
ಮ್ಯಾನುಯಲ್‌ ನುಯರ್‌   

ರ ಷ್ಯಾದಲ್ಲಿ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿ ಆರಂಭವಾಗಿದೆ. ಯಾವ ತಂಡ ಪ್ರಶಸ್ತಿ ಗೆಲ್ಲಬಹುದು ಎಂಬ ಲೆಕ್ಕಾಚಾರವು ಜೋರಾಗಿದೆ. ಟೂರ್ನಿಯಲ್ಲಿ ವಿಶೇಷ ಸಾಧನೆ ಮಾಡಿದ ಆಟಗಾರರಿಗೆ ಕೊಡುವ ಚಿನ್ನದ ಬೂಟು (ಗೋಲ್ಡನ್‌ ಬೂಟ್‌), ಚಿನ್ನದ ಚೆಂಡು (ಗೋಲ್ಡನ್‌ ಬಾಲ್‌) ಹಾಗೂ ಚಿನ್ನದ ಕೈಗವಸು (ಗೋಲ್ಡನ್‌ ಗ್ಲೋವ್‌) ಪ್ರಶಸ್ತಿಗಳನ್ನು ಯಾವೆಲ್ಲ ಆಟಗಾರರು ಗೆಲ್ಲಬಹುದು ಎಂಬ ಬಗ್ಗೆ ಕಾಲ್ಚೆಂಡಿನ ಅಭಿಮಾನಿಗಳಷ್ಟೆ ಅಲ್ಲದೇ ಫುಟ್‌ಬಾಲ್‌ ದಿಗ್ಗಜರೂ ವಿಶ್ಲೇಷಣೆ ಆರಂಭಿಸಿದ್ದಾರೆ. ಅರ್ಜೆಂಟೀನಾದ ಲಯೊನೆಲ್‌ ಮೆಸ್ಸಿ, ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಬ್ರೆಜಿಲ್‌ನ ನೇಮರ್‌ ಅವರ ಹೆಸರುಗಳು ಚಿನ್ನದ ಬೂಟು ಪ್ರಶಸ್ತಿ ಜಯಿಸುವ ನೆಚ್ಚಿನ ಆಟಗಾರರ ಪಟ್ಟಿಯಲ್ಲಿದೆ.

ಚಿನ್ನದ ಬೂಟು ಈ ಎಲ್ಲ ಪ್ರಶಸ್ತಿಗಳಲ್ಲೇ ಪ್ರತಿಷ್ಠಿತ ಎಂಬ ಖ್ಯಾತಿ ಗಳಿಸಿದೆ. ಟೂರ್ನಿಯಲ್ಲಿ ಆಡಿದ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರನಿಗೆ ಕೊಡುವ ಈ ಪ್ರಶಸ್ತಿಯನ್ನು 1982ರಲ್ಲಿ ಮೊದಲ ಬಾರಿಗೆ ‘ಗೋಲ್ಡನ್‌ ಶೂ’ ಎಂಬ ಹೆಸರಿನಲ್ಲಿ ನೀಡಲು ಆರಂಭಿಸಿದರು. 2010ರಲ್ಲಿ ಇದನ್ನು ‘ಗೋಲ್ಡನ್‌ ಬೂಟ್‌’ ಎಂದು ಮರುನಾಮಕರಣ ಮಾಡಲಾಯಿತು. ಹೆಚ್ಚು ಗೋಲು ಗಳಿಸಿದ ಎರಡನೇ ಮತ್ತು ಮೂರನೇ ಆಟಗಾರನಿಗೆ ಕ್ರಮವಾಗಿ ಬೆಳ್ಳಿ ಬೂಟು ಹಾಗೂ ಕಂಚಿನ ಬೂಟಿನ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

1982ರಲ್ಲಿ ಚಿನ್ನದ ಬೂಟು ಪಡೆದವರು ಇಟಲಿಯ ಪೌಲೊ ರೊಸ್ಸಿ. ಆ ಟೂರ್ನಿಯಲ್ಲಿ ಅವರು ಆರು ಗೋಲು ಗಳಿಸಿ ತಮ್ಮ ತಂಡ ವಿಶ್ವಕಪ್‌ ಟ್ರೋಫಿ ಎತ್ತಿಹಿಡಿಯಲು ಕಾರಣರಾಗಿದ್ದರು. ಅಂದಿನಿಂದ ಇಂದಿನವರೆಗೆ ಅನೇಕ ಪ್ರಮುಖ ಆಟಗಾರರು ಈ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ADVERTISEMENT

ಟೂರ್ನಿಯ ಶ್ರೇಷ್ಠ ಆಟಗಾರನಿಗೆ ಚಿನ್ನದ ಚೆಂಡು ನೀಡಲಾಗುತ್ತದೆ. ಇದಕ್ಕಾಗಿ ಮಾಧ್ಯಮ ಪ್ರತಿನಿಧಿಗಳು ಮತಹಾಕಿ ಆಟಗಾರರ ಪಟ್ಟಿಯನ್ನು ತಯಾರಿಸುತ್ತಾರೆ. ನಂತರ ಮೊದಲ ಮೂರು ಸ್ಥಾನಗಳಿಗೆ ಫಿಫಾ ಸಂಸ್ಥೆಯ ತಾಂತ್ರಿಕ ಸಮಿತಿಯು ಆಟಗಾರರನ್ನು ಆಯ್ಕೆ ಮಾಡುತ್ತದೆ. ಈ ಪ್ರಶಸ್ತಿಯನ್ನು 1982ರಲ್ಲಿ ನೀಡಲು ಆರಂಭಿಸಲಾಯಿತು. ಈ ಗೌರವವೂ ಪೌಲೊ ರೊಸ್ಸಿ ಅವರ ಪಾಲಾಯಿತು. ಇಲ್ಲೂ ಕೂಡ ಎರಡನೇ ಮತ್ತು ಮೂರನೇ ಸ್ಥಾನಗಳಿಸಿದ ಆಟಗಾರನಿಗೆ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಚೆಂಡು ನೀಡಲಾಗುತ್ತದೆ.

ಟೂರ್ನಿಯಲ್ಲಿ ಗೋಲ್‌ಕೀಪರ್‌ ಆಗಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ಚಿನ್ನದ ಕೈಗವಸು ಪ್ರಶಸ್ತಿ ನೀಡಲಾಗುತ್ತದೆ. ಸೋವಿಯತ್‌ ಯೂನಿಯನ್‌ನ ಶ್ರೇಷ್ಠ ಗೋಲ್‌ಕೀ‍ಪರ್‌ ಲೆವ್‌ ಯಾಶಿನ್‌ ಅವರ ಗೌರವಾರ್ಥಕವಾಗಿ 1994ರಲ್ಲಿ ಈ ಪ್ರಶಸ್ತಿಯನ್ನು ನೀಡಲು ಆರಂಭಿಸಲಾಯಿತು. ಆಗ ಲೆವ್‌ ಯಾಶಿನ್‌ ಹೆಸರಿನಲ್ಲಿಯೇ ಇದನ್ನು ನೀಡಲಾಗುತ್ತಿತ್ತು. 2010ರಲ್ಲಿ ಇದನ್ನು ಗೋಲ್ಡನ್‌ ಗ್ಲೋವ್‌ ಎಂದು ಮರುನಾಮಕರಣ ಮಾಡಲಾಯಿತು.

ಈ ಪ್ರಶಸ್ತಿಗೂ ಫಿಫಾದ ತಾಂತ್ರಿಕ ಸಮಿತಿಯೇ ಆಟಗಾರನನ್ನು ಆಯ್ಕೆ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.