ADVERTISEMENT

ನನಸಾಗುವುದೇ ಹ್ಯಾಟ್ರಿಕ್ ಸಾಧನೆಯ ಕನಸು?

ವಿಕ್ರಂ ಕಾಂತಿಕೆರೆ
Published 23 ಅಕ್ಟೋಬರ್ 2016, 19:30 IST
Last Updated 23 ಅಕ್ಟೋಬರ್ 2016, 19:30 IST
ಗದಗ–ರೋಣ ರಸ್ತೆಯಲ್ಲಿ ಮೂರು ವರ್ಷಗಳ ಹಿಂದೆ ನಡೆದ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನ ನೋಟ.
ಗದಗ–ರೋಣ ರಸ್ತೆಯಲ್ಲಿ ಮೂರು ವರ್ಷಗಳ ಹಿಂದೆ ನಡೆದ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನ ನೋಟ.   
ಒಂದು ಹಂತ ಮುಗಿದಿದೆ. ನಿರೀಕ್ಷಿತ ಯಶಸ್ಸೂ ಕಂಡಾಗಿದೆ. ಈಗ ಪ್ರಮುಖ ಘಟ್ಟದತ್ತ ಗಮನ ನೀಡುವ ಕಾಲ ಬಂದಿದೆ. ಹೊಸ ನಿರೀಕ್ಷೆ ಹೊತ್ತಿರುವ ರಾಜ್ಯದ ಸೈಕ್ಲಿಸ್ಟ್‌ಗಳು ಇದಕ್ಕೆ ಸಜ್ಜಾಗುತ್ತಿದ್ದಾರೆ. ಸೈಕ್ಲಿಂಗ್ ಸಂಸ್ಥೆ ಭರವಸೆಯಿಂದ ಎದುರು ನೋಡುತ್ತಿದೆ. 
 
ಈ ಬಾರಿಯ ಸೈಕ್ಲಿಂಗ್ ಋತು ಆರಂಭಗೊಂಡು ಈಗಾಗಲೇ ಮೌಂಟೇನ್‌ ಬೈಕ್ ಚಾಂಪಿಯನ್‌ಷಿಪ್‌ ಮುಕ್ತಾಯಗೊಂಡಿದೆ. ಗದಗ ಜಿಲ್ಲೆ ಯತ್ತಿನಹಳ್ಳಿಯಲ್ಲಿ ಮೌಂಟೇನ್‌ ಬೈಕ್ ಸೈಕ್ಲಿಂಗ್‌ ಮುಗಿಸಿದ ರಾಜ್ಯ ಸೈಕ್ಲಿಸ್ಟ್‌ಗಳು ಪುಣೆಯಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಮರಳಿದ್ದಾರೆ.
 
ಮೂರು ಪಾಯಿಂಟ್‌ಗಳಿಂದ ಹ್ಯಾಟ್ರಿಕ್ ಚಾಂಪಿಯನ್‌ಷಿಪ್‌ ತಪ್ಪಿಹೋದರೂ ಮೌಂಟೇನ್‌ ಬೈಕ್‌ನಲ್ಲಿ ಬಲಶಾಲಿಯಾದ ಕೇರಳ, ಮಹಾರಾಷ್ಟ್ರ ಮತ್ತು ಭಾರತೀಯ ಸೇನೆಯ ಸೈಕ್ಲಿಸ್ಟ್‌ಗಳಿಗೆ ಸವಾಲೊಡ್ಡಲು ರಾಜ್ಯದ ಸೈಕ್ಲಿಸ್ಟ್‌ಗಳಿಗೆ ಸಾಧ್ಯವಾಗಿದೆ. ರನ್ನರ್ಸ್ ಪಟ್ಟ ಮುಡಿಗೇರಿಸಿಕೊಂಡ ರಾಜ್ಯ ತಂಡ ಈಗ ಪ್ರಮುಖ ಅಸ್ತ್ರದತ್ತ ದೃಷ್ಟಿ ನೆಟ್ಟಿದೆ. ಅದು ರೋಡ್ ಸೈಕ್ಲಿಂಗ್‌. 
 
ರೋಡ್ ಸೈಕ್ಲಿಂಗ್‌ನಲ್ಲಿ ರಾಷ್ಟ್ರದ ಯಾವುದೇ ತಂಡವನ್ನು ನಡುಗಿಸುವ ಸಾಮರ್ಥ್ಯ ರಾಜ್ಯದ ಸೈಕ್ಲಿಸ್ಟ್‌ಗಳಿಗೆ ಇದೆ. ಕಳೆದ ಎರಡು ವರ್ಷಗಳಲ್ಲಿ ಚಾಂಪಿಯನ್‌ ಆಗಿರುವ ರಾಜ್ಯವನ್ನು ಮತ್ತೊಮ್ಮೆ ಚಾಂಪಿಯನ್‌ ಪಟ್ಟಕ್ಕೇರಿಸಿ ಹ್ಯಾಟ್ರಿಕ್ ಸಾಧನೆ ಮಾಡುವ ಉದ್ದೇಶ ಇರುವುದರಿಂದ ಈ ಬಾರಿ ರೋಡ್ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ಗಾಗಿ ಹೆಚ್ಚು ಬೆವರು ಸುರಿಸುವ ಉಮೇದು ರಾಜ್ಯದ ಸೈಕ್ಲಿಸ್ಟ್‌ಗಳದ್ದು.
 
ಗದಗ ಹೊರವಲಯದ ರಸ್ತೆಯಲ್ಲಿ ಅಕ್ಟೋಬರ್‌ 24ರಿಂದ ನಡೆಯಲಿರುವ ರಾಜ್ಯ ರೋಡ್ ಸೈಕ್ಲಿಂಗ್‌ನಲ್ಲಿ ಅತ್ಯುತ್ತಮ ತಂಡವನ್ನು ಆರಿಸುವ ತಯಾರಿಯಲ್ಲಿದ್ದಾರೆ, ಅಮೆಚೂರ್ ಸೈಕ್ಲಿಂಗ್‌ ಸಂಸ್ಥೆಯವರು.
 
‘ಸೀನಿಯರ್ ವಿಭಾಗದಲ್ಲಿ ಬೆಂಗಳೂರಿನ ನವೀನ್ ಜಾನ್‌ ಮತ್ತು ಮೈಸೂರಿನ ಲೋಕೇಶ ಪಾಲ್ಗೊಳ್ಳುತ್ತಿದ್ದಾರೆ. 18 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗಗಳೆರಡರಲ್ಲೂ ಅತ್ಯುತ್ತಮ ಸ್ಪರ್ಧೆಗೆ ವೇದಿಕೆ ಸಜ್ಜಾಗಿದೆ. ರಾಜ್ಯದ ಪ್ರಮುಖ ಸೈಕ್ಲಿಸ್ಟ್‌ಗಳ ಪೈಕಿ ಇಬ್ಬರು ಅನಿವಾರ್ಯ ಕಾರಣಗಳಿಂದ ಪಾಲ್ಗೊಳ್ಳುತ್ತಿಲ್ಲ. ಆದರೂ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪದಕ ತಂದುಕೊಡುವ ಸಾಕಷ್ಟು ಪ್ರತಿಭೆಗಳು ನಮ್ಮಲ್ಲಿದ್ದಾರೆ. ಆದ್ದರಿಂದ ಹ್ಯಾಟ್ರಿಕ್‌ ಸಾಧನೆ ಕಷ್ಟವಾಗದು ಎಂಬ ಭರವಸೆ ಇದೆ’ ಎಂದು ರಾಜ್ಯ ಅಮೆಚೂರ್ ಸೈಕ್ಲಿಂಗ್‌ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀಶೈಲ ಎಂ.ಕುರಣಿ ಅಭಿಪ್ರಾಯಪಡುತ್ತಾರೆ.
 
ಎರಡು ಸೈಕ್ಲಿಂಗ್ ಕ್ರೀಡಾನಿಲಯ ಮತ್ತು ಸೈಕ್ಲಿಂಗ್‌ಗೆ ಆದ್ಯತೆ ಇರುವ ಕ್ರೀಡಾಶಾಲೆ ಇರುವ ಉತ್ತರ ಕರ್ನಾಟಕವೇ ರಾಜ್ಯದ ಸೈಕ್ಲಿಂಗ್ ಶಕ್ತಿ. ಈ ಬಾರಿ ರಾಜ್ಯ ಚಾಂಪಿಯನ್‌ಷಿಪ್‌ನಲ್ಲಿ ಇದೇ ಮೊದಲ ಬಾರಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸೈಕ್ಲಿಸ್ಟ್‌ಗಳು ಪಾಲ್ಗೊಳ್ಳುತ್ತಿದ್ದಾರೆ. ಈ ಬೆಳವಣಿಗೆ ಹೊಸ ಭರವಸೆ ಮೂಡಿಸಿದೆ. 
 
ವಿಶೇಷ ತರಬೇತಿ ಈ ಬಾರಿಯೂ ಇಲ್ಲ
ಪ್ರತಿಬಾರಿ ರೋಡ್ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ಗೆ ಮುನ್ನ ರಾಜ್ಯದಲ್ಲಿ ವಿಶೇಷ ತರಬೇತಿ ಶಿಬಿರ ಏರ್ಪಡಿಸಲಾಗುತ್ತದೆ. ಕಳೆದ ಬಾರಿ ಈ ‘ಸಂಪ್ರದಾಯ’ ಮುಂದುವರಿಸಲು ಸಾಧ್ಯವಾಗಲಿಲ್ಲ. ಆದರೂ ರಾಜ್ಯ ಚಾಂಪಿಯನ್‌ ಆಗಿತ್ತು. ಈ ಬಾರಿಯೂ ತರಬೇತಿ ಶಿಬಿರ ಏರ್ಪಡಿಸಲು ಆಗುತ್ತಿಲ್ಲ ಎಂದು ಅಮೆಚೂರ್ ಸೈಕ್ಲಿಂಗ್ ಸಂಸ್ಥೆ ತಿಳಿಸಿದೆ.
 
ರಾಜ್ಯದ ಆರು ಮಂದಿ ಸೈಕ್ಲಿಸ್ಟ್‌ಗಳು ದೆಹಲಿಯ ಸಾಯ್‌ ನಿಕಾದಲ್ಲಿ (ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ರಾಷ್ಟ್ರೀಯ ಸೈಕ್ಲಿಂಗ್ ಅಕಾಡೆಮಿಯ ಸಂಸ್ಥೆ) ವಿಶೇಷ ತರಬೇತಿ ಪಡೆಯುತ್ತಿದ್ದಾರೆ. ಅವರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಅವರನ್ನು ನೇರವಾಗಿ ರಾಷ್ಟ್ರೀಯ ಸ್ಪರ್ಧೆಗೆ ಕಳುಹಿಸಲಾಗುತ್ತದೆ. ಈ ಬಗ್ಗೆ ಸೈಕ್ಲಿಸ್ಟ್‌ಗಳಲ್ಲಿ ಅಸಮಾಧಾನವೂ ಇದೆ.
 
ಆದರೆ ‘ರಾಷ್ಟ್ರೀಯ ಶಿಬಿರದಲ್ಲಿ ಇರುವವರನ್ನು ರಾಷ್ಟ್ರಮಟ್ಟದ ಸ್ಪರ್ಧೆಗಳಿಗೆ ರಾಜ್ಯದಿಂದ ನೇರವಾಗಿ ಕಳುಹಿಸಬಹುದು ಎಂಬ ನಿಯಮ ರಾಜ್ಯ ಸಂಸ್ಥೆಯ ನಿಯಮಾವಳಿಗಳಲ್ಲಿ ಇರುವುದರಿಂದ ಯಾವುದೇ ಗೊಂದಲ ಇಲ್ಲ’ ಎಂಬುದು ಸಂಸ್ಥೆಯ ಪದಾಧಿಕಾರಿಗಳ ಹೇಳಿಕೆ.
 
ಅಂತರರಾಷ್ಟ್ರೀಯ ಮಟ್ಟದ ಸೈಕ್ಲಿಂಗ್‌ನಲ್ಲಿ ಪಾಲ್ಗೊಂಡಿದ್ದ ಕಾರಣ ಕಳೆದ ಬಾರಿ ರಾಷ್ಟ್ರೀಯ ರೋಡ್ ಸೈಕ್ಲಿಂಗ್‌ನಲ್ಲಿ ಸ್ಪರ್ಧಿಸದ ನವೀನ್ ಜಾನ್ ಈ ಬಾರಿ ಮರಳಿ ಬಂದಿರುವುದು ರಾಜ್ಯದ ಸೈಕ್ಲಿಂಗ್ ವಲಯದಲ್ಲಿ ಖುಷಿ ಮೂಡಿಸಿದೆ. ಇತ್ತೀಚೆಗೆ ಹಿಮಾಲಯನ್ ರ್‌್ಯಾಲಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಲೋಕೇಶ ಕೂಡ ಪುರುಷ ವಿಭಾಗಕ್ಕೆ ಶಕ್ತಿ ತುಂಬುವ ವಿಶ್ವಾಸವಿದೆ. ಕಳೆದ ಬಾರಿ ಮಹಿಳಾ ವಿಭಾಗಕ್ಕೆ ಪ್ರವೇಶಿಸಿರುವ ಸೀಮಾ ಆಡಗಲ್‌ಮತ್ತು ರೇಣುಕಾ ದಂಡಿನ ಈ ಬಾರಿ ಉತ್ತಮ ಫಾರ್ಮ್‌ನಲ್ಲಿರುವುದೂ ಭರವಸೆ ಮೂಡಿಸಿದೆ. 
 
ಪ್ರತಿ ಬಾರಿ ರಾಜ್ಯಕ್ಕೆ ಹೆಚ್ಚು ಪದಕಗಳನ್ನು ತಂದುಕೊಡುವ ಬಾಲಕ ಮತ್ತು ಬಾಲಕಿಯರ ವಿಭಾಗ ಈ ಬಾರಿಯೂ ಬಲಿಷ್ಠವಾಗಿದೆ.  ರಾಜು ಭಾಟಿ, ಸಂತೋಷ ಕುರಣಿ, ನಾಗಪ್ಪ ಮರಡಿ, ವೆಂಕಪ್ಪ ಕೆಂಗಲಗುತ್ತಿ, ಪ್ರಶಾಂತ ಇ, ಯಲ್ಲಪ್ಪ ಶಿರಬೂರ, ಮೇಘಾ ಗೂಗಾಡ, ಶಾಹಿರಾ ಬಾನು ಲೋಧಿ, ಶೈಲಾ ಮಟ್ಯಾಳ, ದಾನಮ್ಮ ಚಿಚಖಂಡಿ, ಸಹನಾ ಕೂಡಿಗನೂರ, ಸೌಮ್ಯಾ ಅಂತಾಪುರ ಮುಂತಾದವರ ಮೇಲೆ ರಾಜ್ಯ ಹೆಚ್ಚು ನಿರೀಕ್ಷೆ ಇರಿಸಿದೆ.
 
***
ನಮ್ಮದು ಬಲಿಷ್ಠ ತಂಡ
ರಾಜ್ಯದ ಎಲ್ಲ ವಯೋಮಾನದ ಸೈಕ್ಲಿಸ್ಟ್‌ಗಳು ಕೂಡ ಬಲಿಷ್ಠರಾಗಿದ್ದಾರೆ. ರೋಡ್ ಸೈಕ್ಲಿಂಗ್‌ನಲ್ಲಿ ನಮ್ಮದೇ ಪಾರಮ್ಯ. ಉತ್ತಮ ಫಾರ್ಮ್‌ನಲ್ಲಿರುವ ಸೈಕ್ಲಿಸ್ಟ್‌ಗಳು ಈ ಬಾರಿಯೂ ನಿರೀಕ್ಷೆ ಹುಸಿಗೊಳಿಸಲಾರರು. ಬಲಿಷ್ಠ ಕೇರಳ, ರೈಲ್ವೆ, ಸೇನೆ ಮುಂತಾದ ತಂಡಗಳ ಜೊತೆ ಸೆಣಸಿ ಉತ್ತಮ ಫಲಿತಾಂಶ ತಂದುಕೊಡಲು ರಾಜ್ಯದ ಸೈಕ್ಲಿಸ್ಟ್‌ಗಳು ಸಜ್ಜಾಗಿದ್ದಾರೆ. ಗದಗದಲ್ಲಿ ನಡೆಯಲಿರುವ ರಾಜ್ಯ ಚಾಂಪಿಯನ್‌ಷಿಪ್‌ನಲ್ಲಿ ಇದು ಪ್ರತಿಫಲನಗೊಳ್ಳಲಿದೆ.
–ಅನಿತಾ ನಿಂಬರಗಿ, ಬಾಗಲಕೋಟೆ ಸೈಕ್ಲಿಂಗ್ ನಿಲಯದ ಕೋಚ್‌

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.