ADVERTISEMENT

‘ನನ್ನ ಬದುಕಿಗೆ ಇದು ಹೊಸ ತಿರುವು...’

ಕೆ.ಓಂಕಾರ ಮೂರ್ತಿ
Published 23 ಏಪ್ರಿಲ್ 2017, 19:30 IST
Last Updated 23 ಏಪ್ರಿಲ್ 2017, 19:30 IST
‘ನನ್ನ ಬದುಕಿಗೆ ಇದು ಹೊಸ ತಿರುವು...’
‘ನನ್ನ ಬದುಕಿಗೆ ಇದು ಹೊಸ ತಿರುವು...’   
 ‘ನನಗೆ ಮೂವರು ಸಹೋದರಿಯರು. ಪೋಷಕರು ಕೂಲಿ ಮಾಡಿ ನಮ್ಮನ್ನು ಸಾಕುತ್ತಿದ್ದಾರೆ. ತಂದೆ ವರ್ಗಿಸ್‌ ಜಾರ್ಜ್‌ ಗಾರೆ ಕೆಲಸ ಮಾಡಿದರೆ, ತಾಯಿ ಕ್ಯಾಥರಿನ್‌ ಮನೆಮನೆಗೆ ಹೋಗಿ ಕೆಲಸ ಮಾಡುತ್ತಾರೆ. ತಾಯಿ ಈಗ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ವಾಸ್ತವ್ಯಕ್ಕೆ ಸ್ವಂತ ಮನೆಯೂ ಇಲ್ಲ. ಇಂಥ ಬದುಕಿನ ನಡುವೆ ನನ್ನ ಕ್ರೀಡಾ ಜೀವನ ಹೊಸ ತಿರುವು ಪಡೆದುಕೊಂಡಿದೆ...’
 
ಇದೇ ಏಪ್ರಿಲ್ 24ರಿಂದ ಚೀನಾದಲ್ಲಿ ನಡೆಯಲಿರುವ ಏಷ್ಯಾ ಗ್ರ್ಯಾನ್‌ ಪ್ರಿ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ರಾಜ್ಯದ ಅಥ್ಲೀಟ್‌ ರೀನಾ ಜಾರ್ಜ್‌ ಪ್ರತಿಕ್ರಿಯಿಸಿದ ರೀತಿ ಇದು. ಖುಷಿಯ ಜೊತೆಗೆ ಅದರಾಚೆಯ ಬದುಕನ್ನೂ ಬಿಚ್ಚಿಟ್ಟರು.
 
ಚೀನಾದ ಜಿಯಾಕ್ಸಿಂಗ್‌, ಜಿನ್‌ಹುವಾ ಹಾಗೂ ಚೀನಾ ತೈಪೆಯಲ್ಲಿ ನಡೆಯಲಿರುವ ಗ್ರ್ಯಾನ್‌ ಪ್ರಿ ಅಥ್ಲೆಟಿಕ್ಸ್‌ನ ವಿವಿಧ ಲೆಗ್‌ಗಳಲ್ಲಿ 100 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಅದಕ್ಕಾಗಿ ಜನವರಿಯಿಂದ ಪಟಿಯಾಲದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೋರ್ಟ್ಸ್‌ನಲ್ಲಿ ತಾಲೀಮು ನಡೆಸುತ್ತಿದ್ದಾರೆ.
 
10 ವರ್ಷಗಳಿಂದ ಅಥ್ಲೆಟಿಕ್ಸ್‌ನಲ್ಲಿ ತೊಡಗಿಸಿಕೊಂಡಿರುವ ಬೆಂಗಳೂರಿನ ಶಾಂತಿನಗರದ ರೀನಾ ಅವರ ಕ್ರೀಡಾ ಬದುಕಿಗೆ ವೇದಿಕೆ ಒದಗಿಸಿದ್ದು ವಿದ್ಯಾನಗರ ಹಾಗೂ ಮೈಸೂರಿನ ಕ್ರೀಡಾ ಹಾಸ್ಟೆಲ್‌ಗಳು. ಮೈಸೂರಿನಲ್ಲಿ ಬರೋಬ್ಬರಿ ಐದು ವರ್ಷ ವಾಸ್ತವ್ಯ ಹೂಡಿದ್ದ ಅವರು ಟೆರೇಷಿಯನ್‌ ಕಾಲೇಜಿನಲ್ಲಿ ಬಿ.ಕಾಂ ಮುಗಿಸಿದರು.
 
‘ನನ್ನ ಬದುಕಿಗೆ ಶಕ್ತಿ ತುಂಬಿದ್ದು ಲಖನೌದಲ್ಲಿ ನಡೆದ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌. 100 ಹಾಗೂ 200 ಮೀಟರ್ಸ್‌ ಓಟದಲ್ಲಿ ಬೆಳ್ಳಿ ಪದಕ ಜಯಿಸಿದೆ. ಆ ಬಳಿಕ ನನಗೆ ಮೈಸೂರಿನಲ್ಲಿ ಕೇಂದ್ರೀಯ ಅಬಕಾರಿ ಇಲಾಖೆಯಲ್ಲಿ ಉದ್ಯೋಗ ಲಭಿಸಿತು. ಬಡ ಕುಟುಂಬದ ನಮ್ಮ ಜೀವನಕ್ಕೆ ಒಂದು ಆಸರೆ ಲಭಿಸಿತು’ ಎನ್ನುತ್ತಾರೆ ರೀನಾ ಜಾರ್ಜ್‌.
 
ರೀನಾ ಈ ಮೊದಲು 400 ಮೀಟರ್ಸ್‌ ಓಟ ಹಾಗೂ 4x400 ಮೀಟರ್ಸ್‌ ರಿಲೇಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದರು. ಎರಡು ವರ್ಷಗಳಿಂದ 100 ಹಾಗೂ 200 ಮೀಟರ್ಸ್‌ ಓಟದತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ.
 
‘ನಾನು ಇದುವರೆಗೆ ಹಲವು ಕೋಚ್‌ಗಳ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಿದ್ದೇನೆ. ಆನಂದ ಶೆಟ್ಟಿ, ಬಿ.ಜೆ.ಮಂಜುನಾಥ್‌, ದಾಮೋದರ ಶೆಟ್ಟಿ, ವಸಂತಕುಮಾರ್‌, ಕೆ.ಪಿ.ಸುಮನ್‌, ಉದಯ ಅವರಲ್ಲಿ ಪ್ರಮುಖರು.

ಇವರ ಮಾರ್ಗದರ್ಶನ ಹಾಗೂ ಹಿರಿಯ ಅಥ್ಲೀಟ್‌ಗಳ ಸಲಹೆಯಂತೆ ನಾನು ಮುನ್ನಡೆಯುತ್ತಿದ್ದೇನೆ. ಹಲವಾರು ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ಮಾಡಿದ್ದೇನೆ’ ಎಂದು ಅವರು ಹೇಳುತ್ತಾರೆ.ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟ, ಫೆಡರೇಷನ್‌ ಕಪ್‌, ದಸರಾ ಕ್ರೀಡಾಕೂಟದಲ್ಲಿ ಪದಕದ ಸಾಧನೆ ಮಾಡಿದ್ದಾರೆ.
 
‘ರೀನಾ ಈ ಹಿಂದೆ ಒಮ್ಮೆ ಭಾರತ ತಂಡದ ಶಿಬಿರದಲ್ಲಿ ಭಾಗವಹಿಸಿದ್ದರು. ಆಗ ಸ್ಥಾನ ಗಿಟ್ಟಿಸುವಲ್ಲಿ ವಿಫಲವಾಗಿದ್ದರು. ಆ ಬಳಿಕ ಮತ್ತಷ್ಟು ಶ್ರಮ ಹಾಕಿ ತಾಲೀಮು ನಡೆಸಿದರು. ಸಾಕಷ್ಟು ಸುಧಾರಣೆ ಕಂಡಿದ್ದಾರೆ. ಮುಂಬರುವ ಕ್ರೀಡಾಕೂಟಗಳಲ್ಲಿ ಅವರಿಂದ ಉತ್ತಮ ಸಾಧನೆ ಮೂಡಿ ಬರುವ ವಿಶ್ವಾಸ ನನಗಿದೆ’ ಎನ್ನುತ್ತಾರೆ ಅಥ್ಲೆಟಿಕ್‌ ಕೋಚ್‌ ವಸಂತಕುಮಾರ್.
****
ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಬೇಕೆಂಬ ಆಸೆ ಇಟ್ಟುಕೊಂಡಿದ್ದೆ. ಅದೀಗ ನಿಜವಾಗಿದೆ. ತಂಡದಲ್ಲಿ ಸ್ಥಾನ ಲಭಿಸಿದ ಖುಷಿಯ ಜೊತೆಗೆ ಮತ್ತಷ್ಟು ವಿಶ್ವಾಸ ಹೆಚ್ಚಿಸಿದೆ
–ರೀನಾ ಜಾರ್ಜ್‌
****
400 ಮೀಟರ್ಸ್‌ನಿಂದ 100 ಮೀಟರ್ಸ್‌ ಓಟಕ್ಕೆ ಬದಲಾವಣೆ ಮಾಡಿಕೊಂಡಿದ್ದು ರೀನಾ ಜಾರ್ಜ್‌ಗೆ ಅನುಕೂಲವಾಗಿದೆ. ಅಪಾರ ಅನುಭವದ ಜೊತೆಗೆ ಅವರ ಬದ್ಧತೆ, ಶಿಸ್ತುಬದ್ಧ ತಾಲೀಮು ಫಲ ನೀಡುತ್ತಿದೆ
–ವಸಂತಕುಮಾರ್‌, ಕೋಚ್‌, ಕ್ರೀಡಾ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.