ADVERTISEMENT

ನವ ಸಂವತ್ಸರದತ್ತ ಮಹಿಳಾ ಕ್ರಿಕೆಟ್‌

ವಿಕ್ರಂ ಕಾಂತಿಕೆರೆ
Published 25 ಮಾರ್ಚ್ 2018, 19:30 IST
Last Updated 25 ಮಾರ್ಚ್ 2018, 19:30 IST
ಭಾರತ ಕ್ರಿಕೆಟ್‌ ತಂಡದ ಆಟಗಾರ್ತಿಯರು ಅಂಗಳದಲ್ಲಿ ಸಂಭ್ರಮಿಸಿದ ಕ್ಷಣ
ಭಾರತ ಕ್ರಿಕೆಟ್‌ ತಂಡದ ಆಟಗಾರ್ತಿಯರು ಅಂಗಳದಲ್ಲಿ ಸಂಭ್ರಮಿಸಿದ ಕ್ಷಣ   

ನಾಲ್ಕು ದಶಕಗಳಿಂದ ಕ್ರಿಕೆಟ್ ಆಡುತ್ತಿರುವ ಭಾರತ ಮಹಿಳಾ ತಂಡದವರು ಕಳೆದ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ದೇಶದಲ್ಲಿ ಮಹಿಳಾ ಕ್ರಿಕೆಟ್‌ಗೆ ಹೊಸ ವರ್ಚಸ್ಸು ಗಳಿಸಿಕೊಟ್ಟಿದ್ದರು. ಅಲ್ಲಿಯ ವರೆಗೆ ‘ಹೆಣ್ಮಕ್ಕಳು ಆಡುವ ಕ್ರಿಕೆಟ್‌’ ಎಂದರೆ ಬೇಸರಪಟ್ಟುಕೊಳ್ಳುತ್ತಿದ್ದವರಿಗೆ ಬ್ಯಾಟ್‌ ಮತ್ತು ಚೆಂಡಿನ ಮೂಲಕ ಉತ್ತರ ನೀಡಿದ ಮಿಥಾಲಿ ರಾಜ್‌ ಬಳಗದವರು ಮೆಚ್ಚುಗೆಗೆ ಪಾತ್ರರಾಗಿದ್ದು ಮಾತ್ರವಲ್ಲ, ಆರ್ಥಿಕವಾಗಿ ಸಾಕಷ್ಟು ಬಲವನ್ನೂ ಗಳಿಸಿಕೊಂಡರು.

ಆದರೆ ಏಳೆಂಟು ತಿಂಗಳಲ್ಲಿ ಪರಿಸ್ಥಿತಿ ಬದಲಾಯಿತು. ಲೆಕ್ಕಾಚಾರಗಳು ತಲೆಕೆಳಗಾದವು. ನವೆಂಬರ್‌ನಲ್ಲಿ ನಡೆಯಲಿರುವ ಟ್ವೆಂಟಿ–20 ವಿಶ್ವಕಪ್‌ಗೆ ಸಜ್ಜಾಗುತ್ತಿರುವ ಭಾರತ ತಂಡ ಈಗ ದಿಢೀರ್ ಕುಸಿತ ಕಂಡಿದೆ. ಐಸಿಸಿ ಮಹಿಳಾ ಚಾಂಪಿಯನ್‌ಷಿಪ್‌ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಎದುರು ನೀರಸವಾಗಿ ಆಡಿ ಕ್ರಿಕೆಟ್ ಪ್ರೇಮಿಗಳ ಬೇಸರಕ್ಕೆ ಕಾರಣವಾಗಿದೆ.

ಐಸಿಸಿ ಚಾಂಪಿಯನ್‌ಷಿಪ್‌ನ ಭಾರತದ ಅಭಿಯಾನ ಆರಂಭಗೊಂಡಿದ್ದು ಫೆಬ್ರುವರಿಯಲ್ಲಿ. ದಕ್ಷಿಣ ಆಫ್ರಿಕಾ ತಂಡದವರನ್ನು ಅವರ ನೆಲದಲ್ಲೇ 2–1ರಿಂದ ಮಣಿಸಿದ ಭಾರತ ಭರವಸೆ ಮೂಡಿಸಿತ್ತು. ಮೊದಲ ಎರಡು ಪಂದ್ಯಗಳಲ್ಲಿ 88 ಮತ್ತು 178 ರನ್‌ಗಳಿಂದ ಗೆದ್ದ ಭಾರತ ಮೂರನೇ ಪಂದ್ಯದಲ್ಲಿ ಏಳು ವಿಕೆಟ್‌ಗಳಿಂದ ಸೋತಿತ್ತು. ನಂತರ ಸೋಲಿನ ಸರಪಳಿಯನ್ನು ತವರಿನಲ್ಲೂ ಮುಂದುವರಿಸಿತ್ತು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ಕ್ರಮವಾಗಿ ಎಂಟು ವಿಕೆಟ್‌, 60 ರನ್‌ ಮತ್ತು 97 ರನ್‌ಗಳಿಂದ ಸೋತಿತ್ತು. ಭಾರತದ ವಿರುದ್ಧ ಯಾವುದೇ ತಂಡ ಈ ವರೆಗೆ ಗಳಿಸಿದ ಗರಿಷ್ಠ ಮೊತ್ತ (7ಕ್ಕೆ332)ಈ ಸರಣಿಯ ಕೊನೆಯ ಪಂದ್ಯದಲ್ಲಿ ದಾಖಲಾಗಿತ್ತು.

ADVERTISEMENT

ಈ ವೈಫಲ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ಬಿಸಿಸಿಐ ಮಹಿಳಾ ಕ್ರಿಕೆಟ್‌ಗೆ ಬಲ ತುಂಬುವ ಕಾರ್ಯಕ್ಕೆ ಸಜ್ಜಾಗಿದೆ. ಅತ್ಯಂತ ಶೀಘ್ರವಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಮಂಡಳಿಯ ಉದ್ದೇಶ. ಈ ಕಾರಣದಿಂದಲೇ ಇದೇ 28ರಂದು ಸಭೆ ಸೇರಿ ರೂಪುರೇಷೆ ಸಿದ್ಧಗೊಳಿಸಲಿದೆ.

ಬೆಂಗಳೂರಿನಲ್ಲಿ ಹೊಸ ಚಿಗುರು?
ಭಾರತ ತಂಡದ ಅನುಭವಿ ಆಟಗಾರರಾದ ಮಿಥಾಲಿ ರಾಜ್ ಮತ್ತು ಜೂಲನ್ ಗೋಸ್ವಾಮಿ ನಿವೃತ್ತಿಯ ಅಂಚಿನಲ್ಲಿ ಇದ್ದಾರೆ. ಉಳಿದವರ ಪೈಕಿಯೂ ತೀರಾ ಇತ್ತೀಚೆಗೆ ಪದಾರ್ಪಣೆ ಮಾಡಿದವರ ಸಂಖ್ಯೆ ಕಡಿಮೆ. ಹೀಗಾಗಿ ಯುವ ಆಟಗಾರ್ತಿಯರನ್ನು ಸಜ್ಜುಗೊಳಿಸಲು ಮಂಡಳಿ ಚಿಂತನೆ ನಡೆಸಿದೆ. ಬೌಲರ್‌ಗಳು ಮತ್ತು ವಿಕೆಟ್ ಕೀಪರ್‌ಗಳನ್ನು ಬೆಳೆಸುವುದು ಮೊದಲ ಆದ್ಯತೆ. ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಹೊಸ ಚಿಗುರಿಗೆ ನೀರೆರೆಯುವ ಕಾರ್ಯ ನಡೆಯಲಿದೆ.

ಯೋಜನೆಗಳನ್ನು ಸಿದ್ಧಗೊಳಿಸುವ ಸಮಿತಿಯಲ್ಲಿ ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ ಸದಸ್ಯೆ ಡಯಾನ ಎಡುಲ್ಜಿ, ಭಾರತ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್‌, ಟ್ವೆಂಟಿ–20 ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್‌ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥೆ ಹೇಮಲತಾ ಕಲಾ ಇದ್ದಾರೆ. ಇವರೆಲ್ಲರೂ ತಂಡದ ಅಗತ್ಯವನ್ನು ಬಲ್ಲವರಾದ್ದರಿಂದ ಉತ್ತಮ ಯೋಜನೆಗೆ ಅಡಿಪಾಯ ಹಾಕುವ ಭರವಸೆಯಲ್ಲಿದ್ದಾರೆ ಮಹಿಳಾ ಕ್ರಿಕೆಟಿಗರು.


ಮಿಥಾಲಿ ರಾಜ್‌

ದೇಶಿ ಕ್ರಿಕೆಟ್‌ ಬಲಪಡಿಸುವ ಸಾಧ್ಯತೆ
ಪುರುಷರ ಕ್ರಿಕೆಟ್‌ಗೆ ಹೋಲಿಸಿದರೆ ಮಹಿಳೆಯರಿಗೆ ದೇಶಿ ಕ್ರಿಕೆಟ್‌ ಆಡುವ ಅವಕಾಶ ಕಡಿಮೆ. ಹೀಗಾಗಿ ಮಹಿಳಾ ಕ್ರಿಕೆಟಿಗರಿಗಾಗಿ ರಾಷ್ಟ್ರಮಟ್ಟದಲ್ಲಿ ಕ್ರಿಕೆಟ್ ಚಟುವಟಿಕೆ ಬೇಕೆಂಬ ಬೇಡಿಕೆ ಇದೆ. ಈ ಬಾರಿ ಐಪಿಎಲ್‌ನಲ್ಲಿ ಮಹಿಳೆಯರ ಪ್ರದರ್ಶನ ಪಂದ್ಯಗಳನ್ನು ಏರ್ಪಡಿಸಲು ಬಿಸಿಸಿಐ ಚಿಂತನೆ ನಡೆಸಿದಾಗ ಬಿನ್ನಾಭಿಪ್ರಾಯ ವ್ಯಕ್ತಪಡಿಸಿದ ಮಿಥಾಲಿ ರಾಜ್‌ ಅವರ ಆಶಯವೂ ಇದೇ ಆಗಿತ್ತು.

‘ದೇಶಿ ಕ್ರಿಕೆಟ್ ಪಂದ್ಯಗಳನ್ನು ಏರ್ಪಡಿಸದೆ ಏಕಾಏಕಿ ಐಪಿಎಲ್‌ನಲ್ಲಿ ಪ್ರದರ್ಶನ ಪಂದ್ಯ ಏರ್ಪಡಿಸಿದರೆ ಹೇಗೆ’ ಎನ್ನುವ ಧಾಟಿಯಲ್ಲಿ ಅವರು ಆಡಿದ ಮಾತು ಮಾರ್ಮಿಕವಾಗಿತ್ತು.

ಈ ಕಾಳಜಿಗೆ ಬೆಲೆ ಕೊಟ್ಟು ಯೋಜನೆಗಳನ್ನು ರೂಪಿಸಲು ಬಿಸಿಸಿಐ ಮುಂದಾದರೆ ಭಾರತದಲ್ಲಿ ಮಹಿಳಾ ಕ್ರಿಕೆಟ್‌ ಮತ್ತೊಂದು ಮನ್ವಂತರ ಕಾಣುವ ಸಾಧ್ಯತೆ ಇದೆ. ಶಾಂತಾ ರಂಗಸ್ವಾಮಿ, ಅಂಜುಮ್ ಚೋಪ್ರಾ, ಜಯಾ ಶರ್ಮಾ, ಅಂಜು ಜೈನ್‌, ನೀತು ಡೇವಿಡ್‌, ನೂಶಿನ್ ಅಲ್‌ ಖಾದಿರ್‌, ಡಯಾನ ಎಡುಲ್ಜಿ ಮುಂತಾದವರು ಹಾಕಿಕೊಟ್ಟ ಹಾದಿಯಲ್ಲಿ ಮುನ್ನಡೆಯುತ್ತಿರುವ ತಂಡದಲ್ಲಿ ಹೊಸತನ ಮೂಡುವುದು ಖಚಿತ. ವಿಶ್ವಕಪ್‌ನಲ್ಲಿ ಎರಡು ಬಾರಿ ರನ್ನರ್ ಅಪ್ ಆದ, ಟ್ವೆಂಟಿ–20 ವಿಶ್ವಕಪ್‌ನಲ್ಲಿ ಎರಡು ಬಾರಿ ಸೆಮಿಫೈನಲ್‌ ಪ್ರವೇಶಿಸಿದ್ದ ತಂಡ ಮುಂದಿನ ದಿನಗಳಲ್ಲಿ ಪ್ರಶಸ್ತಿಗೆ ಮುತ್ತಿಡುವುದು ಕಷ್ಟಕರವಾಗದು.

ಐಸಿಸಿ ಚಾಂಪಿಯನ್‌ಷಿಪ್‌ ಬಗ್ಗೆ...
ಮಹಿಳೆಯರ ಐಸಿಸಿ ಚಾಂಪಿಯನ್‌ಷಿಪ್‌ನಲ್ಲಿ ಎಂಟು ತಂಡಗಳು ಪಾಲ್ಗೊಳ್ಳುತ್ತಿವೆ. ಪ್ರತಿ ತಂಡ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. 2021ರ ವಿಶ್ವಕಪ್‌ಗೆ ಆತಿಥ್ಯ ವಹಿಸುವ ನ್ಯೂಜಿಲೆಂಡ್ ಮತ್ತು ಚಾಂಪಿಯನ್‌ಷಿಪ್‌ನಲ್ಲಿ ಅಗ್ರ ಸ್ಥಾನ ಗಳಿಸುವ ಮೂರು ತಂಡಗಳು ವಿಶ್ವಕಪ್‌ಗೆ ಪ್ರವೇಶಿಸಲಿವೆ. ಉಳಿದ ತಂಡಗಳು ಅರ್ಹತಾ ಸುತ್ತಿನಲ್ಲಿ ಆಡಬೇಕಾಗುತ್ತದೆ.

ಎರಡು ಸುತ್ತಿನ ಪಂದ್ಯಗಳು ಮುಕ್ತಾಯಗೊಂಡಾಗ ಭಾರತ ನಾಲ್ಕು ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ತಲಾ ಹತ್ತು ಪಾಯಿಂಟ್ ಗಳಿಸಿರುವ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಮೊದಲ ಎರಡು ಸ್ಥಾನದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.