ADVERTISEMENT

ನೀರಿನಲ್ಲಿ ಸಾಹಸದಾಟ...

ಕೆ.ಓಂಕಾರ ಮೂರ್ತಿ
Published 19 ಮಾರ್ಚ್ 2017, 19:30 IST
Last Updated 19 ಮಾರ್ಚ್ 2017, 19:30 IST
ಚಿತ್ರಗಳು: ಇರ್ಷಾದ್‌ ಮಹಮ್ಮದ್‌
ಚಿತ್ರಗಳು: ಇರ್ಷಾದ್‌ ಮಹಮ್ಮದ್‌   

ಜಲ ಸಾಹಸ ಕ್ರೀಡೆಗಳೆಂದಾಗ ಹೆಚ್ಚಿನವರು ಗೋವಾಕ್ಕೆ ಹೋಗಲು ಬಯಸುತ್ತಾರೆ. ಅಲ್ಲಿ ಈ ಕ್ರೀಡೆಗೆ ಮಹತ್ವ ನೀಡಲಾಗಿದೆ. ಕಡಲ ಕಿನಾರೆಯ ಬಹುತೇಕ ಸ್ಥಳಗಳಲ್ಲಿ ಜಲ ಸಾಹಸ ಕ್ರೀಡಾ ಕೇಂದ್ರ ಸ್ಥಾಪಿಸಿ ಸಾಹಸ ಪ್ರಿಯರು, ಕ್ರೀಡಾಪಟುಗಳು ಹಾಗೂ ಪ್ರವಾಸಿಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಅದಕ್ಕಾಗಿ ವಿದೇಶಗಳಿಂದಲೂ ಜನರು ಬರುತ್ತಾರೆ. ಇದು ಪ್ರವಾಸೋದ್ಯಮಕ್ಕೂ ನೆರವಾಗಿದೆ.

ಸಾಹಸ ಕ್ರೀಡೆಗಳತ್ತ ಜನರ ಆಸಕ್ತಿ ಹೆಚ್ಚುತ್ತಿರುವುದರಿಂದ ರಾಜ್ಯದಲ್ಲೂ ನಿಧಾನವಾಗಿ ಸಾಹಸ ಕ್ರೀಡೆಗಳಿಗೆ ಒತ್ತು ನೀಡಲಾಗುತ್ತಿದೆ. ಹೊಸ ಯೋಜನೆ ರೂಪಿಸಲಾಗುತ್ತಿದೆ.

ರಾಜ್ಯದಲ್ಲಿ ಮಂಗಳೂರು (ಪಣಂಬೂರು), ಉಡುಪಿ (ಮಲ್ಪೆ), ಕಾರವಾರ, ಮುರುಡೇಶ್ವರ, ಗೋಕರ್ಣದಂಥ (ಓಂ ಬೀಚ್‌) ಸಮುದ್ರ ತೀರ ಪ್ರದೇಶಗಳಲ್ಲಿ ಜಲ ಸಾಹಸ ಕ್ರೀಡೆಗಳು ನಡೆಯುತ್ತಲೇ ಇವೆ. ಹಿರಿಯೂರಿನ ವಾಣಿ ವಿಲಾಸ ಸಾಗರ, ಕೊಡಗಿನ ದುಬಾರೆ ಸೇರಿದಂತೆ ಹಲವೆಡೆ ನದಿ, ಜಲಪಾತ, ಜಲಾಶಯ, ಕೆರೆಗಳಲ್ಲಿ ವಿವಿಧ ಸಾಹಸ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ. ಈ ಮೂಲಕ ಕ್ರೀಡಾಪಟುಗಳು, ಪ್ರವಾಸಿಗರು ಹಾಗೂ ಸಾಹಸಪ್ರಿಯರನ್ನು ಸೆಳೆಯಲು ಕಸರತ್ತು ನಡೆದಿದೆ.

ADVERTISEMENT

ಕ್ರೀಡಾ ಇಲಾಖೆಯ ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಿಂದ ವಾಣಿ ವಿಲಾಸ ಸಾಗರ, ಕಾರವಾರ ಹಾಗೂ ಕೊಡಗಿನ ದುಬಾರೆ, ಬರಪೊಳೆಯಲ್ಲಿ ಆಗಾಗ್ಗೆ ಜಲ ಸಾಹಸ ಕ್ರೀಡೆ ನಡೆಸಲಾಗುತ್ತದೆ. ಅಲ್ಲದೆ, ಇಲ್ಲಿನ ಕೇಂದ್ರಗಳಲ್ಲಿ ಸಾಹಸ ಕ್ರೀಡೆಯ ದುಬಾರಿ ವೆಚ್ಚದ ಉಪಕರಣಗಳೂ ಇವೆ.

ದಸರಾ ಮಹೋತ್ಸವ ಸಮಯದಲ್ಲಿ ಸಾಹಸ ಕ್ರೀಡೆ ಆಯೋಜಿಸಿ ಸೈ ಎನಿಸಿಕೊಂಡಿರುವ ಮೈಸೂರು ಸಮೀಪದ ವರುಣಾ ಕೆರೆಯಲ್ಲಿ ಜಲ ಸಾಹಸ ಕ್ರೀಡೆಯ ಶಾಶ್ವತ ಕೇಂದ್ರ ಸ್ಥಾಪಿಸುವ ಕಾಲ ಸನ್ನಿಹಿತವಾಗುತ್ತಿದೆ. ಅದಕ್ಕಾಗಿ ಈ ಬಾರಿ ಬಜೆಟ್‌ನಲ್ಲಿ ರಾಜ್ಯ ಸರ್ಕಾರವು ₹ 5 ಕೋಟಿ ಹಣ ತೆಗೆದಿರಿಸಿದೆ.
ಸುಮಾರು 165 ಎಕರೆ ಪ್ರದೇಶದಲ್ಲಿರುವ ವರುಣಾ ಕೆರೆಯಲ್ಲಿ ಈಗಾಗಲೇ ಸಾಕಷ್ಟು ಸವಲತ್ತುಗಳು ಇವೆ. ಅದನ್ನು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗುತ್ತಿದೆ.

‘ವರುಣಾ ಕೆರೆಯಲ್ಲಿ ವರ್ಷಪೂರ್ತಿ ನೀರು ಇರುವುದು, ವಿಶಾಲ ಸ್ಥಳಾವಕಾಶದ ಸೌಲಭ್ಯ ಹಾಗೂ ಈ ಭಾಗದಲ್ಲಿ ಹೆಚ್ಚಿನ ಪ್ರವಾಸಿಗರು ಬರುವುದರಿಂದ ಪೂರ್ಣಪ್ರಮಾಣದ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದೆ. ಜೊತೆಗೆ ಮೈಸೂರು–ತಿ.ನರಸೀಪುರ ಹೆದ್ದಾರಿ (ಎನ್‌ಎಚ್–212) ಪಕ್ಕದಲ್ಲಿಯೇ ಇದೆ’ ಎನ್ನುತ್ತಾರೆ ಕ್ರೀಡಾ ಇಲಾಖೆಯ ಅಧಿಕಾರಿಗಳು.

ಏನೆಲ್ಲಾ ಜಲ ಸಾಹಸ..?
ಪ್ಯಾರಾಸೇಲಿಂಗ್‌, ವಾಟರ್‌ ಜೆಟ್‌, ಫ್ಲೋಟಿಂಗ್‌ ಜೆಟ್‌, ಕೆನೊಯಿಂಗ್‌, ವಿಂಡ್‌ ಸರ್ಫಿಂಗ್‌ನಂಥ ಸಾಹಸ ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ.

ನೀರನ್ನು ಸೀಳಿಕೊಂಡು ಅಬ್ಬರಿಸುತ್ತಾ ಮುನ್ನುಗ್ಗುವ ಜೆಟ್‌ಸ್ಕೀ ರೈಡ್‌, ಮೈನವಿರೇಳಿಸುವ ರಾಫ್ಟಿಂಗ್‌, ದೇಹ ಒದ್ದೆಯಾಗಿಸುವ ಬನಾನ ರೈಡ್‌, ರೋಚಕತೆ ತುಂಬುವ ಸ್ಪೀಡ್‌ ಬೋಟ್‌, ಮೈಜುಮ್ಮೆನಿಸುವ ಕಯಾಕಿಂಗ್‌ ಕೂಡ ಇರಲಿವೆ.

ಜೆಟ್‌ಸ್ಕೀ (ಬೈಕಿನಾಕಾರದ ವಾಹನ) ಓಡಿಸಲು ಮಾರ್ಗದರ್ಶಕರು ಇರುತ್ತಾರೆ. ಸ್ಪೀಡ್‌ ಬೋಟ್‌ ಹಾಗೂ ಬನಾನ ರೈಡ್‌ನಲ್ಲಿ ಆರು ಮಂದಿ ಕುಳಿತು ಪ್ರಯಾಣಿಸಬಹುದು. ರಾಫ್ಟಿಂಗ್‌ನಲ್ಲಿ ಏಳು ಮಂದಿ ಕುಳಿತು ಹೋಗಬಹುದು. ಕಯಾಕಿಂಗ್‌ನಲ್ಲಿ ಒಬ್ಬರು ಅಥವಾ ಇಬ್ಬರು ಕುಳಿತು ಸಾಗುವ ವ್ಯವಸ್ಥೆ ಇರುತ್ತದೆ. ಜಲಸಾಹಸ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರ ಸುರಕ್ಷತೆಗಾಗಿ ಸುರಕ್ಷ ಕವಚ (ಲೈಫ್‌ ಜಾಕೆಟ್‌) ಹಾಕಲಾಗುತ್ತದೆ.

ಅಲ್ಲದೆ, ವರುಣಾ ಕೆರೆಯಲ್ಲಿ ಜಲ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳುವವರು 2–3 ದಿನ ಇಲ್ಲಿಯೇ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡಲು (ಕ್ಯಾಂಪಿಂಗ್‌ ನೆಟ್‌) ಕ್ರೀಡಾ ಇಲಾಖೆ ಯೋಜನೆ ರೂಪಿಸುತ್ತಿದೆ. ಬೆಂಗಳೂರಿನ ಹಲಸೂರು ಕೆರೆಯಲ್ಲಿ ರಾಷ್ಟ್ರೀಯಮಟ್ಟದ ಹಾಯಿದೋಣಿ ಸ್ಪರ್ಧೆ ನಡೆಯುವಂತೆ ಇಲ್ಲಿಯೂ ವಿವಿಧ ಸ್ಪರ್ಧೆ ಆಯೋಜಿಸಲು ರೂಪುರೇಷೆ ಸಿದ್ಧಪಡಿಸುತ್ತಿದೆ. ಅಲ್ಲದೆ, ಈ ಪ್ರದೇಶದಲ್ಲಿ ಬಂಗೀ ಜಂಪಿಂಗ್‌ ಸಾಹಸಕ್ಕೆ ವೇದಿಕೆ ಸಿದ್ಧಪಡಿಸಲೂ ಪ್ರವಾಸೋದ್ಯಮ ಇಲಾಖೆ ಚಿಂತನೆ ನಡೆಸಿದೆ.

ಈ ಕೆರೆಯು ಮೈಸೂರು ನಗರದಿಂದ 10 ಕಿ.ಮೀ. ದೂರದಲ್ಲಿದೆ. ಈ ಕೆರೆಯು ಸದ್ಯ ಕಾವೇರಿ ನೀರಾವರಿ ನಿಗಮದ ಸುಪರ್ದಿಯಲ್ಲಿದೆ. ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್‌ ಎಂ.ವಿಶ್ವೇಶ್ವರಯ್ಯ ಈ ಕೆರೆ ನಿರ್ಮಿಸಿದ್ದರು. ವರುಣಾ ನಾಲೆ ಮೂಲಕ ಇಲ್ಲಿಗೆ ನೀರು ಹರಿದುಬರುವುದರಿಂದ ಕೆರೆಯು ವರ್ಷಪೂರ್ತಿ ತುಂಬಿರುತ್ತದೆ.

‘ಮೈಸೂರು ವಿಶ್ವವಿದ್ಯಾನಿಲಯ ವತಿಯಿಂದ ಕುಕ್ಕರಹಳ್ಳಿ ಕೆರೆಯಲ್ಲಿ ಜಲ ಸಾಹಸ ಕ್ರೀಡೆಗೆಂದು ನಾಲ್ಕೈದು ವರ್ಷಗಳ ಹಿಂದೆಯೇ ₹ 50 ಲಕ್ಷ ಬಿಡುಗಡೆ ಮಾಡಲಾಗಿತ್ತು. ಟೆಂಡರ್‌ ಕೂಡ ಕರೆಯಲಾಗಿತ್ತು. ಆದರೆ, ಈ ಕ್ರೀಡೆಯು ದುಬಾರಿ ಆಗಿರುವುದರಿಂದ ಬಿಡ್‌ದಾರರು ಆಸಕ್ತಿ ತೋರಿಸಲಿಲ್ಲ. ಹೀಗಾಗಿ, ಹಣ ವಾಪಾಸಾಯಿತು. ಈಗ ವರುಣಾ ಕೆರೆಯಲ್ಲಿ ಸಾಹಸ ಕ್ರೀಡೆ ಕೇಂದ್ರ ಸ್ಥಾಪಿಸಲು ಮುಂದಾಗಿರುವುದು ಈ ಭಾಗದ ಕ್ರೀಡಾಪಟುಗಳಿಗೆ ನೆರವಾಗಲಿದೆ’ ಎನ್ನುತ್ತಾರೆ ಮೈಸೂರು ವಿ.ವಿ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ.ಸಿ.ಕೃಷ್ಣ.

**

ಸಾಹಸದಾಟಗಳ ಕೇಂದ್ರಬಿಂದು...
ಮೈಸೂರಿನಲ್ಲಿ ಏರೋ ಕ್ರೀಡೆ ಹಾಗೂ ಜಲ ಸಾಹಸ ಕ್ರೀಡೆಯನ್ನು ಉತ್ತೇಜಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಕ್ರೀಡಾಪಟುಗಳು, ಸಾಹಸಪ್ರಿಯರು ಹಾಗೂ ಪ್ರವಾಸಿಗಳಲ್ಲಿ ಸಹಜವಾಗಿಯೇ ಖುಷಿ ಉಂಟು ಮಾಡಿದೆ.

ಅರಮನೆಗಳ ನಗರಿಯನ್ನು ‘ಏರೋ ಕ್ರೀಡಾ’ ತಾಣವನ್ನಾಗಿಸಲು ಬಜೆಟ್‌ನಲ್ಲಿ ಘೋಷಿಸುವ ಜೊತೆಗೆ ಜಲ ಸಾಹಸ ಕ್ರೀಡೆಗೂ ₹ 5 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಅದಕ್ಕಾಗಿ ಇಲ್ಲಿನ ಮಂಡಕಳ್ಳಿ ವಿಮಾನ ನಿಲ್ದಾಣ ಹಾಗೂ ವರುಣಾ ಕೆರೆಯನ್ನು ಆಯ್ಕೆ ಮಾಡಿಕೊಂಡಿದೆ. ವಿವಿಧ ಸಾಹಸ ಕ್ರೀಡೆಗಳನ್ನು ಶಾಶ್ವತವಾಗಿ ಆಯೋಜಿಸಲು ಮುಂದಾಗಿದೆ. ಸ್ಕೈಡೈವಿಂಗ್‌, ಪ್ಯಾರಾಗ್ಲೈಡಿಂಗ್, ಏರ್‌ ಬಲೂನ್ ರೈಡ್‌, ಹ್ಯಾಂಗ್‌ಗ್ಲೈಡಿಂಗ್, ಜಾಯ್‌ ರೈಡ್‌ ಜೊತೆಗೆ ಜೆಟ್‌ಸ್ಕೀ, ಸ್ಪೀಡ್‌ ಬೋಟ್‌, ಬನಾನ ರೈಡ್‌ನಂಥ ಜಲ ಸಾಹಸ ಕ್ರೀಡೆಗಳ ವೈಭವವೂ ಇರಲಿದೆ.

**

ರಾಷ್ಟ್ರಪತಿ ಪದಕ ಪಡೆದ ನಂದಿನಿ
ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ದ್ವಿತೀಯ ಬಿಎಸ್ಸಿ ಓದುತ್ತಿರುವ ಬಿ.ಎಸ್‌.ನಂದಿನಿ ಅವರು ಜಲ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಂಡು ಗಮನ ಸೆಳೆಯುತ್ತಿದ್ದಾರೆ. ಕರ್ನಾಟಕ–ಗೋವಾ ವಿಭಾಗದಿಂದ ನೌಕಾದಳದ ಕೆಡೆಟ್‌ ಆಗಿ ನವದೆಹಲಿಯಲ್ಲಿ ನಡೆದ ಈ ಬಾರಿಯ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಭಾಗವಹಿಸಿ ರಾಷ್ಟ್ರಪತಿ ಪದಕ ಜಯಿಸಿದ್ದಾರೆ.

ನಂದಿನಿ ಒಡಿಶಾದ ಚಿಲ್ಕಾ ಹಾಯಿದೋಣಿ ಸ್ಪರ್ಧೆಯಲ್ಲಿ ಭಾಗವಹಿಸಿ ಐದನೇ ಸ್ಥಾನ ಪಡೆದಿದ್ದಾರೆ. ಉಡುಪಿಯಲ್ಲಿ ನಡೆದ ಹಾಯಿದೋಣಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಸಂಪಾದಿಸಿದ್ದಾರೆ. ಈ ಸಾಧನೆ ಜೊತೆಗೆ ವಿವಿಧ ಸ್ಪರ್ಧೆಗಳಲ್ಲಿ ಗೆದ್ದು ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.

‘ಆರಂಭದಲ್ಲಿ ಹಾಯಿದೋಣಿ (ಯಾಚಿಂಗ್‌) ಸ್ಪರ್ಧೆಯಲ್ಲಿ ಭಾಗವಹಿಸುವಾಗ ತುಂಬಾ ಭಯವಾಯಿತು. ಸ್ಪರ್ಧೆಗೂ ಮೊದಲು ಈಜು ಕಲಿಸಿ ತರಬೇತಿ ನೀಡಿದ್ದರು. ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲೂ ಹಾಯಿದೋಣಿ ಸ್ಪರ್ಧೆಯ ತರಬೇತಿ ಶಿಬಿರ ನಡೆದಿತ್ತು’ ಎಂದು ಅವರು ಹೇಳುತ್ತಾರೆ.

ಈಗ ವರುಣಾ ಕೆರೆಯಲ್ಲಿ ಜಲ ಸಾಹಸ ಕ್ರೀಡೆ ಅಭಿವೃದ್ಧಿಗೆ ಸರ್ಕಾರ ಮುಂದಾಗಿರುವುದು ಅವರಲ್ಲಿ ಮತ್ತಷ್ಟು ಖುಷಿ ಉಂಟು ಮಾಡಿದೆ.

**

ವರುಣಾ ಕೆರೆಯಲ್ಲಿ ಹಲವು ಬಾರಿ ಜಲ ಸಾಹಸ ಕ್ರೀಡೆ ಆಯೋಜಿಸಲಾಗಿದೆ. ಪೂರ್ಣಪ್ರಮಾಣದ ಕೇಂದ್ರ ಸ್ಥಾಪಿಸುವ ಬಗ್ಗೆ ಇನ್ನೂ ರೂಪುರೇಷೆ ಅಂತಿಮಗೊಂಡಿಲ್ಲ. ಕಾರ್ಯನಿರ್ವಹಣೆ ವಿಧಾನದ ಕುರಿತು ಯೋಜನೆ ರೂಪಿಸಲಾಗುತ್ತಿದೆ
–ಅನುಪಮ್‌ ಅಗರವಾಲ್‌, ನಿರ್ದೇಶಕ, ಕ್ರೀಡಾ ಇಲಾಖೆ

**

ಮೈಸೂರಿನಲ್ಲಿ ಸಾಹಸ ಕ್ರೀಡಾ ಚಟುವಟಿಕೆಗಳಿಗೆ ಉತ್ತಮ ವಾತಾವರಣವಿದ್ದು, ಆಸಕ್ತ ಕ್ರೀಡಾಪಟುಗಳು ಇದ್ದಾರೆ. ಸರ್ಕಾರ ಕೈಗೊಂಡಿರುವ ಕ್ರಮ ಉತ್ತಮವಾಗಿದ್ದು ಅದನ್ನು ಅಧಿಕಾರಿಗಳು ಕ್ರಮಬದ್ಧವಾಗಿ ಅನುಷ್ಠಾನಗೊಳಿಸಬೇಕು
–ಡಾ.ಸಿ.ಕೃಷ್ಣ,
ನಿವೃತ್ತ ನಿರ್ದೇಶಕ, ಮೈಸೂರು ವಿ.ವಿ ದೈಹಿಕ ಶಿಕ್ಷಣ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.