ADVERTISEMENT

ಪಿಚ್‌ ವಿವಾದಗಳ ಸುತ್ತ ಮುತ್ತ...

ಪ್ರಮೋದ ಜಿ.ಕೆ
Published 5 ಮಾರ್ಚ್ 2017, 19:30 IST
Last Updated 5 ಮಾರ್ಚ್ 2017, 19:30 IST
ಏನಿದೆಯೋ ಈ ಪಿಚ್‌ ಒಳಗೆ... ಎರಡನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯಕ್ಕೂ ಮೊದಲು ಆಸ್ಟ್ರೇಲಿಯಾದ ಸ್ಪಿನ್ನರ್‌ ಸ್ಟೀವ್‌ ಓ ಕೀಫ್‌ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ನೋಡಿದ್ದು ಹೀಗೆ –ಪ್ರಜಾವಾಣಿ ಚಿತ್ರ/ಪಿ.ಎಸ್‌. ಕೃಷ್ಣಕುಮಾರ್‌
ಏನಿದೆಯೋ ಈ ಪಿಚ್‌ ಒಳಗೆ... ಎರಡನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯಕ್ಕೂ ಮೊದಲು ಆಸ್ಟ್ರೇಲಿಯಾದ ಸ್ಪಿನ್ನರ್‌ ಸ್ಟೀವ್‌ ಓ ಕೀಫ್‌ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ನೋಡಿದ್ದು ಹೀಗೆ –ಪ್ರಜಾವಾಣಿ ಚಿತ್ರ/ಪಿ.ಎಸ್‌. ಕೃಷ್ಣಕುಮಾರ್‌   

‘ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ದೇಶಗಳಿಗೆ ಹೋಗಿ ಆಡಿ ಬನ್ನಿ, ಆಗ ನಿಮಗೆ ಗೊತ್ತಾಗುತ್ತದೆ. ಅಲ್ಲಿನ ಪಿಚ್‌ಗಳನ್ನು ತವರಿನ ತಂಡಕ್ಕೆ ಅನುಕೂಲವಾಗುವಂತೆ ಸಜ್ಜು ಮಾಡಿಕೊಂಡಿರುತ್ತಾರೆ. ನಾವೂ ಅದೇ ರೀತಿ ಮಾಡಿದರೆ ತಪ್ಪೇನು...’ ಹೀಗೆ ಭಾರತದ ಪಿಚ್‌ ಕ್ಯುರೇಟರ್‌ಗಳ ವಿರುದ್ಧ ಗುಡುಗಿದ್ದು ಮಾಜಿ ನಾಯಕ ಕಪಿಲ್ ದೇವ್‌.

ಅದು 2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯ. ಮುಂಬೈನಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡವನ್ನು ಪ್ರವಾಸಿ ಪಡೆಯವರು 214 ರನ್‌ಗಳಿಂದ ಮಣಿಸಿ ಸರಣಿ ಜಯಿಸಿದ್ದರು. 50 ಓವರ್‌ಗಳ ಪಂದ್ಯದಲ್ಲಿ ಮೂವರು ಬ್ಯಾಟ್ಸ್‌ಮನ್‌ಗಳು ಶತಕ ಸಿಡಿಸಿದ್ದರು.

ಆಗ ಭಾರತ ತಂಡದ ನಿರ್ದೇಶಕರಾಗಿದ್ದ ರವಿ ಶಾಸ್ತ್ರಿ ‘ತವರಿನ ತಂಡಕ್ಕೆ ಅನುಕೂಲವಾಗುವಂತೆ ಪಿಚ್‌ ಸಜ್ಜು ಮಾಡಿ’ ಎಂದು ವಾಂಖೆಡೆ ಕ್ರೀಡಾಂಗಣದ ಕ್ಯುರೇಟರ್‌ ಸುಧೀರ್ ನಾಯ್ಕ ಅವರಲ್ಲಿ ಮನವಿ ಮಾಡಿದ್ದರಂತೆ. ಸುಧೀರ್‌ ಇದಕ್ಕೆ ಸೊಪ್ಪು ಹಾಕದೇ ‘ಸ್ಪರ್ಧಾತ್ಮಕ ಪಿಚ್‌ ಮಾಡುತ್ತೇನೆ. ನೀವು ಹೇಳಿದಂತೆ ಕೆಲಸ ಮಾಡಲು ಆಗುವುದಿಲ್ಲ’ ಎಂದು ಖಡಕ್ಕಾಗಿ ಮಾತಿನ ಪೆಟ್ಟು ನೀಡಿದ್ದರು.

ಆ ಪಂದ್ಯದಲ್ಲಿ ಭಾರತ 224 ರನ್‌ಗೆ ಆಲೌಟ್ ಆಗಿ ಸೋಲು ಕಂಡಿತ್ತು. ಆದ್ದರಿಂದ ಕಪಿಲ್ ದೇವ್‌ ಕ್ಯುರೇಟರ್‌ಗಳ ವಿರುದ್ಧ ಚಾಟಿ ಬೀಸಿದ್ದರು. ವಿದೇಶಿ ತಂಡಗಳು ತವರಿನಲ್ಲಿ ತಮಗೆ ಅನುಕೂಲವಾಗುವ ಪಿಚ್‌ ಸಜ್ಜು ಮಾಡಿಕೊಳ್ಳುತ್ತವೆ. ಆದ್ದರಿಂದ ರವಿಶಾಸ್ತ್ರಿ ಕೇಳಿದ್ದರಲ್ಲಿ ತಪ್ಪೇನೂ ಇಲ್ಲ ಎಂದು ಕಪಿಲ್‌ ಹೇಳಿದ್ದರು.

ಇದು ಒಂದು ಉದಾಹರಣೆಯಷ್ಟೆ. ಭಾರತದ ಮಟ್ಟಿಗೆ ಪಿಚ್ ವಿವಾದಗಳು ಹೊಸದೇನಲ್ಲ. ಇದು ಇಲ್ಲಿಗೆ ಕೊನೆಯೂ ಅಲ್ಲ. ಈಗ ಮತ್ತೊಂದು ಪಿಚ್‌ ವಿವಾದ ಎದ್ದಿದೆ. ಪುಣೆಯಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯಕ್ಕೆ ಸಜ್ಜು ಮಾಡಲಾಗಿದ್ದ ಪಿಚ್‌ ಕಳಪೆ ಮಟ್ಟದ್ದು ಎಂದು ಪಂದ್ಯದ ರೆಫರಿ ಐಸಿಸಿಗೆ ದೂರು ಕೊಟ್ಟಿದ್ದಾರೆ. ಎರಡು ವರ್ಷಗಳ ಹಿಂದೆ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಾಗಪುರದಲ್ಲಿ ನಡೆದ ಪಂದ್ಯದ ಪಿಚ್‌ ಕೂಡ ವಿವಾದಕ್ಕೆ ಕಾರಣವಾಗಿತ್ತು. ಕ್ರಿಕೆಟ್‌ ಇರುವವರಿಗೂ ಪಿಚ್‌ ವಿವಾದ ಇದ್ದಿದ್ದೇ.

ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪಿಚ್ ಹೇಗೆ ಇರಲಿ, ಐದು ದಿನಗಳ ಟೆಸ್ಟ್‌ ಎಷ್ಟೇ ದಿನಗಳಲ್ಲಿ ಮುಗಿದು ಹೋಗಲಿ ತಂಡದಲ್ಲಿರುವ ಆಟಗಾರರು ಮಾತ್ರ ತುಟಿ ಬಿಚ್ಚುತ್ತಿಲ್ಲ. ‘ಪಿಚ್‌ ಕಳಪೆಯಾಗಿತ್ತು’ ಎಂದು ಖುದ್ದು ರೆಫರಿಯೇ ದೂರು ಕೊಟ್ಟಿದ್ದಾರೆ. ಆದರೂ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಇದರ ಬಗ್ಗೆ ಏನೂ ಮಾತನಾಡದೇ ‘ಹಿಂದಿನ ಎರಡು ವರ್ಷಗಳ ಲ್ಲಿಯೇ ತಂಡದ ಅತ್ಯಂತ ಕಳಪೆ ಬ್ಯಾಟಿಂಗ್ ನಮ್ಮದು’ ಎಂದರು. ಆರಂಭಿಕ ಬ್ಯಾಟ್ಸ್‌ಮನ್‌ ಮುರಳಿ ವಿಜಯ್‌ ‘ಪಿಚ್‌ ಚೆನ್ನಾಗಿಯೇ ಇತ್ತು’ ಎಂದರು.

ಪಿಚ್‌ ಹೇಗೆಯೇ ಇದ್ದರೂ ನಾವು ನಮ್ಮ ಸಾಮರ್ಥ್ಯ ನಂಬಿ ಆಡಬೇಕೆಂಬುದು ಆಟಗಾರರ ನಿಲುವಾಗಿದ್ದರೆ ಅದರಲ್ಲಿ ತಪ್ಪೇನು ಇಲ್ಲ. ಆದರೆ ಎಲ್ಲಾ ದೇಶಗಳ ಕ್ರಿಕೆಟ್‌ ಮಂಡಳಿಗಳು ಇದೇ ರೀತಿ ಮಾಡುವುದಿಲ್ಲವಲ್ಲ. ನಮ್ಮವರೇ ಗೆಲ್ಲಬೇಕೆಂದು ಆ ತಂಡ ಯಾವ ವಿಭಾಗದಲ್ಲಿ ಬಲಿಷ್ಠವಾಗಿದೆಯೋ ಅದಕ್ಕೆ ತಕ್ಕಂತೆ ಪಿಚ್‌ ಸಜ್ಜು ಮಾಡುತ್ತಾರೆ.

ಆಸ್ಟ್ರೇಲಿಯಾ ವೇಗದ ಬೌಲಿಂಗ್‌ನಲ್ಲಿ ಬಲಿಷ್ಠವಾಗಿದೆ. ಆದ್ದರಿಂದ ತಂಡದ ವೇಗದ ಬೌಲಿಂಗ್‌ಗೆ ಹೆಚ್ಚು ಅನುಕೂಲ ವಾಗುವಂತೆ ತವರಿನಲ್ಲಿ ಪಿಚ್‌ ಸಜ್ಜಾಗಿರುತ್ತದೆ. ಆದರೆ ಭಾರತ ತವರಿನಲ್ಲಿ ಆಡುವಾಗ ಪಿಚ್‌ ಬಹುತೇಕ ಸ್ಪಿನ್ ಸ್ನೇಹಿ ಆಗಿರುತ್ತದೆ. ಏಕೆಂದರೆ ಉಪಖಂಡದ ಪಿಚ್‌ಗಳಲ್ಲಿ ರವಿಚಂದ್ರನ್ ಅಶ್ವಿನ್‌, ರವೀಂದ್ರ ಜಡೇಜ ಅವರಂಥ ಸ್ಪಿನ್ನರ್‌ಗಳೇ ಹೆಚ್ಚು ವಿಕೆಟ್‌ಗಳನ್ನು ಪಡೆಯುತ್ತಾರೆ. ಆದರೆ ಪುಣೆ ಪಂದ್ಯದಲ್ಲಿ ಭಾರತವೇ ತೋಡಿದ ಸ್ಪಿನ್‌ ಖೆಡ್ಡಾದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳೇ ಬಿದ್ದಿದ್ದು ಅಚ್ಚರಿ.

ಬದಲಾಗಲಿ ಕ್ಯುರೇಟರ್‌ಗಳ ನಿಲುವು
ಭಾರತ ತಂಡದ ಆಡಳಿತ ಅಥವಾ ನಾಯಕ ಹೇಳಿದ ಮಾತನ್ನೇ ಕೇಳಿಕೊಂಡು ಕೆಲಸ ಮಾಡಬೇಕಾದ ಅನಿವಾರ್ಯತೆ ಅನೇಕ ಸಲ ಕ್ಯುರೇಟರ್‌ಗಳಿಗೆ ಬರುತ್ತದೆ. ಆದರೆ ಅವರು ಯಾವ ಒತ್ತಡಕ್ಕೆ ಬಗ್ಗದೇ ಸ್ಪರ್ಧಾತ್ಮಕ ಪಿಚ್‌ ನಿರ್ಮಿಸಿದರೆ ಟೆಸ್ಟ್‌ ಪಂದ್ಯದ ಸೊಬಗು ಉಳಿಯು ತ್ತದೆ. ಎರಡು, ಮೂರು ದಿನಗಳಲ್ಲಿಯೇ ಪಂದ್ಯ ಮುಗಿದರೆ ಟೆಸ್ಟ್‌ಗೆ ಬೆಲೆ ಉಳಿಯವುದಾದರೂ ಹೇಗೆ?

ಎಷ್ಟೇ ಒತ್ತಡ ಹೇರಿದರೂ ಬಗ್ಗದೇ ತಮಗೆ ಅನಿಸಿದ ರೀತಿಯಲ್ಲಿ ಉತ್ತಮ ಪಿಚ್‌ ನಿರ್ಮಿಸಿದ ಅನೇಕ ಕ್ಯುರೇಟರ್‌ಗಳು ನಮ್ಮ ನಡುವೆ ಇದ್ದಾರೆ. 2012ರಲ್ಲಿ ಇಂಗ್ಲೆಂಡ್ ತಂಡ ಕೋಲ್ಕತ್ತದಲ್ಲಿ ಟೆಸ್ಟ್‌ ಪಂದ್ಯ ಆಡಿತ್ತು. ಆಗ ನಾಯಕ

ರಾಗಿದ್ದ ಮಹೇಂದ್ರ ಸಿಂಗ್ ದೋನಿ ‘ತಿರುವು ನೀಡುವ ಪಿಚ್‌ ಬೇಕು’ ಎಂದು ಕ್ಯುರೇಟರ್‌ ಪ್ರಬೀರ್‌ ಮುಖರ್ಜಿಗೆ ಹೇಳಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಮುಖರ್ಜಿ ‘ನೀವು ಹೇಳಿದಂತೆ ಪಿಚ್ ಮಾಡಲು ಆಗುವುದಿಲ್ಲ’ ಎಂದು ತಿರುಗೇಟು ನೀಡಿದ್ದರು. ಆದ್ದರಿಂದ ದೋನಿ ಮತ್ತ ಮುಖರ್ಜಿ ನಡುವಿನ ಮಾತಿನ ಸಮರ ತಾರಕಕ್ಕೇರಿತ್ತು. ಕೊನೆಗೆ ದೋನಿಯೇ ಮಣಿದು ‘ಪ್ರಬೀರ್ ಈಡನ್ ಬಾಸ್‌’ ಎಂದು ಶ್ಲಾಘಿಸಿದ್ದರು.

ಈ ರೀತಿಯ ಪಿಚ್‌ ವಿವಾದ ಕೇವಲ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮಾತ್ರ ಸೀಮಿತವಾಗಿಲ್ಲ. ದೇಶಿ ಟೂರ್ನಿಗಳಿಂದಲೇ ಇದರ ಬೇರು ಆರಂಭವಾಗಿವೆ. ರಣಜಿಯಂಥ ಪ್ರತಿಷ್ಠಿತ ಟೂರ್ನಿ ಯಲ್ಲಿಯೂ ಸಾಕಷ್ಟು ಬಾರಿ ಪಿಚ್‌ ವಿವಾದ ಆಗಿದೆ. ಕರ್ನಾಟಕ ತಂಡ ಕೂಡ ಇದರಿಂದ ಕೆಲ ಸಲ ನಷ್ಟ ಅನುಭವಿಸಿದೆ.

ಅದು 2011ರ ರಣಜಿ ಟೂರ್ನಿಯ ಸೆಮಿಫೈನಲ್‌ ಪಂದ್ಯ. ರಾಜ್ಯ ತಂಡ ವಡೋದರದಲ್ಲಿ 195 ರನ್‌ ಗಳಿಸುವಷ್ಟ ರಲ್ಲಿ 20 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಎರಡೇ ದಿನಗಳಲ್ಲಿ ಪಂದ್ಯ ಮುಗಿದು ಬರೋಡ ಫೈನಲ್ ತಲುಪಿತ್ತು.

ಇವೆಲ್ಲಾ ಆವಾಂತರಗಳನ್ನು ತಪ್ಪಿಸುವ ಸಲುವಾಗಿಯೇ ಬಿಸಿಸಿಐ ಮೊದಲ ಬಾರಿಗೆ ತಟಸ್ಥ ಸ್ಥಳದಲ್ಲಿ ರಣಜಿ ಪಂದ್ಯಗಳನ್ನು  ನಡೆಸಿದೆ. ಆಟಕ್ಕಿಂತ ಹೆಚ್ಚಾಗಿ ಪಿಚ್‌ ಬಗ್ಗೆಯೇ ಹೆಚ್ಚು ಚರ್ಚೆ ನಡೆದರೆ ಸಭ್ಯರ ಕ್ರೀಡೆಯ ಸೊಬಗು ಉಳಿಯವುದಾದರೂ ಹೇಗೆ.

ಕೋಟ್ಲಾ ಕಳಪೆ ಪಿಚ್‌ ತಂದ ಅಪಕೀರ್ತಿ
ಕಳಪೆ ಪಿಚ್‌ ಎಷ್ಟೊಂದು ಅಪಕೀರ್ತಿಗೆ ಕಾರಣವಾಗುತ್ತದೆ ಎನ್ನುವುದಕ್ಕೆ 2009ರಲ್ಲಿ ನಡೆದ ಘಟನೆ ಸಾಕ್ಷಿ. ದೆಹಲಿಯ ಫಿರೋಜ್‌ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಣ  ಏಕದಿನ ಪಂದ್ಯವದು. ಲಂಕಾ ತಂಡ 23 ಓವರ್‌ಗಳನ್ನು ಆಡುವಷ್ಟರಲ್ಲಿ ಪಿಚ್‌ನಲ್ಲಿ ಭಾರಿ ಪ್ರಮಾಣದ ದೂಳು ಎದ್ದಿತ್ತು.

ADVERTISEMENT

ಬೇಗ ಬಿರುಕುಬಿಟ್ಟು ಪಂದ್ಯ ಆರಂಭವಾದ ಕೆಲವೇ ಗಂಟೆಗಳಲ್ಲಿಆ ಪಿಚ್‌ನಲ್ಲಿ ಪಂದ್ಯ ನಡೆಸಲು ಸಾಧ್ಯವೇ ಇಲ್ಲ ಎಂದು ರೆಫರಿ ತೀರ್ಮಾನಕ್ಕೆ ಬಂದರು. ಆದ್ದರಿಂದ ಪಂದ್ಯವನ್ನು ರದ್ದು ಮಾಡಲಾಯಿತು. ಐಸಿಸಿ ಪರಿಶೀಲನೆ ನಡೆಸಿ ಕೋಟ್ಲಾದಲ್ಲಿ 15 ತಿಂಗಳು ಯಾವುದೇ ಅಂತರ ರಾಷ್ಟ್ರೀಯ ಪಂದ್ಯ ನಡೆಸುವಂತಿಲ್ಲ ಎಂದು ನಿಷೇಧ ಹೇರಿತ್ತು.

ಈ ಒಂದು ಘಟನೆ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿ ಮಾಡಿತ್ತು. ಇದರಿಂದ ಜಗತ್ತಿನ ಶ್ರೀಮಂತ ಕ್ರಿಕೆಟ್‌ ಮಂಡಳಿ ಬಿಸಿಸಿಐಗೂ ಮುಜುಗರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.