ADVERTISEMENT

ಪ್ರೊ ಕಬಡ್ಡಿ ಇನ್ನಷ್ಟು ಜನಪ್ರಿಯತೆಯೆಡೆಗೆ...

ಜಿ.ಶಿವಕುಮಾರ
Published 2 ಆಗಸ್ಟ್ 2015, 19:30 IST
Last Updated 2 ಆಗಸ್ಟ್ 2015, 19:30 IST

‘ಹಿಂದೆ ಬಾಲಿವುಡ್‌ ನಟ, ನಟಿಯರನ್ನು ನೋಡಲು ನಾವು ಹಾತೊರೆಯುತ್ತಿದ್ದೆವು. ಆದರೆ ಈಗ ಅವರೇ ನಮ್ಮ ಆಟ ನೋಡಲು ಕ್ರೀಡಾಂಗಣಕ್ಕೆ ಬರುತ್ತಾರೆ. ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಾರೆ... ಹೀಗೆ ಖುಷಿ ವ್ಯಕ್ತಪಡಿಸಿದ್ದು ಯು ಮುಂಬಾ ತಂಡದ ಆಟಗಾರ ಜೀವಕುಮಾರ್‌.

ಪ್ರೊ ಕಬಡ್ಡಿ ಲೀಗ್‌ ಶುರುವಾದ ಬಳಿಕ ಕಬಡ್ಡಿ ಮೆರುಗು ಹೆಚ್ಚಿದೆ.  ರಾತ್ರಿ 8 ಗಂಟೆಯಾದರೆ  ಮನೆಮಂದಿಯೆಲ್ಲಾ ಟಿ.ವಿ. ಮುಂದೆ ಕುಳಿತು ಪಂದ್ಯಗಳನ್ನು ನೋಡುವುದು ಸಾಮಾನ್ಯವಾಗಿದೆ. ಗ್ರಾಮೀಣ ಕ್ರೀಡೆ  ಕಬಡ್ಡಿಗೆ ಕಾರ್ಪೋರೇಟ್‌ ಸ್ಪರ್ಶ ನೀಡಿದ್ದು ಮಷಾಲ್‌ ಸ್ಪೋರ್ಟ್ಸ್‌ ಸಂಸ್ಥೆ . 2014ರಲ್ಲಿ  ಈ ಸಂಸ್ಥೆ ಐಪಿಎಲ್‌ ಮಾದರಿಯಲ್ಲಿ ಪ್ರೊ ಕಬಡ್ಡಿ ಲೀಗ್‌ ಆರಂಭಿಸಿತು. ಮೊದಲ ದಿನವೇ ಲೀಗ್‌ಗೆ ನಿರೀಕ್ಷೆಗೂ ಮೀರಿದ ಜನಬೆಂಬಲ ವ್ಯಕ್ತವಾಯಿತು.

ಹೋದ ವರ್ಷ ಜುಲೈ 26ರಂದು  ನಡೆದಿದ್ದ ಲೀಗ್‌ನ ಉದ್ಘಾಟನಾ ಕಾರ್ಯಕ್ರಮವನ್ನು 2 ಕೋಟಿ 20 ಲಕ್ಷ ಮಂದಿ ಟಿ.ವಿ.ಯಲ್ಲಿ  ವೀಕ್ಷಿಸಿದ್ದರು.  ಟ್ವಿಟರ್‌ ಮತ್ತು  ಫೇಸ್‌ಬುಕ್‌ಗಳಲ್ಲಿಯೂ ಲೀಗ್‌ ಕುರಿತು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಲೀಗ್‌ ಆರಂಭವಾಗಿ ಐದು ಗಂಟೆ ಆಗುವುದರೊಳಗೆ ಒಂದು ಕೋಟಿ 40 ಲಕ್ಷ ಮಂದಿ ಟ್ವೀಟ್‌ ಮಾಡಿದ್ದರು.

ಹೋದ ಬಾರಿ 31 ದಿನಗಳ ಕಾಲ ಸ್ಟಾರ್‌ ಸ್ಪೋರ್ಟ್ಸ್‌ ಮತ್ತು ಸ್ಟಾರ್‌ ಗೋಲ್ಡ್‌ ವಾಹಿನಿಗಳಲ್ಲಿ  ಪ್ರಸಾರವಾಗಿದ್ದ ಲೀಗ್‌ ಅನ್ನು ದೇಶದಾದ್ಯಂತ ಬರೋಬ್ಬರಿ 43 ಕೋಟಿ 50 ಲಕ್ಷ ಮಂದಿ ನೋಡಿದ್ದರು. ಭಾರತದಲ್ಲಿ ಹೆಚ್ಚು ಮಂದಿ ವೀಕ್ಷಿಸಿದ ಎರಡನೇ ಟೂರ್ನಿ ಎಂಬ ಹೆಗ್ಗಳಿಕೆಯನ್ನೂ ‍ಪ್ರೊ ಕಬಡ್ಡಿ ಲೀಗ್‌ ತನ್ನದಾಗಿಸಿಕೊಂಡಿದೆ.

ಈ ಬಾರಿಯೂ ಹೆಚ್ಚಿದ ಖ್ಯಾತಿ...
ಹೋದ ಬಾರಿಗಿಂತಲೂ ಈ ಸಲ ಕ್ರೀಡಾಂಗಣದ ಗ್ಯಾಲರಿಯ ಟಿಕೆಟ್‌ ದರ ಹೆಚ್ಚಾಗಿದೆ. ಹೀಗಿದ್ದರೂ ಬೇಡಿಕೆ ಮಾತ್ರ ಕುಗ್ಗಿಲ್ಲ. ಒಂದು ಹಂತದ ಪಂದ್ಯಗಳು ಮುಗಿಯುವುದರೊಳಗೆ ಆನ್‌ಲೈನ್‌ನಲ್ಲಿ ಮತ್ತೊಂದು ಹಂತದ ಪಂದ್ಯಗಳ ಟಿಕೆಟ್‌ಗಳು ಮಾರಾಟವಾಗುತ್ತಿವೆ. ಈ ಬಾರಿ ಟಿ.ವಿ. ವೀಕ್ಷಕರ ಸಂಖ್ಯೆಯೂ  ಶೇಕಡ 64 ರಷ್ಟು ಹೆಚ್ಚಿರುವುದನ್ನು ಟಿಎಎಂ ಇಂಡಿಯಾ ದೃಢಪಡಿಸಿದೆ.

ಕಳೆದ ಆವೃತ್ತಿಯಲ್ಲಿ ಪ್ರೊ ಕಬಡ್ಡಿ ಲೀಗ್‌ನ ಟೆಲಿವಿಷನ್‌ ರೇಟಿಂಗ್‌ ಶೇಕಡ 0.75ರಷ್ಟಿತ್ತು. ಆದರೆ ಈ ಬಾರಿಯ 14 ಪಂದ್ಯಗಳು ಮುಗಿಯುವ ವೇಳೆಗೆ ಈ ರೇಟಿಂಗ್‌ 1.23ಕ್ಕೆ ಏರಿಕೆ ಕಂಡಿದೆ. ಹೋದ ಸಲಕ್ಕೆ ಹೋಲಿಸಿದರೆ ಈ ಬಾರಿ ಟಿ.ವಿ ವೀಕ್ಷಕರು ಪ್ರತಿ ಪಂದ್ಯವನ್ನು ನೋಡಲು ವಿನಿಯೋಗಿಸಿದ ಸಮಯವೂ ಹೆಚ್ಚಾಗಿದೆ. ಹೋದ ಸಲ ಸರಾಸರಿ ಟಿಎಸ್‌ವಿ (ಟೈಮ್‌ ಸ್ಪೆಂಟ್‌ ಪರ್‌ ವೀವರ್‌) 14.56 ನಿಮಿಷಗಳಾಗಿತ್ತು. ಆದರೆ ಎರಡನೇ ಆವೃತ್ತಿಯ 14 ಪಂದ್ಯಗಳ ಅಂತ್ಯಕ್ಕೆ ಇದು 19.36ನಿಮಿಷಕ್ಕೆ ಹೆಚ್ಚಿದೆ.

ವಿವಿಧ ಭಾಷೆಗಳಿಗೆ ವಿಸ್ತರಣೆ..
ಮೊದಲ ಆವೃತ್ತಿಯಲ್ಲಿ ಲೀಗ್‌ ಕೇವಲ ಇಂಗ್ಲಿಷ್‌ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಬಿತ್ತರವಾಗಿತ್ತು. ಆದರೆ ಈ ಬಾರಿ ಹಿಂದಿ, ಇಂಗ್ಲಿಷ್‌ ಸೇರಿದಂತೆ ಕನ್ನಡ, ತೆಲುಗು ಮತ್ತು ಮರಾಠಿ ಭಾಷೆಗಳ ವಾಹಿನಿಗಳಲ್ಲೂ ಪ್ರಸಾರವಾಗುತ್ತಿರುವುದು ವಿಶೇಷ.

ADVERTISEMENT

ತಾರೆಯರ ಮೆರುಗು..
ಕಬಡ್ಡಿ ಲೀಗ್‌ ಜನಪ್ರಿಯ ಸಿನಿಮಾ ತಾರೆಯರು ಮತ್ತು ಕ್ರಿಕೆಟಿಗರನ್ನೂ ತನ್ನತ್ತ ಸೆಳೆಯುವಲ್ಲಿ ಸಫಲವಾಗಿದೆ. ಮೊದಲ ಆವೃತ್ತಿಯಲ್ಲಿ ಬಾಲಿವುಡ್‌ ನಟರಾದ ಅಮಿತಾಭ್‌ ಬಚ್ಚನ್‌, ಅಮೀರ್‌ ಖಾನ್‌, ಶಾರೂಕ್ ಖಾನ್‌, ಸುನೀಲ್‌ ಶೆಟ್ಟಿ ನಟಿಯರಾದ ಐಶ್ವರ್ಯ ರೈ ಬಚ್ಚನ್‌, ಜಯಾ ಬಚ್ಚನ್‌ ಹೀಗೆ ಸಾಕಷ್ಟು ಮಂದಿ ಪಂದ್ಯಗಳನ್ನು ವೀಕ್ಷಿಸಿ ಖುಷಿ ಪಟ್ಟಿದ್ದರು. ಈ ಬಾರಿ ಸಲ್ಮಾನ್‌ ಖಾನ್‌, ಅಜಯ್‌ ದೇವಗನ್‌, ಶ್ರಿಯಾ ಶರಣ್‌, ತಬು, ಬೋಜಪುರಿ ನಟ ಮನೋಜ್‌ ತಿವಾರಿ, ತೆಲುಗು ಚಿತ್ರನಟಿಯರಾದ ರಿತುಪರ್ಣ ಸೇನಗುಪ್ತಾ, ಕೋಯಿಲಾ ಮಲಿಕ್‌ ಪಂದ್ಯಗಳನ್ನು ನೋಡಲು ಬಂದಿದ್ದರು.

‘ಮೊದಲೆಲ್ಲಾ ಕಬಡ್ಡಿ ಎಂದರೆ ಮೂಗು ಮುರಿಯುವ ಜನರೇ ಹೆಚ್ಚಿದ್ದರು. ಆದರೆ ಪ್ರೊ ಕಬಡ್ಡಿ ಲೀಗ್‌ ಶುರುವಾದ ಬಳಿಕ ಆಟ ಮತ್ತು ಆಟಗಾರರ ವರ್ಚಸ್ಸು ಹೆಚ್ಚಿದೆ. ಪಂದ್ಯಗಳನ್ನು ನೋಡಲು  ಕ್ರೀಡಾಂಗಣಗಳಿಗೆ ಬರುವವರ ಸಂಖ್ಯೆಯೂ ದುಪ್ಪಟ್ಟಾಗಿದೆ‌. ಕೆಲವರು ಮನೆಯಲ್ಲಿ ಕುಳಿತು ಟಿ.ವಿಯಲ್ಲಿ ಆಟವನ್ನು ನೋಡಿ ಖುಷಿ ಪಡುತ್ತಿದ್ದು ಕಬಡ್ಡಿ ಈಗ ಎಲ್ಲೆಡೆಯೂ ಜನಜನಿತವಾಗುತ್ತಿದೆ’ ಎಂದು ಜೀವಕುಮಾರ್‌ ಹರ್ಷ ವ್ಯಕ್ತಪಡಿಸುತ್ತಾರೆ.

‘ಕ್ರಿಕೆಟ್‌ಗೆ ಹೋಲಿಸಿದರೆ ಕಬಡ್ಡಿ ಪಂದ್ಯದ ಅವಧಿ ತುಂಬಾ ಕಡಿಮೆ. ಒಂದು ಟ್ವೆಂಟಿ–20 ಪಂದ್ಯ ಮುಗಿಯಬೇಕೆಂದರೆ ಮೂರು ಗಂಟೆ ಬೇಕು. ಆದರೆ ಕಬಡ್ಡಿ ಪಂದ್ಯ ಹಾಗಲ್ಲ. 40 ನಿಮಿಷಗಳಲ್ಲಿ ಅಂತ್ಯವಾಗಿಬಿಡುತ್ತದೆ. ಲೀಗ್‌ನ ಜನಪ್ರಿಯತೆಗೆ ಈ ಅಂಶ ಕೂಡಾ ಪ್ರಮುಖ ಕಾರಣ’ ಎಂದೂ ಅವರು ಅಭಿಪ್ರಾಯಪಡುತ್ತಾರೆ.‌ ‘ಮೊದಲ ಆವೃತ್ತಿಯಲ್ಲಿ  ಲೀಗ್‌ಗೆ ದೊರೆತ ಯಶಸ್ಸು ಕಂಡು ನಿಜಕ್ಕೂ ಅಚ್ಚರಿಯಾಗಿತ್ತು. ಇದು ಜನರ ಮೇಲೆ ಇಷ್ಟು ಪ್ರಭಾವ ಬೀರುತ್ತದೆ ಎಂದು ಖಂಡಿತಾ ಭಾವಿಸಿರಲಿಲ್ಲ’ ಎಂದು ದಬಾಂಗ್‌ ಡೆಲ್ಲಿ ತಂಡ ಕೋಚ್‌ ಕರ್ನಾಟಕದ ಹೊನ್ನಪ್ಪ ಗೌಡ ಸಂತಸ ವ್ಯಕ್ತಪಡಿಸಿದರು.

‘ಈ ಬಾರಿ ಟೂರ್ನಿಯ ಖ್ಯಾತಿ ಇನ್ನಷ್ಟು ಹೆಚ್ಚಿದೆ. ಆನ್‌ಲೈನ್‌ನಲ್ಲೂ ಪಂದ್ಯಗಳ ಟಿಕೆಟ್‌ ಸಿಗುತ್ತಿಲ್ಲವಂತೆ. ಹೀಗಾಗಿ ಪರಿಚಿತರು ಟಿಕೆಟ್‌ ಕೊಡಿಸುವಂತೆ ನನಗೆ ದುಂಬಾಲು ಬಿದ್ದಿದ್ದಾರೆ. ಪಂದ್ಯದ ದಿನವಂತೂ ಕ್ರೀಡಾಂಗಣಗಳು ಕಿಕ್ಕಿರಿದು ತುಂಬಿರುತ್ತವೆ.  ಜನ ಲೀಗ್‌ನೆಡೆಗೆ ಎಷ್ಟರ ಮಟ್ಟಿಗೆ ಆಕರ್ಷಿತರಾಗಿದ್ದಾರೆ ಎಂಬುದು ಇದರಿಂದ ತಿಳಿಯುತ್ತದೆ’ ಎಂದೂ ಅವರು ಹೇಳುತ್ತಾರೆ.
*

ಮುಂಬೈ, ಕೋಲ್ಕತ್ತ, ಜೈಪುರ ಹೀಗೆ ಹೋದಲೆಲ್ಲಾ ಜನ ಬೆಂಬಲ ಹೆಚ್ಚುತ್ತಿದೆ. ಮೊದಲ ಆವೃತ್ತಿಗೆ ಹೋಲಿಸಿದರೆ ಈ ಸಂಖ್ಯೆ ದುಪ್ಪಟ್ಟು ಎಂದೇ ಹೇಳಬಹುದು. ಅಭಿಮಾನಿಗಳು ಸ್ಥಳೀಯ ತಂಡ, ಹೊರಗಿನ ತಂಡ ಎನ್ನದೆ ಯಾರೂ ಚೆನ್ನಾಗಿ ಆಡುತ್ತಾರೊ ಅವರನ್ನು ಪ್ರೋತ್ಸಾಹಿಸುತ್ತಾರೆ. ಇದು ಪ್ರೊ ಕಬಡ್ಡಿ ಲೀಗ್‌ನ ವಿಶೇಷ
-ಸುನಿಲ್ ಹನುಮಂತಪ್ಪ, 
ಬೆಂಗಳೂರು ಬುಲ್ಸ್‌ ಆಟಗಾರ                     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.